“ಆಕೆ ಲವಲವಿಕೆಯ ತರುಣಿ. ಮಾತೋ ಚಟಪಟಗುಟ್ಟುವ ಅರಳಿನಂತೆ. ಅವಳಿದ್ದಲ್ಲಿ ಮಾತು, ಕತೆ, ಜೋಕುಗಳು. ನಿನ್ನೆ ನೋಡಿದ ಸಿನೆಮಾ, ಯಾವುದೋ ಫ್ರೆಂಡ್ ಕಳುಹಿಸಿದ ಮೆಸೇಜ್, ಕಾಲೇಜಿಗೆ ಬರುತ್ತಿರುವಾಗ ನೋಡಿದ ತಮಾಷೆಯ ದೃಶ್ಯ ಹೀಗೆಲ್ಲ. ದಿಢೀರನೆ ಆಕೆ ಮೌನವಾದಳು. ಮಾತಿಲ್ಲ, ಕತೆಯಿಲ್ಲ. ಯಾರಾದರೂ ಮಾತನಾಡಿಸಿದರೆ ಸಿಡಾರನೆ ರೇಗಿ ಬಿಡುವಳು. ಸಾಲದ್ದಕ್ಕೆ ಉಳಿದವರೆಲ್ಲ ತನ್ನ ಬಗ್ಗೆಯೇ ಏನೋ ಮಾತನಾಡುತ್ತಾರೆ , ಅಪಹಾಸ್ಯ ಮಾಡಿ ನಗುತ್ತಾರೆ ಎನ್ನುವ ಭಾವನೆ, ಸಂಶಯ. ಮಂದಿ ನಾಲ್ಕು ದಿನ ನೋಡಿದರು. ಸಮಾಧಾನಿಸಲು ಪ್ರಯತ್ನಿಸಿದರು. ಈಕೆ ಮತ್ತಷ್ಟು ವ್ಯಗ್ರಳಾದಂತೆಲ್ಲ ಅವರೆಲ್ಲ ದೂರ ಸರಿದರು. ಈಗ ಆಕೆ ಒಂಟಿ. ಗಾಸಿಪ್ ಗೆ ಬಳಲಿದವಳಲ್ಲಿ ಒಬ್ಬಳು.
‘ಗಾಸಿಪ್’ ಎನ್ನುವುದು ಹೀಗೆ. ಮಾತಾನಾಡುತ್ತಲೇ ಯಾರದೋ ವೈಯುಕ್ತಿಕ ವಿಷಯಗಳನ್ನು ಆಡಿಕೊಳ್ಳುವುದು, ಇನ್ನೊಬ್ಬರ ದೌರ್ಬಲ್ಯಗಳನ್ನು ಎನ್ ಕ್ಯಾಷ್ ಮಾಡಿಕೊಳ್ಳುವುದು. ಇವು ಸಾಮಾಜಿಕ ಬದುಕಿನ ಅಂಗಗಳೇ ಆಗಿಬಿಟ್ಟಿವೆ. ಹಾಗೆಂದು ಯಾರೋ ಆಡಿಕೊಳ್ಳುತ್ತಾರೆಂದು ನಮ್ಮ ಬದುಕು ಮುಂದುವರಿಯಬೇಕಲ್ಲ. ಯಾರೋ ಅಯೋಗ್ಯರ ಮಾತಿನ ಬಾಣಕ್ಕೆ ನೊಂದು ಬಸವಳಿಯುವ ಅಗತ್ಯ ನಮಗಿಲ್ಲ ಹೌದಾದರೂ ಆ ಕ್ಷಣಕ್ಕೆ ಅವು ಯಾತನೆಯನ್ನು, ಪರಿಭ್ರಮವನ್ನು ಉಂಟುಮಾಡುವುದು ಸತ್ಯ. ಇವು ‘ಸೋಶಿಯಲ್’ ಎಂದೆನಿಸಿಕೊಳ್ಳುವ ಹುಡುಗಿಯರ ವಿಷಯದಲ್ಲಿ ಇನ್ನು ಸರಿ. ತಮ್ಮ ಮಾತಿನ ನಡುವೆ ಕಳ್ಳೆಕಾಯಿಯಂತೆ ಇವರ ವಿಷಯಗಳನ್ನು ಇನ್ಯಾರೋ ಆಡಿಕೊಳ್ಳುತ್ತಾರೆ.
