ಇಂಗ್ಲಿಷ್-ವಿಂಗ್ಲಿಷ್’ ಇತ್ತೀಚೆಗೆ ಸೂಪರ್ ಹಿಟ್ ಆದ ಹಿಂದಿ ಸಿನೆಮಾ. ಸ್ಕೂಲ್-ಕಾಲೇಜುಗಳಿಗೆ ಹೋಗುವ ಮಕ್ಕಳಿಂದ ಹಿಡಿದು , ಗೃಹಿಣಿಯರು, ಬುದ್ಧಿಜೀವಿಗಳು ಎಲ್ಲರಿಗೂ ಇಷ್ಟವಾಗುವ ಸಿನೆಮಾ ಇದು. ನಾಯಕಿ ಶ್ರೀದೇವಿ ಇಂಗ್ಲಿಷ್ ಬಾರದೆ ಪಡುವ ಪಡಿಪಾಟಲು ನೋಡಿ ಕಣ್ಣೀರುಗರೆಯದ ಮಂದಿಯೇ ಇಲ್ಲ ಎಂದರೆ ತಪ್ಪಾಗಲಾರದು. ಇಂಗ್ಲಿಷ್ ಬಾರದ ಭಾರತೀಯರೆಲ್ಲರ ಪ್ರತೀಕವಾಗಿ , ಅದರಲ್ಲೂ ಹೆಣ್ಣು ಜೀವಗಳ ಅಸಹಾಯಕತೆಯ , ಐಡೆಂಟಿಟಿಗೋಸ್ಕರ ಅವರು ಪಡುವ ಪ್ರಯತ್ನದ ರೂಪಕದಂತೆ ಶ್ರೀದೇವಿ ಮನೋಜ್ಞವಾಗಿ ನಟಿಸಿದ್ದಾರೆ.
ಲಾರ್ಡ್ ಮೆಕಾಲೆಯ ಕಾಲದಿಂದಲೂ ಇಂಗ್ಲಿಷ್ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಈಗಿನ ಗ್ಲೋಬಲೈಸ್ಡ್ ಯುಗದಲ್ಲಿ ಇಂಗ್ಲಿಷನ್ನು ನಿರ್ಮೂಲನ ಮಾಡುವುದಂತೂ ಖಂಡಿತ ಸಾಧ್ಯವಿಲ್ಲ ಹಾಗೂ ಅದು ಅಗತ್ಯವೂ ಇಲ್ಲವೇನೋ. ಅಷ್ಟರ ಮಟ್ಟಿಗೆ ಅದು ನಮ್ಮದೇ ಭಾಷೆ ಆಗಿಬಿಟ್ಟಿದೆ. ಹಾಗೆ ನೋಡಿದರೆ ಇಂಗ್ಲಿಷರಿಗಿಂತ ಭಾರತೀಯರಲ್ಲಿಯೇ ಇಂಗ್ಲಿಷ್ ಮಾತನಾಡುವವರ ಜನಸಂಖ್ಯೆ ಜಾಸ್ತಿ ಇರಬಹುದು.
ಇಂಗ್ಲಿಷ್ ಎನ್ನುವುದು ಬ್ರಹ್ಮವಿದ್ಯೆಯೇನಲ್ಲ. ಸಾಕಷ್ಟು exposure ದೊರೆತರೆ ಹೇಗಿರುವ ದಡ್ಡ ಶಿಖಾಮಣಿ ಕೂಡ ಅದನ್ನು ಕಲಿಯಬಲ್ಲರು. ಸೆಕ್ಯೂರಿಟಿ ಗಾರ್ಡ್, ವಾಚ್ ಮೆನ್ ಕೆಲಸಕ್ಕೆ ಕೂಡ ಅಲ್ಪಸ್ವಲ್ಪ ಇಂಗ್ಲಿಷ್ ಆದರೂ ಬರಲೇಬೇಕಾದ ಈ ಕಾಲದಲ್ಲಿ ಇಂಗ್ಲಿಷನ್ನು ಕಲಿಯಲೇಬೇಕಾದುದು ನಮ್ಮ ಅನಿವಾರ್ಯವಾದ ಕರ್ಮವೋ, ಸೌಲಭ್ಯವೋ ಆಗಿದೆ.ನಮ್ಮ ವಿದ್ಯಾಭ್ಯಾಸ ಪದ್ಧತಿಯ ವ್ಯಂಗ್ಯ ಎಂದರೆ , ಪ್ರಾಥಮಿಕ- ಮಾಧ್ಯಮಿಕ ವನ್ನು ಕನ್ನಡ ಮಾಧ್ಯಮದಲ್ಲಿ ಕಲಿತವರೂ, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರೂ ಕಾಲೇಜು ಹಂತಕ್ಕೆ ಬಂದಾಗ ಒಟ್ಟಿಗೆ ಸ್ಪರ್ಧಿಸಬೇಕಾಗಿ ಬರುವಂತಹದು. ಚುರುಕಾಗಿ ಗ್ರಹಿಸುವ ಮಕ್ಕಳನ್ನು ಹೊರತುಪಡಿಸಿ ಉಳಿದ ಹೆಚ್ಚಿನ ಮಕ್ಕಳೂ ಚೊನ್ಚೆಪ್ತ್ ಏನು ಎಂದೆ ಅರ್ಥವಾಗದೆ ತಳಮಳಿಸಿ ತಬ್ಬಿಬ್ಬಾಗುತ್ತಾರೆ. ( ಗಡಿನಾಡಿನ ಕಾಲೇಜೊಂದರಲ್ಲಿ ಕಲಿತ ನನಗೆ ಅತ್ತ ಮಲಯಾಳಂ, ಇತ್ತ ಇಂಗ್ಲಿಷ್ ಎರಡೂ ಬಾರದೆ ಸೈನ್ಸ್ ಸಬ್ಜೆಕ್ಟ್ ನಲ್ಲಿ ಪಾಸಾದದ್ದೇ ದೊಡ್ಡ ವಿಕ್ರಮ).
ಯಾವುದೇ ಮಾತೃಭಾಷೆಯನ್ನು ನಾವು ಮೊದಲು ಕೇಳಿ, ಆಮೇಲೆ ಅದರ ವ್ಯಾಕರಣ ಕಲಿಯುತ್ತೇವೆ. ಹಾಗೆ ನೋಡುವುದಿದ್ದರೆ ಚಿಕ್ಕಮಕ್ಕಳು ಕೂಡ ಅವರದೇ ರೀತಿಯಲ್ಲಿ ವ್ಯಾಕರಣವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತವೆ. Noam Chomskya ಯ Universal Grammar Theory ಹೇಳುವುದು ಇದನ್ನೆ. ಇಂಗ್ಲಿಷನ್ನು ಸುಲಲಿತವಾಗಿ ಮಾತನಾಡಲು, ಬರೆಯಲು ಇರುವ ಒಂದೆ ಒಂದು ಮಾರ್ಗ ಆ ಭಾಷೆಯನ್ನು ಬಳಸುವುದು.
ರಜಾಕಾಲದಲ್ಲಿ ಸಿಂಪಲ್ಲಾಗಿರುವ ಮಕ್ಕಳ ಕಥೆ ಪುಸ್ತಕಗಳಿಂದ ಆರಂಭಿಸಿ ಸರಳವಾಗಿ ಸಾರಾಂಶ ಕೊಟ್ಟಿರುವ ಇಂಗ್ಲಿಷ್ ಪುಸ್ತಕಗಳನ್ನು ಓದಬಹುದು. ಉದಾ: Tales from Skakespeare. ಎಲ್ಲಕ್ಕಿಂತ ಪ್ರಮುಖವಾಗಿ ಇಂಗ್ಲಿಷ್ ವ್ಯಾಕರಣ ಪುಸ್ತಕಗಳು ಬೇಕಾದಷ್ಟಿವೆ. ಬೇಸಿಕ್ ಆಗಿ ಯಾವುದಾದರೂ ಒಂದು ಪುಸ್ತಕದಲ್ಲಿರುವ ನಿಯಮಗಳನ್ನು ಕಲಿತುಕೊಂಡು ಆದಷ್ಟು ಬೇಗ ಇಂಗ್ಲಿಷ್ – ಇಂಗ್ಲಿಷ್ ಗ್ರಾಮರ್ ಪುಸ್ತಕಕ್ಕೆ ಶಿಫ಼್ಟ್ ಆಗಿ . ( ಹಾಗೆ ನೋಡುವುದಿದ್ದರೆ , ಟೆಕ್ಸ್ಟ್ ನ ಹಿಂಭಾಗದಲ್ಲಿರುವ ಗ್ರಾಮರ್ ಅನ್ನು ಹಂತಹಂತವಾಗಿ , ಆದರೆ ಸಂಪೂರ್ಣವಾಗಿ ಕಲಿತರೆ ಅದೇ ಸಾಕು)
ಎಷ್ಟೋ ವಿಧ್ಯಾರ್ಥಿಗಳು ಬಾಯಿಪಾಠ ಮಾಡಿಯಾದರೂ ಬರೆಯಬಲ್ಲರು. ಆದರೆ ಮಾತಿನ ಹಂತಕ್ಕೆ ಬಂದಾಗ ತಡವರಿಸುತ್ತಾರೆ. ನನ್ನನ್ನೂ ಸೇರಿಸಿ ಎಷ್ಟೋ ಜನ ಕನ್ನಡಿಗರು ಕ್ರಿಯೇಟಿವ್ ಆಗಿ ಬರೆಯಬೇಕೆಂದಾಗ ಕನ್ನಡದಲ್ಲೇ ಬರೆಯುತ್ತಾರೆ. ( ನೋವಾದಾಗ ‘ಅಮ್ಮ’ ಎಂದು ಕನ್ನಡದಲ್ಲಿ ಕನವರಿಸುವಂತೆ!)
ನಮ್ಮ ಸಮಾಜದಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡುವವರಿಗೆ , ಬರೆಯುವವರಿಗೆ ಇನ್ನಿಲ್ಲದ ಮನ್ನಣೆ. ಜಾಗತಿಕವಾಗಿಯೂ ಅಷ್ಟೆ. ಭಾರತೀಯ ಆಂಗ್ಲ ಸಾಹಿತಿಗಳಿಗೆ ಸಿಗುವ ಮನ್ನಣೆ , ಅವಾರ್ಡ್ , ಓದುಗ ವರ್ಗ ಕನ್ನಡದ ಹೆಸರಾಂತ ಸಾಹಿತಿಗಳಿಗೂ ಲಭಿಸುವುದಿಲ್ಲ. ಇದಕ್ಕೆ ಕಾರಣ ಇಂಗ್ಲಿಷ್ ಜಾಗತಿಕವಾಗಿ ಪವರ್ ಫ಼ುಲ್ ದೇಶಗಳ ಭಾಷೆ ಆಗಿರುವುದು. ತುಳುವೇ ಜಾಗತಿಕ ಸಂವಹನ ಭಾಷೆಯಾಗಿದ್ದಲ್ಲಿ ತುಳು ಸ್ಪೀಕಿಂಗ್ ಕ್ಲಾಸುಗಳಿಗೆ ಸಾವಿರಾರು ರೂಪಾಯಿ ಕೊಟ್ಟು ವಿದ್ಯಾರ್ಥಿಗಳೆಲ್ಲರೂ ಸೇರಿಕೊಳ್ಳುತ್ತಿದ್ದರೆನ್ನುವುದರಲ್ಲಿ ಸಂಶಯವಿಲ್ಲ.
