Thursday, 6 November 2014

ಮಳೆ, ಇಳೆ, ಪ್ರಕೃತಿ

‘ಧೋ’ ಎಂದು ಜಡಿಮಳೆ ಸುರಿದು ಭೂಮಿ ತಾಂಪಾಗಿರುವ ಈ ಕಾಲದಲ್ಲಿ, ವರ್ಷ ಧಾರೆಯಲ್ಲಿ ಮಿಂದು ಮೈ ಮನಸ್ಸು ಮಿದುವಾಗಿರುವ ಈ ಸುಂದರ ಪರಿಸರದಲ್ಲಿ, ಮಳೆ, ಇಳೆ, ಪ್ರಕೃತಿ .. ಹೀಗೊಂದು ಪುಟ್ಟ ಲಹರಿ.
ಮಳೆಗೂ ಮನಸ್ಸಿಗೂ ಅವಿನಾ ಭಾವ ಸಂಬಂಧ. ನೋಟ್ ಬುಕ್ಕಿನ ಕೊನೆಯ ಪೇಜಿನಲ್ಲಿ ಹದಿಹರಯದಲ್ಲಿ ಬರೆಯುವ ಕವಿತೆಗಳಿಂದ ತೊಡಗಿ ಮಿಂಚು ಹುಳ ರಾತ್ರಿಯಲ್ಲಿ ಜೀರುಂಡೆಗಳ ಸದ್ದು ಕೇಳುತ್ತ, ಗುಡುಗು ಸಿಡಿಲಿಗೆ , ಆಗಾಗ ಅಪ್ಪಳಿಸುವ ಕೋಲ್ಮಿಂಚಿಗೆ ನಡುಗುತ್ತ, ಕಗ್ಗತ್ತಲಿನ ನೀರವ ಮೌನವನ್ನು ಆಸ್ವಾದಿಸುತ್ತ, ಬಾಳಿನ ಬಗ್ಗೆ, ಭೌಮದ ಬಗ್ಗೆ ಏನೇನನ್ನೋ ಕಲ್ಪಿಸುತ್ತ, ನಿಸರ್ಗದಲ್ಲಿ ತಾದಾತ್ಮ್ಯ ಹೊಂದುವ ಬಗೆ.
girl-and-rain-dark-1
‘ಮಲೆಗಳಲ್ಲಿ ಮದು ಮಗಳು’ ಇತ್ಯಾದಿ ಕಾದಂಬರಿಗಳನ್ನು ನಾವು ಓದಿದ್ದೇ ಅಟ್ಟದ ನಸುಗತ್ತಲೆಯಲ್ಲಿ ಬೆಚ್ಚಗೆ ಕುಳಿತು ಜಡಿ ಮಳೆಯ ಆಲಾಪದಲ್ಲಿ, ಸೋನೆ ಮಳೆಯ ನಲ್ಮೆಯ ಆಪ್ತತೆಯಲ್ಲಿ. ಇನ್ನು ಈಗಿನ ವಿದ್ಯಾರ್ಥಿಗಳಿಗೂ ಪರಿಸರ ಪ್ರೀತಿ ಇಲ್ಲವೆಂದೇನಿಲ್ಲ. “ನಿಮ್ಮ ನೆಚ್ಚಿನ ಸಾಹಿತಿ ಯಾರು?” ಎಂದು ಕೇಳಿದ ಕೂಡಲೇ ವಿದ್ಯಾರ್ಥಿ ಸಮುದಾಯದಿಂದ ಥಟ್ಟನೆ ಬರುವ ಉತ್ತರ ಪೂರ್ಣ ಚಂದ್ರ ತೇಜಸ್ವಿ, ಚೇತನ್ ಭಗತ್, ಅಮಿಶ್ ತ್ರಿಪಾಠಿ. ಕನ್ನಡ ಪುಸ್ತಕಗಳನ್ನು ಓದುವುದೇ ಕಡಿಮೆ ಆಗುತ್ತಿರುವ ಈ ಕಾಲದಲ್ಲಿ ತೇಜಸ್ವಿಯವರ ‘ಕರ್ವಾಲೋ’, ‘ಪರಿಸರದ ಕತೆ’ಗಳನ್ನು ಈಗಲೂ ಮಕ್ಕಳು ಇಷ್ಟಪಟ್ಟು ಓದುತ್ತಾರೆ ಎನ್ನುವುದೇ ನಿಸರ್ಗದ ಅಸೀಮ ಕೌತುಕಕ್ಕೆ, ನಿಗೂಢ ವಿಸ್ಮಯಕ್ಕೆ, ಜೀವಜಾಲಗಳ ನಿತ್ಯ ವಿನೂತನ ವಿದ್ಯಮಾನಗಳ ಅರಿವು ಮಾನವನಲ್ಲಿ ಹುಟ್ಟಿಸುವ ಬೆರಗಿಗೆ ಸಾಕ್ಷಿ.
