Friday, 7 November 2014

ಜನಪ್ರಿಯ ಸಾಹಿತ್ಯವೂ ಕನಸು ಬಿತ್ತುವ ಪರಿಯೂ

ಹೈಸ್ಕೂಲು ಹಂತದ ಯಂಗ್ ಅಡಲ್ಟ್ ಗಳಾಗಿದ್ದಾಗ  ನಾವು ಸಾಯಿಸುತೆ, ಹೆಚ್.ಬಿ.ರಾಧಾದೇವಿ, ಉಷಾ ನವರತ್ನರಾಂ ಹೀಗಿರುವ ಜನಪ್ರಿಯ ಸಾಹಿತಿಗಳ ಕಾದಂಬರಿಗಳನ್ನು ಕದ್ದುಮುಚ್ಚಿ ಓದುತ್ತಿದ್ದೆವು ಹಾಗೂ ಅವು ನಮ್ಮ ಪಾಲಿಗೆ ಅವು ದೊಡ್ಡವರ ಜಗತ್ತಿಗೆ ಬೆಳಕಿಂಡಿಗಳಾಗಿದ್ದವು. ನವಿಲು ಬಣ್ಣದ ರೇಶಿಮೆ ಸೀರೆ, ಗೇಣಗಲದ ಬಾರ್ಡರ್ ಸೀರೆ. ಅವರೆಕಾಳು, ಉಪ್ಪಿಟ್ಟು, ಆಂಬೊಡೆ ಇತ್ಯಾದಿ ವಿವರಗಳನ್ನೊಳಗೊಂಡ ಆ ಕಾದಂಬರಿಗಳಲ್ಲಿ ಹೀರೋಯಿನ್ ಮದುವೆಯಾಗುವುದರೊಂದಿಗೆ ಕಾದಂಬರಿ ಸುಖಾಂತ್ಯವಾಗುತ್ತಿತ್ತು. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಎಂ,ಕೆ ಇಂದಿರಾ, ತ್ರಿವೇಣಿ ಹೀಗೆ ಗಂಭೀರ ಸಾಹಿತಿಗಳನ್ನು ಓದುವವರು ಆಗಿನ ಕಾಲದಲ್ಲೂ ಈಗಲೂ ಬಹುಶ: ವಿರಳ, ಆಳವಾದ ಜೀವನಾನುಭವ, ಬರಹದ ಸಾಂದ್ರತೆ ಇವನ್ನೆಲ್ಲಾ ಪಕ್ಕಕ್ಕಿಟ್ಟು ನೋಡಿದರೆ ಅವು ಕೂಡ ಜೀವನದ ಫೋಟೋಗ್ರಾಫಿಕ್ ಝಲಕ್ಗಳೇ. ಗುಲಾಬಿ ಪಕಳೆಗಳು ಉದುರಿದಂತೆ, ಪಾರಿಜಾತದ ಮೊಲ್ಲೆ ಮೊಗ್ಗುಗಳು ಮಧುರ ಸುವಾಸನೆ ಪಸರಿಸಿದಂತೆ ಮೆಲ್ಲನೆ ಆವರಿಸಿಕೊಳ್ಳುವ ಪ್ರೀತಿ ಪ್ರೇಮದ ಪ್ರಸಂಗಗಳು, ದಾಂಪತ್ಯದ ಬಗೆಗಿನ ರಮ್ಯ ಕಲ್ಪನೆಗಳು ಹೀಗೆ ಝಲ್ಲನೆ ಪುಳಕಗೊಳಿಸುತ್ತ ಹಗಲುಗನಸಿನ ಸಾಮ್ರಾಜ್ಯದಲ್ಲಿ ಮೈಮರೆಸಿ ಬಿಡುವ ಶಕ್ತಿ ಆ ಕಾದಂಬರಿಗಳಿದ್ದವು,
ಹಾಗಿದ್ದರೂ ಅವು ಒಂದು ರೀತಿಯ ಲೈಟ್ ರೀಡಿಂಗ್, ಜೀವನದ ಸಂಕೀರ್ಣ ಮಜಲುಗಳಾಗಲಿ, ಅನಿಶ್ಚಿತತೆ, ದ್ವಂದ್ವಗಳ ಚಿತ್ರಣಗಳಾಗಲಿ, ಎದೆ ನಡುಗಿಸುವ ದುರಂತಗಳ, ಜೀವನ ದರ್ಶನಗಳ ಗಾಢ, ದಟ್ಟ ಅನುಭವಗಳಾಗಲಿ ಅವುಗಳಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ.
ಇಂಗ್ಲೀಷ್ ವಿದ್ಯಾಭ್ಯಾಸದ ಹೊಡೆತದಿಂದಾಗಿ ಮುಂದಿನ ಜನರೇಶನ್ನಲ್ಲಿ ಕನ್ನಡದ ಕಥೆ, ಕಾದಂಬರಿಗಳಿಗೆ ಓದುಗರ ಸಂಖ್ಯೆ ಗಮನಾರ್ಹವಾಗಿ ಕಡಿಮೆ ಆಗಬಹುದು. ( ಹಾಗಿದ್ದರೂ ಬ್ಲಾಗ್, e-journal ಗಳು ಈ ನಿಟ್ಟಿನಲ್ಲಿ ಸ್ವಾಗತಾರ್ಹ) ಯುವಜನತೆ ಹೆಚ್ಚಾಗಿ ಓದುವುದು ರಿಲ್ಯಾಕ್ಸೇಶನ್ ಗೋಸ್ಕರ, ಮಿಲ್ಸ್ & ಬೂನ್ಸ್ ರೊಮ್ಯನ್ಸ್ನಿಂದ ಪ್ರಾರಂಭಿಸಿ ಅಗಾಥ ಕ್ರಿಸ್ಟಿ, ಸಿಡ್ನಿ ಶೆಲ್ಡನ್ ಹೀಗೆಲ್ಲ, ಇನ್ನು ಎಳೆಯ ಮಕ್ಕಳಿಗೆ ಎನಿಡ್ ಬ್ಲೈಡನ್, ನ್ಯಾನ್ಸಿಡ್ರೂ, ಹ್ಯಾರಿಪಾಟರ್ ಹೀಗೆ ಅವರ ಪ್ರಪಂಚ.
ಟಿವಿ, ಕಂಪ್ಯೂರ್, ವೀಡಿಯೋ ಗೇಮ್ ಎಲ್ಲ ಇದ್ದರೂ ಓದಿನ ಆನಂದವೇ ಬೇರೆ. ಅದು ನಮ್ಮ ವೈಯಕ್ತಿಕ ವಲಯ ನಮ್ಮ ಆಲೋಚನೆಗಳು, ಭಾವ ಪ್ರಪಂಚವನ್ನು ನಾವೇ ಸೃಷ್ಟಿಸಿಕೊಳ್ಳುವ ಪ್ರಕ್ರಿಯೆ ದೈನಂದಿನ ಒತ್ತಡ, ಸಂಕಷ್ಟಗಳನ್ನು ಕೊಂಚಕಾಲ ಮರೆಯಲೂ ಓದು ಸಹಕಾರಿ. ಜಯಪ್ರಿಯ ಸಾಹಿತ್ಯದಲ್ಲೂ ಬೇರೆ ಬೇರೆ ಪ್ರಕಾರಗಳು ಬೆಳೆದು ಬರುವುದನ್ನು ಗಮನಿಸಬಹುದು. ಒಂದು ಕಾಲಕ್ಕೆ ಯಂಡಮೂರಿಯವರ ಸಾಹಿತ್ಯವನ್ನು ಓದುತ್ತಿದ್ದ ಹಾಗೆಯೇ ಯುವ ಸಮುದಾಯ ಚೇತನ್ ಭಗತ್ರನ್ನು, ತಪ್ಪಿದರೆ ಪೂರ್ಣಚಂದ್ರ ತೇಜಸ್ವಿಯವರನ್ನು ಓದುತ್ತಿರುತ್ತದೆ.(ವಿಕ್ರಮ್ ಸೇಠ್, ಅರವಿಂದ ಅಡಿಗ, ಝಂಪಾಲಹಿರಿ ಇವರ ಹೆಸರುಗಳು ಕ್ಷಿಜ್ ನಲ್ಲಿನ ಪ್ರಶ್ನೋತ್ತರಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಇನ್ನು ಯುವತಿಯರಿಗೋಸ್ಕರವೇ ಬರೆಯಲ್ಪಡುವ chic literature ಬರೆಯುವ ಕವಿತಾದಾಸ್ವಾನಿ, ಸ್ವಾತಿಕೌಶಲ್ ಹೀಗಿರುವ ಬರಹಗಾರ್ತಿಯರು ಬೇರೆ.
ತಾಜ್, ಒಬೆರಾಯ್ ನಂತಹ ಹೋಟೆಲ್ ಗಳಲ್ಲಿ ಲಂಚ್ ಮಾಡುವ, ಪ್ಲೇನ್ ಗಳಲ್ಲಿ ಲಂಡನ್ , ಸ್ವಿಜರ್ಲೆಂಡ್ ಗಳಿಗೆ  ಹೋಗುವ ಇವರ ಕಥೆಗಳಲ್ಲಿನ ಹೀರೋಯಿನ್ ಕೂಡ ನಮ್ಮಂತೆ ಭಾವನೆಗಳನ್ನು ಅನುಭವಿಸುತ್ತಾಳೆ (ಪ್ರೀತಿ, ಪ್ರೇಮ, ಅಂತ:ಕರಣ, ದು:ಖ ಇತ್ಯಾದಿ) ಎನ್ನುವುದೇ ಆಶ್ಚರ್ಯ ಈ ಕಥೆಗಳನ್ನು ಓದುತ್ತಾ ಮಧ್ಯಮ ವರ್ಗದ ಯುವತಿ ಕೆಲ ಕ್ಷಣಗಳಾದರೂ ನಲ್ಲಿಯ ಬಳಿ ಕ್ಯೂ ನಿಂತು ನೀರು ತುಂಬಬೇಕಾದ, ನೆಲ ಒರಸಬೇಕಾದ, ಬಸ್ಸಿನಲ್ಲಿ ಒದ್ದಾಡಿಕೊಂಡು ಕೆಲಸಕ್ಕೆ ಹೋಗಬೇಕಾದ, ಬಾಸ್ ಕೈಯಲ್ಲಿ ಬೈಸಿಕೊಳ್ಳಬೇಕಾದ ಅನಿವಾರ್ಯತೆಗಳನ್ನು ಮರೆಯುತ್ತಾಳೆ.
ಹೆಚ್ಚು ಕಡಿಮೆ ಇದನ್ನೇ ನಮ್ಮ ಸೀರಿಯಲ್ಗಳೂ ಕೊಡುತ್ತದೆ. ಮನೆಯಲ್ಲಿರುವಾಗ ಕೂಡ ಬಾರ್ಡರ್ ಸೀರೆ, ಬ್ರೊಕೇಡ್ ಟಿಶ್ಯೂ ಡ್ರೆಸ್ಗಳನ್ನು ಹಾಕಿಕೊಂಡಿರುವ ಆ ಮಹಿಳಾ ಮಣಿಗಳು ಕುಕ್ಕರ್ ಸೀದು ಹೋಯಿತೆಂದೋ, ತೊಗರಿಬೇಳೆಗೆ ಬೆಲೆ ಜಾಸ್ತಿಯಾಯಿತೆಂದೋ ವರಿ ಮಾಡುವುದನ್ನು ನಾನು ನೋಡಿಲ್ಲ. (ಯಾರದೋ ಗಂಡನನ್ನು ಬಲೆಗೆ ಬೀಳಿಸುವ, ಇನ್ಯಾವಳದೋ ಪರ್ಸನಲ್ ಲೈಫಿನ ಬಗ್ಗೆ ಕುತೂಹಲ ಹೀಗೆಲ್ಲ ಅವರ ಜಗತ್ತು) ಹಾಗಿದ್ದರೂ ನನ್ನನ್ನೂ ಸೇರಿಸಿದಂತೆ ವಿರಾಮವಿದ್ದಾಗಲೆಲ್ಲಾ ಹೆಂಗಳೆಯರು ಅವುಗಳನ್ನು ನೋಡುತ್ತಾರೆ. ಭಾರತೀಯ ಸಂಸ್ಕೃತಿಯ ಮೌಲ್ಯಗಳಾದ ತಾಳ್ಮೆ, ಸಹನೆ, ಸ್ತ್ರೀತನ (ಹಾಗಂದರೇನು?) ಇತ್ಯಾದಿ ಮೌಲ್ಯಗಳನ್ನು ಪ್ರತಿವಾದಿಸುತ್ತಲೇ ಅಳುಮುಂಜಿತನವನ್ನು ಒಳ್ಳೆಯತನವೆಂದೂ, ವಾಚಾಮಗೋಚರವಾಗಿ ತನ್ನನ್ನು ಬಯ್ಯುತ್ತಿದ್ದರೂ ಮೌನವಾಗಿ ಸಹಿಸಿಕೊಳ್ಳುವುದು (ಕಣ್ಣಿನಿಂದ ಎರಡೇ ಎರಡು ಒಂದು ಹನಿ ನೀರು, ನಿಶ್ಚಬ್ದದೊಂದಿಗೆ) ಗುಣವಂತೆಯ ಲಕ್ಷಣವೆಂದೂ ಇವು ಚಿತ್ರಿಸುತ್ತವೆ.
ಬದುಕು ಸೀರಿಯಲ್ಲುಗಳಲ್ಲಿರುವಂತೆ ಭ್ರಾಮಕ ಜಗತ್ತು ಅಲ್ಲ, ಟಾಲ್ಸ್ಟಾಯ್ನ ಅನ್ನ ಕರೆನಿನಾದಂತೆ ಸಂಕೀರ್ಣ ಭಾವನಾತ್ಮಕ ಸಂಬಂಧಗಳ ವ್ಯೂಹವೂ ಅಲ್ಲ. ಕಾಮನ್ಸೆನ್ಸ್ (ಅದು ಈಗೀಗ ಬಹಳ ಅನ್ಕಾಮನ್) ಹಾಗೂ ಆತ್ಮಸಾಕ್ಷಿಯಂತೆ ನಡೆದರೆ ಬದುಕು ಇಬ್ಬನಿಯ ಹನಿಯಂತೆ ಕರಗಿಹೋಗಲಾರದು ಹಾಗೂ ನಾವೂ ಹೆಜ್ಜೆ ಗುರುತನ್ನು ಮೂಡಿಸಬಹುದೇನೋ,
ಜಯಶ್ರೀ.ಬಿ. ಕದ್ರಿ

