Thursday, 6 November 2014

ಕಾಸಿದ್ದರೆ ಕೈಲಾಸ

ಹಣಕ್ಕೂ ನಮ್ಮ ಜೀವನಕ್ಕೂ ಅವಿನಾ ಭಾವ ಸಂಬಂಧವಿದೆ. ‘ಸರ್ವೇ ಗುಣ: ಕಾಂಚನಮಾಶ್ರಯಂತಿ’ ಎನ್ನುವಂತೆ ದುಡ್ಡಿದ್ದವವರು ದೊಡ್ಡಪ್ಪ  ಆಗುವುದು ಸರ್ವೇ ಸಾಮಾನ್ಯ. ಹಣವಿಲ್ಲದಿರುವಿಕೆ  ನಮ್ಮ ಖಿನ್ನತೆಗೂ ನಿರುತ್ಸಾಹಕ್ಕೂ ಭವಿಷ್ಯದ ಬಗ್ಗೆ ಕಳವಳಕ್ಕೂ ಕಾರಣವಾಗುತ್ತದೆ . ಹಣದ ಅಭಾವ ನಮ್ಮ ಸುಪ್ತ ಪ್ರಜ್ಞೆ ಯನ್ನು ಕೂಡ ಎಷ್ಟರ ಮಟ್ಟಿಗೆ ಪ್ರಭಾವಿಸುತ್ತದೆ ಎಂದರೆ ನಮ್ಮೆಲ್ಲರ ಕೊಳ್ಳುವಿಕೆ, ನಿರ್ಧಾರ ಕೈಗೊಳ್ಳುವಿಕೆ ಎಲ್ಲವೂ ಅದರ ಮೇಲೆ ಅವಲಂಬಿಸಿದೆ. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರು, ವಿಷಮ ದಾಂಪತ್ಯದಲ್ಲಿದ್ದರೂ ದುಡ್ಡಿಲ್ಲದ ಕಾರಣ ದಿನಾ ಕುಡುಕ ಗಂಡನಿಂದ ಒದೆಸಿಕೊಳ್ಳುವವರು, ಶಾಲೆಗೆ ಹೋಗಲು ಸಾಧ್ಯವಾಗದೆ ಕಾರ್ಖಾನೆಗಳಲ್ಲಿ ದುಡಿಯುವ ಪುಟ್ಟ ಮಕ್ಕಳು ..ಹೀಗೆ ಹಣವಿದ್ದರೆ ಅವರ ಜೀವನ ಖಂಡಿತವಾಗಿಯೂ ಸುಗಮವಾಗಲು ಸಾಧ್ಯವಿದೆ.


