‘ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು’ ಹೀಗೆ ಸಾಗುತ್ತದೆ ಕವಿತೆಯೊಂದರ ಸೊಲ್ಲು. ಹೌದು. ಕಲೆ, ಸಾಹಿತ್ಯ, ಸಂಸ್ಕೃತಿಗೆ ನಮ್ಮ ಮನಸ್ಸನ್ನು ಅರಳಿಸುವ, ಮೇರು ಸದೃಶ ಕನಸುಗಳನ್ನು ಕ್ಷಣ ಕಾಲವಾದರೂ ಕಲ್ಪಿಸಿಕೊಳ್ಳುವ ಪ್ರೇರೇಪಣೆ ಕೊಡುವ ಶಕ್ತಿ ಇದೆ. ಹಾಗಿದ್ದರೂ ಒಂದು ಅಧ್ಯಯನ ಶಿಸ್ತಾಗಿ ಕಲೆ, ಸಾಹಿತ್ಯವನ್ನು ಕಡೆಗಣಿಸುವವರೇ ಜಾಸ್ತಿ. ಕಾಲೇಜುಗಳ ಕಲಾ ವಿಭಾಗದಲ್ಲಿ ಎಪ್ಪತ್ತು ಶೇಕಡಾದಷ್ಟು ಹುಡುಗಿಯರೇ ಇರುತ್ತಾರೆ ಹಾಗೂ ದಶಕದ ಹಿಂದೆ ಅದು ಕೇವಲ ಮದುವೆಯಾಗಲು ಒಂದು ಕ್ವಾಲಿಫಿಕೇಶನ್ ಆಗಿತ್ತು. ಈಗ ಹಾಗಲ್ಲ. ವಿಷುವಲ್ ಆರ್ಟ್ಸ್ ನಂತಹ ಸಬ್ಜೆಕ್ಟ್ಗಳಲ್ಲಿ ಕಲೆಯಿಂದಲೂ ಬದುಕು ಕಟ್ಟಿಕೊಳ್ಳಬಹುದು (ಕಂಪ್ಯೂಟರ್ ಜ್ಞಾನ, ಮಾಕರ್ೆಟಿಂಗ್ ಅರಿವು ಇದ್ದಲ್ಲಿ ಮಾತ್ರ). ಹಾಗಿದ್ದರೂ ಮಧ್ಯಮ ವರ್ಗ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಯಾಕೆಂದರೆ ಕಲೆ, ಸಾಹಿತ್ಯವನ್ನೇ ನೆಚ್ಚಿ ಬದುಕು ಸಾಗಿಸಲು ಮೊಗೆದಷ್ಟು ಚಿಮ್ಮುವ ಒರಿಜಿನಲ್ ಪ್ರತಿಭೆ, ಹೊಸ ಐಡಿಯಾಗಳು, ಚಾಕಚಕ್ಯತೆ, ವ್ಯವಹಾರ ಚತುರತೆ ಬೇಕು. ಹೀಗಾಗಿಯೇ ಡ್ಯಾನ್ಸ್ ಕಲಿಯುವ ಮಗಳನ್ನು ಐಐಟಿ ಕೋಚಿಂಗ್ ನೆಪದಲ್ಲಿ ಫಿಸಿಕ್ಸ್ ಕಲಿಯಲು ಪ್ರೇರೇಪಿಸುತ್ತೇವೆ. ಕಾಲೇಜಿನಲ್ಲಿ ಹಾಡು ಕೋಗಿಲೆಯಾಗಿದ್ದವರು ಸಂಘ ಸಂಸ್ಥೆಗಳ ವಾರ್ಷಿಕೋತ್ಸವಕ್ಕೆ ಸೀಮಿತರಾಗುತ್ತಾರೆ. ಕಲೆಯನ್ನೇ ಜೀವನವಾಗಿಸಿಕೊಂಡವರು, ಬರಹವನ್ನೇ ವ್ಯತ್ತಿಯನ್ನಾಗಿಸಿಕೊಂಡವರನ್ನು ಕಂಡಾಗ ನಮ್ಮ ಜೀವ ವಿಲವಿಲ ಮಿಡುಕುವುದು ಸುಳ್ಳಲ್ಲ. ಹಾಗೆಂದು ಈ ಯಾಂತ್ರಿಕ ಜಗತ್ತಿನಲ್ಲಿ ಕಲೆಯ ಚೈತನ್ಯವನ್ನು, ಸಾಹಿತ್ಯದ ಒಲವನ್ನು ಜೀವಂತವಾಗಿಸಿಕೊಳ್ಳುವುದು ಕಷ್ಟ ಸಾಧ್ಯ. ಕಲೆ, ಕಲಾತ್ಮಕತೆ ಟಿಸಿಲೊಡೆಯುವ ಹಲವು ಬಗೆಯನ್ನು ಅದರ ಆಳ ವಿಸ್ತಾರವನ್ನು, ಬೀಸುಗಾಳಿಯ ತುಯ್ತದಲ್ಲೂ, ಬಡತನದ ಬೇಗೆಯಲ್ಲೂ ಕಲೆ ಚಿಗುರೊಡೆವ ವಿದ್ಯಮಾನಗಳನ್ನು ದಾಖಲಿಸುವ ಪುಟ್ಟ ಪ್ರಯತ್ನ ಇದು.
ರಂಗದ ಮೇಲೆ ನವರಸ ಅಭಿವ್ಯಕ್ತಿಸುವ, ಪ್ರೇಕ್ಷಕರನ್ನು ಭಾವಲಹರಿಗಳಲ್ಲಿ ತೇಲಿಸಿ ಥೆರಪಿಯಂತೆ ಗುಣಪಡಿಸುವ ನಾಟಕ, ಯಕ್ಷಗಾನ, ಕಥಕಳಿ ಕಲಾವಿದರು ಕೊನೆಗಾಲದಲ್ಲಿ ಆರ್ಥಿಕ ಸುಭದ್ರತೆ ಇಲ್ಲದೆ ನರಳುವುದನ್ನು ನೋಡುವಾಗ, ಚೆಂಡೆ, ಡೋಲು, ಕಹಳೆ, ತಮಟೆ, ಜನಪದ ನೃತ್ಯಗಳು ಇವೆಲ್ಲ ಜಾತಿ ವ್ಯವಸ್ಥೆಯನ್ನು ಪ್ರತಿನಿಧಿಸುತ್ತವೆ ಎನ್ನುವ ಕೂಗು ಕೇಳಿ ಬರುವಾಗ ಕಲೆ, ಕಲೆಯ ಅಸ್ಮಿತೆ, ಕಲಾವಂತಿಕೆಗಳ ನಿರ್ವಚನ ಏನೆಂದು ಯೋಚನೆಯಾಗುತ್ತದೆ. ಯಾವುದೇ ಕಲೆ ಸಮಾಜದ ಭಾಗವೇ ಆಗಿರುವುದರಿಂದ ಕಳೆದು ಹೋದ ಸಾಮಾಜಿಕ ಚರಿತ್ರೆಯೊಂದಿಗೆ ಕಲೆ ತಳುಕು ಹಾಕಿಕೊಂಡಿರುವುದನ್ನು ಗಮನಿಸದೆ ವಿಧಿ ಇಲ್ಲ. ಹಾಗೆ ನೋಡುವುದಿದ್ದರೆ ಇಡೀ ಭಾರತದ ಚರಿತ್ರೆಯಲ್ಲಿ ರಾಜಾಶ್ರಯವಿಲ್ಲದೆ, ಕಲಾ ಪೋಷಕರ ನೆರವಿಲ್ಲದೆ ಯಾವುದೇ ಕಲೆ ಉಳಿದು ಬೆಳೆದ ದೃಷ್ಟಾಂತ ಇಲ್ಲ. ಅದೇ ರೀತಿಯಲ್ಲಿ ಆರ್ಟ್ಸ್ ಎನ್ನುವುದು ಶುದ್ಧವಾಗಿಯೇ ಇರಬೇಕು ಎಂದು ಬದಲಾವಣೆಗೆ, ಆಧುನಿಕ ಅಗತ್ಯಗಳಿಗೆ ಸ್ಪಂದಿಸದೇ ಹೋದಲ್ಲಿ ಯಾವುದೇ ಕಲೆ ವಿನಾಶವಾಗುವುದಲ್ಲಿ ಯಾವ ಸಂಶಯವೂ ಇಲ್ಲ. ಹೀಗಾಗಿಯೇ ಫ್ಯೂಷನ್ ಆರ್ಟ್ಸ್ ನ್ನು ಎಲ್ಲೆಡೆ ನೋಡುತ್ತೇವೆ.
