‘ಬೆಳಕಿರದ ಹಾದಿಯಲ್ಲಿ ನಡೆಯಬಹುದು ಆದರೆ ಕನಸುಗಳಿರದ ಹಾದಿಯಲ್ಲಿ ನಡೆಯಲಾರೆವು’ ಎನ್ನುವಂತೆ ಬರಹಗಾರರಾಗಬೇಕೆಂಬ ಬಯಕೆ ಸಾಹಿತ್ಯ, ಕಲೆಗಳಲ್ಲಿ ಆಸಕ್ತರಾಗಿರುವ ಹೆಚ್ಚಿನವರಿಗೂ ಇರುತ್ತದೆ. ಹಾಗೆಂದು ಬರೆಯುತ್ತ ಬದುಕುವುದು ಸುಲಭವೇನಲ್ಲ. ಕಂಪೆನಿಗಳಿಗೆ, ಸಂಸ್ಥೆಗಳಿಗೆ ಅಫಿಶಿಯಲ್ ರೈಟರ್‍ಸ್‌ಗಳಾಗಿರುವುದು (ಉದಾ: ಟೆಕ್ನಿಕಲ್ ರೈಟರ್‍ಸ್) ಬೇರೆ ಮೌಲಿಕವಾದ ಸಾಹಿತ್ಯ ಕೃತಿಗಳನ್ನು ರಚಿಸುವುದು ಬೇರೆ ಎಂದು ನಮಗೆಲ್ಲ ಗೊತ್ತೇ ಇದೆ. ಸಾಹಿತ್ಯದಲ್ಲೂ ಜನಪ್ರಿಯ ಸಾಹಿತ್ಯ ಹಾಗೂ ಕ್ಲಾಸಿಕಲ್ ಲಿಟರೇಚರ್‌ನ ನಡುವಣ ರೇಖೆ ಮಸುಕಾಗುತ್ತಿರುವ ಈ ಕಾಲಘಟ್ಟದಲ್ಲಿ ಬರಹ ಒಂದು ಅಭಿವ್ಯಕ್ತಿ ಮಾಧ್ಯಮದಂತೆಯೇ ಕಲೆಗಾರಿಕೆಯೂ ಹೌದು.
ಸಾಹಿತ್ಯವೆನ್ನುವ ಮೇರು ಶಿಖರದ ಎದುರು ಮಂಡಿಯೂರಿ ಕುಳಿತು ವಿನಯ, ಶ್ರದ್ಧೆಯೊಂದಿಗೆ ಕೆಲವು ವಿಷಯಗಳನ್ನು ಹಂಚಿಕೊಳ್ಳಲಿಚ್ಚಿಸುತ್ತೇನೆ. ಬರವಣಿಗೆ ಎನ್ನುವುದೊಂದು ಕಲೆ. ಸ್ಪೂರ್ತಿ ಪ್ರತಿಭೆ, ಭಾಷಾ ಸಂಪತ್ತು, ವಾಕ್ಯಗಳನ್ನು ಲಾಲಿತ್ಯದಿಂದ ಪೋಣಿಸುವ ಇಲ್ಲವೇ ಜಡಿ ಮಳೆಯ ಭೋರ್ಗರೆತದಂತೆ ಸ್ಫುಟವಾಗಿ, ನಿಚ್ಚಳವಾಗಿ ಬರೆಯುವ ಕ್ರಿಯಾತ್ಮಕ, ನಾವೀನ್ಯ ಸೃಷ್ಟಿ. ನಟನೊಬ್ಬನಿಗೆ ವೀಕ್ಷಕರು ಹೇಗೆ ಮುಖ್ಯವೋ ಹಾಗೆಯೇ ಬರಹಗಾರರಿಗೆ ಓದುಗರು, ಓದುಗರ ಮನತಟ್ಟುವಂತೆ, ಅವರ ನಾಡಿಮಿಡಿತ ಅರಿತು ಅದಕ್ಕೆ ಸ್ಪಂದಿಸುವವರೇ ಉತ್ತಮ ಬರಹಗಾರ/ಬರಹಗಾರ್ತಿಯರಾಗುವರೆನ್ನುವರೆಂದು ಶತ:ಸಿದ್ಧ.