ಈಸಬೇಕು, ಇದ್ದು ಜೈಸಬೇಕು

‘ಯಾಕೋ ಬೇಜಾರು’ ಹೀಗೆ ಅಂದುಕೊಳ್ಳದವರಿಲ್ಲ. ಇನ್ನು ಕೆಲವರಿಗೆ ಬೇಜಾರಾದಾಗೆಲ್ಲ ಯಾರೋ ಒಬ್ಬರು ಅವರನ್ನು ಸಂತೈಸುತ್ತ ಬೆಚ್ಚನೆಯ ಆಪ್ತ ಭಾವದಿಂದ ಆರೈಕೆ ಮಾಡುತ್ತಲೇ ಇರಬೇಕು. ಇಲ್ಲಿನ ವಾಸ್ತವವೆಂದರೆ ಜೀವನದುದ್ದಕ್ಕೂ ನಮ್ಮ ಕನಸು ಕನವರಿಕೆಗಳನ್ನು, ನೋವು ನಿರಾಸೆಗಳನ್ನು ಹಂಚಿಕೊಳ್ಳಲು, ಶರತ್ತು ರಹಿತ ಪ್ರೀತಿ ಸುರಿಯಲು ನಮ್ಮದಾದ ಜೀವ ಲಭಿಸಲೇ ಬೇಕೆಂದಿಲ್ಲ. ಹಾಗೆ ನೋಡುವುದಿದ್ದರೆ ಪ್ರತಿಯೊಂದು ಸಂಬಂಧಕ್ಕೂ (ಸ್ನೇಹವನ್ನು ಸೇರಿಸಿ) ಅದರದೇ ಆದ ಡಿಮ್ಯಾಂಡ್ಗಳಿವೆ. ಇಷ್ಟಕ್ಕೂ ಬದುಕೆಂದರೆ ಒಂದಷ್ಟು ಮುಗುಳ್ನಗೆ, ಪ್ರೀತಿಯ ಮಾತುಗಳು, ಕೊರಗಿನ ಕನವರಿಕೆಗಳು, ಝಲ್ಲನೆ ಪುಟಿದೇಳುವ ಉತ್ಸಾಹ ನಿರಾಸೆ ಕಾಮನೆ ಆವೇಶ ಆಕ್ರೋಶಗಳ ಸಂತೆ. ಒಂದಲ್ಲ ಒಂದು ದಿನ ಮಣ್ಣಲ್ಲಿ ಮಣ್ಣಾಗುವ ಜೀವಕ್ಕೆ ಎಷ್ಟೊಂದು ಯಾತನೆ, ನೋವುಗಳು ? ಹಾಗೆಂದು ಬದುಕಿನಿಂದ ಪಲಾಯನ ಮಾಡುವಂತಿಲ್ಲ. ನಮ್ಮ ನೋವಿಗೆ ನಾವೇ ಆಯಿಟ್ ಮೆಂಟ್ ಹಚ್ಚಿಕೊಳ್ಳುತ್ತ, ಗಟ್ಟಿಯಾಗುತ್ತ ದೃಢವಾಗಿ ಮುನ್ನಡೆದಲ್ಲಿ ನಾವೂ ಕೆಲವು ಜೀವಗಳಿಗೆ ಸಾಂತ್ವನ ಕೊಡಬಹುದೇನೋ.
ಹೀಗಾಗಿಯೇ ಪ್ರಜ್ಞಾಪೂರ್ವಕವಾಗಿ ಪಾಸಿಟಿವ್ ಆಗಿಯೇ ಯೋಚಿಸಬೇಕಾದ, ನಮ್ಮ ಚಿಂತನ ಕ್ರಮವನ್ನು, ಸೆಲ್ಫ್ಟಾಕ್ ಕೂಡ ಭಾವುಕತೆಯಂಚಿಗೆ ವಿರಮಿಸದಿರಬೇಕಾದ ಅನಿವಾರ್ಯತೆ ನಮಗಿದೆ. ತನ್ನ ಪುಸ್ತಕ ದ ಪವರ್ ಆಫ್ ಪಾಸಿಟಿವ್ ಥಿಂಕಿಂಗ್ ನಲ್ಲಿ ನಾರ್ಮನ್ ವಿನ್ಸೆಂಟ್ ಪೀಲೆ ಧನಾತ್ಮಕ ದೃಷ್ಟಿಕೋನದ ಮಹತ್ವವನ್ನು ಒತ್ತಿ ಹೇಳುತ್ತಾನೆ. ಕಣ್ಣಿಲ್ಲದಾಕೆಯೊಬ್ಬಳಿಗೆ ಅಡಿಗೆ ಮಾಡುವುದು ಸಂಭ್ರಮದ ಕೆಲಸವಂತೆ. ಅಡಿಗೆಯ ಬೇರೆ ಬೇರೆ ಪರಿಮಳ, ರುಚಿಗಳನ್ನು ಆಕೆ ಆಸ್ವಾದಿಸುತ್ತಾಳಂತೆ. ನಾವೆಷ್ಟು ಭಾಗ್ಯವಂತರು! ಸೋಪಿನ ಗುಳ್ಳೆಗಳಲ್ಲಿನ ಕಾಮನಬಿಲ್ಲಿನಿಂದ ಹಿಡಿದು ಆಗಸದ ತಾರೆಗಳವರೆಗೆ, ಕಡಲಿನ ನೀಲಿಯವರೆಗೆ ನಮ್ಮ ಕಲ್ಪನೆಯ ಚಿತ್ತಾರ ಬಿಡಿಸಬಹುದು. ಬೀದಿ ಬದಿಯಲ್ಲಿ ಕಂಕುಳಲ್ಲಿ ಕೂಸನ್ನೆತ್ತಿಕೆಂಡ ಹದಿಹರೆಯದ ಹುಡುಗಿ, ಚಿಂದಿ ಆಯುವ ಮುದುಕಿಯನ್ನು ನೋಡುವಾಗ ನಮಗಿರುವ ಬೆಚ್ಚನೆಯ ಸೂರು, ನಮ್ಮದಾದ ಕುಟುಂಬ ವರ್ಗದ ನೆಮ್ಮದಿ ಮನ ಮುಟ್ಟದಿರದು. ಇಷ್ಟಾಗಿಯೂ ನಮ್ಮಲ್ಲಿ ಹೆಚ್ಚಿನವರಿಗೂ ಯಾವುದೋ ಕಸಿವಿಸಿ, ಅತೃಪ್ತಿ, ಆತಂಕ, ಅತಿಯಾದ ಚಿಂತೆ.ನೆಗೆಟಿವ್ ದೃಷ್ಟಿಕೋನಗಳೇ ಹಾಮರ್ೋನ್ ಏರುಪೇರು, ರಕ್ತದೊತ್ತಡ, ಡಯಾಬಿಟೀಸ್, ಬೊಜ್ಜಿನಂತಹ ಕಾಯಿಲೆಗಳಿಗೆ ಕಾರಣವೆನ್ನುವುದು ವೈಜ್ಞಾನಿಕವಾಗಿ ಪ್ರೂವ್ ಆಗಿರುವ ಸತ್ಯ. ಹಾಗೆಂದು ಸಮಸ್ಯೆಗಳ ತೀವ್ರತೆಯನ್ನು, ಅವುಗಳ ವಾಸ್ತವಿಕವಾದ ಪರಿಣಾಮಗಳನ್ನು ಸಾರಾ ಸಗಟಾಗಿ ತಳ್ಳಿ ಹಾಕುವಂತಿಲ್ಲ. ಹಾಗಿದ್ದರೂ ಧನಾತ್ಮಕ ದೃಷ್ಟಿಕೋನದಿಂದ ನಮ್ಮ ಯಾತನೆ, ನೋವಿನ ತೀವ್ರತೆ ಕಡಿಮೆಯಾಗಿ ಅದರಿಂದ ಬೇಗ ಹೊರಬರಬಹುದು, ಅದು ಅನಿವಾರ್ಯ ಕೂಡ.
ಜೀವನದ ವಾಸ್ತವವೇನೆಂದರೆ ಈ ರೀತಿಯ ತತ್ವ ಚಿಂತನೆ ಕೇಳಲು ಚೆನ್ನಾಗಿರುತ್ತದೆಯಾಗಲಿ, ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟ. ಪಿಯು ರಿಸಲ್ಟ್ ಎನ್ನುವುದು ಜೀವನ್ಮರಣ ಹೋರಾಟವಾಗಿರುವಾಗ, ಪ್ರಿಯತಮ/ಪ್ರಿಯತಮೆಯ ಒಪ್ಪಿಗೆಯಿಲ್ಲದಿದ್ದರೆ ಜೀವನ ಬರಡು ಎನ್ನುವ ಅಪಕ್ವ ಮನಸ್ಥಿತಿಯಿರುವಾಗ, ಯಾರೋ ಬೈದರೊಂದೋ, ಅವಮಾನಿಸಿದರೆಂದೋ ಬಿಕ್ಕಿ ಬಿಕ್ಕಿ ನೊಂದುಕೊಳ್ಳುವಾಗ ಹತ್ತು ನಿಮಿಷ ಸಾವಧಾನವಾಗಿ ಯೋಚಿಸಿದಲ್ಲಿ ಮನಸ್ಸು ತಹಬಂದಿಗೆ ಬಂದೀತು. ಎಂತಹದೇ ಸಮಸ್ಯೆಯಾದರೂ ಎರಡುವಾರ ಅವಡುಗಚ್ಚಿ ಸಹಿಸಿಕೊಂಡರೆ ಅದೇ ಸರಿ ಹೋಗುತ್ತದಂತೆ.
ಮನಸೆಂಬ ತಿಳಿಗೊಳದಲ್ಲಿ ಅಲೆಗಳನ್ನೆಬ್ಬಿಸುವ, ರಾಡಿಯೆಬ್ಬಿಸುವ ಘಟನೆಗಳು ನಮ್ಮ ಜೀವನದಲ್ಲಿ ನಡೆದೇ ನಡೆಯುತ್ತವೆ. ಹಾಗಿದ್ದರೂ ಕೆಲವು ಘಟನೆಗಳನ್ನು ಹೊರತುಪಡಿಸಿ ಹೆಚ್ಚಿನವುಗಳು ತೀರಾ ಅನಿರೀಕ್ಷಿತವೇನಲ್ಲ. ನಮ್ಮ ನಿರ್ಲಕ್ಷ್ಯ, ಮುಂದಾಲೋಚನೆಯ ಕೊರತೆ, ‘ಚಲ್ತಾ ಹೈ’ ಎನ್ನುವ ಮನೋಭಾವವೇ ನಮ್ಮ ನೋವುಗಳಿಗೆ ಕಾರಣ. ತನ್ನ ಪುಸ್ತಕ ಫಸ್ಟ್ ಥಿಂಗ್ಸ್ ಫಸ್ಟ್ ನಲ್ಲಿ ಸ್ಟೀಫನ್ ಕೋವೆ ನಾಲ್ಕು ವಲಯಗಳನ್ನು ಪ್ರಮುಖವೆಂದು ಗುರುತಿಸುತ್ತಾನೆ. ಅವು ಸಾಮಾಜಿಕ, ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ವಲಯಗಳು. ಈ ನಾಲ್ಕೂ ವಲಯಗಳಲ್ಲಿ ಒಂದು ವಲಯದಲ್ಲಿನ ಅಸಮತೋಲನವನ್ನು ಇನ್ನೊಂದು ವಲಯದ ಪ್ರಯತ್ನದಿಂದ ಸರಿಪಡಿಸಿಕೊಳ್ಳಬಹುದು. ಉದಾಹರಣೆಗೆ ಧ್ಯಾನ ಮಾಡುವ ಮೂಲಕ ಖಿನ್ನತೆಯಿಂದ ಹೊರಬರುವುದು, ಸ್ಪೋಟ್ಸರ್್, ಯೋಗ, ಜಿಮ್ನಿಂದ ಉತ್ಸಾಹ ಪಡೆದುಕೊಳ್ಳುವುದು ಹೀಗೆ.
ಕುತೂಹಲದಿಂದಲೂ, ಮನಮಿಡಿವ ಅಂತ:ಕರಣದಿಂದಲೂ ನಾನು ‘ಉದಯವಾಣಿ ‘ಯ ಒಂದು ತಿಂಗಳಿನ ಸಾವು ನೋವು ಕಾಲಂ ನೋಡಿದೆ. ನಾಲ್ಕು ದಿನದ ಈ ಬದುಕಿನಲ್ಲಿ ಸಾಯಲು, ಕೊಲೆ ಸುಲಿಗೆ ಆತ್ಮಹತ್ಯೆಗಳಿಗೆ ಎಷ್ಟೊಂದು ಕಾರಣಗಳೆಂದು ಆಶ್ವರ್ಯವಾಗುತ್ತದೆ. ಈ ಬದುಕಿನ ಉದ್ವಿಗ್ನತೆ, ನರಕ ಸದೃಶ ದೈನ್ಯ, ವಿವಶತೆಗಳು ಮನುಷ್ಯರನ್ನೆಷ್ಟು ಕುಗ್ಗಿಸುತ್ತದೆ ಎಂದೂ ಅರಿವಾಗುತ್ತದೆ. ಹಾಗೆಯೇ ನಮಗೆ ಕ್ಷುಲ್ಲಕವಾಗಿ ಕಾಣುವ ವಿಷಯಗಳೇ ಉಳಿದವರಿಗೆ ಎಷ್ಟು ಬೃಹದಾಕಾರವಾಗಿ ಕಾಣಿಸುತ್ತದಲ್ಲವೆಂಬ ಅಚ್ಚರಿ ಕೂಡ. ಮದುವೆಗೆ ಒಲ್ಲೆನೆಂಬ ಯುವತಿಗೆ ಆಸಿಡ್ ಕುಡಿಸುವ ಭೂಪರು, ಹೆಂಡತಿಯನ್ನು ಕೊಚ್ಚಿ ತಂದೂರಿ ಒಲೆಯಲ್ಲಿ ಬೇಯಿಸುವವರು, ಟೀಚರ್ ಬೈದರೆ ಅವರಿಗೇ ಹಲ್ಲೆ ನಡೆಸುವವರು, ಟಿವಿ ರಿಮೋಟ್ ಕೊಡಲಿಲ್ಲವೆಂದೋ, ಹೊಸ ಮಾದರಿ ಬೈಕ್, ಮೊಬೈಲ್ ಕೊಡಿಸಲಿಲ್ಲವೆಂದೋ ಅಪಾಯ ತಂದುಕೊಳ್ಳುವವರು… ಹೀಗೆ ಮನಸ್ಸಿನ ವಿಕಾರಗಳು, ತುಮುಲಗಳು ಕೆಲವೊಮ್ಮೆ ತೀರಾ ಅಸಮಂಜಸ.
ನಮ್ಮ ಹೆಚ್ಚಿನ ದುರಂತಗಳಿಗೆ ಕಾರಣ ನಮ್ಮಲ್ಲಿರುವ ಸೌಭಾಗ್ಯಗಳನ್ನು ನಾವು ಲೆಕ್ಕಕ್ಕೆ ತೆಗೆದುಕೊಳ್ಳದಿರುವುದು. ಕೈಕಾಲು, ಕಣ್ಣು, ಆರೋಗ್ಯ ಎಲ್ಲವೂ ಸಮರ್ಪಕವಾಗಿರುವಾಗ ನಮಗದರ ಬೆಲೆಯ ಅರಿವಿಲ್ಲ. ನಮ್ಮ ಹೈಟು, ವೈಟು, ಬಣ್ಣ, ಸೌಂದರ್ಯ , ಬುದ್ಧಿಮತ್ತೆ ಎಲ್ಲವನ್ನೂ ಅವರಿವರ ಜತೆ ಕಂಪೇರ್ ಮಾಡಿ ಮುಖ ಸಣ್ಣದಾಗಿಸಿಕೊಳ್ಳುವುದೇ ನಮ್ಮ ಪ್ರಮುಖ ಹಾಬಿ. ಅನಾಥಾಶ್ರಮದಲ್ಲಿರುವ ಎಳೆಯ ಕಂದಮ್ಮಗಳನ್ನು ನೋಡಿದಾಗ, ಪರಿತ್ಯಕ್ತರು, ರೋಗಿಗಳು, ಅಬಲಾಶ್ರಮಗಳಲ್ಲಿರುವವರು, ಒಂದು ಕೊಡ ನೀರಿಗೆ ಮೈಲಿಗಟ್ಟಲೆ ನಡೆಯುವವರು, ಗೊಂಡಾರಣ್ಯದಲ್ಲಿ ವಾಸಿಸುವ ಆದಿವಾಸಿಗಳು, ತಪ್ಪು ಮಾಡಿಯೋ ಮಾಡದೆಯೋ ಜೈಲಿನಲ್ಲಿರುವವರು, ಸಾಲಸೋಲ ಮಾಡಿ ಎಲ್ಲವನ್ನು ಕಳೆದುಕೊಂಡವರು, ಹಗರಣಗಳಲ್ಲಿ ಸಿಲುಕಿ ಸಾರ್ವಜನಿಕ ಅಪಮಾನ ಎದುರಿಸುವವರು ಇವರನ್ನೆಲ್ಲ ನೋಡಿದರೆ ನಮ್ಮ ಸಮಸ್ಯೆಗಳು ತೃಣ ಸಮಾನ. (ತಮಾಷೆಯಾದರೂ ಈ ವಿಷಯದಲ್ಲಿ ನಮ್ಮ ರಾಜಕಾರಣಗಳನ್ನು ಈ ವಿಷಯದಲ್ಲಿ ಮೆಚ್ಚಬೇಕು. ದಿನಬೆಳಗಾದರೆ ಅವರ ಮೇಲಿನ ಆಪಾದನೆಗಳು ಅವರನ್ನೇನೂ ಕುಗ್ಗಿಸುವುದಿಲ್ಲ)
ಬದುಕೆನ್ನುವುದು ದೇವರು ನಮಗಿತ್ತ ವರ. ಕಷ್ಟವೋ ನಷ್ಟವೋ ಅದರಲ್ಲಿ ‘ ಈಸಬೇಕು ಇದ್ದು ಜೈಸಬೇಕು’. ನೆಗೆಟಿವ್ ಆಗಿ ಆಲೋಚಿಸುವುದಕ್ಕಿಂತ ಹಗಲುಗನಸಾದರೂ ಸರಿಯೆ ಕನಸಿನ ಸರಮಾಲೆ ಹೆಣೆಯುವುದೊಳ್ಳೆಯದು. ಯಾಕೆಂದರೆ ಬೆಳಕಿರದ ಹಾದಿಯಲ್ಲಿ ನಡೆಯಬಹುದು; ಆದರೆ ಕನಸಿರದ ಹಾದಿಯಲ್ಲಿ ನಡೆಯಲಾರೆವು.
ಜಯಶ್ರೀ ಬಿ.ಕದ್ರಿ