ಇವುಗಳಿಂದ ಪಾರಾಗಲೂ ಒಂದೇ ಒಂದು ಮಾರ್ಗ. ಆದಷ್ಟು ಮೌನವಾಗಿ ಇರುವುದು, ಅಗತ್ಯವಿದ್ದರೆ ದಿಟ್ಟತನದಿಂದ ಮಾರುತ್ತರೆ ಕೊಡುವುದು. ‘ಮೈಲ್ಡ್’ ಆಗಿರುವುದು ಎಲ್ಲಾ ಕಾಲಕ್ಕೂ ಸರಿಯೆಂದೇನಲ್ಲ. ಇನ್ನೂ ಒಳ್ಳೆಯ ವಿಧಾನ ಎಂದರೆ ಯಾರ ಬಗ್ಗೆಯೂ ನಾವೂ ಹೆಚ್ಚು ಮಾತನಾಡದೆ ಏನಿದ್ದರೂ ನೇರವಾಗಿ ಹೇಳಿಕೊಳ್ಳುವುದು.
ಮೇಲೆ ಹೇಳಿದ ಹುಡುಗಿ ಗಟ್ಟಿ ಮನಸ್ಸು ಮಾಡಿ ಬದುಕನ್ನು ಕೈಗೆತ್ತಿಕೊಂಡಳು. ಲೈಬ್ರೆರಿಯ ಪುಸ್ತಕಗಳು ಆಕೆಯನ್ನು ಕೈಬೀಸಿ ಕರೆದುವು. ಉತ್ತಮ ಪರ್ಸೆಂಟೇಜಿನಿಂದ ಮಾರ್ಕ್ಸ್ ತೆಗೆದು ಒಳ್ಳೆಯ ಉದ್ಯೋಗ, ಪತಿ , ಮಕ್ಕಳು ಹೀಗೆಲ್ಲ..ಈಗ ಆಕೆ ಸುಖಿ.
ಹೇಗಿರಬಹುದು ಆ ಕ್ಷಣ? ಆಕೆ ತಾನು ಪ್ರೀತಿಸಿದವನಿಗೋಸ್ಕರ ತನ್ನ ತಂದೆತಾಯಿಯನ್ನೂ ಕೂಡ ವಿರೋಧಿಸಿ ಮದುವೆಯಾದಳು. ಮದುವೆಯಾಗಿ ಆರು ತಿಂಗಳಲ್ಲಿ ಈತನ ಬಣ್ಣ ಬಯಲು. ದೈಹಿಕ ದೌರ್ಜನ್ಯ ನಡೆಸುವುದೇನು? ಇವಳ ಚಾರಿತ್ರ್ಯವನ್ನು ಸಂಶಯಿಸುವುದೇನು?ಕೆನ್ನೆಯ ಮೆಲಿನ ಹೊಡೆತದ ಊತವನ್ನು ಮೇಕಪ್ಪಿನಲ್ಲಿ ಮುಚ್ಚಿಕೊಂಡು ನಗುವಿನ ಮುಖವಾಡವನ್ನು ಹೊತ್ತುಕೊಂಡು ನೋಡುವವರಿಗೆ ‘ ಜಾಲಿ’ ಎಂದೆನಿಸುವಂತೆ ಬದುಕುತ್ತಿದ್ದಳು ಆಕೆ. ಕೊನೆಗೆ ಈತನ ತಾರಕಸ್ವರ ಅಪಾರ್ಟ್ ಮೆಂಟ್ ನ ಉಳಿದವರ ಕುತೂಹಲ ಕೆರಳಿಸುತ್ತಿದ್ದಂತೆ ಈತ ಆಕೆಯ ಕೆಲಸದ ಜಾಗಕ್ಕೂ ಬಂದು ಉಪಟಳ ಕೊಡುತ್ತಿದ್ದಂತೆ ಆಕೆ ಸಿಡಿದೆದ್ದಳು. ತನ್ನ ಎಳೆಯ ಮಗುವನ್ನು ಕಟ್ಟಿಕೊಂಡು ಮರಳಿ ಬದುಕು ಕಟ್ಟಿಕೊಳ್ಳಲು ಆಕೆ ಪಟ್ಟ ಬವಣೆ ಅಷ್ಟಿಷ್ತಲ್ಲ.
