ಹಣಕ್ಕೂ ನಮ್ಮ ಜೀವನಕ್ಕೂ ಅವಿನಾ ಭಾವ ಸಂಬಂಧವಿದೆ. ‘ಸರ್ವೇ ಗುಣ: ಕಾಂಚನಮಾಶ್ರಯಂತಿ’ ಎನ್ನುವಂತೆ ದುಡ್ಡಿದ್ದವವರು ದೊಡ್ಡಪ್ಪ ಆಗುವುದು ಸರ್ವೇ ಸಾಮಾನ್ಯ. ಹಣವಿಲ್ಲದಿರುವಿಕೆ ನಮ್ಮ ಖಿನ್ನತೆಗೂ ನಿರುತ್ಸಾಹಕ್ಕೂ ಭವಿಷ್ಯದ ಬಗ್ಗೆ ಕಳವಳಕ್ಕೂ ಕಾರಣವಾಗುತ್ತದೆ . ಹಣದ ಅಭಾವ ನಮ್ಮ ಸುಪ್ತ ಪ್ರಜ್ಞೆ ಯನ್ನು ಕೂಡ ಎಷ್ಟರ ಮಟ್ಟಿಗೆ ಪ್ರಭಾವಿಸುತ್ತದೆ ಎಂದರೆ ನಮ್ಮೆಲ್ಲರ ಕೊಳ್ಳುವಿಕೆ, ನಿರ್ಧಾರ ಕೈಗೊಳ್ಳುವಿಕೆ ಎಲ್ಲವೂ ಅದರ ಮೇಲೆ ಅವಲಂಬಿಸಿದೆ. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರು, ವಿಷಮ ದಾಂಪತ್ಯದಲ್ಲಿದ್ದರೂ ದುಡ್ಡಿಲ್ಲದ ಕಾರಣ ದಿನಾ ಕುಡುಕ ಗಂಡನಿಂದ ಒದೆಸಿಕೊಳ್ಳುವವರು, ಶಾಲೆಗೆ ಹೋಗಲು ಸಾಧ್ಯವಾಗದೆ ಕಾರ್ಖಾನೆಗಳಲ್ಲಿ ದುಡಿಯುವ ಪುಟ್ಟ ಮಕ್ಕಳು ..ಹೀಗೆ ಹಣವಿದ್ದರೆ ಅವರ ಜೀವನ ಖಂಡಿತವಾಗಿಯೂ ಸುಗಮವಾಗಲು ಸಾಧ್ಯವಿದೆ.
ಭಾರತದಂತಹ ವಿರೋಧಾಭಾಸಗಳೇ ತುಂಬಿದ ದೇಶದಲ್ಲಿ ಹಣವನ್ನು ಯಾತಕ್ಕೆ ಖರ್ಚು ಮಾಡುತ್ತೇವೆ ಎನ್ನುವುದೇ ಕುತೂಹಲದ ವಿಷಯ. ಸ್ಲಮ್ಮಿನಲ್ಲಿರುವ ಕಡುಬಡವರ ಒಂದು ರೂಮಿನ ಮನೆಗಳಲ್ಲಿ ಕೂಡ ಕೇಬಲ್ ಟಿವಿ ಇರುತ್ತದೆ. ತನ್ನ ಹಣವನ್ನೆಲ್ಲ ಸಾರಾಯಿಯ ಮೇಲೆ ಸುರಿಯುವ ಕುಡುಕ ಮಕ್ಕಳ ಸ್ಕೂಲ್ ವೆಚ್ಚವನ್ನೋ, ಹೆಂಡತಿಯ ಮಾಸಲು ಸೀರೆ, ಕೃಶ ಶರೀರವನ್ನೋ ನೆನಪಿಸಿಕೂಳ್ಳುವುದಿಲ್ಲ. ಅಕ್ಕಪಕ್ಕದವರಿಂದ ಸಾಲ ಪಡೆದಾದರೂ ಯುಗಾದಿ, ದೀಪಾವಳಿಗಳನ್ನು ಗ್ರಾಂಡ್ ಆಗಿ ಆಚರಿಸುವ, ಉರಿದು ಬೂದಿಯಾಗುವ ಪಟಾಕಿಗೆ ರಾಶಿ ದುಡ್ಡು ಸುರಿಯುವವರನ್ನು ನೋಡಿದ್ದೇನೆ.. ಬಹುಶ: ಇವೆಲ್ಲ ಅವರ ಭಾವನಾತ್ಮಕ ಅಗತ್ಯಗಳನ್ನು ಪೂರೈಸ್ಸುತ್ತದೆ.
