‘ಮಾಣಿಕ್ಯ ವೀಣಾಮುಪಲಾಲಯಂತೀ ಮದಾಲಸಾಂ ಮಂಜುಳ ವಾಗ್ವಿಲಾಸಂ‘ ಹೀಗೆ ವೀಣಾಪಾಣಿ ಸರಸ್ವತಿಯನ್ನು ವಾಗ್ದೇವತೆಯೆಂದು ಸ್ತುತಿಸುವ ದೇಶ ನಮ್ಮದು. ಹಾಗಿದ್ದರೂ ಉನ್ನತ ವಲಯದ ಶಿಕ್ಷಣ, ಉದ್ಯೋಗ, ಸ್ಥಾನಮಾನಗಳಿರುವ ಹುದ್ದೆಗಳಲ್ಲಿ ಮಹಿಳೆಯರು ಅಷ್ಟಾಗಿ ಕಂಡು ಬರುವುದಿಲ್ಲ. ಇದಕ್ಕೆ ಕಾರಣ ಅವರಿಗಿರುವ ಕೌಟುಂಬಿಕ ಬಾಧ್ಯತೆಗಳು ಒಂದು ಲೆಕ್ಕಾಚಾರದ ಪ್ರಕಾರ ಕಾಲು ಶತಮಾನವನ್ನು (ಹೆಚ್ಚು ಕಡಿಮೆ ಇಪ್ಪತ್ತರಿಂದ ನಲ್ವತ್ತನೆಯ ವಯಸ್ಸಿನವರೆಗೆ) ಮಹಿಳೆ ಕುಟುಂಬಕ್ಕೋಸ್ಕರ ತೇಯುತ್ತಾಳೆ ಹಾಗೂ ಕೌಟುಂಬಿಕ ಸಾಮರಸ್ಯವನ್ನು ಕಾಯ್ದುಕೊಳ್ಳುವುದು ಹೆಣ್ಣಿನದೇ ಬಾದ್ಯತೆ ಎನ್ನುವ ಮನೋಭಾವ ಹೆಣ್ಣು ಒಳಗೂ ಹೊರಗೂ ದುಡಿಯುವ ಈ ಜಮಾನಾದಲ್ಲೂ ಇದೆ. ಮಹಿಳೆಯರ ಹೆಪ್ಪುಗಟ್ಟಿದ ಮೌನ, ಆಕ್ರೋಶ, ಆಕ್ರಂದನಗಳನ್ನು, ಅವರ ಕೊತಕೊತ ಕುದಿಯುವ ಕಿಚ್ಚು, ಕೆಚ್ಚು, ಹುಮ್ಮಸ್ಸು, ಹುರುಪನ್ನು ಸಮರ್ಥವಾಗಿ ವ್ಯಕ್ತಪಡಿಸಲು ಸಾಹಿತ್ಯಕ್ಕೆ ಮಾತ್ರ ಸಾಧ್ಯ. (ದೃಶ್ಯ ಮಾಧ್ಯಮಗಳೂ ಸಾಹಿತ್ಯವನ್ನು, ಅಟ್‌ಲೀಸ್ಟ್ ಸ್ಕ್ರಿಪ್ಟ್‌ನ್ನು ಆಧರಿಸಿವೆ ಎನ್ನುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು) ಮೌನ ಮಾತಾಗುತ್ತ, ಮಾತು ಆಲಾಪವಾಗುತ್ತ ಅನೇಕ ಹರವು, ಆಳ, ಬದ್ಧತೆಗಳೊಂದಿಗೆ ಮಹಿಳಾ ಸಾಹಿತ್ಯ ಬೆಳೆದಿದೆ; ಬೆಳೆಯಬೇಕು.