ನಮ್ಮ ಸಮಾಜದಲ್ಲಿ ವಿಧವೆಯರು, ವಿಚ್ಛೇದಿತೆಯರು, ಶೋಷಿತರು, ಪರಿತ್ಯಕ್ತರು ..ಇವರಿಗೆ ಸರಿಯಾದ ಸ್ಥಾನವೆಂಬುದಿಲ್ಲ. ‘ಡೈವೋರ್ಸ್’ ಎನ್ನುವ ಹಸರು ಕೇಳಿದರೆ ಸಾಕು, ಹೌಹಾರಿ ಬಿಡುತ್ತಾರೆ. ಅದೂ ಅಲ್ಲದೆ ಹೆಣ್ಣನ್ನೇ ತಾಳ್ಮೆಯಿಲ್ಲದವಳೆಂದೋ ಹೊಂದಾಣಿಕೆ ಇಲ್ಲದವಳೆಂದೋ ದೂಷಿಸುತ್ತಾರೆ.
ಈಕೆ ನರಳಿದಳು, ಬಿಕ್ಕಿದಳು, ರೌದ್ರಾವತಾರ ತಾಳಿದಳು, ಮರಳಿ ಪ್ರಶಾಂತವಾಗಿ ಚಿಂತಿಸಿ ಮಗುವಿನ ಭವಿತವ್ಯಕ್ಕೋಸ್ಕರ ಗಟ್ಟಿಯಾಗಿ ನಿಂತು ಹೋರಾಡಿದಳು. ಈಗ ಸಮಾಜ ಆಕೆಯ ಪರಿಶ್ರಮವನ್ನು, ತ್ಯಾಗವನ್ನು ಗುರುತಿಸಿದೆ. ಅವಳ ಕೆಚ್ಚನ್ನು, ಹೋರಾಟದ ಛಲವನ್ನು ಗೌರವಿಸುತ್ತಿದೆ. ಆಕೆ ಕೂಡ ಸೋಶಿಯಲ್ ಸರ್ವಿಸ್ ಮುಖಾಂತರ ನೊಂದವರ ಕಣ್ಣಿರು ಒರಸುತ್ತಿದ್ದಾಳೆ.
ಆಕೆ ಚೂಟಿಯಾದ ಹುಡುಗಿ. ಓದಬೇಕು, ಇನ್ನಷ್ಟು ಓದಬೇಕು, ದೊಡ್ಡ ಕೆಲಸ ಪಡೆಯಬೇಕು ಹೀಗೆಲ್ಲಾ ಆಸೆ. ಜಾತಕ ಪ್ರಕಾರ ಆಕೆಗೆ ಹದಿನೆಂಟನೆಯ ವಯಸ್ಸಿಗೆ ಮದುವೆಯಾಗದಿದ್ದರೆ ಆಮೇಲೆ ಮದುವೆ ಯೋಗವಿಲ್ಲವಂತೆ. ಸರಿ. ಕಾಲೇಜು ಬಿಡಿಸಿ ಆಕೆಯನ್ನು ಮದುವೆ ಮಾಡಿಕೊಟ್ಟರು. ತನಗಿಂತ ದಡ್ಡಿಯರು ಡಿಗ್ರಿ ಪಾಸು ಮಾಡಿಕೊಂಡು ಉದ್ಯೋಗ, ಭಡ್ತಿ, ಹೀಗೆಲ್ಲಾ ಆರಾಮವಾಗಿದ್ದರೆ ಆಕೆ ದೊಡ್ಡಾ ಸಂಸಾರದ ನೂರೆಂಟು ತಾಪತ್ರಯಗಳ ನಡುವೆ ಕೈಯಲ್ಲಿ ತನ್ನದೇ ಕಾಸು ಕೂಡ ಇಲ್ಲದೆ ನರಳುತ್ತಿದ್ದಾಳೆ.