ನನ್ನ ಪ್ರಕಾರ ಇಂಗ್ಲಿಷ್ ಬರದಿದ್ದರೆ ಕೀಳರಿಮೆ ಪಟ್ಟುಕೊಳ್ಳುವ ಅಗತ್ಯವೇನೂ ಇಲ್ಲ. ಹಾಗೆ ನೋಡುವುದಿದ್ದರೆ ದಕ್ಷಿಣ ಭಾರತದ ನಮಗೆ ಹಿಂದಿಯೂ ಅಷ್ಟಕ್ಕಷ್ಟೆ. ಇನ್ನು ಭಾರತದಲ್ಲಿಯೇ ಹಲವು ಭಾಷೆ, ಸಂಸ್ಕೃತಿ, ಒಳಪಂಗಡಗಳನ್ನೊಳಗೊಂಡ ಶ್ರೀಮಂತ ಪರಂಪರೆ ನಮ್ಮದು. ನಮ್ಮ ಇಂಗ್ಲಿಷ್ ಮೇಲೆ ಕನ್ನಡ accent ಇದ್ದರೆ ಅದರ ಅರ್ಥ ನಮಗೆ ಎರಡು ಭಾಷೆ ಗೊತ್ತಿದೆ ಎಂದು. ಇಂಗ್ಲಿಷರಂತೆ ಉಚ್ಚರಿಸಿದುವುದೂ ನಮಗೆ ಕಷ್ಟವೇ. ಸ್ವಾಭಿಮಾನದಿಂದ ಯೋಚಿಸಿದರೆ ‘ಪುಲಿಕೇಶಿ ಶೆಟ್ಟಪ್ಪನವರ್’ ಎಂದೋ ‘ವಿಗ್ರಡ ವಿಕ್ರಮರಾಯ’ ಎಂದೋ ಅವರು ಸರಿಯಾಗಿ ಉಚ್ಚರಿಸಲಿ ನೋಡೋಣ!
ಜಾಗತಿಕ ಅಲೆಯ ಬೀಸಿನಲ್ಲಿ ಇವೆಲ್ಲ ವಿತಂಡವಾದಗಳೇನೋ. ಇಂಗ್ಲಿಷ್ ನಮಗೆ ಅನೇಕ ಉದ್ಯೋಗಾವಕಾಶಗಳನ್ನು ಕೊಡುತ್ತದೆ. ಕಾಲ್ ಸೆಂಟರ್ ನ್ ಜಾಬ್ ಇರಲಿ, ಇಂಜಿನಿಯರ್ ಆಗಿ ಮಲ್ಟಿನ್ಯಾಶನಲ್ ಕಂಪೆನಿಗೆ ಸಂದರ್ಶನಕ್ಕೆ ಹೋಗಲಿ ಇಂಗ್ಲಿಷ್ ನಲ್ಲಿ ಸರಿಯಾಗಿ ಮಾತನಾಡಲು ಬರಬೇಕು. ಹೆಚ್ಚೇಕೆ ನಮ್ಮ ದೇಶದಲ್ಲೇ ಬೇರೆ ಕಡೆಗೆ ಹೋದಾಗ ನಮಗೆ ಇಂಗ್ಲಿಷ್ ಇಲ್ಲದೆ ಸಂವಹನ ಮಾಡಲು ಸಾಧ್ಯವಿಲ್ಲ. ( ಇಲ್ಲವಾದರೆ ಮಣಿಪುರ, ಅಸ್ಸಾಂ, ರಾಜಸ್ಥಾನ್ ಇಲ್ಲೆಲ್ಲ ಬಸ್ ಸ್ಟ್ಯಾಂಡ್ ನಲ್ಲಿ ಕಳೆದು ಹೋದ ಮಗುವಿನಂತೆ ನಮ್ಮ ಪರಿಸ್ಥಿತಿಯಾಗಬಹುದು!) ಹತ್ತಾರು ವರ್ಷಗಳಿಂದ ತಕ್ಕ ಮಟ್ಟಿಗೆ ಇಂಗ್ಲಿಷ್ ಮಾತನಾಡುವ ಕಾರಣ ( ಪರಿಪೂರ್ಣತೆ ಎನ್ನುವುದೊಂದು process), ತಡವರಿಸುವ ಎಳೆಯರಿಗೆ ಕೆಲವು ಸಲಹೆಗಳು:
- ಭಾಷೆಯ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಿ. ಯಾಕೆಂದರೆ ಅದು ಹೊಸ ಸಾಧ್ಯತೆಗಳನ್ನು , ಅರಿವಿನ ಪರಿಧಿಯನ್ನು ವಿಸ್ತರಿಸಲು ಸಹಕಾರಿಯಾಗುತ್ತದೆ.
