Wednesday, 5 November 2014

ಪೋಸ್ಟ್ ಮಾಡರ್ನ್ ಲೈಫ಼್

ಪೋಸ್ಟ್ ಮಾಡರ್ನಿಸಮ್‘ ಹಾಗಂದರೇನು? ಎಂದು ಬೆರಗಾಗುತ್ತಲೇ ಅಲೆಗಳ ಮೇಲೆ ಬದುಕುತ್ತಿರುವವರು ನಾವು. ದ್ವಿತೀಯ ಮಹಾಯುದ್ಧದ ನಂತರದ ಜಾಗತಿಕ ಪರಿಸ್ಥಿತಿಗೆ ಪೋಸ್ಟ್ ಮಾಡರ್ನಿಸಮ್ ಎನ್ನುತ್ತಾರೆ ವಿಮರ್ಶಕರು. ‘ಆಧುನಿಕತೆ’ ಎನ್ನುವುದು ವಿವಿಧ ಪದರಗಳಲ್ಲೂ ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಕಾಲ ಘಟ್ಟದಲ್ಲಿ ಇದೊಂದು ಕುತೂಹಲಕಾರಿಯಾದ, ಬುದ್ಧಿಗೆ ಕಸರತ್ತು ಕೊಡುವ ವಿಚಾರ.
Post modernism1
‘ಪಾಪ್ ಕಲ್ಚರ್’ ಎಂದರೆ ಯಾವುದೋ ಹಿಪ್ಪಿಗಳ ಕಲ್ಚರ್ ಎಂದುಕೊಂಡಿದ್ದ ನನಗೆ ಅದು ‘ಪಾಪ್ಯುಲರ್ ಕಲ್ಚರ್’ ಎನ್ನುವುದರ ಸಣ್ಣ ರೂಪ ಎಂದರಿವಾದಾಗ ಫ಼ುಲ್ ಖುಶ್. ಇನ್ನೊಂದೆಡೆ ‘ಹಳೆ ಪಾತ್ರೆ ಹಳೆ ಕಬ್ಬಿಣ’ ಹಾಡು ಮತ್ತು ‘ ನಾ ಬೋರ್ಡು ಇರದ ಬಸ್ಸನು ಹತ್ತಿ ಬಂದ ಚೋಕರಿ’ ಪದ್ಯಗಳನ್ನು ಯಾರೋ ಪೋಸ್ಟ್ ಮಾಡರ್ನ್ ಎಂದು ಅದ್ಭುತವಾಗಿ ವಿಮರ್ಶಿಸಿದ್ದರು.
ಇನ್ನೊಂದು ರೀತಿಯಲ್ಲಿ ಹೇಳುವಂತೆ ಪೋಸ್ಟ್ ಮಾಡರ್ನಿಸಮ್ ಇಂಟರ್ನೆಟ್ ಹಾಗೂ ಮಾಹಿತಿ ಕ್ರಾಂತಿ ಪ್ರಸ್ತುತ ಜಗತ್ತಿನ ಮೇಲೆ ಬೀರಿದ ಪ್ರಭಾವದ ವಿಶ್ಲೇಷಣೆ ಎನ್ನಬಹುದು.ಇದರ ಬಗ್ಗೆ ಅಸಂಖ್ಯಾತ, ಲೇಖನಗಳು ವಿಮರ್ಶೆಗಳು. ತಮಾಷೆ ಎಂದರೆ ಇದರ ಬಗ್ಗೆ ತಿಳಿದುಕೊಳ್ಳಲೂ ನಾವು ಇಂಟರ್ನೆಟ್ ನೋಡಬೇಕು.
ಪೋಸ್ಟ್ ಮಾಡರ್ನ್ ಯುಗದ ವಿಶೇಷತೆ ಎಂದರೆ ಒಂದು ರೀತಿಯ ಉತ್ಸಾಹ. ಬೊದಿಲೇರ್ ಹೇಳುವಂತೆ ಸಂವಹನದ ಆನಂದ. ಇಲ್ಲವಾದರೆ ಒಂದು ತುಂಬೆ ಹೂ ನೋಡಿದರೆ ಕ್ಲಿಕ್ಕಿಸಿ ಅಪ್ ಲೋಡ್ ಮಾಡುವ, ಒಂದು ಗುಬ್ಬಚ್ಚಿ ಬಾಲ್ಕನಿಯಲ್ಲಿ ಗೂಡು ಕಟ್ಟಿದರೆ ಅದನ್ನು ಮುನ್ನೂರು ಜನರಿಗೆ ಹೇಳುವ ಹುಮ್ಮಸ್ಸು ಮೊದಲು ಎಲ್ಲಿತ್ತು?