ಕಲೆ-ಸಂಸ್ಕೃತಿ-ಸಾಹಿತ್ಯ

‘ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು’ ಹೀಗೆ ಸಾಗುತ್ತದೆ ಕವಿತೆಯೊಂದರ ಸೊಲ್ಲು. ಹೌದು. ಕಲೆ, ಸಾಹಿತ್ಯ, ಸಂಸ್ಕೃತಿಗೆ ನಮ್ಮ ಮನಸ್ಸನ್ನು ಅರಳಿಸುವ, ಮೇರು ಸದೃಶ ಕನಸುಗಳನ್ನು ಕ್ಷಣ ಕಾಲವಾದರೂ ಕಲ್ಪಿಸಿಕೊಳ್ಳುವ ಪ್ರೇರೇಪಣೆ ಕೊಡುವ ಶಕ್ತಿ ಇದೆ. ಹಾಗಿದ್ದರೂ ಒಂದು ಅಧ್ಯಯನ ಶಿಸ್ತಾಗಿ ಕಲೆ, ಸಾಹಿತ್ಯವನ್ನು ಕಡೆಗಣಿಸುವವರೇ ಜಾಸ್ತಿ. ಕಾಲೇಜುಗಳ ಕಲಾ ವಿಭಾಗದಲ್ಲಿ ಎಪ್ಪತ್ತು ಶೇಕಡಾದಷ್ಟು ಹುಡುಗಿಯರೇ ಇರುತ್ತಾರೆ ಹಾಗೂ ದಶಕದ ಹಿಂದೆ ಅದು ಕೇವಲ ಮದುವೆಯಾಗಲು ಒಂದು ಕ್ವಾಲಿಫಿಕೇಶನ್ ಆಗಿತ್ತು. ಈಗ ಹಾಗಲ್ಲ. ವಿಷುವಲ್ ಆರ್ಟ್ಸ್ ನಂತಹ ಸಬ್ಜೆಕ್ಟ್ಗಳಲ್ಲಿ ಕಲೆಯಿಂದಲೂ ಬದುಕು ಕಟ್ಟಿಕೊಳ್ಳಬಹುದು (ಕಂಪ್ಯೂಟರ್ ಜ್ಞಾನ, ಮಾಕರ್ೆಟಿಂಗ್ ಅರಿವು ಇದ್ದಲ್ಲಿ ಮಾತ್ರ). ಹಾಗಿದ್ದರೂ ಮಧ್ಯಮ ವರ್ಗ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಯಾಕೆಂದರೆ ಕಲೆ, ಸಾಹಿತ್ಯವನ್ನೇ ನೆಚ್ಚಿ ಬದುಕು ಸಾಗಿಸಲು ಮೊಗೆದಷ್ಟು ಚಿಮ್ಮುವ ಒರಿಜಿನಲ್ ಪ್ರತಿಭೆ, ಹೊಸ ಐಡಿಯಾಗಳು, ಚಾಕಚಕ್ಯತೆ, ವ್ಯವಹಾರ ಚತುರತೆ ಬೇಕು. ಹೀಗಾಗಿಯೇ ಡ್ಯಾನ್ಸ್ ಕಲಿಯುವ ಮಗಳನ್ನು ಐಐಟಿ ಕೋಚಿಂಗ್ ನೆಪದಲ್ಲಿ ಫಿಸಿಕ್ಸ್ ಕಲಿಯಲು ಪ್ರೇರೇಪಿಸುತ್ತೇವೆ. ಕಾಲೇಜಿನಲ್ಲಿ ಹಾಡು ಕೋಗಿಲೆಯಾಗಿದ್ದವರು ಸಂಘ ಸಂಸ್ಥೆಗಳ ವಾರ್ಷಿಕೋತ್ಸವಕ್ಕೆ ಸೀಮಿತರಾಗುತ್ತಾರೆ. ಕಲೆಯನ್ನೇ ಜೀವನವಾಗಿಸಿಕೊಂಡವರು, ಬರಹವನ್ನೇ ವ್ಯತ್ತಿಯನ್ನಾಗಿಸಿಕೊಂಡವರನ್ನು ಕಂಡಾಗ ನಮ್ಮ ಜೀವ ವಿಲವಿಲ ಮಿಡುಕುವುದು ಸುಳ್ಳಲ್ಲ. ಹಾಗೆಂದು ಈ ಯಾಂತ್ರಿಕ ಜಗತ್ತಿನಲ್ಲಿ ಕಲೆಯ ಚೈತನ್ಯವನ್ನು, ಸಾಹಿತ್ಯದ ಒಲವನ್ನು ಜೀವಂತವಾಗಿಸಿಕೊಳ್ಳುವುದು ಕಷ್ಟ ಸಾಧ್ಯ. ಕಲೆ, ಕಲಾತ್ಮಕತೆ ಟಿಸಿಲೊಡೆಯುವ ಹಲವು ಬಗೆಯನ್ನು ಅದರ ಆಳ ವಿಸ್ತಾರವನ್ನು, ಬೀಸುಗಾಳಿಯ ತುಯ್ತದಲ್ಲೂ, ಬಡತನದ ಬೇಗೆಯಲ್ಲೂ ಕಲೆ ಚಿಗುರೊಡೆವ ವಿದ್ಯಮಾನಗಳನ್ನು ದಾಖಲಿಸುವ ಪುಟ್ಟ ಪ್ರಯತ್ನ ಇದು.
ರಂಗದ ಮೇಲೆ ನವರಸ ಅಭಿವ್ಯಕ್ತಿಸುವ, ಪ್ರೇಕ್ಷಕರನ್ನು ಭಾವಲಹರಿಗಳಲ್ಲಿ ತೇಲಿಸಿ ಥೆರಪಿಯಂತೆ ಗುಣಪಡಿಸುವ ನಾಟಕ, ಯಕ್ಷಗಾನ, ಕಥಕಳಿ ಕಲಾವಿದರು ಕೊನೆಗಾಲದಲ್ಲಿ ಆರ್ಥಿಕ ಸುಭದ್ರತೆ ಇಲ್ಲದೆ ನರಳುವುದನ್ನು ನೋಡುವಾಗ, ಚೆಂಡೆ, ಡೋಲು, ಕಹಳೆ, ತಮಟೆ, ಜನಪದ ನೃತ್ಯಗಳು ಇವೆಲ್ಲ ಜಾತಿ ವ್ಯವಸ್ಥೆಯನ್ನು ಪ್ರತಿನಿಧಿಸುತ್ತವೆ ಎನ್ನುವ ಕೂಗು ಕೇಳಿ ಬರುವಾಗ ಕಲೆ, ಕಲೆಯ ಅಸ್ಮಿತೆ, ಕಲಾವಂತಿಕೆಗಳ ನಿರ್ವಚನ ಏನೆಂದು ಯೋಚನೆಯಾಗುತ್ತದೆ. ಯಾವುದೇ ಕಲೆ ಸಮಾಜದ ಭಾಗವೇ ಆಗಿರುವುದರಿಂದ ಕಳೆದು ಹೋದ ಸಾಮಾಜಿಕ ಚರಿತ್ರೆಯೊಂದಿಗೆ ಕಲೆ ತಳುಕು ಹಾಕಿಕೊಂಡಿರುವುದನ್ನು ಗಮನಿಸದೆ ವಿಧಿ ಇಲ್ಲ. ಹಾಗೆ ನೋಡುವುದಿದ್ದರೆ ಇಡೀ ಭಾರತದ ಚರಿತ್ರೆಯಲ್ಲಿ ರಾಜಾಶ್ರಯವಿಲ್ಲದೆ, ಕಲಾ ಪೋಷಕರ ನೆರವಿಲ್ಲದೆ ಯಾವುದೇ ಕಲೆ ಉಳಿದು ಬೆಳೆದ ದೃಷ್ಟಾಂತ ಇಲ್ಲ. ಅದೇ ರೀತಿಯಲ್ಲಿ ಆರ್ಟ್ಸ್ ಎನ್ನುವುದು ಶುದ್ಧವಾಗಿಯೇ ಇರಬೇಕು ಎಂದು ಬದಲಾವಣೆಗೆ, ಆಧುನಿಕ ಅಗತ್ಯಗಳಿಗೆ ಸ್ಪಂದಿಸದೇ ಹೋದಲ್ಲಿ ಯಾವುದೇ ಕಲೆ ವಿನಾಶವಾಗುವುದಲ್ಲಿ ಯಾವ ಸಂಶಯವೂ ಇಲ್ಲ. ಹೀಗಾಗಿಯೇ ಫ್ಯೂಷನ್ ಆರ್ಟ್ಸ್ ನ್ನು ಎಲ್ಲೆಡೆ ನೋಡುತ್ತೇವೆ.
ಕಲೆಯೆಂದರೆ ದೈನಂದಿನ ಉಪಯೋಗಕ್ಕೆ ಹೊರತಾದದ್ದು ಎನ್ನುವ ಭಾವನೆ ನಮ್ಮಲ್ಲಿ ಇದ್ದೇ ಇದೆ. ಉದಾ: ಚಿತ್ರಕಲೆ, ಪೈಂಟಿಂಗ್, ಶಿಲ್ಪಗಳು. ಹೀಗಾಗಿಯೇ ತಾಳ್ಮೆಯಿಂದ ಮಿಡಿ ಉಪ್ಪಿನ ಕಾಯಿ, ಹಪ್ಪಳ ತಯಾರಿಸಿ ಮನೆ ಮಂದಿಗೆಲ್ಲ ಹಂಚುವ ಗೃಹಿಣಿಯರು, ಅಂದವಾಗಿ ಅಲಂಕರಿಸಿಕೊಂಡು ಓಡಾಡುವ ಎಳೆಯ ಲಲನೆಯರು, ಇವರ ಕಲಾತ್ಮಕತೆಯನ್ನು, ‘ಗ್ರೂಮಿಂಗ್’ನ್ನು ನಾವು ಗಮನಿಸುವುದಿಲ್ಲ. ಇನ್ನು ಕಲೆ, ಸಾಹಿತ್ಯ ಬೆಲೆ ಕಟ್ಟಲಾಗದ್ದು ಹೌದಾದರೂ ಕೊಂಡು ಓದುವ ವರ್ಗ ಇಲ್ಲವಾದಲ್ಲಿ ನಮ್ಮ ಸಾಹಿತಿಗಳು, ಕಲಾವಿದರು ತಮ್ಮ ಅಭಿಮಾನವನ್ನು ಬದಿಗಿಟ್ಟು ಕೃತಿಗಳನ್ನು ಮಾರಾಟ ಮಾಡಲು ಪರದಾಡುವ ಪರಿಸ್ಥಿತಿ. ಒಟ್ಟಿನ ಮೇಲೆ ಮಾತಿನ ಕಲೆಯಿಂದ ಹಿಡಿದು ಮೌನ ಮರ್ಮರದವರೆಗೆ ಕಲೆ, ಸಾಹಿತ್ಯವನ್ನು ನಮ್ಮ ಉಸಿರನ್ನಾಗಿಸಲು ಸಾಧ್ಯವಿಲ್ಲದಿದ್ದರೂ ಸಾಧ್ಯವಾದಷ್ಟು ಪೋಷಿಸುವ ಸಹೃದತೆಯಾದರೂ ನಮಗಿರಬೇಕಾದುದು ಸಮಾಜದ ಸ್ವಾಸ್ಥ್ಯ ದೃಷ್ಟಿಯಿಂದ ಅತ್ಯಗತ್ಯ.