ಮಳೆಗಾಲವೆಂದರೆ ಆಪ್ತ ಗೆಳೆಯ. ಬೇಸಗೆಯ ಬೇಗೆ ನೀಗಿದ ಚೇತೋಹಾರಿ ಅನುಭವ. ಬೀಸುಗಾಳಿಯ ಮೊರೆತಕ್ಕೂ , ಕಡಲಲೆಗಳ ಅಬ್ಬರಕ್ಕೂ ಸಾಕ್ಷಿಯಾಗುವ ಮನ. ಇನ್ನು ಮಳೆಗಾಲಕ್ಕೇ ಮೀಸಲಾಗಿರುವ ವಿಶಿಷ್ಟ ತಿಂಡಿ ತಿನಿಸುಗಳು, ಸೊಪ್ಪು ತರಕಾರಿಗಳು ಹೀಗೆ ಅದೊಂದು ವರ್ಷ ವೈಭವ.
‘ಮಳೆಗಾಲ ಬಂದಾಗ ಒಳಗ್ಯಾಕ ಕುಂತೇವ’ ಎನ್ನುವ ಆಪ್ಯಾಯ ಮಾನ ಹಾಡಿನಿಂದ ಹಿಡಿದು ‘ಮುಂಗಾರು ಮಳೆ’ಯ ಶುದ್ಧ ದೇಸಿ ರೊಮಾನ್ಸ್ ವರೆಗೆ , ‘ದ್ವೀಪ’ದಂತಹ ಪರಿಸರ ಕಾಳಜಿಯ ಚಲನಚಿತ್ರದ ವರೆಗೆ ಮಳೆಹಾಡಿನ ಸರಿಗಮ ನಮ್ಮ ಭಾವ ಕೋಶಗಳನ್ನು ಮೀಟಿ, ಎದೆಯ ತಂತಿಯನ್ನು ಮಿಡಿದು ಬೆಚ್ಚನೆಯ ಪುಳಕಗಳನ್ನು, ಮೌನದ ನಿಟ್ಟುಸಿರುಗಳನ್ನು, ಅಸಂಖ್ಯ ಕಾಮನೆ, ಕನವರಿಕೆ, ಕನಸು ಕಣ್ಣೋಟಗಳನ್ನು ಹುಟ್ಟು ಹಾಕುವ ಶಕ್ತಿ ಇರುವಂತಹದ್ದು. ಭುವಿಯ ನಿಶ್ಶಬ್ದ ಆರ್ತತೆಯನ್ನು , ಕಾದ ತಪ್ತತೆಯ ಕಂಪನವನ್ನು ಮನಗಂಡು ಇನ್ನಿಲ್ಲದ ಆರ್ದ್ರತೆಯಿಂದ ಬಾನು ಸುರಿಯುವ ಒಲುಮೆಯೇ ಸೋನೆ ಮಳೆ!
ಈ ಭಾವುಕ ಕನವರಿಕೆಗಳನ್ನು ಒತ್ತಟ್ಟಿಗಿಟ್ಟುಕೊಂಡರೆ ಕಣ್ಣಿಗೆ ರಾಚುವುದು ನಮ್ಮ ಪರಿಸರದ ವ್ಯಾಪಕ ವಿನಾಶ. ನಾವು ಪುಟ್ಟ ಮಕ್ಕಳಾಗಿದ್ದಾಗ ಅಸಂಖ್ಯಾತ ಚಿಟ್ಟೆಗಳು, ಬಣ್ಣ ಬಣ್ಣದ ಹಕ್ಕಿಗಳನ್ನು ನೋಡಲು ಬಟರ್ ಫ಼್ಲೈ ಪಾರ್ಕಿಗೋ , ಫ಼ಿಲ್ಮ್ ಸಿಟಿಗೋ ಹೋಗಬೇಕಿರಲಿಲ್ಲ. ಈಗ ನೋಡಿದರೆ ಒಂದು ಬೊಗಸೆ ಮಣ್ಣಿರದ ನಗರದ ಫ಼್ಲಾಟುಗಳಲ್ಲಿ ಬದುಕುತ್ತ, ಪ್ರಕೃತಿಗೆ ಪೂರಾ ವಿಮುಖವಾಗಿರುವ ಬದುಕು.