ಈ ನಿಟ್ಟಿನಲ್ಲಿ ವ್ಯಾಪಕವಾದ ಓದು, ಜೀವನವನ್ನು ಕುತೂಹಲದ ಕಣ್ಣಿನೊಂದಿಗೆ, ಅಷ್ಟೇ ಸಹೃದಯ ಸಾಮಾಜಿಕ ಪ್ರಜ್ಞೆಯೊಂದಿಗೆ ನೋಡಬೇಕಾದ, ಪರಿಭಾವಿಸಬೇಕಾದ ಅಗತ್ಯವಿದೆ. ಬರಹಗಾರರೂ ಸಮಾಜದಲ್ಲಿಯೇ ಬದುಕಬೇಕಾಗಿರುವುದರಿಂದ ಸಮಾಜ, ಅದರ ಆಗುಹೋಗುಗಳೇ ಅವರ ಮೂಲದ್ರವ್ಯ. (ಹಾಗೆಂದು ತೀರಾ ಸನಿಹದವರ ವ್ಯಕ್ತಿಗತ ವಿಷಯಗಳನ್ನು ಬರೆದು ಅವರಿಗೆ ಮುಜುಗರ ತಂದಿಡದೇ ಇರುವ ವೈಯಕ್ತಿಕ ಎಚ್ಚರವೂ, ಮಾನವೀಯ ಪ್ರಜ್ಞೆಯೂ ಮುಖ್ಯ).
ಬರೆಯಬೇಕೆಂಬ ಹಂಬಲ ನಮ್ಮಲ್ಲಿರುವುದು ಹೌದಾದರೂ ಟಾಪಿಕ್ಕುಗಳು ಏಕತಾನವಾಗದಂತೆ, ಒಂದೇ ರೀತಿಯ ಬರಹಗಳಿಗೆ ಬ್ರಾಂಡ್ ಆಗದಂತಿರುವುದು ನಿಜಕ್ಕೂ ಸವಾಲು. ಹೀಗಾಗದಂತಿರಲು ಒಂದೇ ಒಂದು ದಾರಿ ವ್ಯವಸ್ಥಿತವಾದ ಓದು, ಸಾಧ್ಯವಾದರೆ ಪ್ರವಾಸ, ಕೇವಲ ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ, ಉಳಿದ ಜ್ಞಾನ ಶಾಖೆಗಳಿಂದಲೂ ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಮುಕ್ತ ದೃಷ್ಟಿಕೋನ. ದಿನಪತ್ರಿಕೆಗಳು, ಅವುಗಳ ಸಾಹಿತ್ಯ ಪುರವಣಿಗಳು ನಮ್ಮ ಮನಸ್ಸಿಗೆ ಬೆಳಕಿಂಡಿಗಳೇ ಸರಿ. ಈ ನಿಟ್ಟಿನಲ್ಲಿ ವಾಚನಾಲಯಗಳು, ಲೈಬ್ರರಿಗಳ ಸದುಪಯೋಗ ಮಾಡಿಕೊಳ್ಳಬಹುದು. ಸಮಾನಾಸಕ್ತಿಯುಳ್ಳವರ ರೀಡರ್‍ಸ್ ಕ್ಲಬ್ ಮಾಡಿಕೊಂಡು ಪುಸ್ತಕಗಳನ್ನು ಹಂಚಿಕೊಳ್ಳಬಹುದು. ಒಟ್ಟಿನ ಮೇಲೆ ಸದಾ ಅಪ್‌ಡೇಟೆಡ್ ಆಗಿ ನಮ್ಮನ್ನು ನಾವು ಅಲರ್ಟ್ ಆಗಿರಿಸಿಕೊಳ್ಳುವುದು ಅಪ್ಪಟ ಜೀವನ್ಮುಖಿ ಧೋರಣೆ (ಹಾಗೂ ಪತ್ರಿಕೋದ್ಯಮದ ಸೊಬಗು).
ಸಾಧಾರಣವಾಗಿ ನಮ್ಮ ಓದು, ವಿದ್ಯಾಭ್ಯಾಸ, ವೃತ್ತಿಗಳಿಗೆ ಸಂಬಂಧಿಸಿದ ವಿಷಯಗಳೇ ನಮಗೆ ನಿಕಟವಾಗಿರುತ್ತವೆ ಹಾಗೂ ಅವುಗಳಿಂದಲೇ ಬರೆಯಲು ಪ್ರಾರಂಭಿಸಬಹುದು. ನಮ್ಮ ಬರಹಗಳನ್ನು ಅಭಿಮಾನದಿಂದಲೋ, ಪ್ರೀತಿಯಿಂದಲೋ ವಿಮರ್ಶಿಸಬಹುದಾದ ಒಬ್ಬಿಬ್ಬರಾದರೂ ಆಪ್ತ ಬಳಗದವರಿದ್ದಲ್ಲಿ ಅವರಿಗೆ ತೋರಿಸಿ ಆಮೇಲೆ ಪ್ರಕಟಣೆಗೆ ಕಳುಹಿಸಬಹುದು (ಬರೆದದ್ದೆಲ್ಲ ಪ್ರಕಟವಾಗಬೇಕೆಂಬ ಭ್ರಮೆಯನ್ನು ಬಿಟ್ಟು).
