Thursday, 6 November 2014

ಫ್ಯಾಷನ್! ಫ್ಯಾಷನ್!

ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಸೆಮಿನಾರೊಂದಕ್ಕೆ ಹೋಗಿದ್ದೆ. ಅಲ್ಲಿನ ಹುಡುಗ ಹುಡುಗಿಯರ ವರ್ತನೆ, ‘ಎಂಟರ್ ಟೈನ್ ಮೆಂಟ್’ ಹಸರಲ್ಲಿ ನಡೆದ ವೆಸ್ಟರ್ನ್ ಡ್ಯಾನ್ಸ್ ಅನ್ನು ನೋಡಿ ‘ಹೀಗೂ ಉಂಟೆ’ ಎಂಬು ನಿಬ್ಬೆರಗಾದದ್ದು ಹೌದು. ಒಂದು ಕಡೆಯಲ್ಲಿ ಸ್ತ್ರೀ ದೌರ್ಜನ್ಯ ಹೆಚ್ಚುತ್ತಲಿದೆ. ಪಾಶ್ಚಾತ್ಯ ಡ್ರೆಸ್ಸ್ ಹಾಕಿದ್ದಕ್ಕೆ MLA ಯೊಬ್ಬರು ಕಮೆಂಟ್ ಮಾಡಿದ್ದಕ್ಕೆ ಸ್ಟೇಜ್ ನಲ್ಲಿಯೇ ಕುಸಿದು ಬಿದ್ದ ಕಬಡ್ಡಿ ಕೋಚ್ ಒಬ್ಬರಾದರೆ ಮಿನಿಡ್ರೆಸ್ಸ್ ಹಾಕಿಕೊಳ್ಳುವುದೇ ಫ್ಯಾಷನೆಬಲ್ ಎಂದು ತಿಳಿದುಕೊಳ್ಳುವ ಯುವ ಸಮುದಾಯ. ಅಸಭ್ಯತೆ , ಅಶ್ಲೀಲತೆ, ಫ್ಯಾಶನ್ ಗಳ ನಡುವಣ ಗೆರೆ ಯಾವುದು? ಫ್ಯಾಷನ್ ಎನ್ನುವುದು ಎಷ್ಟು ವರ್ಷ , ಯಾವ ವಯಸ್ಸಿನಲ್ಲಿ ಚೆನ್ನ, ಫ್ಯಾಷನೆಬಲ್ ಆಗಿ ಎಷ್ಟರ ಮಟ್ಟಿಗೆ ಕಾಣಿಸಿಕೊಳ್ಳಬೇಕು ಹಾಗೂ ಕಾಣಿಸಿಕೊಳ್ಳಬೇಕೇ ಇವೆಲ್ಲ ಗೊಂದಲ , ಕುತೂಹಲದ, ಚಿಂತೆಯ ವಿಷಯ ಕೂಡ.
ದ್ರೋಣಾಚಾರ್ಯ ಪ್ರಶಸ್ತಿ ಪಡೆದ ಕೋಚ್ ನ ಪ್ರತಿಭೆಗಿಂತ ಆಕೆ ಪ್ಯಾಂಟ್ ಶರ್ಟ್ ಹಾಕಿದ್ದೇ ದೊಡ್ಡ ವಿಷಯ ಒಂದು ಕಡೆ ಆದರೆ ಫ್ಯಾಶನ್ ಶೋ ಹೆಸರಿನಲ್ಲಿ ಹದಿಹರೆಯದ ಹುಡುಗಿಯಯ ಅಂಗಾಂಗ ಪ್ರದರ್ಶಿಸುವ ‘ ಅರ್ಟ್’ ಎಂದು ಉತ್ತೇಜಿಸುವ ಮನೋಭಾವ ಇನ್ನೊಂದೆಡೆ. ಕ್ರಿಯೇಟಿವಿಟಿ ಎಂದೇನೆ ಹೇಳಲಿ, ಮಾಡರ್ನ್ ಡ್ರೆಸ್ಸ್ ಗಳು ಮಾದಕವಾಗಿ, ಪ್ರಚೋದನಕಾರಿಯಾಗಿರುವುದು ಸತ್ಯ. ನಮ್ಮ ಮಕ್ಕಳು, ವಿದ್ಯಾರ್ಥಿಗಳು ಮುಗ್ಧರೇ ಆಗಿರಬಹುದಾದರೂ ಫಿಲ್ಮಿ ಡ್ಯಾನ್ಸ್ ಗಳ ಅರೆಬರೆ ಬಟ್ಟೇಗಳು ನೋಡುಗರ ಮನಸ್ಸಿನಲ್ಲಿ ವಿವಿಧ ತರಂಗಗಳನ್ನು ಎಬ್ಬಿಸುವ ವಾಸ್ತವವನ್ನು ಮರೆಯುವಂತಿಲ್ಲ.