ಜನಸಾಮಾನ್ಯರಾದ ನಮಗೆ ಕಲೆ, ಸಾಹಿತ್ಯದ ವಿಮರ್ಶಾತ್ಮಕ ಪರಿಭಾಷೆ, ಮಾನದಂಡಗಳು ಗೊತ್ತಿರುವುದು ಅಷ್ಟಕಷ್ಟೆ. ಹಾಗಿದ್ದರೂ ಮಳೆ ನಿಂತರೂ ಮಳೆ ಹನಿ ನಿಲ್ಲದಂತೆ ಒಂದು ಉತ್ತಮ ಹಾಡಿನ ಗುಂಗು, ಒಂದು ಅದ್ಭುತ ಡೈಲಾಗ್ನ ರೋಮಾಂಚನ, ಒಂದು ಸ್ಫೂರ್ತಿಯುತ ಭಾಷಣದ ಸಾಲು, ನಮ್ಮ ಮನಸ್ಸಿನಲ್ಲಿ ಅನುರಣಿಸುತ್ತಲೇ ಇರುತ್ತದೆ. ಇನ್ನು ಕಲೆಯೆನ್ನುವುದು ಲಕ್ಸುರಿಯ, ವೈಭೋಗದ ದ್ಯೋತಕವೆನ್ನುವ ವಾದ ಸರಿಯೇ ಆದರೂ (ಉದಾ: ಬೇಲೂರು ಹಳೆಬೀಡಿನ ಶಿಲ್ಪ ವೈಭವ, ದೇವಾಲಯಗಳ ಕೆತ್ತನೆಗಳು, ಅರಮನೆಗಳ ವೈಭವ ಇತ್ಯಾದಿ). ಬದುಕನ್ನು ಸಹನೀಯವಾಗಿಸಲು, ಭೌಮದೆತ್ತರದಾಗಸದಲ್ಲಿ ಮನೋ ವಿಹಾರಿಯಾಗಲು ಕಲೆ, ಸಾಹಿತ್ಯದ ಸಿಂಚನ ಬೇಕು. ಇಲ್ಲವಾದಲ್ಲಿ ಈ ಬದುಕು ನಮ್ಮನ್ನು ಕಂಗೆಡಿಸುವುದರಲ್ಲಿ ಸಂಶಯವಿಲ್ಲ. ಸ್ಥೂಲವಾಗಿ ನೋಡುವುದಿದ್ದರೆ ಜನಪದ ಕಲಾವಿದರು, ಧಾಮರ್ಿಕ ಆಚರಣೆಗಳನ್ನು ಹೊರತು ಪಡಿಸಿದರೆ ಕಲಾವಿದರಿರುವುದು ಭರತ ನಾಟ್ಯ, ನೃತ್ಯ, ಯಕ್ಷಗಾನ, ಚಿತ್ರಕಲೆ, ಸಂಗೀತಗಳಲ್ಲಿ. ಇದಲ್ಲದೆ ಮಾಸ್ ಮೀಡಿಯಾ (ಟಿವಿ ಸೀರಿಯಲ್, ಫಿಲ್ಮ್ಗಳು, ಹೀಗೆ). ಪಟಪಟ ಮಾತನಾಡುವುದರಿಂದ ಹಿಡಿದು ಛಾಯಾಗ್ರಹಣ, ಕಮರ್ಶಿಯಲ್ ಆರ್ಟ್ಸ್ ಹೀಗೆ ಹವ್ಯಾಸವನ್ನೇ ವೃತ್ತಿಯನ್ನಾಗಿಸುವುದೊಂದು ಭಾಗ್ಯ ಹಾಗೂ ಛಾಲೆಂಜ್.
‘ಕಲೆ’ ಎನ್ನುವುದು ನಮ್ಮ ಬೊಗಸೆಗೆ ಎಷ್ಟು ದಕ್ಕುತ್ತದೆಯೋ ಅಷ್ಟು. ಕಲೆಯನ್ನು ಆಸ್ವಾದಿಸಲು ಆ ಕಲಾ ಪ್ರಕಾರದ ಪ್ರಾಥಮಿಕ ಜ್ಞಾನವಾದರೂ ಇರಬೇಕಾದುದು ಅವಶ್ಯ. ಇಲ್ಲವಾದಲ್ಲಿ ಯಕ್ಷಗಾನ ಗಲಾಟೆಯಂತೆಯೂ, ಶಾಸ್ತ್ರೀಯ ಸಂಗೀತ ತಮಾಷೆಯಂತೆಯೂ ಕಾಣಿಸುವುದರಲ್ಲಿ ಆಶ್ಚರ್ಯವಿಲ್ಲ. ಇನ್ನು ನೃತ್ಯವಿರಲಿ, ಸಂಗೀತವಿರಲಿ ಅದರಲ್ಲಿ ಪ್ರಾವೀಣ್ಯತೆ ಪಡೆಯಲು ಖ್ಯಾತಿ ಗಳಿಸಲು ಹತ್ತಾರು ವರ್ಷಗಳೇ ಬೇಕು ಹಾಗೂ ಅದನ್ನು ಕೆರೀರ್ ಆಗಿಸಲು ಸೂಕ್ತ ಕಾಂಟಾಕ್ಟ್ಗಳು, ಆರ್ಥಿಕ ಸುಭದ್ರತೆ ಬೇಕು. ಕಲೆ ನಿರೀಕ್ಷಿಸುವ ಕಠಿಣ ತರಬೇತಿ, ಪರಿಶ್ರಮವನ್ನು ಬೇಡುವ ಕಾರಣ, ಶಾಲಾ ಕಾಲೇಜುಗಳ ಪಠ್ಯಕ್ಕೆ ಹೊರತಾಗಿ ಸಮಯವನ್ನು ಅಪೇಕ್ಷಿಸುವ ಕಾರಣ, ತಂದೆ ತಾಯಿಯರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಲೇಬೇಕಾಗಿದೆ. ಹೆಣ್ಣುಮಕ್ಕಳ ಸಮಸ್ಯೆ ಇನ್ನೂ ಸಂಕೀರ್ಣವಾದುದು. ಓದು, ಹವ್ಯಾಸ, ಗುರಿ ಎಲ್ಲವನ್ನೂ ಸಮತೋಲನದಿಂದ ನಿಭಾಯಿಸಿಕೊಂಡು ಹೋಗುವ ಜಾಣ್ಮೆ ಇಲ್ಲವೆಂದಾದಲ್ಲಿ ಆ ಮುಗ್ಧ ಹುಡುಗಿಯರು ಅನೇಕ ಸಣ್ಣ ಮಾತುಗಳಿಂದಲೂ, ಮುಜುಗರದ, ಅವಮಾನದ ಅನುಭವಗಳಿಂದಲೂ ಕಣ್ಣೀರಾಗಬೇಕಾದ ಪರಿಸ್ಥಿತಿ. ನಮ್ಮ ಸಮಾಜ ಹೆಣ್ನನ್ನು ನೋಡುವ ದೃಷ್ಟಿ ಎಷ್ಟು ಕೆಟ್ಟದಾಗಿದೆ ಎನ್ನುವುದಕ್ಕೆ ದಿನಪತ್ರಿಕೆಗಳಲ್ಲಿ ಬರುವ, ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಗಳು ಸಾಕ್ಷಿ. ಮಹಿಳಾ ಕಲಾವಿದೆಯರ ಪಾಡನ್ನು ಸಚಿವೆ, ಕಲಾವಿದೆ ಉಮಾಶ್ರೀ ತಮ್ಮ ‘ಬೆಂಕಿ ಬೆಡಗು’ ಕೃತಿಯಲ್ಲಿ ಸಮರ್ಥವಾಗಿ ವ್ಯಕ್ತಪಡಿಸುತ್ತಾರೆ.
ಕಲೆಗೂ ಸಾಹಿತ್ಯಕ್ಕೂ ಅವಿನಾಭಾವ ನಂಟಿದೆ. ಕಲೆ ಸಾಹಿತ್ಯವನ್ನು ಬೆಳೆಸಿದಂತೆಯೇ ಸಾಹಿತ್ಯವಿಲ್ಲದೆ, ಶಬ್ಧಗಳ ಸೂಕ್ಷ್ಮ ಕುಸುರಿಯ ಗಾರುಡಿಗತೆ ಇಲ್ಲದೆ ಕಲೆಗೆ ಮನಮುಟ್ಟುವ ಶಕ್ತಿ ದಕ್ಕುವುದಿಲ್ಲ. ಹಾಗೆ ನೋಡುವುದಿದ್ದರೆ ಬರೆಯುವುದೊಂದು ಕಲೆ, ಬೈದು ಭಂಗಿಸದೆ ಮಾತನಾಡುವುದೊಂದು ಕಲೆ, ಅಂತ:ಕರಣದ ಸೆಲೆ. ಸಾಹಿತ್ಯವೂ ಕಲೆಯಂತೆಯೇ ಸಮಾಜದ ಕೈಗನ್ನಡಿ. ಸಾಮಾಜಿಕ ಜೀವನದ ಸೌಂದರ್ಯ ಹಾಗೂ ವಿಕಾರಗಳನ್ನು ಸಾಹಿತ್ಯಕ್ಕಿಂತ, ಕಲೆಗಿಂತ ಚೆನ್ನಾಗಿ ಯಾವ ಜ್ಞಾನ ಶಾಖೆಗೆ ವ್ಯಕ್ತಪಡಿಸಲು ಸಾಧ್ಯ? ಸಿನೆಮಾದಂತಹ ದೃಶ್ಯ ಮಾಧ್ಯಮಕ್ಕಂತೂ ಒಂದಿಡೀ ತಲೆಮಾರನ್ನು ಪ್ರಭಾವಿಸುವ ಶಕ್ತಿ ಇದೆ. ‘ತ್ರೀ ಈಡಿಯಟ್ಸ್’ ನೋಡಿದ ಹಲವು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಬಿಟ್ಟು ಪ್ಯೂರ್ ಸಯನ್ಸ್  ತೆಗೆದುಕೊಳ್ಳುವಲ್ಲಿ ಅದರ ಎಫೆಕ್ಟಿವ್ನೆಸ್ ಇತ್ತು.
‘ಕಲೆ’ ಎನ್ನುವುದನ್ನು ಪ್ರಜ್ಞಾಪೂರ್ವಕವಾಗಿ ಉಳಿಸದಿದ್ದಲ್ಲಿ ಅದು ಉಳಿಯುವುದಿಲ್ಲ. ಉದಾಹರಣೆಗೆ ನಮ್ಮ ಅಜ್ಜಿಯಂದಿರು ಹೇಳುತ್ತಿದ್ದ ಸೋಬಾನೆ ಪದಗಳು, ಲಾವಣಿಗಳು, ಭಜನೆ ಪದ್ಯಗಳು ಹೀಗೆ. ಜಗತ್ತು ಒಂದು ಪುಟ್ಟ ಗ್ಲೋಬಲ್ ವಿಲೇಜ್ ಆಗುತ್ತಿರುವ ಈ ಸಂದರ್ಭದಲ್ಲಿ ವೈವಿಧ್ಯಮಯ ಸಂಸ್ಸೃತಿಗಳನ್ನು, ತನ್ಮೂಲಕ ಭಾಷೆ, ಕಲೆಗಳನ್ನು ಉಳಿಸಿಕೊಳ್ಳುವುದು ನವ ವಸಾಹತುಶಾಹಿ ಹುನ್ನಾರಗಳನ್ನು ಎದುರಿಸುವ ಪ್ರತಿಭಟನೆ ಕೂಡ. ಭಾರತದಲ್ಲಿ ಮಾತ್ರವಲ್ಲ ನೈಜೀರಿಯಾದಂತಹ ದೇಶದಲ್ಲಿ ಕೂಡ ಚಿನುವಾ ಅಚಿಬೆಯಂತಹ ಬರಹಗಾರರು ಪಾಶ್ಚಾತ್ಯೀಕರಣ ತಂದೊಡ್ಡುವ ಏಕರೂಪಿ ಸಂಸ್ಸೃತಿಯ ಅಪಾಯವನ್ನು ಮನಗಂಡಿದ್ದರು. ಸಂಸ್ಕೃತಿ ವಾಣಿಜ್ಯೀಕರಣಗೊಳ್ಳುತ್ತಿದೆ, ವೈಭವೀಕರಣಗೊಳ್ಳುತ್ತಿದೆ ಎಂದೆಲ್ಲ ವಾದಗಳೇನೇ ಇದ್ದರೂ ಸಂಸ್ಕೃತಿಯನ್ನು ಸಂರಕ್ಷಿಸಲೇಬೇಕಾದ, ಅದರ ಬಗ್ಗೆ ಯುವ ಜನಾಂಗದಲ್ಲಿ ಅಭಿಮಾನವನ್ನು ಬಿತ್ತಲೇಬೇಕಾದ ಸಂಕ್ರಮಣ ಸ್ಥಿತಿಯಲ್ಲಿ ನಾವಿದ್ದೇವೆ ಹಾಗೂ ಅದು ನಮ್ಮ ಕರ್ತವ್ಯ ಕೂಡ.
ಜಯಶ್ರೀ ಬಿ.ಕದ್ರಿ.

