‘ನಿಮ್ಮೊಡನಿದ್ದೂ ನಿಮ್ಮಂತಾಗದೇ’-ಹೀಗೆ ಸಾಗುತ್ತದೆ ನಿಸಾರ್ ಅಹಮದ್ ಅವರ ಕವನ. ನಿಜ .ಹಿಂದೂ ಧರ್ಮವೇ ಪ್ರಧಾನವಾಗಿರುವ ಭಾರತ ದೇಶದಲ್ಲಿ ಮುಸ್ಲಿಂ ಸಮುದಾಯದವರು,ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರ ದನಿ ಅಷ್ಟಾಗಿ ಕೇಳಿ ಬರುವುದಿಲ್ಲ. ಕೋಮುಗಲಭೆಗಳು, ಮತೀಯ ದೌರ್ಜನ್ಯಗಳು ಸಂಭವಿಸಿದಾಗ ಮಾತ್ರ ನಾವು ಸಾಮರಸ್ಯದ ಬಗ್ಗೆ,ವಿಭಿನ್ನತೆಯಲ್ಲಿ ಏಕತೆಯ ಬಗ್ಗೆ ಯೋಚಿಸುತ್ತಿರುತ್ತೇವೆ. ಇನ್ನು ಸಾಹಿತ್ಯ ಲೋಕವನ್ನು ಗಮನಿಸಿದರೂ ಒಬ್ಬಿಬ್ಬರು ಲೇಖಕರು, ಲೇಖಕಿಯರನ್ನು ಹೊರತುಪಡಿಸಿದರೆ ಹೆಚ್ಚಿನವರು ಮುಖ್ಯ ಪ್ರವಾಹವನ್ನು ಪ್ರತಿನಿಧಿಸುತ್ತಿರುತ್ತಾರೆ. ಇನ್ನು ನಮ್ಮ ಟಿವಿ ಸೀರಿಯಲ್‌ಗಳನ್ನು, ಸಿನೆಮಾಗಳನ್ನು ನೋಡಿದರೂ ಕಾಸಿನಗಲ ಕುಂಕುಮ, ಜರತಾರಿ ಸೀರೆ ಉಟ್ಟುಕೊಂಡಿರುವ ಮೇಲ್ಮಧ್ಯಮ ವರ್ಗದವರ ಕಥೆಗಳನ್ನೇ ನೋಡುತ್ತಿರುತ್ತೇವೆ. ಬಹುಶಃ ಸಮುದಾಯದ ಅಂಚಿನಲ್ಲಿರುವ ಮುಖ್ಯ ಪ್ರವಾಹದಿಂದ ಹೊರತಾಗಿರುವ ಯಾತನೆಗಳೇ ವಿವಿಧ ವರ್ಗಗಳು ಪರಸ್ಪರ ಗುಮಾನಿ, ಶಂಕೆಗಳಿಂದ ನೋಡಲು ಕಾರಣವಾಗಿರಬೇಕು. ಇನ್ನು ದಲಿತರು, ಆದಿವಾಸಿಗಳು, ಬಡತನ ರೇಖೆಯಿಂದ ಕೆಳಗಿರುವವರು, ಈಶಾನ್ಯ ರಾಜ್ಯಗಳಿಂದ ವಲಸೆ ಬಂದವರು, ಬಾಂಗ್ಲಾ ದೇಶದಿಂದಲೋ, ಶ್ರೀಲಂಕಾದಿಂದಲೋ ಬಂದ ನಿರಾಶ್ರಿತರು. ಹೀಗೆ ಸಮಾಜದಲ್ಲಿ ಇದ್ದು ಇಲ್ಲದಂತಾಗಿರುವವರ ಬವಣೆಯ ಬಗ್ಗೆ ನಮಗಿರುವ ನಿರ್ಲಕ್ಷ್ಯ ಹೇಳತೀರದು. ಯಾಕೆಂದರೆ ನಮ್ಮ ದೇಶದ ದಿಕ್ಕನ್ನೇ ಬದಲಿಸುವ ಶಕ್ತಿ ಇರುವ ಮಧ್ಯಮ ವರ್ಗಕ್ಕೆ ತನ್ನ ಉನ್ನತಿಯೇ ಮುಖ್ಯ.