Rupeesಮಿತವ್ಯಯ, ಸರಳಜೀವನ ಎಂದೇನೇ ಹೇಳಲಿ, ಅಧುನಿಕ ಜಗತ್ತಿನಲ್ಲಿ ಹಣವನ್ನು ಖರ್ಚುಮಾಡಲು ಆಕರ್ಷಣೆಗಳು ಅನೇಕ. ಈ ಬೆಲೆಯೇರಿಕೆಯ ದಿನಗಳಲ್ಲಿ ಎಷ್ಟು ದುಡಿದರೂ ಸಾಕಾಗದಿದ್ದರೂ ಕ್ಷಣಿಕ ಸುಖಕ್ಕೋಸ್ಕರ  ಕೈಯಾರೆ ಖರ್ಚು ಮಾಡಿಬಿಡುತ್ತೇವೆ. ಉದಾ: ಡಿಸ್ಕೌಂಟ್ ಸೇಲ್ ಗಳಲ್ಲಿ ಕೊಳ್ಳುವ ರಾಶಿ ಸೀರೆಗಳು, ಪುಸ್ತಕ ಪ್ರದರ್ಶನಗಳಲ್ಲಿ ಖರೀದಿಸುವ ಪುಸ್ತಕಗಳು, ಟೂರ್ ಹೋದಾಗ ಕೊಳ್ಳುವ ಅನವಶ್ಯಕ ಆಲಂಕಾರಿಕ ವಸ್ತುಗಳು..ಹೀಗೆ. ಹಣ ಖರ್ಚು ಮಾಡಲು ಇನ್ನೊಂದು ಕಾರಣ ‘ ಎಂಜಾಯ್’  ಮಾಡಬೇಕೆಂಬ ಪರಿಕಲ್ಪನೆ. ಸತ್ಯ ಹೇಳಬೇಕೆಂದರೆ ನಮ್ಮ ಪಿಕ್ ನಿಕ್ ಗಳು, ಜಾಲಿ ರೈಡ್ ಗಳು, ಗೆಟ್ ಟುಗೆದರ್ ಗಳು ಸುಮ್ಮನೇ ತಿಂದು, ಕುಡಿದು, ಬುರುಗು ನೊರೆಯಂತೆ ಯಥಾ ಪ್ರಕಾರ ಖಾಲಿತನವನ್ನೂ, ಸ್ವಲ್ಪ ಮಟ್ಟಿಗೆ ನೆನಪುಗಳನ್ನೂ ಉಳಿಸುತ್ತವೆ.
ಭಾರತದಂತಹ ವಿರೋಧಾಭಾಸಗಳೇ ತುಂಬಿದ ದೇಶದಲ್ಲಿ ಹಣವನ್ನು ಯಾತಕ್ಕೆ ಖರ್ಚು ಮಾಡುತ್ತೇವೆ ಎನ್ನುವುದೇ ಕುತೂಹಲದ ವಿಷಯ. ಸ್ಲಮ್ಮಿನಲ್ಲಿರುವ ಕಡುಬಡವರ ಒಂದು ರೂಮಿನ ಮನೆಗಳಲ್ಲಿ  ಕೂಡ    ಕೇಬಲ್ ಟಿವಿ ಇರುತ್ತದೆ. ತನ್ನ ಹಣವನ್ನೆಲ್ಲ ಸಾರಾಯಿಯ ಮೇಲೆ ಸುರಿಯುವ ಕುಡುಕ ಮಕ್ಕಳ ಸ್ಕೂಲ್ ವೆಚ್ಚವನ್ನೋ, ಹೆಂಡತಿಯ ಮಾಸಲು ಸೀರೆ, ಕೃಶ ಶರೀರವನ್ನೋ ನೆನಪಿಸಿಕೂಳ್ಳುವುದಿಲ್ಲ. ಅಕ್ಕಪಕ್ಕದವರಿಂದ ಸಾಲ ಪಡೆದಾದರೂ ಯುಗಾದಿ, ದೀಪಾವಳಿಗಳನ್ನು ಗ್ರಾಂಡ್ ಆಗಿ ಆಚರಿಸುವ, ಉರಿದು ಬೂದಿಯಾಗುವ ಪಟಾಕಿಗೆ ರಾಶಿ ದುಡ್ಡು ಸುರಿಯುವವರನ್ನು ನೋಡಿದ್ದೇನೆ.. ಬಹುಶ: ಇವೆಲ್ಲ ಅವರ ಭಾವನಾತ್ಮಕ ಅಗತ್ಯಗಳನ್ನು ಪೂರೈಸ್ಸುತ್ತದೆ.
ನಮ್ಮ ಮಾರ್ಕೆಟಿಂಗ್ ತಂತ್ರಗಳು ಎಷ್ಟು ಜಾಣತನದಿಂದ ಕೂಡಿವೆ ಎಂದರೆ, ಇಲ್ಲದ ಅಗತ್ಯಗಳನ್ನು ಸೃಷ್ಟಿಸಿ ಹಣವನ್ನು ಖರ್ಚುಮಾಡಿಸುತ್ತವೆ. ಉದಾ: ಕಡಿಮೆ ಆದಾಯದವರಿಗೆ ಕೊಳ್ಳಬಹುದಾದ ಚಿಕ್ಕ-ಪುಟ್ಟ ಶ್ಯಾಂಪೂ ಸ್ಯಾಶೆ ಗಳು, ಪೌಡರ್, ಸೋಪ್ ಹೀಗೆ. ವ್ಯಂಗ್ಯವೆಂದರೆ, 1 ಕಿಲೊ  ಬಾಸ್ಮತಿ ಅಕ್ಕಿಯ ಮೇಲೆ ಅಥವಾ  5 ಲಿ. ಸೂಫ಼್ಟ್ ಡ್ರಿಂಕ್ಸ್ ನ ಮೇಲೆ ಇರುವ ಡಿಸ್ಕೌಂಟ್ ಗಳು ದಿನಬಳಕೆಯ ವಸ್ತುಗಳ ಮೇಲೆ ಇರುವುದಿಲ್ಲ. ನಮ್ಮ ಮಾಲ್ ಗಳು ಈ ಮನಸ್ಥಿತಿಯನ್ನು ಬಹಳ ಚೆನ್ನಾಗಿ ಬಳಸಿಕೊಳ್ಳುತ್ತವೆ.
moneyಈ ಜೀವನ ಮಾಯೆ, ದುಡ್ಡಿಗಿಂತ ನಿರ್ಮಲವಾದ ಮನಸ್ಸು ಮುಖ್ಯ ಹೀಗೆಲ್ಲ ತತ್ವಗಳನ್ನು ಕೇಳಿ ಕೇಳಿ ಜನಸಾಮಾನ್ಯರ ರಕ್ತ ಕುದಿಯಲಾರಂಭಿಸಿದೆ. ಮುಂಬಯಿಯಲ್ಲಿನ ಸ್ಲಮ್ಮಿನಲ್ಲಿಯೋ. ನಮ್ಮದೇ ನಗರಗಳ ಕೆಳಮಧ್ಯಮ ವರ್ಗದವರಲ್ಲಿಯೋ  ಕೇಳಿದರೆ ಆತ್ಮಸಾಕ್ಷಾತ್ಕಾರಕ್ಕಿಂತ ನೆಟ್ಟಗಿನ ಕರೆಂಟ್ ಸಪ್ಲೈ, ಗುಂಡಿಗಳಿಲ್ಲದ ರಸ್ತೆಗಳು, ಅಕ್ಕಿ ಬೇಳೆಗಳಿಗೆ ಕಡಿಮೆ ದರ, ಇಕ್ಕಟ್ಟಿಲ್ಲದೆ ಕಾಲು ಚಾಚುವ ಯೋಗ್ಯವಾದ ಮನೆಗಳಿದ್ದರೆ ಅವೇ ಸ್ವರ್ಗ ಎಂದು ಉತ್ತರಿಸಿಯಾರು. ಉರಿಬಿಸಿಲಿನಲ್ಲಿ ಕಟ್ಟಡ ಕೆಲಸ ಮಾಡುವವರು, ಇನ್ನೊಬ್ಬರ  ಮನೆಕೆಲಸ ಮಾದಿ ಹೊಟ್ಟೆಹೊರೆಯುವವರೂ ಮನುಷ್ಯರೇ ಎಂದು ನಾವಿಲ್ಲಿ ಗಮನಿಸಬೇಕಾಗಿದೆ. ಹಣ ಇಲ್ಲದೇ ಇರುವುದು ನಮ್ಮ ಆತ್ಮವಿಶ್ವಾಸವನ್ನು ಉಡುಗಿಸಿ ಯಾರು ಯಾರಿಗೋ ಡೊಗ್ಗು ಸಲಾಮು ಹಾಕಲು, ಹಲ್ಲುಗಿಂಜಲು ಪ್ರೇರೇಪಿಸುತ್ತದೆ. ಹೆಚ್ಚೇಕೆ ಮದುವೆಯಂತಹ ಸಮಾರಂಭಗಳು ಕೂಡ ಒಡವೆ , ವಸ್ತ್ರ, ಅಂತಸ್ತನ್ನು ಪ್ರದರ್ಶಿಸುತ್ತ , ಕೃತಕನಗೆ ಬೀರುತ್ತ ಒಳಗಿಂದೊಳಗೆ ಇನ್ನೊಬ್ಬರನ್ನು ಜಡ್ಜ್ ಮಾಡುವ ತಾಣಗಳಾಗಿ ಪರಿಣಮಿಸಿವೆ.

George Orwell ನ   ‘Animal Farm’ ನಲ್ಲಿ ಹೇಳಿದಂತೆ ಪ್ರಜಾಪ್ರಭುತ್ವದಲ್ಲಿ  ‘ All are equal, but some are more equal’ ಎಂದು ನಾವಿಲ್ಲಿ ಗಮನಿಸಬೇಕಿದೆ. ಬಡವರಿಗೂ ಆತ್ಮಗೌರವವಿದೆಯೆಂದೂ, ಅವರೂ ಮನುಷ್ಯರೇ ಎಂದೂ ಪರಿಗಣಿಸಬೆಕು. ಹೆಚ್ಚಿನ ಕೊಲೆ, ಸುಲಿಗೆ , ದರೋಡೆಗಳು , ನಕ್ಸಲಿಸಮ್ ಈ ರೀತಿಯ ದಮನಿತ ಮನೋಭಾವದ ಸೆಟೆದೆದ್ದ ಆಕ್ರೋಶವೇ ಇನ್ನುವುದನ್ನು ಗಮನಿಸಬೆಕಾಗಿದೆ.  ಬೂಕರ್ ಅವಾರ್ಡ್  ಪಡೆದ ಅರವಿಂದ ಅಡಿಗರ  ‘The White Tiger’  ಈ ರೀತಿಯ ಸಾಮಾನ್ಯ ವರ್ಗದ ಜನರ ಆಕ್ರೋಶಕ್ಕೆ ಸಾಕ್ಷಿಯಾದ ಕಾದಂಬರಿ.



– ಜಯಶ್ರೀ. ಬಿ. ಕದ್ರಿ .