ಮುಗಿಲಂಚಿನ ರೇಖೆ

‘ಮನುಜ ಜಾತಿ ತಾನೊಂದೆ ವಲಂ’ ಎಂದು ಪಂಪ ಮಹಾಕವಿ ನೂರಾರು ವರ್ಷಗಳ ಹಿಂದೆಯೇ ಹೇಳಿದ್ದಾನೆ. ಬಸವಣ್ಣನ ವಚನಗಳಿಂದ ಹಿಡಿದು ಮಾರ್ಟಿನ್ ಲೂಥರ್‌ಕಿಂಗ್, ಅಬ್ರಹಾಂ ಲಿಂಕನ್, ಮಹಾತ್ಮಾಗಾಂಧಿ, ಅಂಬೇಡ್ಕರ್‌ರವರು ಹೀಗೆ ದೀನದಲಿತರು ಸಮಾಜದಲ್ಲಿ ತುಳಿತಕ್ಕೊಳಗಾದವರ ಬಗ್ಗೆ ಕಾಳಜಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಹಾಗಿದ್ದರೂ ನಿಜವಾಗಿ ಮನುಷ್ಯರೆಲ್ಲರೂ ಒಂದೆಯೇ ಎನ್ನುವುದು ತುಂಬ doubtful. ಇತ್ತೀಚೆಗಷ್ಟೆ ಬಿಬಿ‌ಎಂಪಿ ಕಾಪೊರೇಟರ್ ಅವರು ಕಚೇರಿಯೊಂದರ ಫ್ಯೂಸ್‌ನನ್ನು ತಮ್ಮನ್ನು ಒಳಗೆ ಹೋಗಲು ಪ್ರಶ್ನಿಸಿದುದಕ್ಕೆ ಥಳಿಸಿದರಂತೆ. ಅರಸೊತ್ತಿಗೆ ಇಲ್ಲದಿದ್ದರೂ ಆಧುನಿಕ ರಾಜ ಮಹಾರಾಜರುಗಳು, ಅವರ ದರ್ಬಾರುಗಳು ವಿಜೃಂಭಿಸುತ್ತಿರುವ ಈ ಕಾಲದಲ್ಲಿ ಮಾನವೀಯತೆಯ ಸೆಲೆ ಎಲ್ಲಿದೆ ಎಂದು ಹುಡುಕುವುದೇ ಕಷ್ಟವೇನೋ.
ಕಾರ್ಪೊರೇಟರ್ ಕೈಯಿಂದ ಕಪಾಳಮೋಕ್ಷ ಮಾಡಿಸಿಕೊಂಡ ಫ್ಯೂನ್ ಇರಲಿ, ಕಸ ಎತ್ತುವ ಝೂಡಮಾಲಿ ಇರಲಿ ಅವರೂ ಮನುಷ್ಯರೇ ಎಂದೂ ಅವರಿಗೂ ಆತ್ಮಗೌರವ ಇದೆ ಎಂದೂ ನಾವು ಗಮನಿಸಬೇಕಾಗಿದೆ. ಬಿಗ್‌ಬಜಾರ್‌ನಂತಹ ಮಾಲ್‌ಗಳಲ್ಲಿ ಕೇಳಿದ ಬೆಲೆ ಕೊಟ್ಟು ಕೊಳ್ಳುವ ನಾವು ಗಾಡಿಯಲ್ಲಿ ತರಕಾರಿ ಮಾರುವವರಲ್ಲಿ, ಚಪ್ಪಲಿ ಹೊಲೆಯುವವರಲ್ಲಿ ಚೌಕಾಸಿಗಿಳಿಯುತ್ತೇವೆ. ಇತ್ತೀಚೆಗಿನ ವರ್ಷಗಳಲ್ಲಿ ದಕ್ಷಿಣ ಕನ್ನಡದಲ್ಲೊಂದು ಬೆಳವಣೆಗೆ ಗಮನಿಸಬಹುದು. ಅದು ಉತ್ತರ ಕರ್ನಾಟಕ, ಘಟ್ಟದ ಮೇಲೆ ‘ ಎಂದು ಹೇಳಲ್ಪಡುವ ಜಾಗಗಳಿಂದ ಕಾರ್ಮಿಕರ ವಲಸೆ ಹೆಚ್ಚಾಗಿ ಕಟ್ಟಡ ನಿರ್ಮಾಣದಲ್ಲಿ, ಮನೆಕೆಲಸ ( ಮಹಿಳೆಯರು) ವಾಚ್ ಮನ್, ಸೆಕ್ಯುರಿಟಿ ಗಾರ್ಡ್ ಈ ರೀತಿಯ ವೃತ್ತಿಗಳಲ್ಲಿರುತ್ತಾರೆ. ಮುಂಬಯಿಯ ಸ್ಲಮ್ಮುಗಳಲ್ಲಿ ಬದುಕುವುದಕ್ಕಿಂತ ಬಹುಶ: ನಮ್ಮ ಊರೇ ಅವರಿಗೆ ಉತ್ತಮವೇನೋ ಹಳ್ಳಿಗಳಲ್ಲೂ ಪರಿಸ್ಥಿತಿ ಕಠಿಣವೇ ( ಅಸಲಿಗೆ ಹಳ್ಳಿಗಳಲ್ಲಿ ಜೀವನ ದುಸ್ತರವಾದ ಕಾರಣವೇ ಸಿಟಿಗಳಿಗೆ ಗುಳೆ ಹೋಗುತ್ತಾರೆ) ನಗರಗಳ ಜನಸಂಖ್ಯೆ ಜಾಸ್ತಿಯಾದಂತೆಲ್ಲ ವಸತಿ, ವಿದ್ಯುತ್ ಸೌಕರ್ಯ, ನೀರಿನ ವ್ಯವಸ್ಥೆ ಹೀಗೆಲ್ಲ ದೈನಂದಿನ ಅವಶ್ಯಕತೆಗಳೇ ತತ್ಸಾರವಾಗಿ ಬಿಡುತ್ತವೆ. ಮಧ್ಯಮ ವರ್ಗದವರೇ ಬೆಲೆಯೇರಿಕೆಯಿಂದ ತತ್ತರಿಸುತ್ತಿರುವಾಗ ಕಡು ಬಡವರ ಬವಣೆ ಹೇಳತೀರದು.
‘ ಕೈಗಳೆಂದರೆ ಕಾಲಿಗಿಲ್ಲ′ ಎಂಬಂತಹ ಇಕ್ಕಟ್ಟಾದ ಮನೆಗಳಲ್ಲಿ, ಒಂದು ರೂಂ ಅಪಾರ್ಟ್‌ಮೆಂಟ್‌ಗಳಲ್ಲಿ ಬದುಕುವ ವರ್ಗ ಒಂದೆಡೆ ಆದರೆ ಕಲ್ಲು ನೆಲದಲ್ಲಿ ಟೆಂಟ್ ಹಾಕಿಕೊಂಡು, ಬೀದಿಬದಿಯಲ್ಲಿ ಗುಡಿಸಲು ಹಾಕಿಕೊಂಡು, ಹೆಚ್ಚೇಕೆ ಬಸ್‌ಸ್ಟಾಂಡ್‌ಗಳಲ್ಲಿ, ರೈಲ್ವೇ ಸ್ಟೇಷನ್ ಗಳಲ್ಲಿ ಮಲಗಿಕೊಂಡು ಜೀವನ ಎನ್ನುವ ಅನಿವಾರ್ಯ ಕರ್ಮವನ್ನು ಸವೆಸುವವರು, ದಿನವಿಡೀ ದುಡಿದ ಮೈ ಕೈ ನೋವು, ಅವಮಾನ, ತಿರಸ್ಕಾರದ ಯಾತನೆಯನ್ನು ಶರಾಬಿನ ನಶೆಯಲ್ಲಿ ಮರೆಯಲೆತ್ನಿಸುವವರು, ಈ ಕುಡುಕ ಗಂಡಂದಿರಿಂದ ಹೊಡೆತ ಬಡಿತ ತಿಂದು ತಾವೂ ಕೂದಲು ಬಿರಿ ಹುಯ್ದು ಎದೆಬಡಿದುಕೊಂಡು ಅಳುವ ಹೆಂಗಸರು- ಭವ್ಯ ಭಾರತದ ಕೆನೆಪದಕದ ಐಷಾರಾಮಿ ಜೀವನವೆಲ್ಲಿ, ಅತ್ಯಂತ ನಿಕೃಷ್ಟವಾದ, ಆತ್ಮಗೌರವನ್ನೇ ನುಚ್ಚು ನೂರಾಗಿಸುವ ಈ ಜೀವನವೆಲ್ಲಿ ? ( ಈ ವಿಷಯಗಳನ್ನೇ slumdog millionaire ನಂತಹ ಸಿನೆಮಾ ಮಾಡಿ ದುಡ್ಡು ಬಾಚುವುದೊಂದು Paradox)
ಇಷ್ಟಕ್ಕೂ ದಲಿತರು ಯಾರು ಎನ್ನುವುದು ಯೋಚಿಸಬೇಕಾದ ವಿಷಯ. ಸರಕಾರದ ಆಯಕಟ್ಟಿನ ವೃತ್ತಿಗಳಲ್ಲಿ ಪ್ರತಿಷ್ಠಿತ ಸ್ಥಾನಗಳಲ್ಲಿರುವ, ಕಡಿಮೆ ಅಂಕಗಳಿದ್ದರೂ ಸುಲಭವಾಗಿ ರಿಸರ್ವೇಶನ್ ಕೋಟಾ, ಸೀನಿಯಾರಿಟಿ, ಪ್ರಮೋಶನ್ ಪಡೆಯುವ so called ದಲಿತರು ಆ ಪದದ ಅರ್ಥಕ್ಕೆ ಅನ್ವಯಿಸುತ್ತಾರೆಯೇ? ಗೊತ್ತಿಲ್ಲ. ಯಾವುದೋ ಕಾಲಕ್ಕೆ ಸವರ್ಣಿಯರು ಶೋಷಿಸಿದ್ದರು ( ಈಗಲೂ ಇಲ್ಲದಿಲ್ಲ) ಎಂಬ ಕಾರಣಕ್ಕೆ ಯಾವುದೇ ಮೀಸಲಾತಿ ಇಲ್ಲದೆ ವಯೋಮಿತಿ ಮೀರುತ್ತಿರುವ ಬಡ ಬ್ರಾಹ್ಮಣರು, ಇನ್ನಿತರ ವರ್ಗದವರು ಯಾವ ಕೆಟಗರಿಗೆ ಸೇರಬೇಕು ? ಸ್ವಂತ ಹೋಟೆಲ್ ಮಾಡಿ ಗ್ರಾಹಕರ ತಟ್ಟೆ ತೊಳೆಯುವ, ಅಡಿಗೆಗೆ ಸಹಾಯಕರಾಗಿರುವವರು ಪೌರೋಹಿತ್ಯದ ದಕ್ಷಿಣೆಯಿಂದ ಬದುಕುವವರ ಮ್ಲಾನ ವದನ ನೋಡಿದರೆ ಇದಕ್ಕೆ ಉತ್ತರ ಸಿಕ್ಕೀತು. ಹೆಚ್ಚುತ್ತಿರುವ ಕ್ರೈಂ ರೇಟ್ ಗಳು, ರಾತ್ರೋರಾತ್ರಿ ಶ್ರೀಮಂತರಾಗುವ ಕನಸು ಬಿತ್ತುವ, ಲಾಂಗು ಮಚ್ಚುಗಳನ್ನು ಹಿಡಿದುಕೊಳ್ಳುವುದೇ ಅನ್ಯಾಯದ ವಿರುದ್ದದ ಹೋರಾಟವೆಂಬಂತೆ ಬಿಂಬಿಸುವ ಸಿನೆಮಾಗಳು, ‘ ಇನ್ನು ಸಾಕೀ ಬದುಕು’ ಎಂದು ಕೈ ಚೆಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರು (ಈಗೀಗ ಕುಟುಂಬ ಸಮೇತ) ಇವನ್ನೆಲ್ಲ ನೋಡಿದರೆ ನಮ್ಮ ಸಮಾಜ ಇತ್ತಕಡೆ ಸಾಗುತ್ತಿದೆ ಎಂದು ದಿಗ್ಭ್ರಮೆಯಾಗುತ್ತಿದೆ. ಮೇಲೆ ಹೇಳಿದ ವಿಷಯಗಳೆಲ್ಲ ದಿಢೀರನೇ ಉದ್ಭವನಾಗಿದ್ದೇನಲ್ಲವಾದರೂ ಅವುಗಳ ದಾರುಣತೆಗೂ ಬಡತನಕ್ಕೂ ನೇರ ಸಂಬಂಧವಿದೆ.
ಹೀಗಿದ್ದರೂ ‘ ತಾಳಿದವನು ಬಾಳಿಯಾನು’ ಎಂಬಂತೆ ಇಷ್ಟಿಷ್ಟೇ ಇಷ್ಟಿಷ್ಟೇ ಪ್ರವರ್ಧಮಾನಕ್ಕೆ ಬಂದ ಸಂಸಾರಗಳೂ ಇವೆ. ಯಾವ ನಾಗರೀಕರಣ ಬದುಕನ್ನು ಅಸಹನೀಯವಾಗಿದೆಯಾ ವೇ ನಗರಗಳಲ್ಲಿ ಬದುಕು ಕಂಡವರಿದ್ದಾರೆ. Entrepreneurship ಎನ್ನುವುದು ಅತ್ಯಂತ ಪಾಸಿಟಿವ್ ಆದ, ಜೀವನ್ಮಖಿ ಆದ ಮನೋಭಾವ ಇದಕ್ಕೆ ಅನೇಕ ನಿದರ್ಶನಗಳನ್ನು ಮೆಟ್ರೋ ಸಿಟಿಗಳಲ್ಲಿ ಕಾಣಬಹುದು. ಪ್ರವಾಸಿ ತಾಣಗಳಲ್ಲಿ ನಿಂತವರಿಗೆ ಲಿಂಬೆಪಾನಕ, ಫ್ಲಾಸ್ಕನಲ್ಲಿ ಟೀ. ಕಾಫಿ
ಸರಬರಾಜು ಮಾಡುವ, ಸಂಜೆ ಕೆಲಸದಿಂದ ಪ್ರವಾಹದಂತೆ ರೈಲುಗಳಿಂದ ಜನರು ಇಳಿದು ಬರುವಾಗ ಅಲ್ಲೇ ಮೊಟ್ಟೆಗೆ ಕರಿಮೆಣಸಿನ ಪುಡಿ, ಉಪ್ಪು ಹಾಕಿಕೊಡುವ, ಬೀಚುಗಳಲ್ಲಿ ನೇರಳಹಣ್ಣು, ಮಾವಿನಕಾಯಿ, ಸೀಬೆಕಾಯಿ ಮಾರುವ , ಆಕರ್ಷಕ ಮಾತುಗಾರಿಕೆಯಿಂದ ಟ್ರಾವೆಲ್ ಗೈಡ್ ಗಳಾಗುವ ॒ಹೀಗೆ.
ಇನ್ನು ನಮ್ಮೂರಲ್ಲೂ ಹೊಸಟ್ರೆಂಡ್ ಪ್ರಾರಂಭವಾಗಿದೆ. ದುಡಿಯುತ್ತಿರುವ ಹೆಣ್ಣು ಮಕ್ಕಳಿಗೆ ದಿನಾ ಇಡ್ಲಿ, ದೋಸೆ, ಶ್ಯಾವಿಗೆ ಹೀಗೆ ಸಮಯ ಬೇಡುವ ಊಟ ತಿಂಡಿಗಳನ್ನು ತಯಾರಿಸುವುದು ಕಷ್ಟವೇ. ಬೇಕರಿಗಳಲ್ಲಿ ಈಗ ಮಾರುವ ಪತ್ರೋಡೆ, ಕಡುಬು ಮೊದಲುಗೊಂಡು ಹಾಫ್ ಬೇಕ್ಡ್ ಪರೋಟಾಗಳು, ಫ್ರೋಝನ್ ಫುಡ್‌ಗಳು ಒಂದು ರೀತಿಯ Entrepreneurship ಮೈಸೂರುಮಲ್ಲಿಗೆಯನ್ನು ಮಂಗಳೂರಿನ ಮನೆಗಳಿಗೆ ಸಪ್ಲೈ ಮಾಡುವ ಹೂ ಮಾರುವ ಅಜ್ಜ ( ವರ್ಡ್ಸ್‌ವರ್ತನ ‘ Leech Gatherer ನ್ನು ನೆನಪಿಸುತ್ತದೆ ಅವನ ಸ್ವಾಭಿಮಾನ), ತನ್ನ ವಾಚ್ ಮಾನ್ ಕೆಲದೊಂದಿಗೆ ಇನ್ನಿತರ ಸಣ್ಣಪುಟ್ಟ ಆದಾಯ ಗಳಿಸಿಕೊಂಡು ಮೂರು ಮಕ್ಕಳನ್ನು ಓದಿಸುತ್ತಿರುವವರು, ನಾಲ್ಕುಮನೆ ಕಸ ಮುಸುರೆ ಮಾಡಿ ತನ್ನ ಮಗಳನ್ನು ಡಿಗ್ರಿ ಓದಿಸಿದ ಮಹಿಳೆ, ರಿಕ್ಷಾ ಡ್ರೈವ್ ಮಾಡುತ್ತ ತನ್ನ ಮಗನನ್ನು ಇಂಜಿನಿಯರಿಂಗ್ ಓದಿಸುವ ಅಪ್ಪಟ ಆಶಾಭಾವ – ಇದಲ್ಲವೆ ಜೀವನ ಪ್ರೀತಿ ?