‘ಫ್ಯಾಷನೆಬಲ್’ ಎನಿಸಿಕೊಳ್ಳಲು ಒದ್ದಾಡುವ ಹದಿಹರೆಯದವರು, ಮಧ್ಯ ವಯಸ್ಸು ಸಮೀಪಿಸುತ್ತಿದ್ದರೂ ‘ ಯಂಗ್ ಲುಕ್’ ಗೋಸ್ಕರ ಹಂಬಲಿಸಿ ಬ್ಯೂಟಿ ಪಾರ್ಲರ್ , ಜಿಮ್ ಗಳಿಗೆ ಎಡತಾಕುವವರು …ಹೀಗೆ ಫ್ಯಾಷನ್ ಎನ್ನುವುದು ಸಮಕಾಲೀನರಾಗಲು, ಯೌವನದ ಸ್ಪೂರ್ತಿಸೆಲೆಯನ್ನು ಉಳಿಸಿಕೊಳ್ಳಲು ನಾವು ಮಾಡುವ ಅನವರತ ಪ್ರಯತ್ನ ಎನ್ನಬಹುದು . (ಈ ಪ್ರಯತ್ನದಲ್ಲಿ ನಗೆಪಾಟಲಿಗೀಡಾಗದಂತಿರುವುದು ನಮ್ಮ ಹೊಣೆಗಾರಿಕೆ!). ಮಾರ್ಕೆಟ್ಟಿನಲ್ಲಿ ಮಹಾಪೂರದಂತಿರುವ ಫ್ಯಾಷನ್ ಮ್ಯಾಗಜಿನ್ ಗಳು, ಟಿವಿಯಲ್ಲಿರುವ ಕಾರ್ಯಕ್ರಮಗಳು ಹೀಗೆ ಫ್ಯಾಷನ್ ಸೆನ್ಸ್ ಎಂಬುದು ಯಾವಾಗಲೂ ಚಾಲ್ತಿಯಲ್ಲಿರುತ್ತದೆ. ನಮ್ಮ ಅಜ್ಜಿ ಕಾಲದ ದೊಡ್ಡ ದೊಡ್ಡ ಪ್ರಿಂಟ್ ಗಳು, ಮೆಗಾ ಸ್ಲೀವ್ ರವಿಕೆಗಳು,ವಾರೆ ಬೈತಲೆ ಮರಳಿ ಫ್ಯಾಷನ್ ಆಗಿರುವುದು ಫ್ಯಾಷನ್ ನ ಆವರ್ತನಕ್ಕೂ, ಚರಿತ್ರೆಯ ಮರುಕಳಿಸುವಿಕೆಗೂ ಸಾಕ್ಷಿಯೇನೋ!