ಫ಼ೇಸ್ ಬುಕ್ನಲ್ಲಿಯ ಫ಼್ರೆಂಡ್ ಗಳು ನಿಜಜೀವನದಲ್ಲಿ ಫ಼್ರೆಂಡ್ ಗಳಾಗುವ ಸಾಧ್ಯತೆಗಳೂ ಇವೆ. (ವರ್ಚುವಲ್ ಜಗತ್ತಿನ ಧನಾತ್ಮಕ ಅಂಶಗಳನ್ನಷ್ಟೇ ಇಲ್ಲಿ ಹೇಳುತ್ತಿದ್ದೇನೆ). ಇದೊಂದು ಸೈಬರ್ ಸಂಸ್ಕೃತಿ. ಇಲ್ಲಿ ಹಿರಿಯರು, ಕಿರಿಯರು, ದೇಶ, ಕಾಲದ ವ್ಯತ್ಯಾಸವಿಲ್ಲದೆ ಎಲ್ಲರೂ ವಿಚಾರ ಹಂಚಿಕೊಳ್ಳಬಹುದು, ಬೇಕಿದ್ದಲ್ಲಿ ಛೇಡಿಸುತ್ತ ಕಾಲೆಳೆಯಬಹುದು. ಹೀಗಾಗಿ ಇದೊಂದು ಸಮಾನತೆಯ ಪ್ರಪಂಚ. ಇಲ್ಲಿನ ದ್ವಂದ್ವವೆಂದರೆ ಯಾವುದೋ ಇಮೇಜನ್ನು ನಮಗೆ ನಾವೇ ಕಲ್ಪಿಸಿಕೊಂಡು ಅದಕ್ಕೆ ಬದ್ಧರಾಗಿ ಬದುಕುತ್ತಿರುವುದು. ಲೈಫ಼್ ಸ್ಟೈಲ್ ಮ್ಯಾಗಜಿನ್ ಗಳು, ಫ಼್ಯಾಶನ್ ಚಾನೆಲ್ ಗಳು ಲೈವ್ ಷೋ ಗಳು, ಫ಼ೋನ್-ಇನ್-ಕಾರ್ಯಕ್ರಮಗಳು.. ಹೀಗೆ ಬದುಕನ್ನು ಸೆಲೆಬ್ರೇಟ್ ಮಾಡುವ ಅಂಶಗಳೂ ಇಲ್ಲಿವೆ.
Post modernism 2
ಈ ನಿಟ್ಟಿನಲ್ಲಿ ಇಂಟರ್ನೆಟ್ ಎನ್ನುವುದು ಮಹಿಳೆಯರಿಗೊಂದು ವರದಾನ. ಕೇರಳದ ಕಡಲಕ್ಕರಿ ಅಂದರೆ ಕಡಲೆ ಕಾಳು ಸಾರು ಮಾಡುವುದು ಹೇಗೆಂದು ಒಂದು ಫ಼ುಡ್ ಬ್ಲಾಗ್ ಹೇಳಿ ಕೊಟ್ಟರೆ ವಾಟ್ಸಪ್ ನಲ್ಲಿ ನಿಮ್ಮ ಫ಼್ರೆಂಡ್ ತಾನು ಕೊಂಡ ಡ್ರೆಸ್ ನ ಕಲರ್ ಜಾಸ್ತಿ ಗಾಢ ಆಯ್ತೇನೆ ಎಂದು ಕೇಳುತ್ತಿರುತ್ತಾಳೆ. ನಾವು ವಿದ್ಯಾರ್ಥಿಗಳಾಗಿದ್ದಾಗ ರೆಫ಼ರೆನ್ಸ್ ಪುಸಕಗಳಿಗೆ ಒದ್ದಾಡುತ್ತಿದ್ದರೆ ಈಗಿನ ವಿದ್ಯಾರ್ಥಿಗಳು ಇಂಟರ್ ನೆಟ್ ಇದೆಯಲ್ಲ ಎಂದು ಆರಾಮಾಗಿರುತ್ತಾರೆ. ಸಂಚಾರ, ಸಂಪರ್ಕ ಎಲ್ಲಕ್ಕೂ ಅನುಕೂಲವಾಗಿರುವ ಈ ಟೆಕ್ನಾಲಜಿ ಕ್ರಾಂತಿಯನ್ನು ನಾವು ಅಭಿನಂದಿಸಲೇಬೇಕು.

ಫ಼್ಯೂಶನ್ ಸಂಗೀತ, ಕತೆಗಳೇ ಇಲ್ಲದ ಸಿನೆಮಾಗಳು, ಲೆಕ್ಕವಿಲ್ಲದಷ್ಟು ಬ್ಲಾಗ್ ಗಳು ಹೀಗೆ ಪೋಸ್ಟ್ ಮಾಡರ್ನ್ ಜಮಾನಾದಲ್ಲಿ ಲೈಫ಼್ ಈಜ್ ಬ್ಯೂಟಿಫ಼ುಲ್!


– ಜಯಶ್ರೀ ಬಿ. ಕದ್ರಿ

No comments:

Post a Comment