ಭಾರತದ ಮೊದಲ ಬಾಹ್ಯಾಕಾಶ ಯಾನಿ ರಾಕೇಶ್ ಶರ್ಮಾ ಅವರು ಅಂತರಿಕ್ಷದಿಂದ ಭಾರತ ಹೇಗೆ ಕಾಣಿಸುತ್ತದೆ ಎಂದಾಗ ‘ಸಾರೇ ಜಹಾಂಸೆ ಅಚ್ಛಾ‘ ಎಂದು ಹೇಳಿದರಂತೆ. ಈಗಿನ ಸೆಟಲೈಟ್ ಪಿಕ್ಚರ್ ಗಳು ಬೇರೆಯೇ ಕಥೆಯನ್ನು ಹೇಳಬಹುದು.ಮಾನವ ಸಂಪನ್ಮೂಲ ದಿನೇ ದಿನೇ ಹೆಚ್ಚಾಗುತ್ತ, ಪ್ರಾಕೃತಿಕ ಸಂಪನ್ಮೂಲಗಳು ಅದೇ ವೇಗದಲ್ಲಿ ಕ್ಶೀಣಿಸುತ್ತಿರುವ ಈ ಕಾಲ ಘಟ್ಟದಲ್ಲಿ ನಿಸರ್ಗವನ್ನು ಕಾಪಿಟ್ಟುಕೊಳ್ಳುವುದು ನಮ್ಮ ಕರ್ತವ್ಯವೂ, ಕಾಲದ ಎಚ್ಚರವೂ ಆಗಿದೆ.ಬಾಬಾ ಆಮ್ಟೆ, ಅಣ್ಣಾ ಹಜಾರೆ, ಮೇಧಾ ಪಾಟ್ಕರ್, ಅರುಂಧತಿ ರಾಯ್ , ಮಾಧವ ಗಾಡ್ಗೀಳ್ ಹೀಗೆ ಪರಿಸರ ಕಾಳಜಿಯ ಬರಹಗಾರರು, ರಾಜಕಾರಣಿಗಳು, ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರು ಇದಕ್ಕೆ ಸ್ಪಂದಿಸಿದ್ದಾರೆ ಕೂಡ.
ಸ್ವತಂತ್ರ ಭಾರತದ ‘ಅಭಿವೃದ್ಧಿ’ಯ ಪರಿಕಲ್ಪನೆ ಎಲ್ಲೋ ತಾಳ ತಪ್ಪಿದ್ದಕ್ಕೆ ಸಾಕ್ಷಿಯಾಗಿ ಪರಿಸರದ ವ್ಯಾಪಕ ವಿನಾಶ, ನಗರೀಕರಣ, ದೈನ್ಂದಿನ ಜೀವನದ ಅಂತರ್ಗತ ತಲ್ಲಣಗಳು ಹೆಚ್ಚುತ್ತಲೇ ಇವೆ. ಉದಾಹರಣೆಗೆ, ಒಂದು ಕೊಡ ನೀರಿಗೆ ನದೆಯುವ ಬೀದಿ ಜಗಳಗಳು, ಭೂಮಿಗೋಸ್ಕರ ಕಾದಾಟ, ಮಧ್ಯಮ ವರ್ಗಕ್ಕೆ ಕನಸಾಗಿ ಹೋದ ಸ್ವಂತ ಮನೆ (ಸಿಟಿಯ ಹೊರವಲಯದ ಹೊರತಾಗಿ) ಲ್ಯಾಂಡ್ ಮಾಫ಼ಿಯಾ.. ಹೀಗೆ.