ನಮ್ಮ ದೇಶದ ಮಧ್ಯಮ ವರ್ಗದಷ್ಟು ಗೊಂದಲದ, ಕೆಲವೊಮ್ಮೆ ಸಮಯ ಸಾಧಕ ವರ್ಗ ಇನ್ನೊಂದಿಲ್ಲ. ನಮ್ಮ ಅನುಕೂಲತೆಗಳು, ಸೌಲಭ್ಯಕ್ಕೆ ಕೊರತೆ ಬಂದಾಗ ಸರಕಾರವನ್ನು ಪ್ರತಿಭಟಿಸುವ ನಾವು ಉಳಿದಂತೆ ಸಾಧ್ಯವಾದಷ್ಟು ಪಾಲಿಸಿಗಳಿಂದ, ಕಾನೂನುಗಳಿಂದ ಲಾಭ ಪಡೆಯಲು ಪ್ರಯತ್ನಿಸುತ್ತಿರುತ್ತೇವೆ. ದಲಿತನ ನೋವು ಮೇಲ್ವರ್ಗದವರಿಗೆ ಗೊತ್ತಾಗುವುದು ರಿಸರ್ವೆಶನ್ ಕೋಟಾದಿಂದಾಗಿ ತಮಗೆ ಸಿಗಬೇಕಾದ ಕೆಲಸ ಅಥವಾ ಸೀಟ್ ಕೈ ತಪ್ಪಿ ಹೋದಾಗ. ‘ ರಾಷ್ಟ್ರೀಯತೆ’ ಎನ್ನುವ ಕಾನ್ಸೆಪ್ಟ್ ಕೂಡ ನಮಗಿಲ್ಲ. ಒಡವೆ, ಬಂಗಾರ, ಬ್ಯಾಂಕ್ ಬ್ಯಾಲನ್ಸ್, ಮಗಳ ಮದುವೆ, ಮಗನ ವಿದ್ಯಾಭ್ಯಾಸ ಇವುಗಳೇ ನಮ್ಮ ಮಹತ್ತರ ಗುರಿಗಳು. ‘ರಾಜಕೀಯ ಪ್ರಜ್ಞೆ’ ಎನ್ನುವುದೊಂದಿದೆ ಎಂದು ನಮಗೆ ಅರಿವಾಗುವುದೇ ತುಂಬ ತಡವಾಗಿ. ಇನ್ನು ಕಲೆ, ಸಾಹಿತ್ಯ, ಸಂಸ್ಕೃತಿ ಎಂದೆಲ್ಲ ಅಭಿರುಚಿ ಇರುವುದು ಹೌದಾದರೂ ನಮ್ಮ ಪ್ರಮುಖ ಉದ್ದೇಶ ಆರ್ಥಿಕ ಸದೃಢತೆ. ಇದಕ್ಕಾಗಿ ನಮ್ಮದೇ ಕನಸುಗಳನ್ನು ಕೊಂದುಕೊಳ್ಳಲು, ನಮ್ಮ ಎಳೆಯ ಮಕ್ಕಳ ಅಭಿರುಚಿಯನ್ನು ಅವರಿಗೆ ಅರಿವೇ ಬಾರದಂತೆ ಬದಲಾಯಿಸಲಿಕ್ಕೂ ನಾವು ನಿಸ್ಸೀಮರು.