ಕಲೆಯೆಂದರೆ ದೈನಂದಿನ ಉಪಯೋಗಕ್ಕೆ ಹೊರತಾದದ್ದು ಎನ್ನುವ ಭಾವನೆ ನಮ್ಮಲ್ಲಿ ಇದ್ದೇ ಇದೆ. ಉದಾ: ಚಿತ್ರಕಲೆ, ಪೈಂಟಿಂಗ್, ಶಿಲ್ಪಗಳು. ಹೀಗಾಗಿಯೇ ತಾಳ್ಮೆಯಿಂದ ಮಿಡಿ ಉಪ್ಪಿನ ಕಾಯಿ, ಹಪ್ಪಳ ತಯಾರಿಸಿ ಮನೆ ಮಂದಿಗೆಲ್ಲ ಹಂಚುವ ಗೃಹಿಣಿಯರು, ಅಂದವಾಗಿ ಅಲಂಕರಿಸಿಕೊಂಡು ಓಡಾಡುವ ಎಳೆಯ ಲಲನೆಯರು, ಇವರ ಕಲಾತ್ಮಕತೆಯನ್ನು, ‘ಗ್ರೂಮಿಂಗ್’ನ್ನು ನಾವು ಗಮನಿಸುವುದಿಲ್ಲ. ಇನ್ನು ಕಲೆ, ಸಾಹಿತ್ಯ ಬೆಲೆ ಕಟ್ಟಲಾಗದ್ದು ಹೌದಾದರೂ ಕೊಂಡು ಓದುವ ವರ್ಗ ಇಲ್ಲವಾದಲ್ಲಿ ನಮ್ಮ ಸಾಹಿತಿಗಳು, ಕಲಾವಿದರು ತಮ್ಮ ಅಭಿಮಾನವನ್ನು ಬದಿಗಿಟ್ಟು ಕೃತಿಗಳನ್ನು ಮಾರಾಟ ಮಾಡಲು ಪರದಾಡುವ ಪರಿಸ್ಥಿತಿ. ಒಟ್ಟಿನ ಮೇಲೆ ಮಾತಿನ ಕಲೆಯಿಂದ ಹಿಡಿದು ಮೌನ ಮರ್ಮರದವರೆಗೆ ಕಲೆ, ಸಾಹಿತ್ಯವನ್ನು ನಮ್ಮ ಉಸಿರನ್ನಾಗಿಸಲು ಸಾಧ್ಯವಿಲ್ಲದಿದ್ದರೂ ಸಾಧ್ಯವಾದಷ್ಟು ಪೋಷಿಸುವ ಸಹೃದತೆಯಾದರೂ ನಮಗಿರಬೇಕಾದುದು ಸಮಾಜದ ಸ್ವಾಸ್ಥ್ಯ ದೃಷ್ಟಿಯಿಂದ ಅತ್ಯಗತ್ಯ.