ಮಾನ್ಯ ಜವಾಹರ್ ಲಾಲ್ ನೆಹರೂ ಅವರು ‘ಅಣೆಕಟ್ಟುಗಳು ಆಧುನಿಕ ಭಾರತದ ದೇವಾಲಯಗಳಿದ್ದಂತೆ’ ಎಂದು ಹೇಳಿದ್ದರಂತೆ.ಸ್ವಾತಂತ್ರ್ಯೋತ್ತರ ಭಾರತದ ಆಗಿನ ಚಾರಿತ್ರಿಕ ಸಂದರ್ಭದಲ್ಲಿ ಅದು ಸರಿಯಾಗಿದ್ದಿರಬಹುದಾದರೂ ಈಗಿನ ಎಗ್ಗಿಲ್ಲದ ಅರಣ್ಯ ಒತ್ತುವರಿ, ಹೂಳು ತುಂಬಿದ ಕೆರೆಗಳು, ಅನಾಯಾಸವಾಗಿ ಆಕ್ರಮಿಸಲ್ಪಡುವ ರೈತರ ಭೂಮಿ, ಕಿತ್ತುಕೊಳ್ಳಲ್ಪಡುವ ಆದಿವಾಸಿಗಳ ಹಕ್ಕುಗಳು… ಹೀಗೆ ಪರಿಸರದಿಂದ ಲಭಿಸುವ ಉತ್ಪನ್ನಗಳ ಲಾಭ ಪಡೆಯುತ್ತಿರುವುದು ಕೆನೆಪದರದ ವರ್ಗ. ಕುಡಿಯುವ ನೀರು ಕೂಡ ಲಾಭದಾಯಕ ಉದ್ಯಮವಾಗಿರುವ, ತಿನ್ನುವ ತರಕಾರಿ ಕೂಡ ವಿಷಮಯವಾಗಿರುವ ಈ ಸಂದರ್ಭದಲ್ಲಿ ಅಭಿವೃದ್ಧಿಯೊಂದಿಗೆ ತಳಕು ಹಾಕಿಕೊಂಡಿರುವ ಪರಿಸರ ವಿನಾಶವನ್ನು ಈಗಲಾದರೂ ಎಚ್ಚೆತ್ತುಕೊಂಡು ಪರಿಗಣಿಸಲೇ ಬೇಕು.
rain3
ನಮ್ಮ ದೇಶದ ವ್ಯಂಗ್ಯವೆಂದರೆ ಪರಿಸರವನ್ನು ಕಾಪಾಡುತ್ತಿರುವ ಹಳ್ಳಿಗರಿಗೆ ಅದರ ಪ್ರಯೋಜನ ಲಭಿಸುವುದಿಲ್ಲ. ಉದಾಹರಣೆಗೆ ಡ್ಯಾಮ್ ಗಳ ಪಕ್ಕದ ಹಳ್ಳಿಗಳಲ್ಲಿ ನೀರಿಗೆ ತತ್ವಾರ. ಅದೇ ನದಿ ನೀರಿನ ಹೆಚ್ಚಿನಂಶ ಸಿಟಿಗಳಿಗೆ ನೀರು ಪೂರೈಸಲು, ವಿದ್ಯುತ್ ಉತ್ಪಾದಿಸಲು ವಿನಿಯೋಗ. ಸಿಟಿಗಳಲ್ಲಿ ಝಗಮಗಿಸುವ ಜಾಹೀರಾತು ಫಲಕಗಳು, ಹಳ್ಳಿಗಳಲ್ಲಿ ವೋಲ್ಟೇಜ್ ಇಲ್ಲದ ಮಿಣುಕು ಬಲ್ಬ್ ಗಳು. ಅನ್ನ ಬೆಳೆಯುವ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ; ರಾಸಾಯನಿಕ ಗೊಬ್ಬರ, ಸುಧಾರಿತ ತಳಿ ಬೀಜ ಮಾರುವ ಕಂಪೆನಿಗಳು ಲಾಭ ಮಾಡಿಕೊಳ್ಳುತ್ತವೆ.
