Friday, 7 November 2014

ಜ್ಞಾನ – ವಿಜ್ಞಾನ

‘ವಿಜ್ಞಾನ, ತಂತ್ರಜ್ಞಾನ, ‘ಅಭಿವೃದ್ಧಿ’ ಹೀಗೆಲ್ಲ ‘ರೆಟರಿಕ್’ಗಳನ್ನು ಕೇಳುತ್ತಲೇ ಜೀವಿಸುತ್ತಿರುವ ಕಾಲ ಇದು. ಸೈನ್ಸ್‌ನ್ನು ಯಾವುದೋ ಕಾಲದಲ್ಲಿ ಮರೆತಿದ್ದರೂ ಅದು ಧುತ್ತನೆ ಹೇಗೆ ಎದುರು ಬರುತ್ತದೆ ಹೇಳುವುದಕ್ಕಾಗದು. ಉದಾಹರಣೆಗೆ ಹೊಸ ಮಾದರಿ ಮೊಬೈಲ್, ಟ್ಯಾಬ್‌ಗಳನ್ನು ಅಪರೇಟ್ ಮಾಡಲು ಬರದ ಫಜೀತಿ, ಕಂಪ್ಯೂಟರ್‌ನ್ನು ನಮಗಿಂತ ಅದ್ಭುತವಾಗಿ ಬಳಸಿಕೊಳ್ಳುವ ಮಕ್ಕಳ ಕೀಟಲೆ.. ಹೀಗೆ. ನಮ್ಮ ಬಣ್ಣ ಬುದ್ಧಿಮತ್ತೆ, ಚುರುಕುತನ, ರೂಪ ಎಲ್ಲವೂ ನಮ್ಮ ಪೂರ್ವಿಕರಿಂದ ಬಳುವಳಿಯಾಗಿ ಬಂದಿರುವಂತದ್ದು, (ಶಿವರಾಮ ಕಾರಂತರೆಂದಂತೆ ರೋಗ ಕೂಡ!) ಜೀನ್ ಟೆಕ್ನಾಲಜಿ, ಜೆನೆಟಿಕ್ ಇಂಜಿನಿಯರಿಂಗ್‌ನಲ್ಲಿ ನಿಮ್ಮ ಆಸಕ್ತಿ ಕುದರದಿದ್ದರೆ ಹೇಳಿ ‘ನೀನು ತುಂಬ ಮೂಡಿ ಕಣೇ’ ಎಂದು ಯಾರಾದರೂ ಹೇಳಿದರೂ ನೀವು ಹಾರ್ಮೋನ್, ಡೋಪಮೈನ್ ಹೀಗೆಲ್ಲ ಸೈಕಲಾಜಿಕಲ್ ವಿವರಣೆ ಕೊಟ್ಟುಕೊಳ್ಳಬಹುದು. ವಂದನಾಶಿವ ಸಂಪಾದಿಸಿದ ‘ಬಯೋಪೊಲಿಟಿಕ್ಸ್’ ಪುಸ್ತಕದಲ್ಲಿ ರುಥ್ ಹಬ್ಬರ್ಡ್ ಅವರು ಬಯಾಲಜಿ, ಬಯೋ ಟೆಕ್ನಾಲಜಿ, ಇಕಾನಮಿಕ್ಸ್, ಪೊಲಿಟಿಕ್ಸ್, ಸೋಶಿಯಾಲಜಿ ಎಲ್ಲಕ್ಕೂ ಇರುವ ಪರಸ್ಪರ ಸಂಬಂಧವನ್ನು ಗಮನಿಸುತ್ತಾರೆ. ಉದಾಹರಣೆಗೆ ಹೆಣ್ಣುಮಕ್ಕಳು ಜೈವಿಕವಾಗಿ ಕೋಮಲ ಯಾಕೆಂದರೆ ಅವರನ್ನು ಫ್ರಾಕು, ಸ್ಸರ್ಟುಗಳಲ್ಲಿ ಮುದ್ದುಗೊಂಬೆಯಂತೆ ಅಲಂಕರಿಸುತ್ತೇವೆ. ಅದೇ ಹುಡುಗರಿಗೆ ಪ್ಯಾಂಟ್ ಶರ್ಟ್ ಹಾಕಿ ಮರ ಹತ್ತಲು, ಫುಟ್ ಬಾಲ್ ಆಡಲು, ದೃಢಕಾಯರಾಗಿ ಬೆಳೆಯಲು ಪ್ರೋತ್ಸಾಹಿಸುತ್ತೇವೆ. (ಹುಡುಗಿಯರಿಗೆ ಫೇಸ್ ಫ್ಯಾಕ್ ಹಾಕಲು, ಡಯಟ್ ಮಾಡಲು ಸೂಚಿಸುತ್ತಿರುತ್ತೇವೆ). ಅದೇ ರೀತಿ ಇನ್ನೊಂದು ಕುತೂಹಲದ ವಿಷಯವೆಂದರೆ ನನ್ನನ್ನೂ ಸೇರಿಸಿ ಮಹಿಳೆಯರು ನ್ಯೂಸ್ ಪೇಪರ್ ಓದುವ ಕ್ರಮ. ಹೆಡ್‌ಲೈನ್‌ಗಳನ್ನು ಬಿಟ್ಟರೆ ನಾವು ಓದುವುದು ಹೊಸ ರುಚಿ, ಅಡಿಗೆ, ಮಹಿಳೆಯರಿಗೆ ಸಂಬಂಧಿಸಿದ ಲೇಖನ, ಕತೆ, ಕವಿತೆಗಳು. ಕೆನ್ಯಾ, ಚೆಚೆನ್ಯಾದಲ್ಲಿ ಏನಾಯಿತೆಂದೋ, ಮಂಗಳ ಗೃಹ ಯಾನದಲ್ಲಿ ಕನ್ನಡಿಗರ ಪಾತ್ರ ಇವೆಲ್ಲದರ ಬಗ್ಗೆ ನಾವು ಅಷ್ಟೇನೂ ತಲೆಕೆಡಿಸಿಕೊಳ್ಳುವುದಿಲ್ಲ.
ನಮ್ಮ ಮನೆ ಹಿರಿಯರು ಐಸಿಯುನಲ್ಲಿ ಚಡಪಡಿಸುತ್ತಿರುವಾಗ, ಸ್ವತ: ನಮಗೇ ಕಾಯಿಲೆಗಳು ಬಂದಾಗ ಯಾವತ್ತೋ ಕಲಿತ ವಿಜ್ಞಾನದ ನೆನಪಾಗುತ್ತದೆ. ನಿಜವಾಗಿಯೂ ಒಂದು ದಿನ ಹಾಸ್ಪಿಟಲ್‌ನಲ್ಲಿ ಕುಳಿತುಕೊಳ್ಳುವುದೆಂದರೆ ಜ್ಞಾನೋದಯಕ್ಕೆ ಸಮ. ಯಾವ ಸೋಶಿಯೋಲಜಿಗಿಂತ, ಫಿಲಾಸಫಿಗಿಂತ ಮೀರಿದ ಬದುಕಿನ ತತ್ವಗಳು ಅಲ್ಲಿ ಅರಿವಾಗುವುದರಲ್ಲಿ ಸಂಶಯವಿಲ್ಲ.
ನಮ್ಮ ಹ್ಯಾಂಡ್‌ರೈಟಿಂಗ್‌ನ್ನು ತಿದ್ದಿ ತೀಡಲು ಶ್ರಮಿಸುತ್ತಿದ್ದ ಮೇಷ್ಟ್ರುಗಳು ಹೇಳುವುದನ್ನೇ ಗ್ರಾಫಾಲಜಿ ಹೇಳುವಾಗ, ‘ಎಲ್ಲರೊಂದಿಗೆ ಹೊಂದಿಕೊಳ್ಳಬೇಕಮ್ಮಾ’ ಎಂದು ನಮ್ಮ ಅಜ್ಜಿ ಹೇಳಿದ್ದನ್ನೇ ‘ಕಮ್ಯುನಿಕೇಶನ್ ಸ್ಕಿಲ್ಸ್’ ಎಂದು ವರ್ಕ್‌ಶಾಪ್‌ಗಳಲ್ಲಿ ಕಲಿಯುವಾಗ ‘ಏಕಂ ಸತ್ ವಿಪಾ: ಬಹುಧಾ ವದಂತಿ’ ಎನ್ನುವ ಉಪನಿಷತ್ ವಾಕ್ಯ ನೆನಪಾಗದಿರದು.