ಇಂಗ್ಲಿಷ್-ವಿಂಗ್ಲಿಷ್/ಇಂಗ್ಲಿಷನ್ನು ಕಲಿಯೋಣ

ಇಂಗ್ಲಿಷ್-ವಿಂಗ್ಲಿಷ್’ ಇತ್ತೀಚೆಗೆ ಸೂಪರ್ ಹಿಟ್ ಆದ ಹಿಂದಿ ಸಿನೆಮಾ. ಸ್ಕೂಲ್-ಕಾಲೇಜುಗಳಿಗೆ ಹೋಗುವ ಮಕ್ಕಳಿಂದ ಹಿಡಿದು , ಗೃಹಿಣಿಯರು, ಬುದ್ಧಿಜೀವಿಗಳು ಎಲ್ಲರಿಗೂ ಇಷ್ಟವಾಗುವ ಸಿನೆಮಾ ಇದು. ನಾಯಕಿ ಶ್ರೀದೇವಿ ಇಂಗ್ಲಿಷ್ ಬಾರದೆ ಪಡುವ ಪಡಿಪಾಟಲು ನೋಡಿ ಕಣ್ಣೀರುಗರೆಯದ ಮಂದಿಯೇ ಇಲ್ಲ ಎಂದರೆ ತಪ್ಪಾಗಲಾರದು. ಇಂಗ್ಲಿಷ್ ಬಾರದ ಭಾರತೀಯರೆಲ್ಲರ ಪ್ರತೀಕವಾಗಿ , ಅದರಲ್ಲೂ ಹೆಣ್ಣು ಜೀವಗಳ ಅಸಹಾಯಕತೆಯ , ಐಡೆಂಟಿಟಿಗೋಸ್ಕರ ಅವರು ಪಡುವ ಪ್ರಯತ್ನದ ರೂಪಕದಂತೆ ಶ್ರೀದೇವಿ ಮನೋಜ್ಞವಾಗಿ ನಟಿಸಿದ್ದಾರೆ.
Speak Englishಲಾರ್ಡ್ ಮೆಕಾಲೆಯ ಕಾಲದಿಂದಲೂ ಇಂಗ್ಲಿಷ್ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಈಗಿನ ಗ್ಲೋಬಲೈಸ್ಡ್ ಯುಗದಲ್ಲಿ ಇಂಗ್ಲಿಷನ್ನು ನಿರ್ಮೂಲನ ಮಾಡುವುದಂತೂ ಖಂಡಿತ ಸಾಧ್ಯವಿಲ್ಲ ಹಾಗೂ ಅದು ಅಗತ್ಯವೂ ಇಲ್ಲವೇನೋ. ಅಷ್ಟರ ಮಟ್ಟಿಗೆ ಅದು ನಮ್ಮದೇ ಭಾಷೆ ಆಗಿಬಿಟ್ಟಿದೆ. ಹಾಗೆ ನೋಡಿದರೆ ಇಂಗ್ಲಿಷರಿಗಿಂತ ಭಾರತೀಯರಲ್ಲಿಯೇ ಇಂಗ್ಲಿಷ್ ಮಾತನಾಡುವವರ ಜನಸಂಖ್ಯೆ ಜಾಸ್ತಿ ಇರಬಹುದು.
ಇಂಗ್ಲಿಷ್ ಎನ್ನುವುದು ಬ್ರಹ್ಮವಿದ್ಯೆಯೇನಲ್ಲ. ಸಾಕಷ್ಟು exposure  ದೊರೆತರೆ ಹೇಗಿರುವ ದಡ್ಡ ಶಿಖಾಮಣಿ ಕೂಡ ಅದನ್ನು ಕಲಿಯಬಲ್ಲರು. ಸೆಕ್ಯೂರಿಟಿ ಗಾರ್ಡ್, ವಾಚ್ ಮೆನ್ ಕೆಲಸಕ್ಕೆ ಕೂಡ ಅಲ್ಪಸ್ವಲ್ಪ ಇಂಗ್ಲಿಷ್ ಆದರೂ ಬರಲೇಬೇಕಾದ ಈ ಕಾಲದಲ್ಲಿ ಇಂಗ್ಲಿಷನ್ನು ಕಲಿಯಲೇಬೇಕಾದುದು ನಮ್ಮ ಅನಿವಾರ್ಯವಾದ ಕರ್ಮವೋ, ಸೌಲಭ್ಯವೋ ಆಗಿದೆ.ನಮ್ಮ ವಿದ್ಯಾಭ್ಯಾಸ ಪದ್ಧತಿಯ ವ್ಯಂಗ್ಯ ಎಂದರೆ , ಪ್ರಾಥಮಿಕ- ಮಾಧ್ಯಮಿಕ ವನ್ನು ಕನ್ನಡ ಮಾಧ್ಯಮದಲ್ಲಿ ಕಲಿತವರೂ, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರೂ ಕಾಲೇಜು ಹಂತಕ್ಕೆ ಬಂದಾಗ ಒಟ್ಟಿಗೆ ಸ್ಪರ್ಧಿಸಬೇಕಾಗಿ ಬರುವಂತಹದು. ಚುರುಕಾಗಿ ಗ್ರಹಿಸುವ ಮಕ್ಕಳನ್ನು ಹೊರತುಪಡಿಸಿ ಉಳಿದ ಹೆಚ್ಚಿನ ಮಕ್ಕಳೂ ಚೊನ್ಚೆಪ್ತ್ ಏನು ಎಂದೆ ಅರ್ಥವಾಗದೆ ತಳಮಳಿಸಿ ತಬ್ಬಿಬ್ಬಾಗುತ್ತಾರೆ. ( ಗಡಿನಾಡಿನ ಕಾಲೇಜೊಂದರಲ್ಲಿ ಕಲಿತ ನನಗೆ ಅತ್ತ ಮಲಯಾಳಂ, ಇತ್ತ ಇಂಗ್ಲಿಷ್ ಎರಡೂ ಬಾರದೆ ಸೈನ್ಸ್ ಸಬ್ಜೆಕ್ಟ್ ನಲ್ಲಿ ಪಾಸಾದದ್ದೇ ದೊಡ್ಡ ವಿಕ್ರಮ).
ಯಾವುದೇ ಮಾತೃಭಾಷೆಯನ್ನು ನಾವು ಮೊದಲು ಕೇಳಿ, ಆಮೇಲೆ ಅದರ ವ್ಯಾಕರಣ ಕಲಿಯುತ್ತೇವೆ. ಹಾಗೆ ನೋಡುವುದಿದ್ದರೆ ಚಿಕ್ಕಮಕ್ಕಳು ಕೂಡ ಅವರದೇ ರೀತಿಯಲ್ಲಿ ವ್ಯಾಕರಣವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತವೆ. Noam Chomskya  ಯ Universal Grammar Theory ಹೇಳುವುದು ಇದನ್ನೆ. ಇಂಗ್ಲಿಷನ್ನು ಸುಲಲಿತವಾಗಿ ಮಾತನಾಡಲು, ಬರೆಯಲು ಇರುವ ಒಂದೆ ಒಂದು ಮಾರ್ಗ ಆ ಭಾಷೆಯನ್ನು ಬಳಸುವುದು.