ಮಹಿಳಾ ಸಾಹಿತ್ಯದ ಪ್ರಮುಖ ಅಂಶ ನಿರ್ದಿಷ್ಟ ಸಂಗತಿಗಳ ಬಗ್ಗೆ ಅಲ್ಲಿನ ಮೌನ ( ಕಾಮ, ಪ್ರಣಯ ಇತ್ಯಾದಿ) ಯಾಕೆಂದರೆ ನಮ್ಮ ಸಮಾಜ ಸ್ತ್ರೀಯರ ಬರಹಗಳನ್ನು ಮುಕ್ತತೆಯಿಂದ ಸ್ವೀಕರಿಸುವುದಿಲ್ಲ. ಅವರ ಬರಹ ಹೆಚ್ಚಾಗಿ ಪ್ರಕಟಗೊಳ್ಳವುದೂ ಮಹಿಳೆಯರಿಗೇ ಸೀಮಿತವಾದ ಮ್ಯಾಗಜಿನ್‌ಗಳು, ಪಾಕ್ಷಿಕಗಳಲ್ಲಿ, ಜನಪ್ರಿಯ ಸಾಹಿತ್ಯವಂತೂ ಗಂಡ, ಮನೆ, ಸಂಸಾರದ ಸುತ್ತಲೇ ಗಿರಾಕಿ ಹೊಡೆಯುತ್ತಿರುತ್ತದೆ. ಹಿತಮಿತವಾಗಿ, ನವಿರಾಗಿ, ಸಾಧ್ಯವಾದರೆ ಯಾರಿಗೂ ಅರ್ಥವಾಗದ ಪ್ರತಿಮೆಗಳನ್ನು ಬಳಸಿ ಬರೆಯಲೇಬೇಕಾದ ಅನಿವಾರ್ಯತೆ ಕವಯಿತ್ರಿಯರದ್ದು. ಯಾಕೆಂದರೆ ಈ ಪುರುಷ ಪ್ರಧಾನ ಸಮಾಜದಲ್ಲಿ ಕಮಲಾದಾಸ್ ಅಂತೆಯೋ ಚ.ಸರ್ವಮಂಗಳಾರಂತೆಯೋ ಬರೆಯಲಿಕ್ಕೆ ತುಂಬ ಛಾತಿ, ಧೈರ್ಯ ಮತ್ತು ಟೀಕೆಗಳನ್ನು ಎದುರಿಸುವ ಸಹನೆ ಬೇಕು.
ಮಹಿಳೆಯರ ಜೀವನಾನುಭವ, ಅವಕಾಶ ವಲಯಗಳು ಸೀಮಿತವಾಗಿರುವ ಕಾರಣವೇ ಅದು ಅಡಿಗೆ ಮನೆ ಸಾಹಿತ್ಯ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದೆ. ಇನ್ನು ಸಾಹಿತ್ಯದ ಹೆಸರಿನಲ್ಲಿ ತಮ್ಮ ಅನುಭವ ರಾಹಿತ್ಯ, ಜೀವನದರ್ಶನದ ಕೊರತೆ, ಅಜ್ಞಾನವನ್ನು ಅಭಿವ್ಯಕ್ತಿಗೊಳಿಸುವ ಅಪಾಯವೂ ಇಲ್ಲದಿಲ್ಲ. ಇನ್ನು ಕೆಲವು ಕಥೆಗಾರ್ತಿಯರು ತೀರಾ ವೈಯಕ್ತಿಕ ಅನುಭವಗಳನ್ನು, ಇನ್ನೂ ಸರಳವಾಗಿ ಹೇಳವುದಿದ್ದರೆ ತಮ್ಮದೇ ಕತೆಯನ್ನೋ, ಅಕ್ಕ ಪಕ್ಕದವರ ವಿಚಾರಗಳನ್ನೋ ಅಕ್ಷರ ರೂಪಕ್ಕಿಳಿಸುತ್ತಾರೆ. ಬರಹವೆಂಬುದು ಅಭಿವ್ಯಕ್ತಿ ಮಾಧ್ಯಮ ಹೌದಾದರೂ, ತಮ್ಮ ಅನುಭವಗಳು ಪಕ್ವವಾಗಲು, ಅಕ್ಷರಗಳಲ್ಲಿ ಕಸುವು, ಸಾಂದ್ರತೆ ತುಂಬಿಕೊಳ್ಳಲು, ಸಮತೋಲನದ, ಸತ್ಯಾನ್ವೇಷಣೆಯೇ, ಅರಿವಿನ ದೃಷ್ಟಿಕೋನ ನಮ್ಮದಾಗಲು, ತಾಳ್ಮೆ, ಸಹನೆ ಹಾಗೂ ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವ ಪ್ರಜ್ಞೆ ಬೇಕು. (ಯಾವುದೇ ವಾದಕ್ಕೆ ಕಟ್ಟುಬೀಳದೆ ಮೌನವಾಗಿ, ಆಪ್ಯಾಯಮಾನವಾಗಿ ಬರೆಯುವ ವೈದೇಹಿಯಂತಹವರನ್ನು ಇಲ್ಲಿ ನೆನಪಿಸಿಕೊಳ್ಳಬೇಕು).