ಸ್ವಾತಂತ್ರ್ಯ ಪೂರ್ವದಲ್ಲಿ, ಆ ಮೇಲೆ ಕೂಡಾ ನಮ್ಮ ಮಧ್ಯಮ ವರ್ಗ ಹೆಚ್ಚು ಕಡಿಮೆ ಹೀಗೆಯೇ ಇತ್ತು ಎನ್ನಬಹುದು. ಇಂಗ್ಲೀಷ್ ವಿದ್ಯಾಭ್ಯಾಸದ ಅನುಕೂಲತೆಗಳನ್ನು, ಅದರಿಂದ ಲಭಿಸಬಹುದಾದ ಔದ್ಯೋಗಿಕ ಸಾಧ್ಯತೆಗಳಿಗೆ ತೆರದುಕೊಳ್ಳುತ್ತಾ, ರಾಜಕೀಯ ಯೋಜನೆಗಳಿಂದ ಪ್ರಯೋಜನ ಪಡೆದುಕೊಳ್ಳುತ್ತಾ, ತಮಗೆ ಪರವಾಗಿರದಿದ್ದರೆ ಸರಕಾರಗಳನ್ನು ಉರುಳಿಸುತ್ತಾ… ಹೀಗೆ ಮಧ್ಯಮ ವರ್ಗದ ಶಕ್ತಿ ಏನೆನ್ನುವದಕ್ಕೆ ತೀರಾ ಇತ್ತೀಚೆಗಿನ ಆಮ್ ಆದ್ಮಿ ಪಾರ್ಟಿಯ ವಿಜಯ ಸಾಕ್ಷಿ. ಇಲ್ಲಿ ನಾವು ಯೋಚಿಸಬೇಕಾಗಿರುವುದು ಜಡತೆಯನ್ನು ಕೊಡವಿ ಮೇಲೇಳಬೇಕಾದ ಅನಿವಾರ್ಯತೆಯ ಬಗ್ಗೆ, ಸಮಾಜದ ಬಗ್ಗೆ ನಮಗಿರುವ ಕಾಳಜಿಯನ್ನು, ನಮ್ಮೊಳಗಿರುವ ಅಂತ:ಕರಣದ ಸೆಲೆಯನ್ನು, ಮಾನವೀಯ ಪ್ರಜ್ಞೆಯನ್ನು ಮರಳಿ ಪುಟಿದೇಳುವಂತೆ ಮಾಡಬೇಕಾದ ಪ್ರಜ್ಞೆ, ನಾಗರಿಕ ಕರ್ತವ್ಯದ ಬಗ್ಗೆ. ಹೆಣ್ಣುಮಕ್ಕಳ ಮೇಲಣ ದೌರ್ಜನ್ಯ, ದೀನರು, ದರಿದ್ರರ ಮೇಲಣ ತುಳಿತ, ಹೆಚ್ಚೇಕೆ ಮಧ್ಯಮ ವರ್ಗದವರೇ ಕ್ಯಾಪಿಟಲಿಸಂನ ಅಟ್ಟ ಹಾಸದಿಂದ ದಿನಗೂಲಿಯವರಂತೆ, ದಿನಾ ಅಭದ್ರತೆಯಿಂದ ಬದುಕುತ್ತಿರುವ ವಸ್ತುಸ್ಥಿತಿ ರಾಜಕೀಯವಾಗಿ ನಮ್ಮ ಅಜ್ಞಾನವನ್ನೂ, ಅರಿವಿನ ಕೊರತೆಯನ್ನೂ, ಹೊಸತನ್ನು ಸಾಧಿಸಲಾಗದ, ವ್ಯವಸ್ಥೆಯ ವಿರುದ್ಧ ಬಂಡೇಳಲಾಗದ ನಿಸ್ಸಹಾಯಕ, ನಿರ್ಲಿಪ್ತ, ಮನೋಭಾವವನ್ನು ಸೂಚಿಸುತ್ತದೆ ಎಂದೇ ಹೇಳಬೇಕು. ಗ್ಲೋಬಲೈಸೇಶನ್‌ನಿಂದಾಗಿ ಲಾಭ ಪಡೆದವರು ಕೂಡ ಮೇಲ್ಮಧ್ಯಮ ವರ್ಗದ, ಸೈನ್ಸ್ ಅಥವಾ ಕಾಮರ್ಸ್ ಕಲಿತು ಕಂಪ್ಯೂಟರ್ ಜ್ಞಾನವಿದ್ದವರು, ಭಾರತದ ಕಟ್ಟಕಡೆಯ ದರಿದ್ರರು, ಆದಿವಾಸಿಗಳು, ರಾಜಸ್ತಾನದಲ್ಲಿ ಕೊಡ ನೀರಿಗೆ ಮೈಲಿಗಟ್ಟಲೆ ನಡೆಯುವವರು.. ಹೀಗೆ ನಮ್ಮ ದೇಶದಲ್ಲಿ ನಿಜವಾದ ಅಭಿವೃದ್ಧಿ ಮರೀಚಿಕೆಯೇನೋ.