learn Englishರಜಾಕಾಲದಲ್ಲಿ ಸಿಂಪಲ್ಲಾಗಿರುವ ಮಕ್ಕಳ ಕಥೆ ಪುಸ್ತಕಗಳಿಂದ ಆರಂಭಿಸಿ ಸರಳವಾಗಿ ಸಾರಾಂಶ ಕೊಟ್ಟಿರುವ ಇಂಗ್ಲಿಷ್ ಪುಸ್ತಕಗಳನ್ನು ಓದಬಹುದು. ಉದಾ: Tales from Skakespeare. ಎಲ್ಲಕ್ಕಿಂತ ಪ್ರಮುಖವಾಗಿ ಇಂಗ್ಲಿಷ್ ವ್ಯಾಕರಣ ಪುಸ್ತಕಗಳು ಬೇಕಾದಷ್ಟಿವೆ. ಬೇಸಿಕ್ ಆಗಿ ಯಾವುದಾದರೂ ಒಂದು ಪುಸ್ತಕದಲ್ಲಿರುವ ನಿಯಮಗಳನ್ನು ಕಲಿತುಕೊಂಡು ಆದಷ್ಟು ಬೇಗ ಇಂಗ್ಲಿಷ್ – ಇಂಗ್ಲಿಷ್ ಗ್ರಾಮರ್ ಪುಸ್ತಕಕ್ಕೆ ಶಿಫ಼್ಟ್ ಆಗಿ . ( ಹಾಗೆ ನೋಡುವುದಿದ್ದರೆ , ಟೆಕ್ಸ್ಟ್ ನ ಹಿಂಭಾಗದಲ್ಲಿರುವ ಗ್ರಾಮರ್ ಅನ್ನು ಹಂತಹಂತವಾಗಿ , ಆದರೆ ಸಂಪೂರ್ಣವಾಗಿ ಕಲಿತರೆ ಅದೇ ಸಾಕು)
ಎಷ್ಟೋ ವಿಧ್ಯಾರ್ಥಿಗಳು ಬಾಯಿಪಾಠ ಮಾಡಿಯಾದರೂ ಬರೆಯಬಲ್ಲರು. ಆದರೆ ಮಾತಿನ ಹಂತಕ್ಕೆ ಬಂದಾಗ ತಡವರಿಸುತ್ತಾರೆ. ನನ್ನನ್ನೂ ಸೇರಿಸಿ ಎಷ್ಟೋ ಜನ ಕನ್ನಡಿಗರು ಕ್ರಿಯೇಟಿವ್ ಆಗಿ ಬರೆಯಬೇಕೆಂದಾಗ ಕನ್ನಡದಲ್ಲೇ ಬರೆಯುತ್ತಾರೆ. ( ನೋವಾದಾಗ ‘ಅಮ್ಮ’ ಎಂದು ಕನ್ನಡದಲ್ಲಿ ಕನವರಿಸುವಂತೆ!)
ನಮ್ಮ ಸಮಾಜದಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡುವವರಿಗೆ , ಬರೆಯುವವರಿಗೆ ಇನ್ನಿಲ್ಲದ ಮನ್ನಣೆ. ಜಾಗತಿಕವಾಗಿಯೂ ಅಷ್ಟೆ. ಭಾರತೀಯ ಆಂಗ್ಲ ಸಾಹಿತಿಗಳಿಗೆ ಸಿಗುವ ಮನ್ನಣೆ , ಅವಾರ್ಡ್ , ಓದುಗ ವರ್ಗ ಕನ್ನಡದ ಹೆಸರಾಂತ ಸಾಹಿತಿಗಳಿಗೂ ಲಭಿಸುವುದಿಲ್ಲ. ಇದಕ್ಕೆ ಕಾರಣ ಇಂಗ್ಲಿಷ್ ಜಾಗತಿಕವಾಗಿ ಪವರ್ ಫ಼ುಲ್ ದೇಶಗಳ ಭಾಷೆ ಆಗಿರುವುದು. ತುಳುವೇ ಜಾಗತಿಕ ಸಂವಹನ ಭಾಷೆಯಾಗಿದ್ದಲ್ಲಿ ತುಳು ಸ್ಪೀಕಿಂಗ್ ಕ್ಲಾಸುಗಳಿಗೆ ಸಾವಿರಾರು ರೂಪಾಯಿ ಕೊಟ್ಟು ವಿದ್ಯಾರ್ಥಿಗಳೆಲ್ಲರೂ ಸೇರಿಕೊಳ್ಳುತ್ತಿದ್ದರೆನ್ನುವುದರಲ್ಲಿ ಸಂಶಯವಿಲ್ಲ.
ನನ್ನ ಪ್ರಕಾರ ಇಂಗ್ಲಿಷ್ ಬರದಿದ್ದರೆ ಕೀಳರಿಮೆ ಪಟ್ಟುಕೊಳ್ಳುವ ಅಗತ್ಯವೇನೂ ಇಲ್ಲ. ಹಾಗೆ ನೋಡುವುದಿದ್ದರೆ ದಕ್ಷಿಣ ಭಾರತದ ನಮಗೆ ಹಿಂದಿಯೂ ಅಷ್ಟಕ್ಕಷ್ಟೆ. ಇನ್ನು ಭಾರತದಲ್ಲಿಯೇ ಹಲವು ಭಾಷೆ, ಸಂಸ್ಕೃತಿ, ಒಳಪಂಗಡಗಳನ್ನೊಳಗೊಂಡ ಶ್ರೀಮಂತ ಪರಂಪರೆ ನಮ್ಮದು. ನಮ್ಮ ಇಂಗ್ಲಿಷ್ ಮೇಲೆ ಕನ್ನಡ accent  ಇದ್ದರೆ ಅದರ ಅರ್ಥ ನಮಗೆ ಎರಡು ಭಾಷೆ ಗೊತ್ತಿದೆ ಎಂದು. ಇಂಗ್ಲಿಷರಂತೆ ಉಚ್ಚರಿಸಿದುವುದೂ ನಮಗೆ ಕಷ್ಟವೇ. ಸ್ವಾಭಿಮಾನದಿಂದ ಯೋಚಿಸಿದರೆ ‘ಪುಲಿಕೇಶಿ ಶೆಟ್ಟಪ್ಪನವರ್’ ಎಂದೋ ‘ವಿಗ್ರಡ ವಿಕ್ರಮರಾಯ’ ಎಂದೋ ಅವರು ಸರಿಯಾಗಿ ಉಚ್ಚರಿಸಲಿ ನೋಡೋಣ!
Speak Englishಜಾಗತಿಕ ಅಲೆಯ ಬೀಸಿನಲ್ಲಿ ಇವೆಲ್ಲ ವಿತಂಡವಾದಗಳೇನೋ. ಇಂಗ್ಲಿಷ್ ನಮಗೆ ಅನೇಕ ಉದ್ಯೋಗಾವಕಾಶಗಳನ್ನು ಕೊಡುತ್ತದೆ. ಕಾಲ್ ಸೆಂಟರ್ ನ್ ಜಾಬ್ ಇರಲಿ, ಇಂಜಿನಿಯರ್ ಆಗಿ ಮಲ್ಟಿನ್ಯಾಶನಲ್ ಕಂಪೆನಿಗೆ ಸಂದರ್ಶನಕ್ಕೆ ಹೋಗಲಿ ಇಂಗ್ಲಿಷ್ ನಲ್ಲಿ ಸರಿಯಾಗಿ ಮಾತನಾಡಲು ಬರಬೇಕು. ಹೆಚ್ಚೇಕೆ ನಮ್ಮ ದೇಶದಲ್ಲೇ ಬೇರೆ ಕಡೆಗೆ ಹೋದಾಗ ನಮಗೆ ಇಂಗ್ಲಿಷ್ ಇಲ್ಲದೆ ಸಂವಹನ ಮಾಡಲು ಸಾಧ್ಯವಿಲ್ಲ. ( ಇಲ್ಲವಾದರೆ ಮಣಿಪುರ, ಅಸ್ಸಾಂ, ರಾಜಸ್ಥಾನ್ ಇಲ್ಲೆಲ್ಲ ಬಸ್ ಸ್ಟ್ಯಾಂಡ್ ನಲ್ಲಿ ಕಳೆದು ಹೋದ ಮಗುವಿನಂತೆ ನಮ್ಮ ಪರಿಸ್ಥಿತಿಯಾಗಬಹುದು!) ಹತ್ತಾರು ವರ್ಷಗಳಿಂದ ತಕ್ಕ ಮಟ್ಟಿಗೆ ಇಂಗ್ಲಿಷ್ ಮಾತನಾಡುವ ಕಾರಣ ( ಪರಿಪೂರ್ಣತೆ ಎನ್ನುವುದೊಂದು process), ತಡವರಿಸುವ ಎಳೆಯರಿಗೆ ಕೆಲವು ಸಲಹೆಗಳು:

  1. ಭಾಷೆಯ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಿ. ಯಾಕೆಂದರೆ ಅದು ಹೊಸ ಸಾಧ್ಯತೆಗಳನ್ನು , ಅರಿವಿನ ಪರಿಧಿಯನ್ನು ವಿಸ್ತರಿಸಲು ಸಹಕಾರಿಯಾಗುತ್ತದೆ.
  2. ಸಾಧ್ಯವಾದಷ್ಟು ಚಿಕ್ಕ ಮಕ್ಕಳೊಂದಿಗೆ, ನಿಮ್ಮನ್ನು ಇಷ್ಟ ಪಡುವ ಕ್ಲಾಸ್ ಮೇಟ್ ಗಳೊಂದಿಗೆ , ಅಧ್ಯಾಪಕರೊಂದಿಗೆ ( ಅವರು ನಿಮ್ಮನ್ನು ಕುಗ್ಗಿಸದ್ರ್, ಸ್ಫೂರ್ತಿ ತುಂಬುವವರಾಗಿರಬೇಕು) ಹೆಚ್ಚು ಹೆಚ್ಚು ಸಂಭಾಷಿಸಿ.
  3. ಒಳ್ಳೆಯ ಅಭಿರುಚಿಯ ಇಂಗ್ಲಿಷ್ ಸಿನೆಮಾಗಳನ್ನು, ಕಾರ್ಟೂನ್ ಗಳನ್ನು ನೋಡಿ.
  4. ರೇಡಿಯೋ, ಟಿವಿ ನ್ಯೂಸ್ ಗಳು ಕಡ್ಡಾಯ.
  5. ಇಂಗ್ಲಿಷ್ ನ್ಯೂಸ್ ಪೇಪರ್ ಗಳಲ್ಲಿ ನಿಮಗೆ ಯಾವ ಸೆಕ್ಷನ್ ಇಷ್ಟವೋ ( ಉದಾ: ಫಿಲ್ಮ್ , ಸ್ಪೋರ್ಟ್ಸ್) ಅವನ್ನು ನಿತ್ಯ ಓದಿ. ಆಮೇಲೆ ಸಂಪಾದಕೀಯಕ್ಕೆ ಶಿಫ಼್ಟ್ ಆಗಬಹುದು.
  6. ಡಿಕ್ಷನರಿ ನಿಮ್ಮ ಬೆಶ್ಟ್ ಫ಼್ರೆಂಡ್. ಹೊಸ ಹೊಸ ಶಬ್ದ ಕಲಿತಂತೆಲ್ಲ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.
  7. ಸಾಧ್ಯವಾದಲ್ಲಿ, ಇಂಗ್ಲಿಷನಲ್ಲಿ ಸಣ್ಣ ಪುಟ್ಟ ಲೇಖನಗಳನ್ನು ಏನಿಲ್ಲವೆಂದರೆ ದಿನಚರಿಯನ್ನಾದರೂ ಬರೆಯಿರಿ( ಎಲ್ಲಕ್ಕಿಂತ ಮೊದಲು ಪರೀಕ್ಷೆ ಪಾಸಾಗಲು ನಿಗದಿತ ಸಿಲೆಬಸ್ ಅನ್ನು ಸಾರಾಂಶ ರೂಪದಲ್ಲಿ ನಾಲ್ಕಾರು ಬಾರಿ ಓದಿ ಮನನ ಮಾಡಿಕೊಳ್ಳಿ. ಮಾತನಾಡುವ ಇಂಗ್ಲಿಷನ್ನು ಡಿಗ್ರಿ ಆದ ಮೆಲೆ ಕೂಡ ಸ್ಪೀಕಿಂಗ್ ಕ್ಲಾಸಿಗೆ ಹೋಗಿಯಾದರೂ ಕಲಿಯಬಹುದು)
  8. ಕೊನೆಯದಾಗಿ , ಕನ್ನಡ ಭಾಷೆಯ ಸೊಗಡು, ಆಪ್ತತೆ , ಅದು ಸ್ಪುರಿಸುವ ಬೆಚ್ಚನೆಯ ಭಾವ ಬೇರೆ ಯಾವ ಭಾಷೆಯಲ್ಲಿಯೂ ನಮಗೆ ದೊರೆಯುವುದಿಲ್ಲ

‘ಸಿರಿಗನ್ನಡಂ ಗೆಲ್ಗೆ’


– ಜಯಶ್ರೀ ಬಿ. ಕದ್ರಿ

ಫ್ಯಾಷನ್! ಫ್ಯಾಷನ್!

ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಸೆಮಿನಾರೊಂದಕ್ಕೆ ಹೋಗಿದ್ದೆ. ಅಲ್ಲಿನ ಹುಡುಗ ಹುಡುಗಿಯರ ವರ್ತನೆ, ‘ಎಂಟರ್ ಟೈನ್ ಮೆಂಟ್’ ಹಸರಲ್ಲಿ ನಡೆದ ವೆಸ್ಟರ್ನ್ ಡ್ಯಾನ್ಸ್ ಅನ್ನು ನೋಡಿ ‘ಹೀಗೂ ಉಂಟೆ’ ಎಂಬು ನಿಬ್ಬೆರಗಾದದ್ದು ಹೌದು. ಒಂದು ಕಡೆಯಲ್ಲಿ ಸ್ತ್ರೀ ದೌರ್ಜನ್ಯ ಹೆಚ್ಚುತ್ತಲಿದೆ. ಪಾಶ್ಚಾತ್ಯ ಡ್ರೆಸ್ಸ್ ಹಾಕಿದ್ದಕ್ಕೆ MLA ಯೊಬ್ಬರು ಕಮೆಂಟ್ ಮಾಡಿದ್ದಕ್ಕೆ ಸ್ಟೇಜ್ ನಲ್ಲಿಯೇ ಕುಸಿದು ಬಿದ್ದ ಕಬಡ್ಡಿ ಕೋಚ್ ಒಬ್ಬರಾದರೆ ಮಿನಿಡ್ರೆಸ್ಸ್ ಹಾಕಿಕೊಳ್ಳುವುದೇ ಫ್ಯಾಷನೆಬಲ್ ಎಂದು ತಿಳಿದುಕೊಳ್ಳುವ ಯುವ ಸಮುದಾಯ. ಅಸಭ್ಯತೆ , ಅಶ್ಲೀಲತೆ, ಫ್ಯಾಶನ್ ಗಳ ನಡುವಣ ಗೆರೆ ಯಾವುದು? ಫ್ಯಾಷನ್ ಎನ್ನುವುದು ಎಷ್ಟು ವರ್ಷ , ಯಾವ ವಯಸ್ಸಿನಲ್ಲಿ ಚೆನ್ನ, ಫ್ಯಾಷನೆಬಲ್ ಆಗಿ ಎಷ್ಟರ ಮಟ್ಟಿಗೆ ಕಾಣಿಸಿಕೊಳ್ಳಬೇಕು ಹಾಗೂ ಕಾಣಿಸಿಕೊಳ್ಳಬೇಕೇ ಇವೆಲ್ಲ ಗೊಂದಲ , ಕುತೂಹಲದ, ಚಿಂತೆಯ ವಿಷಯ ಕೂಡ.
ದ್ರೋಣಾಚಾರ್ಯ ಪ್ರಶಸ್ತಿ ಪಡೆದ ಕೋಚ್ ನ ಪ್ರತಿಭೆಗಿಂತ ಆಕೆ ಪ್ಯಾಂಟ್ ಶರ್ಟ್ ಹಾಕಿದ್ದೇ ದೊಡ್ಡ ವಿಷಯ ಒಂದು ಕಡೆ ಆದರೆ ಫ್ಯಾಶನ್ ಶೋ ಹೆಸರಿನಲ್ಲಿ ಹದಿಹರೆಯದ ಹುಡುಗಿಯಯ ಅಂಗಾಂಗ ಪ್ರದರ್ಶಿಸುವ ‘ ಅರ್ಟ್’ ಎಂದು ಉತ್ತೇಜಿಸುವ ಮನೋಭಾವ ಇನ್ನೊಂದೆಡೆ. ಕ್ರಿಯೇಟಿವಿಟಿ ಎಂದೇನೆ ಹೇಳಲಿ, ಮಾಡರ್ನ್ ಡ್ರೆಸ್ಸ್ ಗಳು ಮಾದಕವಾಗಿ, ಪ್ರಚೋದನಕಾರಿಯಾಗಿರುವುದು ಸತ್ಯ. ನಮ್ಮ ಮಕ್ಕಳು, ವಿದ್ಯಾರ್ಥಿಗಳು ಮುಗ್ಧರೇ ಆಗಿರಬಹುದಾದರೂ ಫಿಲ್ಮಿ ಡ್ಯಾನ್ಸ್ ಗಳ ಅರೆಬರೆ ಬಟ್ಟೇಗಳು ನೋಡುಗರ ಮನಸ್ಸಿನಲ್ಲಿ ವಿವಿಧ ತರಂಗಗಳನ್ನು ಎಬ್ಬಿಸುವ ವಾಸ್ತವವನ್ನು ಮರೆಯುವಂತಿಲ್ಲ.
‘ಫ್ಯಾಷನೆಬಲ್’ ಎನಿಸಿಕೊಳ್ಳಲು ಒದ್ದಾಡುವ ಹದಿಹರೆಯದವರು, ಮಧ್ಯ ವಯಸ್ಸು ಸಮೀಪಿಸುತ್ತಿದ್ದರೂ ‘ ಯಂಗ್ ಲುಕ್’ ಗೋಸ್ಕರ ಹಂಬಲಿಸಿ ಬ್ಯೂಟಿ ಪಾರ್ಲರ್ , ಜಿಮ್ ಗಳಿಗೆ ಎಡತಾಕುವವರು …ಹೀಗೆ ಫ್ಯಾಷನ್ ಎನ್ನುವುದು ಸಮಕಾಲೀನರಾಗಲು, ಯೌವನದ ಸ್ಪೂರ್ತಿಸೆಲೆಯನ್ನು ಉಳಿಸಿಕೊಳ್ಳಲು ನಾವು ಮಾಡುವ ಅನವರತ ಪ್ರಯತ್ನ ಎನ್ನಬಹುದು . (ಈ ಪ್ರಯತ್ನದಲ್ಲಿ ನಗೆಪಾಟಲಿಗೀಡಾಗದಂತಿರುವುದು ನಮ್ಮ ಹೊಣೆಗಾರಿಕೆ!). ಮಾರ್ಕೆಟ್ಟಿನಲ್ಲಿ ಮಹಾಪೂರದಂತಿರುವ ಫ್ಯಾಷನ್ ಮ್ಯಾಗಜಿನ್ ಗಳು, ಟಿವಿಯಲ್ಲಿರುವ ಕಾರ್ಯಕ್ರಮಗಳು ಹೀಗೆ ಫ್ಯಾಷನ್ ಸೆನ್ಸ್ ಎಂಬುದು ಯಾವಾಗಲೂ ಚಾಲ್ತಿಯಲ್ಲಿರುತ್ತದೆ. ನಮ್ಮ ಅಜ್ಜಿ ಕಾಲದ ದೊಡ್ಡ ದೊಡ್ಡ ಪ್ರಿಂಟ್ ಗಳು, ಮೆಗಾ ಸ್ಲೀವ್ ರವಿಕೆಗಳು,ವಾರೆ ಬೈತಲೆ ಮರಳಿ ಫ್ಯಾಷನ್ ಆಗಿರುವುದು ಫ್ಯಾಷನ್ ನ ಆವರ್ತನಕ್ಕೂ, ಚರಿತ್ರೆಯ ಮರುಕಳಿಸುವಿಕೆಗೂ ಸಾಕ್ಷಿಯೇನೋ!
High heeled shoesಫ್ಯಾಷನ್ ಹೆಸರಿನಲ್ಲಿ ನಡೆಯುವ ಅಧ್ವಾನಗಳು ತಪ್ಪು ಹೆಜ್ಜೆಗಳು, ತಳಮಳಗಳನ್ನು ಹೇಳಿದಷ್ಟೂ ಮುಗಿಯದು. ಹದಿವಯಸ್ಸಿನವರಲ್ಲಂತೂ ತಮ್ಮ ಬಟ್ಟೆ ಬರೆ, Peer Group ನಲ್ಲಿ ಗುರುತಿಸಲ್ಪಡಬೇಕಾದ ಆಕಾಂಕ್ಷೆ ಜಾಸ್ತಿ. ತಮ್ಮ ಶೋಕಿಗೋಸ್ಕರ ಹಣವಿಲ್ಲದಿದ್ದಾಗ ಅವರು ಅಡ್ಡ ಹಾದಿಗಿಳಿಯುವ ದೃಷ್ಟಾಂತಗಳನ್ನೂ ನಾವು ನೋಡುತ್ತೇವೆ. ಓದುವ ವಯಸ್ಸಿನಲ್ಲಿಯ ಅತಿಯಾದ ಫ್ಯಾಶನ್ ಅವರ ಭವಿಷ್ಯವನ್ನೇ ನುಚ್ಚುನೂರಾಗಿಸಬಹುದು. ಒಂದು ಕಾಲಕ್ಕೆ ಸರಳತೆ, ಬುದ್ಧಿಮತ್ತೆಗಳು ಅತೀವ ಗೌರವದಿಂದ ನೋಡಲ್ಪಡುತ್ತಿದರೆ ಈಗಿನ ಯಶಸ್ಸಿನ ನ ಮಂತ್ರ ‘ ಸ್ಮಾರ್ಟ್’ ಆಗಿರುವುದು. ತಮ್ಮ ಆರೋಗ್ಯ ಲೆಕ್ಕಿಸದೆ ಡಯಟ್ ಮಾಡುವುದು , ಆರಿಂಚು ಎತ್ತರರ ಹೀಲ್ಸ್ ಧರಿಸಿ ಕಾಲು ಉಳುಕಿಸಿಕೊಳ್ಳುವುದು, ಯಾವುದೋ ಫೇಶಿಯಲ್ ಮಾಡಿಸಿಕೊಂಡು ಮುಖದ ತುಂಬೆಲ್ಲ ಗುಳ್ಳೆಗಳನ್ನು ಅಹ್ವಾನಿಸಿಕೊಳ್ಳುವುದು ಹೀಗೆ ಫ್ಯಾಶನ್ ನ ಹಿಂದೆ ಬಿದ್ದು ಅನಾಹುತಗಳೂ ಆಗುವುದಿದೆ.
ಫ್ಯಾಶನೆಬಲ್ ಆಗಿರುವುದರಿಂದ ಪ್ರಯೋಜನಗಳು ಇವೆ. ಉತ್ತಮ ಬಟ್ಟೆ ಬರೆ, ಆಕರ್ಷಕ ಅಲಂಕಾರ ನಮ್ಮ ಆತ್ಮ ವಿಶ್ವಾಸವನ್ನೂ, ನಡೆನುಡಿಯಲ್ಲಿ ತಾಜಾತನವನ್ನೂ ತಂದುಕೊಡುತ್ತವೆ. ಸೌಂದರ್ಯವೊಂದೇ ಎಲ್ಲವೂ ಅಲ್ಲವಾದರೂ ನೀಟಾಗಿ ಡ್ರೆಸ್ಸ್ ಮಾಡಿಕೊಂಡವರಿಗೆ ಉದ್ಯೋಗಾವಕಾಶಗಳು ಮತ್ತು ಜನಮನ್ನಣೆ ಸಿಗುವುದನ್ನು ಗಮನಿಸುತ್ತಲೇ ಇರುತ್ತೇವೆ. ಅಂದವಾಗಿರುವವರಿಗೆ ಕಾಂಪ್ಲಿಮೆಂಟ್ ಗಳು, ಭರವಸೆಯ ಉತ್ತೇಜನಕಾರಿ ಮಾತುಗಳು ಅವರ ಹಕ್ಕು ಎಂಬಂತೆ ಲಭಿಸುತ್ತಿರುತ್ತವೆ.
Fashion showಅಂದಚಂದದ , ಥಳುಕು ಬಳುಕಿನ , ಜಾಗತಿಕವಾಗಿ ನಾವೇ ಸೃಷ್ಟಿಸಿಕೊಂಡ ಭ್ರಮೆಯ ಲೋಕದ ಹೊರಗಿನ ಅನಾಥರು, ಕುರೋಪಿಗಳು , ತುತ್ತು ಊಟಕ್ಕೆ ಅಂಗಲಾಚುತ್ತಿರುವವರನ್ನು ನಿರ್ಲಕ್ಷಿಸುತ್ತಿರುವುದು ಈ ನಾಡಿನ ದುರಂತ. ಸೌಂದರ್ಯ ಸ್ಪರ್ಧೆಗಳಿಗಿರುವ ಬಿರುಸಿನ ಪ್ರಚಾರ , ಫಂಡಿಂಗ್ ಗಳು ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕುಟುಂಬಗಳಿಗಾಗಲಿ, ಎಂಡೋಸಲ್ಫಾನ್ ನಿಂದ ಕಂಗೆಟ್ಟ ಸಂಸಾರಗಳ ವ್ಯಥೆಗಳಿಗಾಗಲಿ ಇರುವುದಿಲ್ಲ. ಪಾಶ್ಚಾತ್ಯೀಕರಣವೇ ಅಭಿವೃದ್ಧಿ ಎಂದು ನಾವು ತಿಳಿದುಕೊಂದು ಕನಸಿನ ಕುದುರೆಯ ಬೆನ್ನೇರಿ ದೌಡಾಯಿಸುತ್ತೇವೆ. ಭಾರತೀಯ ಸಾಂಪ್ರದಾಯಿಕ ಮೌಲ್ಯಗಳನ್ನು ಅವಹೇಳನಗೈಯುವುದೇ ಒಂದು ಫ್ಯಾಶನ್. ಚರಿತ್ರೆ, ಸೈಕಾಲಜಿ, ತತ್ವಶಾಸ್ತ್ರ ಎಲ್ಲದರಲ್ಲಿಯೂ ಯುರೋಪಿಯನ್ ವಿಚಾರಗಳನ್ನೇ ನಮ್ಮವಾಗಿಸುವ ಭರದಲ್ಲಿ ನಾವು ನಮ್ಮ ಸಂಸ್ಕೃತಿ , ಆಚಾರಗಳು ವಿಶಿಷ್ಟವೂ, ಈ ನೆಲದ ಸಾರ ಹೀರಿ ನಮ್ಮ ವ್ಯಕ್ತಿತ್ವದ ಭಾಗವೇ ಆಗಿದೆ ಎನ್ನುವುದನ್ನು ಕಡೆಗಣಿಸುತ್ತೇವೆ. ಇದೇ ನಮ್ಮ ಅಶಾಂತಿಗೆ ಕಾರಣವಾಗುತ್ತದೆ.
ಇನ್ನೂ ವಸ್ತುನಿಷ್ಠವಾಗಿ ಹೇಳುವುದಿದ್ದರೆ ಹದಿಮೂರರಿಂದ ಇಪ್ಪತ್ತರ ವರೆಗೆ ಇರಬಹುದಾದ ‘ಟೀನೇಜ್’ ಅನ್ನು ಜೀವನದುದ್ದಕ್ಕೂ ಕಾಪಿಡಲು ಮಾಡುವ ಪ್ರಯತ್ನವೇ ಹಾಸ್ಯಾಸ್ಪದವೆನಿಸುತ್ತದೆ. ಕಾಲನ ಕರೆಯನ್ನು ಲೆಕ್ಕಿಸದೆ ಯಾವ ಜೀವಕ್ಕೂ ಇರಲು ಸಾಧ್ಯವಿಲ್ಲ. ಹಾಗೆ ನೋಡುವುದಿದ್ದರೆ ಮಹಾತ್ಮಾ ಗಾಂಧಿ, ಮದರ್ ತೆರೆಸಾ , ನೆಲ್ಸನ್ ಮಂಡೇಲಾ, ಬರ್ಮಾದ ಅಂಗ್ ಸೂಕಿ ಇವರೆಲ್ಲರನ್ನು ಅವರ ಫ್ಯಾಷನ್ನಿ ಗೋಸ್ಕರ ನೆನಪಿಸಿಕೊಳ್ಳುವುದಿಲ್ಲ. ಕೈ ಕಾಲುಗಳು ಎರಡೂ ಇಲ್ಲದಿದ್ದರೂ ಜಗತ್ತಿನ ಜನರಿಗೆಲ್ಲಾ ಸ್ಪೂರ್ತಿಯಾಗಿರುವ ನಿಕ್, ಸಾವಿನ ಮೆಟ್ಟಿನಲ್ಲಿಯೂ ‘The Last Lecture’  ಬರೆದ ರ್ಯಾಂಡಿ ಸಾಶ್, ನಮ್ಮವರೇ ಆದ ನೇಮಿಚಂದ್ರ ಇರಲಿ, ಇವರನ್ನೆಲ್ಲ ಬೆಂಬಲಿಸುವ ಅಪಾರ ಜನಸ್ತೋಮ ಅವರ ಜೀವನ್ಮುಖಿ ಬರಹಗಳಿಗಾಗಿಯೇ ನೆಚ್ಚಿಕೊಂಡಿದೆ.