ಈ ಎಲ್ಲ ಸಮಸ್ಯೆಗಳಿಗೆ ಮೇಲ್ನೋಟಕ್ಕೇ ಕಾಣುವ ಕಾರಣ ಜನಸಂಖ್ಯಾ ಸ್ಫೋಟ ಹಾಗೂ ಭ್ರಷ್ಟಾಚಾರ. 1947 ರಲ್ಲಿ ಮುವತ್ತು ಕೋಟಿ ಇದ್ದ ಜನಸಂಖ್ಯೆ ಈಗ 1.27 ಬಿಲಿಯನ್ ಗೆ ಏರಿದೆ. ಹೀಗಾಗಿಯೇ ಯಾವುದೇ ಅಭಿವೃದ್ಧಿ ಯೋಜನೆಯ , ಪರಿಹಾರ ಯೋಜನೆಗಳ ಫಲ ಅರ್ಹರಿಗೆ ಲಭಿಸುವುದು ಕಡಿಮೆ. ತಮ್ಮ ಕೃತಿ ‘ಬರ ಎಂದರೆ ಎಲ್ಲರಿಗೂ ಇಷ್ಟ’ ದಲ್ಲಿ ಪಿ. ಸಾಯಿನಾಥ್ ಇದನ್ನು ಮನಮಿಡಿಯುವಂತೆ ವಿವರಿಸುತ್ತಾರೆ. ನೆಲ, ಜಲ, ಕಾಡು, ಖನಿಜ ಸಂಪತ್ತು, ಉತ್ತಮ ವಿದ್ಯಾಭ್ಯಾಸ, ಉದ್ಯೋಗಾವಕಾಶಗಳ ಮೇಲಣ ಸ್ವಾಯತ್ತತೆ ಸಮಾಜದ ಒಂದು ವರ್ಗಕ್ಕೇ ಸೀಮಿತವಾಗಿರುವಂತಿದೆ. ಹೀಗೆ ದಮನಿಸಲ್ಪಟ್ಟಿರುವ ಜನರ ಆಕ್ರೋಶವೇ ನಕ್ಸಲೈಟ್ ಸಮಸ್ಯೆ, ಇನ್ನಿತರ ಹಿಂಸಾತ್ಮಕ ಚಳವಳಿಗಳಲ್ಲಿಕಂಡುಬರುತ್ತದೆ.
ಪರಿಸರ, ಭೂಮಿ, ಭೂಮಿಯನ್ನು ಹೊಂದಿರುವುದು ಅಥವಾ ಭೂಮಿ ಇಲ್ಲದೆ ಇರುವುದು ಇವೆಲ್ಲ ನಮ್ಮ ಸಾಹಿತ್ಯ, ಕಲೆ, ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಉದಾಹರಣೆಗೆ ಜಮೀನ್ದಾರಿ ಪದ್ಧತಿಯಲ್ಲಿ ಭೂಮಿಯಿಲ್ಲದ ಚೋಮನಂತಹವರ ಬವಣೆ. ಕೆರೆಗೆ ಹಾರವಾದ ಭಾಗೀರಥಿ. ಭೂಮಿಗೋಸ್ಕರ, ಆಸ್ತಿಗೋಸ್ಕರ ಕಾದಾಡಿಕೊಳ್ಳುವ ಸಹೋದರರು. ರಾಜ್ಯ, ರಾಷ್ಟ್ರಗಳ ನಡುವೆ ಗಡಿ ವಿವಾದ, ನೀರಿಗೋಸ್ಕರ ವ್ಯಾಜ್ಯಗಳು. ಫಲವತ್ತಾದ ಹೊಲಗದ್ದೆಗಳು ಯಾವುದೋ ಪ್ರೊಜೆಕ್ಟ್ ಗೋಸ್ಕರ , ಶ್ರೀಮಂತರ ಬಡಾವಣೆಗೋಸ್ಕರ ಸೈಟುಗಳಾಗಿ ಪರಿವರ್ತನೆಗೊಳ್ಳುವುದು. ತಮ್ಮದೇ ನೆಲದಲ್ಲಿ ಕಟ್ಟಿದ ವಿಮಾನ ನಿಲ್ದಾಣ, ಇನ್ನಿತರ ಐಶಾರಾಮಿ ಕಟ್ಟಡಗಳ ಒಳಗೆ ಹೋಗಲು ಸಾಧ್ಯವಾಗದ ‘ಪರಿಸರ ನಿರಾಶ್ರಿತರು.(ಖ್ಯಾತ ಪರಿಸರವಾದಿ ಮಾಧವ ಗಾಡ್ಗೀಳ್ ಬಳಸಿದ ಪದ) ಲ್ಯಾಂಡ್ ಮಾಫಿಯಾದ ಬೆಚ್ಚಿ ಬೀಳುವ ದೃಷ್ಟಾಂತಗಳು.