ಬರಹಕ್ಕೆ ಮನಸ್ಸನ್ನು ಶಾಂತಗೊಳಿಸುವ, ಒತ್ತಡಗಳ ಶಮನಗೊಳಿಸುವ ಶಕ್ತಿಯಿದೆಯಂತೆ. ಏನಿಲ್ಲವೆಂದರೂ ನಮ್ಮ ಆಲೋಚನೆಗಳಿಗೆ ಸ್ಪಷ್ಟತೆಯನ್ನು, ಅಸ್ತಿತ್ವಕ್ಕೊಂದು ಐಡೆಂಟಿಟಿ ಕೊಡುವ್ಯದಂತೂ ಸತ್ಯ. ತಮ್ಮ ವೈಯಕ್ತಿಕ ಭಾವ ವಲಯವನ್ನು ದಾಟಿ ಸಾಮಾಜಿಕ, ಜಾಗತಿಕ ಸಂಗತಿಗಳ ಬಗ್ಗೆ ಬರೆಯಬೇಕಾದಲ್ಲಿಮಾತ್ರ ಸರಿಯಾದ ರಿಸರ್ಚ್, ವಸ್ತು ನಿಷ್ಠ ಪರಿಶೀಲನೆ ಅಗತ್ಯ. (ಸಂದರ್ಶನ, ಖಚಿತ, ನಂಬಲರ್ಹವಾದ ಮಾಹಿತಿಗಳ ಸಂಗ್ರಹ ಹೀಗೆ). ಇನ್ನು ಕತೆ, ಕವಿತೆ, ಕಾದಂಬರಿಗಳ ಜಗತ್ತು ಬೇರೆ. ಬಹುಶ: ಅದಕ್ಕೆ ಪ್ರತಿಭೆ, ಸೃಜನಶೀಲತೆಯಲ್ಲದೆ ಸಮತೂಕದ ಜೀವನದರ್ಶನ ಕೂಡಾ ಅಗತ್ಯ. ಇಲ್ಲವಾದಲ್ಲಿ ಒಂದಿಡೀ ತಲೆಮಾರಿನ ಯುವಕ ಯುವತಿಯರನ್ನು ದಾರಿ ತಪ್ಪಿಸಿದ ಡಿಎಚ್ ಲಾರೆನ್ಸ್‌ನ ಕಾದಂಬರಿಗಳಂತೆ ನೆಗೆಟಿವ್ ಪ್ರಭಾವ ಬೀರಬಹುದಾದ ಸಾಧ್ಯತೆ.
‘ಎದೆಗೆ ಬಿದ್ದ ಅಕ್ಷರ’ಕ್ಕೆ ಬದುಕು ಬದಲಿಸುವ ಶಕ್ತಿ ಇದೆ. ಬಂಕಿಮಚಂದ್ರರ ‘ಆನಂದ ಮಠ’ದ ವಂದೇ ಮಾತರಂ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿತು. ಭಾಷಣವಿರಲಿ, ಗ್ರೂಪ್ ಡಿಸ್ಕಶನ್ ಇರಲಿ, ಕಂಪ್ಯೂಟರ್ ಟೆಕ್ಸ್ಟ್‌ಗಳಿರಲಿ ಅಕ್ಷರ ಬ್ರಹ್ಮಕ್ಕೆ ನಾವು ನಮಿಸಲೇಬೇಕು. ಯಾಕೆಂದರೆ ಅರಿವಿನ ಬೆಳಕು. ಅಕ್ಷರಕ್ಕೆ ಎಷ್ಟು ಶಕ್ತಿ ಇದೆ ಎಂದರೆ ಅದು ರಾಜ್ಯ ಸಾಮ್ರಾಜ್ಯಗಳನ್ನುರುಳಿಸಿ ಡೆಮಾಕ್ರಸಿಗೆ ಕಾರಣವಾಯಿತು. ಕ್ರಾಂತಿ ಕಹಳೆಗಳನ್ನು ಮೊಳಗಿಸಿ ಭೂಗತ ಚಟುವಟಿಕೆಗಳಿಗೂ ಕಾರಣವಾಯಿತು. ಪ್ರಿಂಟಿಂಗ್ ಪ್ರೆಸ್‌ನ ಉದಯದೊಂದಿಗೆ ಬೆಳೆದ ಮುದ್ರಣ ತಂತ್ರಜ್ಞಾನ ಎಷ್ಟು ಬೃಹದಾಕಾರವಾಗಿ ಬೆಳೆದಿದೆಯೆಂದರೆ ಅಕ್ಷರಗಳಿಲ್ಲದ, ಪುಸ್ತಕಗಳಿಲ್ಲದ ಜಗತ್ತನ್ನು ಕಲ್ಪಿಸುವುದು ಕೂಡ ನಮಗೆ ಕಷ್ಟವಾಗಬಹುದು.
ನಹಿ ಜ್ಞಾನೇನ ಸದೃಶಂ!
-ಜಯಶ್ರೀ ಬಿ.ಕದ್ರಿ
No comments:
Post a Comment