ಸ್ತ್ರೀವಾದದಲ್ಲ್ಲೊಂದು ಮಾತಿದೆ; ಪರ್ಸನಲ್ ಈಸ್ ಪೊಲಿಟಿಕಲ್’ ಎಂದು ರಾಜಕೀಯವಾಗಲಿ, ಜಗತ್ತಿನ ಆಗುಹೋಗುಗಳಾಗಲಿ ನಮಗೆ ಸಂಬಂಧವೇ ಇಲ್ಲವೆಂದು ನಾವು ಈ ಸ್ಪರ್ದಾತ್ಮಕ ಜಗತ್ತಿನಲ್ಲಿ ಸುಮ್ಮನಿರುವಂತಿಲ್ಲ. ನಮ್ಮ ಮಕ್ಕಳ ಸಿ‌ಇಟಿ ಸೀಟುಗಳು, ಅಕ್ಕಿ ಬೇಳೆ ಹಾಲು ಹಣ್ಣುಗಳ ಬೆಲೆ, ಬಸ್ ಚಾರ್ಜು ರೈಲ್ವೆ ಕಂಪಾರ್ಟ್‌ಮೆಂಟ್ ಉದ್ಯೋಗ ಕೋಟಾಗಳು ವಿಧಾನಸೌಧದ ಪಡಸಾಲೆಯಲ್ಲಿ, ದೆಹಲಿಯ ಪಾರ್ಲಿಮೆಂಟಿನ ಹೊಸ ರಾಜಕೀಯ ನೀತಿಯನ್ನವಲಂಬಿಸಿರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಎಷ್ಟೋ ಹುಡುಗಿಯರಿಗೆ ತಾವು ಯಾವ ಕೋರ್ಸನ್ನು ಯಾಕೆ ಕಲಿಯುತ್ತಿದ್ದೇವೆ ಎನ್ನುವುದೇ ಗೊತ್ತಿರುವುದಿಲ್ಲ. (ಭವಿಷ್ಯತ್ತಿನ ಬಗ್ಗೆ ಚೂರೇ ಚೂರು ಯೋಚನೆಯಿಲ್ಲದೆ ಹಗಲುಗನಸು ಕಾಣುತ್ತ ಜಿಂದಗಿಯನ್ನು ಬರ್‌ಬಾತ್ ಮಾಡಿಕೊಳ್ಳಬಾರದೆಂದು ಈ ಮಾತು). ಗೃಹಿಣಿಯರಿರಲಿ, ಉದ್ಯೋಗಸ್ಥ ಮಹಿಳೆಯರಿರಲಿ, ಓದು ಮತ್ತು ಜ್ಞಾನ ನಮಗೆ ತುಂಬ ಆತ್ಮವಿಶ್ವಾಸವನ್ನು, ವಿಚಾರಗಳನ್ನು ಶಬ್ಧ ರೂಪದಲ್ಲಿ ವ್ಯಕ್ತಪಡಿಸುವ, ಪರಿಣಾಮಕಾರಿಯಾಗಿ ಅಭಿಪ್ರಾಯ ಮಂಡಿಸುವ, ನಮ್ಮ ಹಕ್ಕುಗಳಿಗಾಗಿ ಹೋರಾಡುವ ಧೈರ್ಯವನ್ನು, ನೈತಿಕ ಶಕ್ತಿಯನ್ನು ತುಂಬುತ್ತದೆ. ನಹಿ ಜ್ಞಾನೇನ ಸದೃಶಂ!
ಜಯಶ್ರೀ ಬಿ.ಕದ್ರಿ

No comments:

Post a Comment