ಕಲೆಯೆಂದರೆ ದೈನಂದಿನ ಉಪಯೋಗಕ್ಕೆ ಹೊರತಾದದ್ದು ಎನ್ನುವ ಭಾವನೆ ನಮ್ಮಲ್ಲಿ ಇದ್ದೇ ಇದೆ. ಉದಾ: ಚಿತ್ರಕಲೆ, ಪೈಂಟಿಂಗ್, ಶಿಲ್ಪಗಳು. ಹೀಗಾಗಿಯೇ ತಾಳ್ಮೆಯಿಂದ ಮಿಡಿ ಉಪ್ಪಿನ ಕಾಯಿ, ಹಪ್ಪಳ ತಯಾರಿಸಿ ಮನೆ ಮಂದಿಗೆಲ್ಲ ಹಂಚುವ ಗೃಹಿಣಿಯರು, ಅಂದವಾಗಿ ಅಲಂಕರಿಸಿಕೊಂಡು ಓಡಾಡುವ ಎಳೆಯ ಲಲನೆಯರು, ಇವರ ಕಲಾತ್ಮಕತೆಯನ್ನು, ‘ಗ್ರೂಮಿಂಗ್’ನ್ನು ನಾವು ಗಮನಿಸುವುದಿಲ್ಲ. ಇನ್ನು ಕಲೆ, ಸಾಹಿತ್ಯ ಬೆಲೆ ಕಟ್ಟಲಾಗದ್ದು ಹೌದಾದರೂ ಕೊಂಡು ಓದುವ ವರ್ಗ ಇಲ್ಲವಾದಲ್ಲಿ ನಮ್ಮ ಸಾಹಿತಿಗಳು, ಕಲಾವಿದರು ತಮ್ಮ ಅಭಿಮಾನವನ್ನು ಬದಿಗಿಟ್ಟು ಕೃತಿಗಳನ್ನು ಮಾರಾಟ ಮಾಡಲು ಪರದಾಡುವ ಪರಿಸ್ಥಿತಿ. ಒಟ್ಟಿನ ಮೇಲೆ ಮಾತಿನ ಕಲೆಯಿಂದ ಹಿಡಿದು ಮೌನ ಮರ್ಮರದವರೆಗೆ ಕಲೆ, ಸಾಹಿತ್ಯವನ್ನು ನಮ್ಮ ಉಸಿರನ್ನಾಗಿಸಲು ಸಾಧ್ಯವಿಲ್ಲದಿದ್ದರೂ ಸಾಧ್ಯವಾದಷ್ಟು ಪೋಷಿಸುವ ಸಹೃದತೆಯಾದರೂ ನಮಗಿರಬೇಕಾದುದು ಸಮಾಜದ ಸ್ವಾಸ್ಥ್ಯ ದೃಷ್ಟಿಯಿಂದ ಅತ್ಯಗತ್ಯ.
ಜನಸಾಮಾನ್ಯರಾದ ನಮಗೆ ಕಲೆ, ಸಾಹಿತ್ಯದ ವಿಮರ್ಶಾತ್ಮಕ ಪರಿಭಾಷೆ, ಮಾನದಂಡಗಳು ಗೊತ್ತಿರುವುದು ಅಷ್ಟಕಷ್ಟೆ. ಹಾಗಿದ್ದರೂ ಮಳೆ ನಿಂತರೂ ಮಳೆ ಹನಿ ನಿಲ್ಲದಂತೆ ಒಂದು ಉತ್ತಮ ಹಾಡಿನ ಗುಂಗು, ಒಂದು ಅದ್ಭುತ ಡೈಲಾಗ್ನ ರೋಮಾಂಚನ, ಒಂದು ಸ್ಫೂರ್ತಿಯುತ ಭಾಷಣದ ಸಾಲು, ನಮ್ಮ ಮನಸ್ಸಿನಲ್ಲಿ ಅನುರಣಿಸುತ್ತಲೇ ಇರುತ್ತದೆ. ಇನ್ನು ಕಲೆಯೆನ್ನುವುದು ಲಕ್ಸುರಿಯ, ವೈಭೋಗದ ದ್ಯೋತಕವೆನ್ನುವ ವಾದ ಸರಿಯೇ ಆದರೂ (ಉದಾ: ಬೇಲೂರು ಹಳೆಬೀಡಿನ ಶಿಲ್ಪ ವೈಭವ, ದೇವಾಲಯಗಳ ಕೆತ್ತನೆಗಳು, ಅರಮನೆಗಳ ವೈಭವ ಇತ್ಯಾದಿ). ಬದುಕನ್ನು