ಐಎಎಸ್, ಕೆಎಎಸ್‌ನಂತಹ ಹುದ್ದೆಗಳು ನಮಗಲ್ಲ ಎಂದು ನಾವು ಯಾವತ್ತೋ ತೀರ್ಮಾನಿಸಿ ಕೊಂಡಿದ್ದೇವೆ. ಅದಕ್ಕೆ ಬೇಕಾದ ತರಬೇತಿ, ರಿಸರ್ವೇಶನ್‌ಗಳು ಸಿಗುವುದೂ ಕಷ್ಟವೇ. ಇನ್ನು ಚುನಾವಣೆ ಗೆಲ್ಲಬೇಕಾದರೆ ಹಣವನ್ನು ನೀರಿನಂತೆ ಹರಿಸಬೇಕೆಂದು ಎಲ್‌ಕೆಜಿ ಮಗುವಿಗೆ ಕೂಡಾ ಗೊತ್ತಾಗಿರುವ ವಿಷಯ. ಲಂಚ ಭ್ರಷ್ಟಾಚಾರದ ಕೇಸ್‌ಗಳನ್ನು ಕೇಳಿದಾಗ ನಮಗೆ ಯಾವ ಶಾಕ್ ಆಗಲಿ ದಿಗ್ಬ್ರಮೆಯಾಗಲಿ ಅನುಭವಕ್ಕೆ ಬರುವುದಿಲ್ಲ. ಕೋಮುಕಲಹಗಳು, ಕೊಲೆ, ಸುಲಿಗೆ, ಆತ್ಯಾಚಾರಗಳು ದಿನನಿತ್ಯವೆನ್ನುವಂತೆ ಪತ್ರಿಕೆಗಳಲ್ಲಿ ವರದಿಯಾಗುತ್ತಿರುತ್ತವೆ. ಸೆನ್ಸೇಶನಲ್ ಸ್ಟೋರಿಗಳು, ರಿಯಾಲಿಟಿ ಶೋಗಳು ನಮಗೆ ಎಷ್ಟು ಅಭ್ಯಾಸ ಆಗಿಬಿಟ್ಟಿವೆ ಎಂದರೆ ಅದೇ ನ್ಯೂಸ್ ಎನಿಸುವಷ್ಟು.
ಇಷ್ಟೆಲ್ಲ ಇದ್ದರೂ ಮಧ್ಯಮ ವರ್ಗದ ಚೈತನ್ಯ, ಮರ್ಯಾದೆಗೆ ಅಂಜುವ ಭೀರು ಸ್ವಭಾವ, ‘ನೈತಿಕತೆ’ ಎನ್ನುವ ಆಶಯ, ಆದರ್ಶಗಳನ್ನು ಪಾಲಿಸಲು ತಾತ್ವಿಕ ಸ್ತರದಲ್ಲಿಯಾದರೂ ಸ್ಪಂದಿಸುವ ಮನೋಭಾವದಿಂದಾಗಿಯೇ ದೇಶ ಉಳಿದಿದೆ ಎನ್ನಬಹುದು. ದೇಶವನ್ನಾಳುತ್ತಿರುವ ಕ್ಯಾಪಿಟಲಿಸ್ಟ್‌ಗಳು, ಹೆಂಡ ಸಾರಾಯಿ ಬಡತನದ ವೇದನೆಗಳಲ್ಲಿ ಬದುಕುತ್ತಿರುವ ಸ್ಲಮ್ಮುವಾಸಿಗಳು- ಇವೆರಡರ ನಡುವಣ ಬದುಕು ಮಧ್ಯಮ ವರ್ಗದವರದ್ದು. ಟಿ.ವಿ. ಸಿರಿಯಲ್ ನೋಡುತ್ತ, ಮಕ್ಕಳನ್ನು ಓದಿಸುತ್ತ, ಡ್ರೈವಿಂಗ್ ಕ್ಲಾಸಿಗೆ ಹೋಗುತ್ತ್ತ, ಹೊಸರುಚಿ, ಗ್ಲಾಸ್ ಪೈಂಟಿಂಗ್ ಕಲಿಯುತ್ತ್ತ, ಹೊಸತಾಗಿ ಬಂದ ನೈಲ್ ಆರ್ಟ್, ಹೊಸ ಮಾಲ್‌ನಲ್ಲಿನ ಶಾಪಿಂಗ್-ಹೀಗೆ ನಾವು ಹ್ಯಾಪಿ, ‘ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ’- ಏನಂತೀರಾ?
No comments:
Post a Comment