High heeled shoesಫ್ಯಾಷನ್ ಹೆಸರಿನಲ್ಲಿ ನಡೆಯುವ ಅಧ್ವಾನಗಳು ತಪ್ಪು ಹೆಜ್ಜೆಗಳು, ತಳಮಳಗಳನ್ನು ಹೇಳಿದಷ್ಟೂ ಮುಗಿಯದು. ಹದಿವಯಸ್ಸಿನವರಲ್ಲಂತೂ ತಮ್ಮ ಬಟ್ಟೆ ಬರೆ, Peer Group ನಲ್ಲಿ ಗುರುತಿಸಲ್ಪಡಬೇಕಾದ ಆಕಾಂಕ್ಷೆ ಜಾಸ್ತಿ. ತಮ್ಮ ಶೋಕಿಗೋಸ್ಕರ ಹಣವಿಲ್ಲದಿದ್ದಾಗ ಅವರು ಅಡ್ಡ ಹಾದಿಗಿಳಿಯುವ ದೃಷ್ಟಾಂತಗಳನ್ನೂ ನಾವು ನೋಡುತ್ತೇವೆ. ಓದುವ ವಯಸ್ಸಿನಲ್ಲಿಯ ಅತಿಯಾದ ಫ್ಯಾಶನ್ ಅವರ ಭವಿಷ್ಯವನ್ನೇ ನುಚ್ಚುನೂರಾಗಿಸಬಹುದು. ಒಂದು ಕಾಲಕ್ಕೆ ಸರಳತೆ, ಬುದ್ಧಿಮತ್ತೆಗಳು ಅತೀವ ಗೌರವದಿಂದ ನೋಡಲ್ಪಡುತ್ತಿದರೆ ಈಗಿನ ಯಶಸ್ಸಿನ ನ ಮಂತ್ರ ‘ ಸ್ಮಾರ್ಟ್’ ಆಗಿರುವುದು. ತಮ್ಮ ಆರೋಗ್ಯ ಲೆಕ್ಕಿಸದೆ ಡಯಟ್ ಮಾಡುವುದು , ಆರಿಂಚು ಎತ್ತರರ ಹೀಲ್ಸ್ ಧರಿಸಿ ಕಾಲು ಉಳುಕಿಸಿಕೊಳ್ಳುವುದು, ಯಾವುದೋ ಫೇಶಿಯಲ್ ಮಾಡಿಸಿಕೊಂಡು ಮುಖದ ತುಂಬೆಲ್ಲ ಗುಳ್ಳೆಗಳನ್ನು ಅಹ್ವಾನಿಸಿಕೊಳ್ಳುವುದು ಹೀಗೆ ಫ್ಯಾಶನ್ ನ ಹಿಂದೆ ಬಿದ್ದು ಅನಾಹುತಗಳೂ ಆಗುವುದಿದೆ.
ಫ್ಯಾಶನೆಬಲ್ ಆಗಿರುವುದರಿಂದ ಪ್ರಯೋಜನಗಳು ಇವೆ. ಉತ್ತಮ ಬಟ್ಟೆ ಬರೆ, ಆಕರ್ಷಕ ಅಲಂಕಾರ ನಮ್ಮ ಆತ್ಮ ವಿಶ್ವಾಸವನ್ನೂ, ನಡೆನುಡಿಯಲ್ಲಿ ತಾಜಾತನವನ್ನೂ ತಂದುಕೊಡುತ್ತವೆ. ಸೌಂದರ್ಯವೊಂದೇ ಎಲ್ಲವೂ ಅಲ್ಲವಾದರೂ ನೀಟಾಗಿ ಡ್ರೆಸ್ಸ್ ಮಾಡಿಕೊಂಡವರಿಗೆ ಉದ್ಯೋಗಾವಕಾಶಗಳು ಮತ್ತು ಜನಮನ್ನಣೆ ಸಿಗುವುದನ್ನು ಗಮನಿಸುತ್ತಲೇ ಇರುತ್ತೇವೆ. ಅಂದವಾಗಿರುವವರಿಗೆ ಕಾಂಪ್ಲಿಮೆಂಟ್ ಗಳು, ಭರವಸೆಯ ಉತ್ತೇಜನಕಾರಿ ಮಾತುಗಳು ಅವರ ಹಕ್ಕು ಎಂಬಂತೆ ಲಭಿಸುತ್ತಿರುತ್ತವೆ.
Fashion showಅಂದಚಂದದ , ಥಳುಕು ಬಳುಕಿನ , ಜಾಗತಿಕವಾಗಿ ನಾವೇ ಸೃಷ್ಟಿಸಿಕೊಂಡ ಭ್ರಮೆಯ ಲೋಕದ ಹೊರಗಿನ ಅನಾಥರು, ಕುರೋಪಿಗಳು , ತುತ್ತು ಊಟಕ್ಕೆ ಅಂಗಲಾಚುತ್ತಿರುವವರನ್ನು ನಿರ್ಲಕ್ಷಿಸುತ್ತಿರುವುದು ಈ ನಾಡಿನ ದುರಂತ. ಸೌಂದರ್ಯ ಸ್ಪರ್ಧೆಗಳಿಗಿರುವ ಬಿರುಸಿನ ಪ್ರಚಾರ , ಫಂಡಿಂಗ್ ಗಳು ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕುಟುಂಬಗಳಿಗಾಗಲಿ, ಎಂಡೋಸಲ್ಫಾನ್ ನಿಂದ ಕಂಗೆಟ್ಟ ಸಂಸಾರಗಳ ವ್ಯಥೆಗಳಿಗಾಗಲಿ ಇರುವುದಿಲ್ಲ. ಪಾಶ್ಚಾತ್ಯೀಕರಣವೇ ಅಭಿವೃದ್ಧಿ ಎಂದು ನಾವು ತಿಳಿದುಕೊಂದು ಕನಸಿನ ಕುದುರೆಯ ಬೆನ್ನೇರಿ ದೌಡಾಯಿಸುತ್ತೇವೆ. ಭಾರತೀಯ ಸಾಂಪ್ರದಾಯಿಕ ಮೌಲ್ಯಗಳನ್ನು ಅವಹೇಳನಗೈಯುವುದೇ ಒಂದು ಫ್ಯಾಶನ್. ಚರಿತ್ರೆ, ಸೈಕಾಲಜಿ, ತತ್ವಶಾಸ್ತ್ರ ಎಲ್ಲದರಲ್ಲಿಯೂ ಯುರೋಪಿಯನ್ ವಿಚಾರಗಳನ್ನೇ ನಮ್ಮವಾಗಿಸುವ ಭರದಲ್ಲಿ ನಾವು ನಮ್ಮ ಸಂಸ್ಕೃತಿ , ಆಚಾರಗಳು ವಿಶಿಷ್ಟವೂ, ಈ ನೆಲದ ಸಾರ ಹೀರಿ ನಮ್ಮ ವ್ಯಕ್ತಿತ್ವದ ಭಾಗವೇ ಆಗಿದೆ ಎನ್ನುವುದನ್ನು ಕಡೆಗಣಿಸುತ್ತೇವೆ. ಇದೇ ನಮ್ಮ ಅಶಾಂತಿಗೆ ಕಾರಣವಾಗುತ್ತದೆ.
ಇನ್ನೂ ವಸ್ತುನಿಷ್ಠವಾಗಿ ಹೇಳುವುದಿದ್ದರೆ ಹದಿಮೂರರಿಂದ ಇಪ್ಪತ್ತರ ವರೆಗೆ ಇರಬಹುದಾದ ‘ಟೀನೇಜ್’ ಅನ್ನು ಜೀವನದುದ್ದಕ್ಕೂ ಕಾಪಿಡಲು ಮಾಡುವ ಪ್ರಯತ್ನವೇ ಹಾಸ್ಯಾಸ್ಪದವೆನಿಸುತ್ತದೆ. ಕಾಲನ ಕರೆಯನ್ನು ಲೆಕ್ಕಿಸದೆ ಯಾವ ಜೀವಕ್ಕೂ ಇರಲು ಸಾಧ್ಯವಿಲ್ಲ. ಹಾಗೆ ನೋಡುವುದಿದ್ದರೆ ಮಹಾತ್ಮಾ ಗಾಂಧಿ, ಮದರ್ ತೆರೆಸಾ , ನೆಲ್ಸನ್ ಮಂಡೇಲಾ, ಬರ್ಮಾದ ಅಂಗ್ ಸೂಕಿ ಇವರೆಲ್ಲರನ್ನು ಅವರ ಫ್ಯಾಷನ್ನಿ ಗೋಸ್ಕರ ನೆನಪಿಸಿಕೊಳ್ಳುವುದಿಲ್ಲ. ಕೈ ಕಾಲುಗಳು ಎರಡೂ ಇಲ್ಲದಿದ್ದರೂ ಜಗತ್ತಿನ ಜನರಿಗೆಲ್ಲಾ ಸ್ಪೂರ್ತಿಯಾಗಿರುವ ನಿಕ್, ಸಾವಿನ ಮೆಟ್ಟಿನಲ್ಲಿಯೂ ‘The Last Lecture’  ಬರೆದ ರ್ಯಾಂಡಿ ಸಾಶ್, ನಮ್ಮವರೇ ಆದ ನೇಮಿಚಂದ್ರ ಇರಲಿ, ಇವರನ್ನೆಲ್ಲ ಬೆಂಬಲಿಸುವ ಅಪಾರ ಜನಸ್ತೋಮ ಅವರ ಜೀವನ್ಮುಖಿ ಬರಹಗಳಿಗಾಗಿಯೇ ನೆಚ್ಚಿಕೊಂಡಿದೆ.

ಒಟ್ಟಿನ ಮೇಲೆ, Fashion ಎನ್ನುವುದು Passion ಆಗದಿದ್ದರೆ ಎಲ್ಲರಿಗೂ ಒಳ್ಳೆಯದು.


– ಜಯಶ್ರೀ ಬಿ. ಕದ್ರಿ

No comments:

Post a Comment