ಸಹನೀಯವಾಗಿಸಲು, ಭೌಮದೆತ್ತರದಾಗಸದಲ್ಲಿ ಮನೋ ವಿಹಾರಿಯಾಗಲು ಕಲೆ, ಸಾಹಿತ್ಯದ ಸಿಂಚನ ಬೇಕು. ಇಲ್ಲವಾದಲ್ಲಿ ಈ ಬದುಕು ನಮ್ಮನ್ನು ಕಂಗೆಡಿಸುವುದರಲ್ಲಿ ಸಂಶಯವಿಲ್ಲ. ಸ್ಥೂಲವಾಗಿ ನೋಡುವುದಿದ್ದರೆ ಜನಪದ ಕಲಾವಿದರು, ಧಾಮರ್ಿಕ ಆಚರಣೆಗಳನ್ನು ಹೊರತು ಪಡಿಸಿದರೆ ಕಲಾವಿದರಿರುವುದು ಭರತ ನಾಟ್ಯ, ನೃತ್ಯ, ಯಕ್ಷಗಾನ, ಚಿತ್ರಕಲೆ, ಸಂಗೀತಗಳಲ್ಲಿ. ಇದಲ್ಲದೆ ಮಾಸ್ ಮೀಡಿಯಾ (ಟಿವಿ ಸೀರಿಯಲ್, ಫಿಲ್ಮ್ಗಳು, ಹೀಗೆ). ಪಟಪಟ ಮಾತನಾಡುವುದರಿಂದ ಹಿಡಿದು ಛಾಯಾಗ್ರಹಣ, ಕಮರ್ಶಿಯಲ್ ಆರ್ಟ್ಸ್ ಹೀಗೆ ಹವ್ಯಾಸವನ್ನೇ ವೃತ್ತಿಯನ್ನಾಗಿಸುವುದೊಂದು ಭಾಗ್ಯ ಹಾಗೂ ಛಾಲೆಂಜ್.
‘ಕಲೆ’ ಎನ್ನುವುದು ನಮ್ಮ ಬೊಗಸೆಗೆ ಎಷ್ಟು ದಕ್ಕುತ್ತದೆಯೋ ಅಷ್ಟು. ಕಲೆಯನ್ನು ಆಸ್ವಾದಿಸಲು ಆ ಕಲಾ ಪ್ರಕಾರದ ಪ್ರಾಥಮಿಕ ಜ್ಞಾನವಾದರೂ ಇರಬೇಕಾದುದು ಅವಶ್ಯ. ಇಲ್ಲವಾದಲ್ಲಿ ಯಕ್ಷಗಾನ ಗಲಾಟೆಯಂತೆಯೂ, ಶಾಸ್ತ್ರೀಯ ಸಂಗೀತ ತಮಾಷೆಯಂತೆಯೂ ಕಾಣಿಸುವುದರಲ್ಲಿ ಆಶ್ಚರ್ಯವಿಲ್ಲ. ಇನ್ನು ನೃತ್ಯವಿರಲಿ, ಸಂಗೀತವಿರಲಿ ಅದರಲ್ಲಿ ಪ್ರಾವೀಣ್ಯತೆ ಪಡೆಯಲು ಖ್ಯಾತಿ ಗಳಿಸಲು ಹತ್ತಾರು ವರ್ಷಗಳೇ ಬೇಕು ಹಾಗೂ ಅದನ್ನು ಕೆರೀರ್ ಆಗಿಸಲು ಸೂಕ್ತ ಕಾಂಟಾಕ್ಟ್ಗಳು, ಆರ್ಥಿಕ ಸುಭದ್ರತೆ ಬೇಕು. ಕಲೆ ನಿರೀಕ್ಷಿಸುವ ಕಠಿಣ ತರಬೇತಿ, ಪರಿಶ್ರಮವನ್ನು ಬೇಡುವ ಕಾರಣ, ಶಾಲಾ ಕಾಲೇಜುಗಳ ಪಠ್ಯಕ್ಕೆ ಹೊರತಾಗಿ ಸಮಯವನ್ನು ಅಪೇಕ್ಷಿಸುವ ಕಾರಣ, ತಂದೆ ತಾಯಿಯರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಲೇಬೇಕಾಗಿದೆ. ಹೆಣ್ಣುಮಕ್ಕಳ ಸಮಸ್ಯೆ ಇನ್ನೂ ಸಂಕೀರ್ಣವಾದುದು. ಓದು, ಹವ್ಯಾಸ, ಗುರಿ ಎಲ್ಲವನ್ನೂ ಸಮತೋಲನದಿಂದ ನಿಭಾಯಿಸಿಕೊಂಡು ಹೋಗುವ ಜಾಣ್ಮೆ ಇಲ್ಲವೆಂದಾದಲ್ಲಿ ಆ ಮುಗ್ಧ ಹುಡುಗಿಯರು ಅನೇಕ ಸಣ್ಣ ಮಾತುಗಳಿಂದಲೂ, ಮುಜುಗರದ, ಅವಮಾನದ ಅನುಭವಗಳಿಂದಲೂ ಕಣ್ಣೀರಾಗಬೇಕಾದ ಪರಿಸ್ಥಿತಿ. ನಮ್ಮ ಸಮಾಜ ಹೆಣ್ನನ್ನು ನೋಡುವ ದೃಷ್ಟಿ ಎಷ್ಟು ಕೆಟ್ಟದಾಗಿದೆ ಎನ್ನುವುದಕ್ಕೆ ದಿನಪತ್ರಿಕೆಗಳಲ್ಲಿ ಬರುವ, ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಗಳು ಸಾಕ್ಷಿ. ಮಹಿಳಾ ಕಲಾವಿದೆಯರ ಪಾಡನ್ನು ಸಚಿವೆ, ಕಲಾವಿದೆ ಉಮಾಶ್ರೀ ತಮ್ಮ ‘ಬೆಂಕಿ ಬೆಡಗು’ ಕೃತಿಯಲ್ಲಿ ಸಮರ್ಥವಾಗಿ ವ್ಯಕ್ತಪಡಿಸುತ್ತಾರೆ.
ಕಲೆಗೂ ಸಾಹಿತ್ಯಕ್ಕೂ ಅವಿನಾಭಾವ ನಂಟಿದೆ. ಕಲೆ ಸಾಹಿತ್ಯವನ್ನು ಬೆಳೆಸಿದಂತೆಯೇ ಸಾಹಿತ್ಯವಿಲ್ಲದೆ, ಶಬ್ಧಗಳ ಸೂಕ್ಷ್ಮ ಕುಸುರಿಯ ಗಾರುಡಿಗತೆ ಇಲ್ಲದೆ ಕಲೆಗೆ ಮನಮುಟ್ಟುವ ಶಕ್ತಿ ದಕ್ಕುವುದಿಲ್ಲ. ಹಾಗೆ ನೋಡುವುದಿದ್ದರೆ ಬರೆಯುವುದೊಂದು ಕಲೆ, ಬೈದು ಭಂಗಿಸದೆ ಮಾತನಾಡುವುದೊಂದು ಕಲೆ, ಅಂತ:ಕರಣದ ಸೆಲೆ. ಸಾಹಿತ್ಯವೂ ಕಲೆಯಂತೆಯೇ ಸಮಾಜದ ಕೈಗನ್ನಡಿ. ಸಾಮಾಜಿಕ ಜೀವನದ ಸೌಂದರ್ಯ ಹಾಗೂ ವಿಕಾರಗಳನ್ನು ಸಾಹಿತ್ಯಕ್ಕಿಂತ, ಕಲೆಗಿಂತ ಚೆನ್ನಾಗಿ ಯಾವ ಜ್ಞಾನ ಶಾಖೆಗೆ ವ್ಯಕ್ತಪಡಿಸಲು ಸಾಧ್ಯ? ಸಿನೆಮಾದಂತಹ ದೃಶ್ಯ ಮಾಧ್ಯಮಕ್ಕಂತೂ ಒಂದಿಡೀ ತಲೆಮಾರನ್ನು ಪ್ರಭಾವಿಸುವ ಶಕ್ತಿ ಇದೆ. ‘ತ್ರೀ ಈಡಿಯಟ್ಸ್’ ನೋಡಿದ ಹಲವು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಬಿಟ್ಟು ಪ್ಯೂರ್ ಸಯನ್ಸ್ ತೆಗೆದುಕೊಳ್ಳುವಲ್ಲಿ ಅದರ ಎಫೆಕ್ಟಿವ್ನೆಸ್ ಇತ್ತು.