ಆಂಗ್ಲ ಮಾಧ್ಯಮದಲ್ಲಿಯೇ ಹೆಚ್ಚು ಹೆಚ್ಚು ಮಕ್ಕಳು ಕಲಿಯುತ್ತಿರುವ ಈ ಕಾಲಘಟ್ಟದಲ್ಲಿ ಕನ್ನಡದ ಹಿರಿಯ ಲೇಖಕಿಯರನ್ನು ಹೊರತುಪಡಿಸಿದರೆ ಈಗಿನ ತಲೆಮಾರಿನ ಲೇಖಕಿಯರಲ್ಲಿ ಬರೆಯುತ್ತಿರುವವರು ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ, ಇಪ್ಪತ್ತೈದರಿಂದ ನಲ್ವತ್ತರ ಆಸುಪಾಸಿನಲ್ಲಿರುವವರು ಕೆಲವು ಬರಹಗಾರ್ತಿಯರಿಗೆ ಬರಹ ಅವರ ದೈನಂದಿನ ಯಾಂತ್ರಿಕತೆಯಿಂದ ( ಮನೆಕೆಲಸ, ಮಕ್ಕಳ ಜವಾಬ್ದಾರಿ, ಅತ್ತೆ ಮಾವಂದಿರ ಸೇವೆ ಇತ್ಯಾದಿ) ಬಿಡುಗಡೆಯ ಹಾದಿಯಾಗಿದ್ದರೆ ಇನ್ನು ಕೆಲವರಿಗೆ ತಮ್ಮ ವೈಚಾರಿಕತೆಯೆ, ಕನಸುಗಾರಿಕೆಯ ಅಭಿವ್ಯಕ್ತಿ.
ಮಹಿಳಾ ಬರಹಗಾರ್ತಿಯರ ಮುಖ್ಯ ಸಮಸ್ಯೆ ಅವರ ಅನುಭವಗಳಿಗಿರುವ ಮಿತಿ, ಪುರುಷ ಲೇಖಕರ ಆಳ, ವಿಸ್ತಾರ, ಹರಹುಗಳಿಂದ ಅವರು ವಂಚಿತರು, ಇಡೀ ಭಾರತವನ್ನು ಒಬ್ಬಂಟಿಯಾಗಿ ಸುತ್ತಲು, ಯಾವುದೋ ಕೊಳೆಗೇರಿಯನ್ನು ಸಂದರ್ಶಿಸಿ ಅಲ್ಲಿ ವಾಸಿಸಲು, ಬರೆಯಲೆಂದು ಆರು ತಿಂಗಳು ಯಾವುದೋ ಹಿಲ್‌ಸ್ಟೇಶನ್‌ಗೆ ಹೋಗಿ ತಂಗಲು ಎಷ್ಟು ಜನ ಲೇಖಕಿಯರಿಗೆ ಧೈರ್ಯವಾಗಲಿ, ಅನುಕೂಲವಾಗಲಿ ಇದೆ ? ಹೀಗಾಗಿಯೇ ಮಹಿಳೆಯರ ಬರಹಕ್ಕೆ ತುಂಬ ಸೀಮಿತವಾದ ಆಯಾಮ ಇದೆ ಎಂದೇ ಹೇಳಬೇಕಾಗಿದೆ.
ಬರಹದಿಂದಲೇ ಬದುಕು ಸಾಗಿಸುವ ಅನುಕೂಲ ಪ್ರಸ್ತುತ ಇಲ್ಲದಿರುವ ಕಾರಣ (ಕಲೆಯನ್ನೂ ಕೂಡ) ಬರಹವೆನ್ನುವುದನ್ನು ಹವ್ಯಾಸವಾಗಿ ಮಾತ್ರ ಬೆಳೆಸಿಕೊಳ್ಳಲು ಸಾಧ್ಯ, ಲೇಖಕಿಯರೂ ಸಮಾಜದ, ಕುಟುಂಬದ ಭಾಗವೇ ಆಗಿರುವುದರಿಂದ ಸಾಹಿತ್ಯ ಸಮ್ಮೇಳನಗಳಿಂದ ಹಿಡಿದು ಸಭೆ, ಸಮಾರಂಭ, ಕವಿಗೋಷ್ಠಿ ಇತ್ಯಾದಿಗಳಲ್ಲಿ ಭಾಗವಹಿಸಲು ಬೇಕಾದ ಸಮಯ, ಅನುಕೂಲ, ಹಣ ಇರಬೇಕಾಗಿರುವುದು ಅಗತ್ಯ, ಒಬ್ಬಳೇ ಒಂದು ಸಿನಿಮಾ ಮಂದಿರಕ್ಕೆ ಹೋಗಿ ಫಿಲ್ಮ್ ನೋಡುವ ಧೈರ್ಯ ನಮಗಿಲ್ಲದಿರುವಾಗ ಜಗತ್ತಿನ ಆಗು ಹೋಗುಗಳಿಗೆ ತೆರೆದುಕೊಳ್ಳುವ ಮಾತು ದೂರವೇ ಉಳಿಯಿತು.