- ಸಾಧ್ಯವಾದಷ್ಟು ಚಿಕ್ಕ ಮಕ್ಕಳೊಂದಿಗೆ, ನಿಮ್ಮನ್ನು ಇಷ್ಟ ಪಡುವ ಕ್ಲಾಸ್ ಮೇಟ್ ಗಳೊಂದಿಗೆ , ಅಧ್ಯಾಪಕರೊಂದಿಗೆ ( ಅವರು ನಿಮ್ಮನ್ನು ಕುಗ್ಗಿಸದ್ರ್, ಸ್ಫೂರ್ತಿ ತುಂಬುವವರಾಗಿರಬೇಕು) ಹೆಚ್ಚು ಹೆಚ್ಚು ಸಂಭಾಷಿಸಿ.
- ಒಳ್ಳೆಯ ಅಭಿರುಚಿಯ ಇಂಗ್ಲಿಷ್ ಸಿನೆಮಾಗಳನ್ನು, ಕಾರ್ಟೂನ್ ಗಳನ್ನು ನೋಡಿ.
- ರೇಡಿಯೋ, ಟಿವಿ ನ್ಯೂಸ್ ಗಳು ಕಡ್ಡಾಯ.
- ಇಂಗ್ಲಿಷ್ ನ್ಯೂಸ್ ಪೇಪರ್ ಗಳಲ್ಲಿ ನಿಮಗೆ ಯಾವ ಸೆಕ್ಷನ್ ಇಷ್ಟವೋ ( ಉದಾ: ಫಿಲ್ಮ್ , ಸ್ಪೋರ್ಟ್ಸ್) ಅವನ್ನು ನಿತ್ಯ ಓದಿ. ಆಮೇಲೆ ಸಂಪಾದಕೀಯಕ್ಕೆ ಶಿಫ಼್ಟ್ ಆಗಬಹುದು.
- ಡಿಕ್ಷನರಿ ನಿಮ್ಮ ಬೆಶ್ಟ್ ಫ಼್ರೆಂಡ್. ಹೊಸ ಹೊಸ ಶಬ್ದ ಕಲಿತಂತೆಲ್ಲ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.
- ಸಾಧ್ಯವಾದಲ್ಲಿ, ಇಂಗ್ಲಿಷನಲ್ಲಿ ಸಣ್ಣ ಪುಟ್ಟ ಲೇಖನಗಳನ್ನು ಏನಿಲ್ಲವೆಂದರೆ ದಿನಚರಿಯನ್ನಾದರೂ ಬರೆಯಿರಿ( ಎಲ್ಲಕ್ಕಿಂತ ಮೊದಲು ಪರೀಕ್ಷೆ ಪಾಸಾಗಲು ನಿಗದಿತ ಸಿಲೆಬಸ್ ಅನ್ನು ಸಾರಾಂಶ ರೂಪದಲ್ಲಿ ನಾಲ್ಕಾರು ಬಾರಿ ಓದಿ ಮನನ ಮಾಡಿಕೊಳ್ಳಿ. ಮಾತನಾಡುವ ಇಂಗ್ಲಿಷನ್ನು ಡಿಗ್ರಿ ಆದ ಮೆಲೆ ಕೂಡ ಸ್ಪೀಕಿಂಗ್ ಕ್ಲಾಸಿಗೆ ಹೋಗಿಯಾದರೂ ಕಲಿಯಬಹುದು)
- ಕೊನೆಯದಾಗಿ , ಕನ್ನಡ ಭಾಷೆಯ ಸೊಗಡು, ಆಪ್ತತೆ , ಅದು ಸ್ಪುರಿಸುವ ಬೆಚ್ಚನೆಯ ಭಾವ ಬೇರೆ ಯಾವ ಭಾಷೆಯಲ್ಲಿಯೂ ನಮಗೆ ದೊರೆಯುವುದಿಲ್ಲ
‘ಸಿರಿಗನ್ನಡಂ ಗೆಲ್ಗೆ’
– ಜಯಶ್ರೀ ಬಿ. ಕದ್ರಿ
No comments:
Post a Comment