ಜಯಶ್ರೀ ಬಿ.ಕದ್ರಿ

ಜ್ಞಾನ – ವಿಜ್ಞಾನ

‘ವಿಜ್ಞಾನ, ತಂತ್ರಜ್ಞಾನ, ‘ಅಭಿವೃದ್ಧಿ’ ಹೀಗೆಲ್ಲ ‘ರೆಟರಿಕ್’ಗಳನ್ನು ಕೇಳುತ್ತಲೇ ಜೀವಿಸುತ್ತಿರುವ ಕಾಲ ಇದು. ಸೈನ್ಸ್‌ನ್ನು ಯಾವುದೋ ಕಾಲದಲ್ಲಿ ಮರೆತಿದ್ದರೂ ಅದು ಧುತ್ತನೆ ಹೇಗೆ ಎದುರು ಬರುತ್ತದೆ ಹೇಳುವುದಕ್ಕಾಗದು. ಉದಾಹರಣೆಗೆ ಹೊಸ ಮಾದರಿ ಮೊಬೈಲ್, ಟ್ಯಾಬ್‌ಗಳನ್ನು ಅಪರೇಟ್ ಮಾಡಲು ಬರದ ಫಜೀತಿ, ಕಂಪ್ಯೂಟರ್‌ನ್ನು ನಮಗಿಂತ ಅದ್ಭುತವಾಗಿ ಬಳಸಿಕೊಳ್ಳುವ ಮಕ್ಕಳ ಕೀಟಲೆ.. ಹೀಗೆ. ನಮ್ಮ ಬಣ್ಣ ಬುದ್ಧಿಮತ್ತೆ, ಚುರುಕುತನ, ರೂಪ ಎಲ್ಲವೂ ನಮ್ಮ ಪೂರ್ವಿಕರಿಂದ ಬಳುವಳಿಯಾಗಿ ಬಂದಿರುವಂತದ್ದು, (ಶಿವರಾಮ ಕಾರಂತರೆಂದಂತೆ ರೋಗ ಕೂಡ!) ಜೀನ್ ಟೆಕ್ನಾಲಜಿ, ಜೆನೆಟಿಕ್ ಇಂಜಿನಿಯರಿಂಗ್‌ನಲ್ಲಿ ನಿಮ್ಮ ಆಸಕ್ತಿ ಕುದರದಿದ್ದರೆ ಹೇಳಿ ‘ನೀನು ತುಂಬ ಮೂಡಿ ಕಣೇ’ ಎಂದು ಯಾರಾದರೂ ಹೇಳಿದರೂ ನೀವು ಹಾರ್ಮೋನ್, ಡೋಪಮೈನ್ ಹೀಗೆಲ್ಲ ಸೈಕಲಾಜಿಕಲ್ ವಿವರಣೆ ಕೊಟ್ಟುಕೊಳ್ಳಬಹುದು. ವಂದನಾಶಿವ ಸಂಪಾದಿಸಿದ ‘ಬಯೋಪೊಲಿಟಿಕ್ಸ್’ ಪುಸ್ತಕದಲ್ಲಿ ರುಥ್ ಹಬ್ಬರ್ಡ್ ಅವರು ಬಯಾಲಜಿ, ಬಯೋ ಟೆಕ್ನಾಲಜಿ, ಇಕಾನಮಿಕ್ಸ್, ಪೊಲಿಟಿಕ್ಸ್, ಸೋಶಿಯಾಲಜಿ ಎಲ್ಲಕ್ಕೂ ಇರುವ ಪರಸ್ಪರ ಸಂಬಂಧವನ್ನು ಗಮನಿಸುತ್ತಾರೆ. ಉದಾಹರಣೆಗೆ ಹೆಣ್ಣುಮಕ್ಕಳು ಜೈವಿಕವಾಗಿ ಕೋಮಲ ಯಾಕೆಂದರೆ ಅವರನ್ನು ಫ್ರಾಕು, ಸ್ಸರ್ಟುಗಳಲ್ಲಿ ಮುದ್ದುಗೊಂಬೆಯಂತೆ ಅಲಂಕರಿಸುತ್ತೇವೆ. ಅದೇ ಹುಡುಗರಿಗೆ ಪ್ಯಾಂಟ್ ಶರ್ಟ್ ಹಾಕಿ ಮರ ಹತ್ತಲು, ಫುಟ್ ಬಾಲ್ ಆಡಲು, ದೃಢಕಾಯರಾಗಿ ಬೆಳೆಯಲು ಪ್ರೋತ್ಸಾಹಿಸುತ್ತೇವೆ. (ಹುಡುಗಿಯರಿಗೆ ಫೇಸ್ ಫ್ಯಾಕ್ ಹಾಕಲು, ಡಯಟ್ ಮಾಡಲು ಸೂಚಿಸುತ್ತಿರುತ್ತೇವೆ). ಅದೇ ರೀತಿ ಇನ್ನೊಂದು ಕುತೂಹಲದ ವಿಷಯವೆಂದರೆ ನನ್ನನ್ನೂ ಸೇರಿಸಿ ಮಹಿಳೆಯರು ನ್ಯೂಸ್ ಪೇಪರ್ ಓದುವ ಕ್ರಮ. ಹೆಡ್‌ಲೈನ್‌ಗಳನ್ನು ಬಿಟ್ಟರೆ ನಾವು ಓದುವುದು ಹೊಸ ರುಚಿ, ಅಡಿಗೆ, ಮಹಿಳೆಯರಿಗೆ ಸಂಬಂಧಿಸಿದ ಲೇಖನ, ಕತೆ, ಕವಿತೆಗಳು. ಕೆನ್ಯಾ, ಚೆಚೆನ್ಯಾದಲ್ಲಿ ಏನಾಯಿತೆಂದೋ, ಮಂಗಳ ಗೃಹ ಯಾನದಲ್ಲಿ ಕನ್ನಡಿಗರ ಪಾತ್ರ ಇವೆಲ್ಲದರ ಬಗ್ಗೆ ನಾವು ಅಷ್ಟೇನೂ ತಲೆಕೆಡಿಸಿಕೊಳ್ಳುವುದಿಲ್ಲ.
ನಮ್ಮ ಮನೆ ಹಿರಿಯರು ಐಸಿಯುನಲ್ಲಿ ಚಡಪಡಿಸುತ್ತಿರುವಾಗ, ಸ್ವತ: ನಮಗೇ ಕಾಯಿಲೆಗಳು ಬಂದಾಗ ಯಾವತ್ತೋ ಕಲಿತ ವಿಜ್ಞಾನದ ನೆನಪಾಗುತ್ತದೆ. ನಿಜವಾಗಿಯೂ ಒಂದು ದಿನ ಹಾಸ್ಪಿಟಲ್‌ನಲ್ಲಿ ಕುಳಿತುಕೊಳ್ಳುವುದೆಂದರೆ ಜ್ಞಾನೋದಯಕ್ಕೆ ಸಮ. ಯಾವ ಸೋಶಿಯೋಲಜಿಗಿಂತ, ಫಿಲಾಸಫಿಗಿಂತ ಮೀರಿದ ಬದುಕಿನ ತತ್ವಗಳು ಅಲ್ಲಿ ಅರಿವಾಗುವುದರಲ್ಲಿ ಸಂಶಯವಿಲ್ಲ.
ನಮ್ಮ ಹ್ಯಾಂಡ್‌ರೈಟಿಂಗ್‌ನ್ನು ತಿದ್ದಿ ತೀಡಲು ಶ್ರಮಿಸುತ್ತಿದ್ದ ಮೇಷ್ಟ್ರುಗಳು ಹೇಳುವುದನ್ನೇ ಗ್ರಾಫಾಲಜಿ ಹೇಳುವಾಗ, ‘ಎಲ್ಲರೊಂದಿಗೆ ಹೊಂದಿಕೊಳ್ಳಬೇಕಮ್ಮಾ’ ಎಂದು ನಮ್ಮ ಅಜ್ಜಿ ಹೇಳಿದ್ದನ್ನೇ ‘ಕಮ್ಯುನಿಕೇಶನ್ ಸ್ಕಿಲ್ಸ್’ ಎಂದು ವರ್ಕ್‌ಶಾಪ್‌ಗಳಲ್ಲಿ ಕಲಿಯುವಾಗ ‘ಏಕಂ ಸತ್ ವಿಪಾ: ಬಹುಧಾ ವದಂತಿ’ ಎನ್ನುವ ಉಪನಿಷತ್ ವಾಕ್ಯ ನೆನಪಾಗದಿರದು.
ಸ್ತ್ರೀವಾದದಲ್ಲ್ಲೊಂದು ಮಾತಿದೆ; ಪರ್ಸನಲ್ ಈಸ್ ಪೊಲಿಟಿಕಲ್’ ಎಂದು ರಾಜಕೀಯವಾಗಲಿ, ಜಗತ್ತಿನ ಆಗುಹೋಗುಗಳಾಗಲಿ ನಮಗೆ ಸಂಬಂಧವೇ ಇಲ್ಲವೆಂದು ನಾವು ಈ ಸ್ಪರ್ದಾತ್ಮಕ ಜಗತ್ತಿನಲ್ಲಿ ಸುಮ್ಮನಿರುವಂತಿಲ್ಲ. ನಮ್ಮ ಮಕ್ಕಳ ಸಿ‌ಇಟಿ ಸೀಟುಗಳು, ಅಕ್ಕಿ ಬೇಳೆ ಹಾಲು ಹಣ್ಣುಗಳ ಬೆಲೆ, ಬಸ್ ಚಾರ್ಜು ರೈಲ್ವೆ ಕಂಪಾರ್ಟ್‌ಮೆಂಟ್ ಉದ್ಯೋಗ ಕೋಟಾಗಳು ವಿಧಾನಸೌಧದ ಪಡಸಾಲೆಯಲ್ಲಿ, ದೆಹಲಿಯ ಪಾರ್ಲಿಮೆಂಟಿನ ಹೊಸ ರಾಜಕೀಯ ನೀತಿಯನ್ನವಲಂಬಿಸಿರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಎಷ್ಟೋ ಹುಡುಗಿಯರಿಗೆ ತಾವು ಯಾವ ಕೋರ್ಸನ್ನು ಯಾಕೆ ಕಲಿಯುತ್ತಿದ್ದೇವೆ ಎನ್ನುವುದೇ ಗೊತ್ತಿರುವುದಿಲ್ಲ. (ಭವಿಷ್ಯತ್ತಿನ ಬಗ್ಗೆ ಚೂರೇ ಚೂರು ಯೋಚನೆಯಿಲ್ಲದೆ ಹಗಲುಗನಸು ಕಾಣುತ್ತ ಜಿಂದಗಿಯನ್ನು ಬರ್‌ಬಾತ್ ಮಾಡಿಕೊಳ್ಳಬಾರದೆಂದು ಈ ಮಾತು). ಗೃಹಿಣಿಯರಿರಲಿ, ಉದ್ಯೋಗಸ್ಥ ಮಹಿಳೆಯರಿರಲಿ, ಓದು ಮತ್ತು ಜ್ಞಾನ ನಮಗೆ ತುಂಬ ಆತ್ಮವಿಶ್ವಾಸವನ್ನು, ವಿಚಾರಗಳನ್ನು ಶಬ್ಧ ರೂಪದಲ್ಲಿ ವ್ಯಕ್ತಪಡಿಸುವ, ಪರಿಣಾಮಕಾರಿಯಾಗಿ ಅಭಿಪ್ರಾಯ ಮಂಡಿಸುವ, ನಮ್ಮ ಹಕ್ಕುಗಳಿಗಾಗಿ ಹೋರಾಡುವ ಧೈರ್ಯವನ್ನು, ನೈತಿಕ ಶಕ್ತಿಯನ್ನು ತುಂಬುತ್ತದೆ. ನಹಿ ಜ್ಞಾನೇನ ಸದೃಶಂ!
ಜಯಶ್ರೀ ಬಿ.ಕದ್ರಿ