ಹೀಗಿದ್ದರೂ ಪ್ರತಿಭಾ ನವನವೋನ್ಮೇಷಶಾಲಿನಿ ಎಂಬಂತೆ ಕಂಪ್ಯೂಟರ್ ನಲ್ಲಿ ಟೈಪ್ ಮಾಡಲು ಕಷ್ಟಪಟ್ಟು ಕಲಿತು, ಪ್ರೋಗ್ರಾಂಗಳ ಸಿಡಿ ನೋಡುತ್ತ, ವೆಬ್ ಸೈಟ್ ಗಳಿಂದ ಜ್ಞಾನ ಸಂಪಾದಿಸುತ್ತ, ಮೊಬೈಲ್ ನಲ್ಲಿ ಸಂವಹನ ಮಾಡುತ್ತ ತಾವಿರುವ ಜಾಗದಿಂದಲೇ ತಮ್ಮ ನೆಲೆಯನ್ನು ಕಂಡುಕೊಳ್ಳಲು ಪಣ ತೊಟ್ಟಿರುವ, ಬೇರುಗಳನ್ನು ನೆಲದಲ್ಲಿ ಭದ್ರವಾಗಿರಿಸಿಕೊಂಡೇ ಆಗಸದೆತ್ತರೆಕ್ಕೆ ಕನಸು ಕಾಣುವ ಲೇಖಕಿಯರು, ಎಳೆಯ ವಿದ್ಯಾರ್ಥಿನಿಯರು ನಮ್ಮಲ್ಲಿದ್ದಾರೆ ಎನ್ನುವುದೇ ಸಂತಸದ ವಿಷಯ.
ಒಂದೂವರೆ ದಶಕದ ಹಿಂದೆ ಪತ್ರಿಕೋದ್ಯಮ ಅಷ್ಟಾಗಿ ಒಂದು ಅಧ್ಯಯನ ಶಿಸ್ತಾಗಿ ಪ್ರಚಲಿತವಿಲ್ಲದಿದ್ದ ಸಂದರ್ಭದಲ್ಲಿ ನಾವು ಪತ್ರಿಕಾ ಸಾಹಿತ್ಯವನ್ನು ಅಷ್ಟಾಗಿ ಪರಿಗಣಿಸುತ್ತಿರಲಿಲ್ಲ. ಈಗ ನೋಡಿದರೆ ಪತ್ರಿಕೆಗಳೇ ಸಾಹಿತ್ಯವನ್ನು ಉಳಿಸಿ ಬೆಳೆಸುತ್ತವೆ ಎನ್ನಬಹುದು. ಕನ್ನಡ ಭಾಷೆಯನ್ನು ಮಾತನಾಡುವವರೇ ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಅಭಿವ್ಯಕ್ತಿ ಮಾಧ್ಯಮವಾಗಿ ಭಾಷೆ ಬಳಕೆಯಾಗಬೇಕಾಗಿರುವುದು ಇನ್ನಿಲ್ಲದ ಅನಿವಾರ್ಯತೆ ಆಗಿದೆ. ಈ ನಿಟ್ಟಿನಲ್ಲಿ ಹೊಸ ಟ್ರೆಂಡ್ ಎಂದರೆ ಬ್ಲಾಗ್ ಸಾಹಿತ್ಯ. ಹೊಸರುಚಿಯನ್ನು ಅಪ್‌ಲೋಡ್ ಮಾಡುವುದರಿಂದ ಹಿಡಿದು ಇತ್ತೀಚೆಗೆ ಹೋಗಿ ಬಂದ ಪಿಕ್ ನಿಕ್ ಸ್ಪಾಟ್ ವರೆಗೆ ಮಾಹಿತಿಗಳನ್ನು ಫೋಟೋ ಸಮೇತ ಬರೆಯುತ್ತಿರುತ್ತಾರೆ. ತಂತ್ರಜ್ಞಾನವನ್ನು ನೇಟಿವಿಟಿಗೆ ತಕ್ಕಂತೆ ಬಳಸಿಕೊಳ್ಳುವುದೇನೆಂದರೆ ಇದೇ ಇರಬೇಕು.