‘ಕಲೆ’ ಎನ್ನುವುದನ್ನು ಪ್ರಜ್ಞಾಪೂರ್ವಕವಾಗಿ ಉಳಿಸದಿದ್ದಲ್ಲಿ ಅದು ಉಳಿಯುವುದಿಲ್ಲ. ಉದಾಹರಣೆಗೆ ನಮ್ಮ ಅಜ್ಜಿಯಂದಿರು ಹೇಳುತ್ತಿದ್ದ ಸೋಬಾನೆ ಪದಗಳು, ಲಾವಣಿಗಳು, ಭಜನೆ ಪದ್ಯಗಳು ಹೀಗೆ. ಜಗತ್ತು ಒಂದು ಪುಟ್ಟ ಗ್ಲೋಬಲ್ ವಿಲೇಜ್ ಆಗುತ್ತಿರುವ ಈ ಸಂದರ್ಭದಲ್ಲಿ ವೈವಿಧ್ಯಮಯ ಸಂಸ್ಸೃತಿಗಳನ್ನು, ತನ್ಮೂಲಕ ಭಾಷೆ, ಕಲೆಗಳನ್ನು ಉಳಿಸಿಕೊಳ್ಳುವುದು ನವ ವಸಾಹತುಶಾಹಿ ಹುನ್ನಾರಗಳನ್ನು ಎದುರಿಸುವ ಪ್ರತಿಭಟನೆ ಕೂಡ. ಭಾರತದಲ್ಲಿ ಮಾತ್ರವಲ್ಲ ನೈಜೀರಿಯಾದಂತಹ ದೇಶದಲ್ಲಿ ಕೂಡ ಚಿನುವಾ ಅಚಿಬೆಯಂತಹ ಬರಹಗಾರರು ಪಾಶ್ಚಾತ್ಯೀಕರಣ ತಂದೊಡ್ಡುವ ಏಕರೂಪಿ ಸಂಸ್ಸೃತಿಯ ಅಪಾಯವನ್ನು ಮನಗಂಡಿದ್ದರು. ಸಂಸ್ಕೃತಿ ವಾಣಿಜ್ಯೀಕರಣಗೊಳ್ಳುತ್ತಿದೆ, ವೈಭವೀಕರಣಗೊಳ್ಳುತ್ತಿದೆ ಎಂದೆಲ್ಲ ವಾದಗಳೇನೇ ಇದ್ದರೂ ಸಂಸ್ಕೃತಿಯನ್ನು ಸಂರಕ್ಷಿಸಲೇಬೇಕಾದ, ಅದರ ಬಗ್ಗೆ ಯುವ ಜನಾಂಗದಲ್ಲಿ ಅಭಿಮಾನವನ್ನು ಬಿತ್ತಲೇಬೇಕಾದ ಸಂಕ್ರಮಣ ಸ್ಥಿತಿಯಲ್ಲಿ ನಾವಿದ್ದೇವೆ ಹಾಗೂ ಅದು ನಮ್ಮ ಕರ್ತವ್ಯ ಕೂಡ.
ಜಯಶ್ರೀ ಬಿ.ಕದ್ರಿ.
No comments:
Post a Comment