ಪರಿಸರ ಆಂದೋಲನದಲ್ಲಿ ಮುಂಚೂಣಿಯಲ್ಲಿ ಗುರುತಿಸಲ್ಪಟ್ಟವರು ಮೇಧಾ ಪಾಟ್ಕರ್(ನರ್ಮದಾ ಬಚಾವೋ ಆಂದೋಲನ) , ಸುಂದರಲಾಲ್ ಬಹುಗುಣ (ಚಿಪ್ಕೋ ಚಳವಳಿ, ಅರುಂಧತಿ ರಾಯ್, ಕುಸುಮಾ ಸೊರಬ, ಸಾಲು ಮರದ ತಿಮ್ಮಕ್ಕ, ನಾರಾಯಣ ರೆಡ್ಡಿ.. ಇನ್ನೂ ಹಲವರು. ಇವರಲ್ಲದೆ ನಾಗೇಶ್ ಹೆಗಡೆ ಮೊದಲುಗೊಂಡು ನಾಡಿನ ಖ್ಯಾತ ಪತ್ರಿಕೆಗಳಲ್ಲಿ ಬರೆಯುತ್ತಿರುವ ಅಂಕಣಕಾರರು, ಪರಿಸರ ಸ್ನೇಹಿಗಳು ಹೀಗೆಲ್ಲ.woman-tree
ಪರಿಸರ ಸಂರಕ್ಷಣೆಯಲ್ಲಿ ಸಂಘ ಸಂಸ್ಥೆಗಳು, ವಿದ್ಯಾರ್ಥಿ ಸಮುದಾಯದ ಪಾತ್ರ ಹಿರಿದು. ಹಾಗೆಯೇ ದೇಶದ ಜನಸಂಖ್ಯೆಯ ಹೆಚ್ಚು ಕಡಿಮೆ ಅರ್ಧದಷ್ಟಿರುವ ಮಹಿಳೆಯರದ್ದು ಕೂಡ. ಈ ನಿಟ್ಟಿನಲ್ಲಿ ‘ಇಕೋ ಫ಼ೆಮಿನಿಸಂ’ ಇದೀಗ ಸ್ತೀ ವಾದದಲ್ಲಿ ಪ್ರಚಲಿತವಾಗುತ್ತಿರುವ ಶಬ್ದ. ಯಾವ ದೇಶದಲ್ಲಿ ಪ್ರಕೃತಿಯನ್ನು ಗೌರವಿಸುವುದಲ್ಲವೋ ಅಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತದೆ ಎಂದು ಈ ಥಿಯರಿ ಪ್ರತಿಪಾದಿಸುತ್ತದೆ ಹಾಗೂ ಭಾರತದ ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಇದು ಅಕ್ಶರಶ ಸತ್ಯವೇ ಆಗಿದೆ.
ಈ ಸಹನಾಮಯಿ ಧರಿತ್ರಿ, ತಾಯಿ ಭೂಮಿ ಸಹನೆಯ ಕಟ್ಟೆಯೊಡೆದು ಹೃಷಿಕೇಶ, ಕೇದಾರದಂತೆ ಮಗದೊಮ್ಮೆ ಪಾಠ ಕಲಿಸುವ ಮುನ್ನ, ನಿಸರ್ಗದ ಕ್ರೋಧದಲೆಗಳು ಸುನಾಮಿಯಂತೆ ಅಪ್ಪಳಿಸುವ ಮುನ್ನ ನಾವೆಲ್ಲ ಎಚ್ಚರಗೊಂಡು ನಿಸರ್ಗವನ್ನು ಸಂರಕ್ಷಿಸಲು ಪಣ ತೊಡಬೇಕಾಗಿದೆ.

– ಜಯಶ್ರೀ. ಬಿ. ಕದ್ರಿ

No comments:

Post a Comment