ನಮ್ಮ ಮಾರ್ಕೆಟಿಂಗ್ ತಂತ್ರಗಳು ಎಷ್ಟು ಜಾಣತನದಿಂದ ಕೂಡಿವೆ ಎಂದರೆ, ಇಲ್ಲದ ಅಗತ್ಯಗಳನ್ನು ಸೃಷ್ಟಿಸಿ ಹಣವನ್ನು ಖರ್ಚುಮಾಡಿಸುತ್ತವೆ. ಉದಾ: ಕಡಿಮೆ ಆದಾಯದವರಿಗೆ ಕೊಳ್ಳಬಹುದಾದ ಚಿಕ್ಕ-ಪುಟ್ಟ ಶ್ಯಾಂಪೂ ಸ್ಯಾಶೆ ಗಳು, ಪೌಡರ್, ಸೋಪ್ ಹೀಗೆ. ವ್ಯಂಗ್ಯವೆಂದರೆ, 1 ಕಿಲೊ ಬಾಸ್ಮತಿ ಅಕ್ಕಿಯ ಮೇಲೆ ಅಥವಾ 5 ಲಿ. ಸೂಫ಼್ಟ್ ಡ್ರಿಂಕ್ಸ್ ನ ಮೇಲೆ ಇರುವ ಡಿಸ್ಕೌಂಟ್ ಗಳು ದಿನಬಳಕೆಯ ವಸ್ತುಗಳ ಮೇಲೆ ಇರುವುದಿಲ್ಲ. ನಮ್ಮ ಮಾಲ್ ಗಳು ಈ ಮನಸ್ಥಿತಿಯನ್ನು ಬಹಳ ಚೆನ್ನಾಗಿ ಬಳಸಿಕೊಳ್ಳುತ್ತವೆ.
George Orwell ನ ‘Animal Farm’ ನಲ್ಲಿ ಹೇಳಿದಂತೆ ಪ್ರಜಾಪ್ರಭುತ್ವದಲ್ಲಿ ‘ All are equal, but some are more equal’ ಎಂದು ನಾವಿಲ್ಲಿ ಗಮನಿಸಬೇಕಿದೆ. ಬಡವರಿಗೂ ಆತ್ಮಗೌರವವಿದೆಯೆಂದೂ, ಅವರೂ ಮನುಷ್ಯರೇ ಎಂದೂ ಪರಿಗಣಿಸಬೆಕು. ಹೆಚ್ಚಿನ ಕೊಲೆ, ಸುಲಿಗೆ , ದರೋಡೆಗಳು , ನಕ್ಸಲಿಸಮ್ ಈ ರೀತಿಯ ದಮನಿತ ಮನೋಭಾವದ ಸೆಟೆದೆದ್ದ ಆಕ್ರೋಶವೇ ಇನ್ನುವುದನ್ನು ಗಮನಿಸಬೆಕಾಗಿದೆ. ಬೂಕರ್ ಅವಾರ್ಡ್ ಪಡೆದ ಅರವಿಂದ ಅಡಿಗರ ‘The White Tiger’ ಈ ರೀತಿಯ ಸಾಮಾನ್ಯ ವರ್ಗದ ಜನರ ಆಕ್ರೋಶಕ್ಕೆ ಸಾಕ್ಷಿಯಾದ ಕಾದಂಬರಿ.
– ಜಯಶ್ರೀ. ಬಿ. ಕದ್ರಿ .
No comments:
Post a Comment