‘ಮದುವೆ’ ಎನ್ನುವ ಸ್ವಂತ ವಿಷಯ ಕೂಡ ಅನೇಕ ಆಯಾಮಗಳಿಂದ ಕೂಡಿದ ದೇಶ ನಮ್ಮದು. ಅದೆಷ್ಟೋ ಅದುಮಿಟ್ಟ ಕಣ್ಣೀರು, ಕನಸುಗಳು ಈ ಕೌಟುಂಬಿಕ ವ್ಯವಸ್ಥೆಯಲ್ಲಿ . ಕಟ್ಟುಪಾಡುಗಳು, ಒತ್ತಡಗಳೋ ನೂರೆಂಟು. ಈ ಹುಡುಗಿ ಮಾತಿಲ್ಲದೆ ಮೌನವಾಗಿ ಬಾಳಬಂಡಿ ಸವೆಸಿದಳು. ಮಕ್ಕಳು ಬೆಳೆದು ದೊಡ್ಡವರಾದಂತೆ ಆಕೆಯ ಕನಸುಗಳು ಗರಿಗೆದರಿದುವು. ತನ್ನ ಭಾವನೆಗಳನ್ನು ಅನುಭವಗಳನ್ನು ಅಕ್ಷರ ರೂಪಕ್ಕಿಳಿಸುತ್ತ ಕವಯಿತ್ರಿಯಾಗಿ, ಕಥೆಗಾರ್ತಿಯಾಗಿ ಬೆಳೆದಳು.
ಖ್ಯಾತ ವಿಮರ್ಶಕ ಡಾ.ರಾಜೇಂದ್ರ ಚೆನ್ನಿಯರು ತಮ್ಮ ಬರಹವೊಂದರಲ್ಲಿ ‘ಕುಟುಂಬ’, ‘ಸಂಪ್ರದಾಯ’, ‘ಧರ್ಮ’ ಹಾಗೂ ‘ನೈತಿಕತೆ’ ಗಳ ಹೆಸರಿನಲ್ಲಿ ಅಸಮಾನತೆ ಹಾಗು ಅಸ್ವಾತಂತ್ರ್ಯಗಳನ್ನು ಮಹಿಳೆಯರ ಮೇಲೆ ಹೇರಲಾಗುತ್ತಿದೆ ಎಂದು ವಿಶ್ಲೇಷಿಸುತ್ತಾರೆ. ಈ ನಾಲ್ಕೂ ಸಂಸ್ಥೆಗಳಲ್ಲಿ ‘ಹಿಂಸೆ’ ಅಂತರ್ಗತವಾಗಿದೆ. ಹಾಗೆಂದು ಅವು ಇಲ್ಲದೆ ಸಾಮಾಜಿಕ ವ್ಯವಸ್ಥೆ ಎನ್ನುವುದೊಂದು ಇರುವುದಿಲ್ಲ.
ಒಟ್ಟಿನ ಮೇಲೆ ವಿವಾಹ ಸಂಸ್ಥೆ, ಕೌಟುಂಬಿಕ ವ್ಯವಸ್ಥೆ, ಧಾರ್ಮಿಕತೆ, ನೈತಿಕ ರೀತಿ ರಿವಾಜುಗಳು ಇಲ್ಲದಿದ್ದರೆ ಎಷ್ಟು ಕಷ್ಟವೋ, ಅವು ಈಗಿರುವಂತೆ ಉಂಟು ಮಾಡುವ ತಲ್ಲಣಗಳೂ ಅಷ್ಟೇ ‘ರಿಯಲ್’ ಆಗಿವೆ.
– ಜಯಶ್ರೀ ಬಿ. ಕದ್ರಿ
No comments:
Post a Comment