ಇಷ್ಟಾಗಿ ಮಹಿಳೆಯರ ಬರಹ ಯಾಕೆ ಬೇಕೆನ್ನುವುದು ಪ್ರಶ್ನೆ, ಹೆಣ್ಣಿನ ಅನುಭವ ಜಗತ್ತು, ಅವರ ಮೂಕ ತಲ್ಲಣಗಳನ್ನು, ನವಿರು ಪುಳಕಗಳನ್ನು ಹೆಣ್ಣಿನಷ್ಟೆ, ಸಮರ್ಥವಾಗಿ ವ್ಯವಕ್ತಪಡಿಸಲು ಪುರುಷ ಲೇಖಕರಿಗೆ ಕಷ್ಟಸಾಧ್ಯ. ರವೀಂದ್ರನಾಥ ಠಾಗೋರ್, ಶರತ್ ಚಂದ್ರ ರಂತಹ ಶ್ರೇಷ್ಠ ಕಾದಂಬರಿಕಾರರು, ಕಾರಂತ, ಕುವೆಂಪು, ಭೈರಪ್ಪ ನವರಂತಹವರನ್ನು ಹೊರತುಪಡಿಸಿದರೆ ಹೆಣ್ಣಿನ ಅನುಭವಗಳನ್ನು ಗಂಡಿನ ದೃಷ್ಟಿಕೋನ ದಿಂದಲೇ ವ್ಯಕ್ತಪಡಿಸುತ್ತಿರುತ್ತಾರೆ. ಕೊನೆಕೊನೆಗೆ ಅವು ಪುರುಷ ಪ್ರಧಾನ ಮೌಲ್ಯಗಳನ್ನೇ, ಸ್ತ್ರೀ ಪಾತ್ರಗಳ ಮುಖಾಂತರ ಹೇಳುವ ಅಪಾಯವೂ ಇದೆ. ಇದಕ್ಕಾಗಿ ಸ್ತ್ರೀಯರ ಬರಹ ಬೇಕು.
ಕೊನೆಯದಾಗಿ, ಮಹಿಳೆಯರ ಬರಹ ಎಂದರೆ ಇಡೀ ಪುರುಷ ಸಂಕುಲವನ್ನೇ ದ್ವೇಷಿಸುವ, ಬೆಂಕಿ ಉಗುಳುವ, ದೈನ್ಯ, ವ್ಯಥೆಗಳ ಚಿತ್ರಣಗಳೇ ಆಗಿರಬೇಕೆಂದಿಲ್ಲ. ಇಷ್ಟಕ್ಕೂ ಸ್ತ್ರೀಯರೇನು ಮಂಗಳ ಗ್ರಹದಿಂದ ಬಂದವರಲ್ಲ, ಅದರಲ್ಲೂ ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಸ್ತ್ರೀ ಶೋಷಣೆಯಷ್ಟೇ ಧೃತಿಗೆಡಿಸುವ ಸಮಸ್ಯೆಗಳು ಹತ್ತು ಹಲವು. ತಾಂಡವಾಡುತ್ತಿರುವ ನಿರುದ್ಯೋಗ, ಭ್ರಷ್ಟಾಚಾರ, ಬೆಲೆಏರಿಕೆಯ ದುಮ್ಮಾನ, ಭಯೋತ್ಪಾದನೆಯ ಭೀತಿ, ನವವಸಾಹತುಶಾಹಿಯನ್ನು ಹುಟ್ಟು ಹಾಕುತ್ತಿರುವ ಆರ್ಥಿಕ ನೀತಿಗಳು, ಅಭಿವೃದ್ಧಿ ಯೋಜನೆಗಳಿಂದಾಗುತ್ತಿರುವ ಅಸಮತೋಲನ, ವಿನಾಶವಾಗುತ್ತಿರುವ ಪರಿಸರ- ಹೀಗೆ -ಕೇವಲ ಸಾಂಸಾರಿಕ ವಿಷಯಗಳಿಗೆ ಸೀಮಿತವಾಗಿರದೆ ಜಗದಗಲ ವ್ಯೋಮಯಾನ ಮಾಡುವ ಕನಸುಗಾರಿಕೆ, ವ್ಯಾಪ್ತಿ ಮಹಿಳಾ ಸಾಹಿತ್ಯಕ್ಕೆ ದಕ್ಕಬೇಕೆನ್ನುವುದು ಎಲ್ಲರ ಹಾರೈಕೆ.
– ಜಯಶ್ರೀ.ಬಿ.ಕದ್ರಿ
No comments:
Post a Comment