ಮನಸು ಮಾಯೆ

‘ಮನಸು ಮಾಯೆ’, ‘ಮಾಯಾಕನ್ನಡಿ’ – ಹೌದು ಕನಸೆಂಬೋ ಕುದುರೆಯನೇರಿ ದೌಡಾಯಿಸುವ ಮನಸಿನ ತಾಕಲಾಟಗಳು, ದ್ವಂದ್ವಗಳನ್ನು ಹೇಳತೀರದು. ಮನಸ್ಸಿಲ್ಲದೆ ಮಾಡುವ ವೃತ್ತಿ, ಮನಸ್ಸಿಲ್ಲದ ಓದು ಹೆಚ್ಚೇಕೆ ಮನಸ್ಸಿಲ್ಲದೆ ತೊಡಗಿಸಿಕೊಳ್ಳುವ ಹವ್ಯಾಸಗಳು ಕೂಡಾ ಧೋ ಎಂದು ಸುರಿಯುವ ಮಳೆಯಂತೆ ರಚ್ಚೆ ಹಿಡಿದು ಕಿರಿಕಿರಿ ಹುಟ್ಟಸಬಲ್ಲವು. ಮನಸ್ಸು, ಮನಸಿನ ಉಪದ್ಯಾಪಗಳು, ಮಾನಸಿಕ ತುಮುಲಗಳು ರಸವತ್ತಾಗಿರುವಷ್ಟೇ ವಿಲಕ್ಷಣವಾಗಿರುವುವು ಕೂಡಾ. ಜೋತುಬಿದ್ದ ಹೆಗಲಿನೊಂದಿಗೆ ಸೋತ ಕಾಲೆಳೆಯುತ್ತ ನಡೆಯುವ ಜೀವ ಉತ್ಸಾಹದ, ಧನಾತ್ಮಕ ಸುಳಿವೊಂದು ಸಿಕ್ಕ ಕೂಡಲೇ ಛಂಗನೆ ನೆಗೆಯುವ ಜಿಂಕೆ ಮರಿಯಂತಾಗುತ್ತದೆ. ಉತ್ಸಾಹದಿಂದ ಪುಟಿವ ಮನಸ್ಸು ಕುಗ್ಗಿ ಕುಸಿಯಲು ಒಂದು ಚಿಕ್ಕ ಕಮೆಂಟು ಸಾಕು. ಒಟ್ಟಿನ ಮೇಲೆ ಮಾನಸ ಸರೋವರ . . ಇದು ಮಾನಸ ಸರೋವರ . . ಎಂಬ ಪುಟ್ಟಣ್ಣ ಕಣಗಾಲರ ಸಿನೆಮಾದ ಟೈಟಲ್ ಸಾಂಗ್ ಯಾವ ಕಾಲಕ್ಕೂ ಪ್ರಸ್ತುತ.
ಈ ನಿಟ್ಟಿನಲ್ಲಿ ಮಹಿಳೆಯರ ಸಮಸ್ಯೆಗಳು ಹೆಚ್ಚು ಸಂಕೀರ್ಣ ಹಾಗೂ ಸಾಮಾಜಿಕ ಜನ್ಯವಾಗಿವೆ. ಅವರ ಹೆಚ್ಚಿನ ನೋವು, ಕೋಪ ತಾಪಗಳಿಗೆ ಸಾಮಾಜಿಕ ನಿರ್ಬಂಧಗಳು, ರೂಢಿಗತ ಒತ್ತಡ, ನಿರೀಕ್ಷೆಗಳು ಕಾರಣ. ಇನ್ನೊಂದು ಕಾರಣ ಜಗತ್ತಿನಿಂದ, ಜನರಿಂದ, ಸ್ವತಹ ತಮ್ಮಿಂದಲೇ ಅತಿಯಾದ ನಿರೀಕ್ಷೆ. ಪ್ರೀತಿಯೋ, ಪ್ರೇಮವೋ, ಜವಾಬ್ದಾರಿಯುತ ವರ್ತನೆಯೋ, ಗೌರವಾದರಗಳೋ, ಸಿಗದಿದ್ದಾಗ ಧಗ್ಗನೆ ಉರಿದೇಳುವ ಆಕ್ರೋಶ, ಆವೇಶ. ಇನ್ನೂ ಮುಂದಿನ ಹೆಜ್ಜೆಯೆಂದರೆ ತಾವೂ ನೊಂದುಕೊಂಡು, ಇತರರೆಲ್ಲರೂ ತಮ್ಮ ಬಗ್ಗೆ ಏನನ್ನೋ ಆಡಿಕೊಳ್ಳುತ್ತಿದ್ದಾರೆಂದು, ಕುತಂತ್ರದಿಂದ ಯೋಜನೆ ಹಾಕುತ್ತಿದ್ದಾರೆಂದೇನೋ ತಿಳಿದುಕೊಳ್ಳುವುದು. ಈ ಆವೇಶ, ಕ್ರೋಧಗಳು ತಣ್ಣಗಾದಾಗಲಷ್ಟೇ ಈ ಜಗತ್ತಿನ ಜನರಿಗೆಲ್ಲ ತಮ್ಮ ತಮ್ಮ ಸಮಸ್ಯೆಗಳೇ ದೊಡ್ಡವೆಂದೂ ಇನ್ನೊಬ್ಬರ ಬಗ್ಗೆ ತಮ್ಮ ಅಮೂಲ್ಯವಾದ ಸಮಯ ವ್ಯಯಿಸಲು ತಾಳ್ಮೆಯಾಗಲಿ, ಸಹನೆಯಾಗಲಿ ಇಲ್ಲವೆಂದೂ ಅರಿವಾಗ ತೊಡಗುತ್ತದೆ.
ಹಾಗಿದ್ದರೂ ಮಾನಸಿಕ ಸಮಸ್ಯೆಗಳು, ಭಾವನಾತ್ಮಕ ಗೊಂದಲಗಳು ಮಹಿಳೆಯರಿಗೆ ಜಾಸ್ತಿ ಎನ್ನುವುದು ಶರ್ತಸಿದ್ಧ. ಅವರು ಧರಿಸುವ ಬಟ್ಟೆ ಬರೆ, ನಡೆನುಡಿಗಳಿಂದ ಹಿಡಿದು ಅವರ ಮಾತುಕತೆ, ವರ್ತನೆ ಎಲ್ಲವನ್ನೂ ಭೂತಕನ್ನಡಿಯಲ್ಲಿ ನೋಡಲಾಗುತ್ತವೆ ಹಾಗೂ ಕೆಲವು ಬಡಪಾಯಿಗಳು ತಮ್ಮ ಅಪ್ರಬುದ್ಧ ವರ್ತನೆಯಿಂದಲೋ ಚೆಲ್ಲು ಚೆಲ್ಲಾದ ನಡವಳಿಕೆಯಿಂದಲೋ ಉಳಿದವರ ಮಾತಿಗೆ ಗ್ರಾಸವಾಗುತ್ತಾರೆ. ಇನ್ನೊಬ್ಬ ಮನುಷ್ಯನಿಗೂ ತನಗೆ ಬೇಕಾದ ಹಾಗೆ ಬದುಕುವ ಹಕ್ಕಿದೆ ಎನ್ನುವುದನ್ನು ಅಲಕ್ಷಿಸುವ ಈ ಸಮಾಜದಲ್ಲಿ ಮೃದು ಮನಸ್ಸಿನವರು, ತೀರಾ ಸೂಕ್ಷ್ಮ ಮನೋಭಾವದವರು ಮಾತಿನ ಆಘಾತವನ್ನು ಕೂಡಾ ತಡೆದುಕೊಳ್ಳಲಾರರು. ಇದೇ ಅನೇಕ ಮಾನಸಿಕ ಸಮಸ್ಯೆಗಳಿಗೆ, ತಲ್ಲಣಗಳಿಗೆ, ಕೌಟುಂಬಿಕ ಕ್ಷೆಭೆಗಳಿಗೆ, ವಿಘಟನೆಗಳಿಗೆ ಕಾರಣವಾಗುತ್ತದೆ.
ಸಾಹಿತ್ಯ, ಚಲನಚಿತ್ರದಂತಹ ಅಭಿವ್ಯಕ್ತಿ ಮಾದ್ಯಮಗಳೂ ಈ ಕ್ಷೇತ್ರವನ್ನು ಖಂಡಿತವಾಗಿ ಪ್ರತಿ ನಿಧೀಕರಿಸಿವೆ. ಕನ್ನಡದ ತ್ರಿವೇಣಿಯವರನ್ನು ಮೊದಲುಗೊಂಡು ಇಂಗ್ಲಿಷಿನ ಅನಿತಾದೇಸಾಯಿಯವರು ಹೀಗೆ ಹೆಣ್ಣಿನ ಆಂತರಿಕ ಜಗತ್ತಿನ ವಿಕ್ಷಿಪ್ತತೆಯನ್ನು ಅಣುವಣುವಾಗಿ ಕೊಲ್ಲುವ ಖಿನ್ನತೆಯ ಅನುಭೂತಿಯನ್ನು ಅನೇಕ ಲೇಖಕಿಯರು ತೀವ್ರವಾಗಿ, ಸಾಂದ್ರವಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. (ವೈದೇಹಿಯವರ ‘ಅಕ್ಕು’ ಕಥೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು) ‘ಶರಪಂಜರ’, ‘ಆಪ್ತಮಿತ್ರ’ದಂತಹ ಮೂವಿಗಳು ಕೂಡ ಈ ರೀತಿಯ ಸುಪ್ತ ಪ್ರಜ್ಞೆಯ ಅನನ್ಯ ವಿಶಿಷ್ಟತೆಗಳನ್ನೂ, ಮನೋ ಜಗತ್ತಿನ ವಿಲಕ್ಷಣ ವ್ಯಾಪಾರಗಳನ್ನು, ಅದುಮಿಟ್ಟ ಆಕಾಂಕ್ಷೆಗಳನ್ನು ಮನೋಜ್ಞವಾಗಿ ತೆರೆದಿರಿಸುತ್ತವೆ. ಖ್ಯಾತ ಮನೋ ವಿಶ್ಲೇಷಕ ಸುಧೀರ್ ಕಾಕರ್ ಅವರು ಭಾರತೀಯ ಕೌಟುಂಬಿಕ ಪರಿಸ್ಥಿತಿಯನ್ನು, ಸಾಮಾಜಿಕ ನಿರ್ಬಂಧಗಳನ್ನು, ಕಟ್ಟುಪಾಡುಗಳನ್ನು ಈ ರೀತಿಯ ಭಾವನಾತ್ಮಕ ಭುಗಿಲೇಳುವಿಕೆಗೆ ಕಾರಣ ಎಂದು ಹೇಳುತ್ತಾರೆ. ಅವರ ಪ್ರಕಾರ ಮೈಯಲ್ಲಿ ದೆವ್ವ ಬರುವುದು, ಹಿಸ್ಟೀರಿಯಾ, ಖಿನ್ನತೆ ಈ ತರದ ಖಾಯಿಲೆಗಳು ಮಹಿಳೆಯರಲ್ಲಿ ಜಾಸ್ತಿ. ಅವುಗಳನ್ನು ಗುಣಪಡಿಸುವ ಮೆಕ್ಯಾನಿಸಂ ಕೂಡಾ ನಮ್ಮ ಪರಂಪರೆಯಲ್ಲೇ ಇದೆ. ನಮ್ಮ ಸಮಾಜದಲ್ಲಿ ಧಾರ್ಮಿಕತೆ, ದೈವ ನಂಬಿಕೆ ಜಾಸ್ತಿ. ಯಾವುದೋ ಅತೀತ ಶಕ್ತಿಯ ಹೆಸರಿನಲ್ಲಿ ತಮಗಾದ ಅನ್ಯಾಯಗಳತ್ತ ಗಮನ ಸೆಳೆಯಲು, ತನ್ನ ವ್ಯಕ್ತಿತ್ವಕ್ಕಾದ ಹಾನಿಯನ್ನು, ಅವಮಾನವನ್ನು ಸರಿಪಡಿಸಿಕೊಳ್ಳಲು, ಓರ್ವ ವ್ಯಕ್ತಿಯಾಗಿ ತನಗೆ ಸಿಗಬೇಕಾಗಿ ಗೌರವ, ಪ್ರೀತಿ, ಆಪ್ತತೆಗಳನ್ನು ಮರಳಿ ಗಳಿಸಿಕೊಳ್ಳಲು ಈ ರೀತಿಯ ನಂಬಿಕೆಗಳು ಸಹಕರಿಸುತ್ತವಂತೆ (ಇದನ್ನು ದುರುಪಯೋಗ ಪಡಿಸಿಕೊಳ್ಳುವ ಅಸಂಖ್ಯಾತ ಬಾಬಾಗಳು, ಸ್ವಾಮೀಜಿಗಳು, ಯೋಗಿಗಳು ಹುಟ್ಟಿಕೊಂಡಿರುವುದು ಬೇರೆ ವಿಷಯ).

woman - society

ಈ ಸಮಾಜದ ದುರಂತಗಳನ್ನು ತಿದ್ದುವುದು, ಹೆಣ್ಣನ್ನು ಶೋಷಣೆಗೊಳಿಸುವ ಅಂಶಗಳನ್ನು ನಿವಾರಿಸುವುದು ಮನುಷ್ಯಮಾತ್ರರಿಂದ ಅಸಾಧ್ಯವಾದುದರಿಂದ ನಮ್ಮನ್ನು ನಾವೇ ತಿದ್ದಿಕೊಳ್ಳುವುದು, ಸಾಧ್ಯವಾದಲ್ಲಿ ನಾವೂ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡುವುದು (ಸಮಾಜದ ಸತ್ಪ್ರಜೆಯಾಗುವುದೂ ದೇಶದ ಹಿತದೃಷ್ಟಿಯಿಂದ ಕೊಡುಗೆಯೇ) ಇತ್ಯಾದಿ ಜೀವನದಲ್ಲಿ ಅಷ್ಟಿಷ್ಟು ಸಾರ್ಥಕ್ಯ ಪಡೆಯಬಹುದೇನೋ..
 
 
 
- ಜಯಶ್ರೀ ಬಿ.ಕದ್ರಿ
(ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಿತ ಲೇಖನ)

ಅಳುವೊಮ್ಮೆ ನಗುವೊಮ್ಮೆ

‘ ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋlaugh cryಣಿ’ ‘ ನನ ಕೈಯ ಹಿಡಿದಾಕೆ ಅಳುನುಂಗಿ ನಗು ಒಮ್ಮೆ ಹೀಗೆಲ್ಲ ಅವಡುಕಚ್ಚಿ ಅಳು ನುಂಗಿ ನಗುವ ಅನಿವಾರ್ಯತೆ ಸಕಲ ಜೀವಿಚರಾಚರಗಳಿಗೂ ಇದೆ. ಕಡಿದಿಟ್ಟ ಗಿಡ ಕಾಂಡದಿಂಧ ಮರಳಿ ಚಿಗುರೊಡೆಯುತ್ತಿರುತ್ತದೆ. ಕುಂಟಿಕೊಂಡು ನಡೆಯುವ ನಾಯಿ, ಭಾರವಾದ ಕೆಚ್ಚಲು ಹೊತ್ತು ನಿಧಾನವಾಗಿ ನಡೆಯುವ ಹಸು ಹೆಚ್ಚೇಕೆ ಬೀದಿಬದಿಯ ಭಿಕ್ಷುಕರು ಕೂಡ ಯಾವುದೋ ಭರವಸೆಯನ್ನು ಹೊತ್ತೇ ಬದುಕುತ್ತಿರುತ್ತಾರೆ.
ಅಳುವಿಗೂ ನಗುವಿಗೂ ಬಹುಶ: ಹೆಚ್ಚು ಅಂತರವೇನಿಲ್ಲ. ಇದಕ್ಕಾಗಿಯೇ ನೋವು ಮರೆಸುವ ಪರಿಕರಗಳನ್ನು ಸಂಗೀತ, ಆಧ್ಯಾತ್ಮ, ವಾಕಿಂಗ್, ಪುಸ್ತಕಗಳು, ಸಿನೆಮಾಗಳು, ಕಾಮಿಡಿ ಪ್ರೋಗ್ರಾಮ್ ಅರ್ಥಹೀನ ಧಾರಾವಾಹಿಗಳು ಹೀಗೆ ಟೆಂಪರರಿ ರಿಲೀಫ್ ಕೊಡುವ ವಿಷಯಗಳನ್ನು ಹುಡುಕಿಕೊಳ್ಳುತ್ತೇವೆ. (ಪೇನ್ ಕಿಲ್ಲರ್ ತರ) ಅವು ಎಷ್ಟರ ಮಟ್ಟಿಗೆ ಎದೆಯ ಕುದಿತವನ್ನು, ತಳಮಳಗಳನ್ನು ನೀಗಿಸುತ್ತದವೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ತಮಾಷೆಯಾದರೂ ಖುಶಿಯ ವಿಷಯವೆನೆಂದರೆ ಜಗತ್ತಿನ ಎಲ್ಲರಿಗೂ ಹೀಗೆಯೇ ಅನಿಸುತ್ತದೆಯೆಂದೂ, ಪ್ರತಿಯೊಬ್ಬರೂ ತಮಗೆ ಇಷ್ಟು ಕಷ್ಟಗಳು ಯಾಕೆ ಬರುತ್ತವೆಂದು ದು:ಖಿಸುತ್ತಾರೆಂದೂ ನಮಗೆ ಆ ಮೇಲಾಮೇಲೆ ಅರಿವಾಗುತ್ತದೆ.
.
ಮಾರುಕಟ್ಟೆಯಲ್ಲಿ ಧಂಡಿಯಾಗಿ ಮಾರಾಟವಾಗುವ ವ್ಯಕ್ತತ್ವ ವಿಕಸನ ಪುಸ್ತಕಗಳು, Self improvement   ಪ್ರೊಗ್ರಾಂಗಳು, ಆಡಿಯೋ ಕ್ಯಾಸೆಟ್ ಗಳು, orientation  ಗಳು ಬದುಕು ಬದಲಿಸಲು ಮನುಷ್ಯರಿಗಿರುವ ತಹತಹಿಕೆಯನ್ನು ತೋರಿಸುತ್ತವೆ. ( ಈ ರೀತಿಯ ಪುಸ್ತಕಗಳು, ಮೋಟಿವೇಶಲ್ ಸ್ಚಿಚ್ ಗಳನ್ನು ಕೊಡುವುದೇ ಕೆಲವರ ಫುಲ್ ಟೈಂ ಬಿಸಿನೆಸ್) ಇಷ್ಟಕ್ಕೂ ದಿಗ್ಗನೇಳುವ ಹಳೆಯ ನೆನಪುಗಳು, ನೋವು ಅಪಮಾನಗಳಿಗೆ, ಗಾಯಗಳಿಗೆ ಎಲ್ಲಿಯ ಮದ್ದಿದೆ? ಇದ್ದರೂ ಅವು ತಾತ್ಕಾಲಿಕ, ಆಯಿಂಟ್ ಮೆಂಟ್‌ನಂತೆ ಮತ್ತೆ ಮತ್ತೆ ನೋಡಿಕೊಳ್ಳುವ ಕಲೆಗಳಂತೆ ಅವುಗಳೊಂದಿಗೆ ಜೀವನ ಸವೇಸಬೇಕಾದುದು ಮನುಷ್ಯರ ಅನಿವಾರ್ಯತೆ. ಟಿವಿಯಲ್ಲಿನ ಜ್ಯೋತಿಷ್ಯ, ವಾಸ್ತು ಪ್ರೊಗ್ರಾಂಗಳು, ಫೋನ್-ಇನ್ ಕಾರ್ಯಕ್ರಮಗಳು, ಪತ್ರಿಕೆಗಳಲ್ಲಿನ ಕೌನ್ಸೆಲಿಂಗ್ ವಿಭಾಗ ಇವೆಲ್ಲ ಈ ರೀತಿಯ ಅಳುನುಂಗಿ ನಗಲು, ಜೀವನ್ಮುಖಿಯಾಗಿ ಬಾಳಲು ಪ್ರೇರೇಪಿಸುವ ಕಾರ್ಯಕ್ರಮಗಳೇ ( ಅಡ್ವೈಸ್ ಕೊಡುವವರೇ ನೆಟ್ಟಗಿಲ್ಲದಿದ್ದರೆ ಅದು ಬೇರೆ ವಿಷಯ).

ಎದೆಯಲ್ಲಿ ಧಗಧಗಿಸುವ ಅಗ್ನಿಕುಂಡ ಇಟ್ಟುಕೊಂಡರೂ ಸರಿ ಜಗತ್ತನ್ನೇ ಗೆಲ್ಲುವ ಆತ್ಮ ವಿಶ್ವಾಸ, ಮುಗುಳ್ನಗೆಯೊಂದಿಗೆ ದಿನವನ್ನು ಎದುರುಗೊಳ್ಳಬೇಕಂತೆ. ಬ್ಯೂಟಿಪಾರ್ಲರ್, ಜಿಮ್ ಗಳ ಕೆಟಲಾಗ್ ನೋಡಿದರೆ ಸಾಕು ಈ ಜೀವನದ ನಶ್ವರತೆಯಲ್ಲೂ ಬದುಕಲು ಏನೆಲ್ಲ ಕಾರಣಗಳಿವೆ ಎಂದು ಆಶ್ಚರ್ಯವಾಗುತ್ತದೆ. ಹಾಗಿದ್ದರೂ ಕೂದಲಿಗೂ ಬಣ್ಣ ಹಚ್ಚುವುದರಿಂದ ಹಿಡಿದು ಕಾಲಿನ ಪೆಡಿಕ್ಯೂರ್ ನ ವರೆಗೆ ಅಪ್ಪಟ ಜೀವನ್ಮಖತೆ ಅವುಗಳಲ್ಲಿವೆ. (ಹಣವನ್ನು ನೀರಿನಂತೆ ಖರ್ಚು ಮಾಡಬೇಕಷ್ಟೆ) ಆಧುನಿಕ ಬದುಕಿನ ಮಾರ್ಕೆಟಿಂಗ್ ತಂತ್ರಗಳು ಇನ್ನಷ್ಟು innovative. ಅಶಾಂತಿ ಕೂಡ ಮಾರಾಟದ ವಸ್ತು. ಹೃಷಿಕೇಶ, ಕೇದಾರ ಹೀಗೆ ಪ್ಯಾಕೇಜ್ ಟೂರ್ ಹೋಗಬಹುದು. ಬೇಕಾದರೆ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ವರ್ಷವರ್ಷವೂ ಹೋಗಲು ರೂಂ ಬುಕ್ ಮಾಡಬಹುದು. ಇನ್ನು ಆಧ್ಯಾತ್ಮ ಗುರುಗಳು, ಯೋಗಿಗಳು, ಮಠಗಳು, ಅಬ್ಬಬ್ಬಾ ! ಇಷ್ಟು ಸಾಲದ್ದಕ್ಕೆ ಆಧ್ಯಾತ್ಮ ಮತ್ತು ಮ್ಯಾನೆಜ್ ಮೆಂಟ್ ಕಂಬೈನ್ ಮಾಡುವ ರಾಬಿನ್ ಶರ್ಮಾ, ಅರಿಂದಮ್ ಚೌಧುರಿ, ದೀಪಕ್ ಚೋಪ್ರಾ ಹೀಗೆ ಮಾರ್ಡನ್ ಗುರುಗಳು ಲೈಫ್ ಹೋತೋ ಜಿಂಗಲಾಲಾ !
ಜಯಶ್ರೀ ಬಿ.ಕದ್ರಿ
( ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಿತ ಲೇಖನ)