ಒಟ್ಟಿನ ಮೇಲೆ, Fashion ಎನ್ನುವುದು Passion ಆಗದಿದ್ದರೆ ಎಲ್ಲರಿಗೂ ಒಳ್ಳೆಯದು.


– ಜಯಶ್ರೀ ಬಿ. ಕದ್ರಿ

ಒಂಟಿ ಹಕ್ಕಿಯ ಪಯಣ

ಕಾರ್ಯನಿಮಿತ್ತ ಹೈದರಾಬಾದಿನ ಯೂನಿವರ್ಸಿಟಿಯೊಂದಕ್ಕೆ ಹೋಗಬೇಕಾಗಿತ್ತು. ಅಲ್ಲಿನ ವಸತಿ, ವಾಸ್ತವ್ಯಕ್ಕೆ ವ್ಯವಸ್ಥೆ ಇಲ್ಲಿಂದಲೇ ನಿಗದಿಪಡಿಸದೆ ಹೊರಡುವಂತಿಲ್ಲ. ಹೆಣ್ಣುಮಕ್ಕಳಿಗೆಂದೇ ಪ್ರತ್ಯೇಕ ಹಾಸ್ಟೆಲ್ ಇರದಿದ್ದಲ್ಲಿ ಹೇಗಪ್ಪಾ ಎಂಬ ಚಿಂತೆ. ಕೊನೆಗೆ ಗಂಡ, ಮಗಳು ಹೀಗೆ ಸಂಸಾರ ಸಮೇತ ಹೋಗಿ ಪಿಕ್ನಿಕ್ಕೂ ಮಾಡಿ ಬಂದೆವೆನ್ನಿ.
ಸ್ತ್ರೀ  ಸ್ವಾತಂತ್ರ್ಯ, ಸಮಾನತೆ ಎಂದೆಲ್ಲ ಮಾತನಾಡುತ್ತಿರುವಾಗಲೇ ಈ ರೀತಿಯ ಅಪ್ಪಟ ನಿಸ್ಸಹಾಯಕತೆ , ಆತಂಕ, ಭಯಗಳಿಂದ ಮುಕ್ತವಾಗಿ ಹೆಣ್ಣು ಬದುಕುವುದು ಯಾವಾಗ ಎಂದು ಯೋಚಿಸುವಂತಾಗಿದೆ. ಈ ಜಗತ್ತಿನ ಸಂಕಷ್ಟಗಳು ಗಂಡು ಹೆಣ್ಣೆನ್ನದೆ ಸಮಾನವಾಗಿರುವುದು ಹೌದಾದಾರೂ ತನ್ನ ದೇಹವೇ
ಶತ್ರುವಾಗಿರುವ ದೌರ್ಭಾಗ್ಯ ಆಕೆಯದು.  ಯಾವುದೇ ಕ್ಷೇತ್ರದಲ್ಲಿ ಉನ್ನತಿಗೇರುವುದೂ ಆಕೆಗೆ ಕಷ್ಟವೇ. ಯಾಕೆಂದರೆ ಸಾಮಾಜಿಕ ಜೀವನದ ಹೆಚ್ಚಿನ ಉನ್ನತ ಹುದ್ದೆಗಳಲ್ಲಿ ಗಂಡಸರೇ ಇರುತ್ತಾರೆ. ಈ ರೀತಿಯ ಗಾಡ್ ಫಾದರ್ ಗಳಿಂದ ಬೆಂಬಲ ಪಡೆಯುವುದೂ ಅನೇಕ ಸಂಕೀರ್ಣ ಸಮಸ್ಯೆಗಳಿಗೆ ಕಾರಣವಾಗಬಹುದು.
single birdನಮ್ಮ ಸಮಾಜದಲ್ಲಿ ಹೆಣ್ಣು ಒಂಟಿಯಾಗಿ ಪ್ರಯಾಣಿಸುವಂತಿಲ್ಲ. ಒಂಟಿಯಾಗಿ ಬಾಡಿಗೆ ಮನೆಯಲ್ಲಿ ವಾಸಿಸುವಂತಿಲ್ಲ. ಬಾಳಿನಲ್ಲಿಯೂ ಅಷ್ಟೆ. ಮದುವೆ ಆಗದೆಯೋ, ಬಾಳ ಸಂಗಾತಿಯನ್ನು ಕಳೆದುಕೊಂಡೋ ಒಂಟಿಯಾಗಿರುವವರ ಜೀವನ ದುಸ್ತರ. ಈ ಜಗತ್ತಿನ ಸಂಕಷ್ಟಗಳು ಸಾಕೆಂದು ಯಾವುದಾದರು ಆಶ್ರಮಕ್ಕೆ ಸೇರಿಕೊಂಡರೂ ಹೆಣ್ಣಿಗೆ ರಕ್ಷಣೆ ಎಷ್ಟರ ಮಟ್ಟಿಗೆ ಎನ್ನುವುದು ಅನುಮಾನ.
ಹೀಗಾಗಿಯೇ ಅನೇಕ ಹೆಣ್ಣು ಮಕ್ಕಳು ತಮ್ಮ ಹೃದಯ ಹತ್ತಿ ಉರಿಯುತ್ತಿದ್ದರೂ ಒಲ್ಲದ ಮದುವೆಗಳಲ್ಲಿ , ಬೇಡವಾದ ಸಂಬಂಧಗಳಲ್ಲಿ ಬದುಕು ಸವೆಸುತ್ತಿರುತ್ತಾರೆ. ನಮ್ಮ ಸಮಾಜದಲ್ಲಿ ಸಂಗಾತಿಯಿಲ್ಲದೆ ಒಂಟಿಯಾಗಿ ಬದುಕುವ ಹೆಣ್ಣನ್ನು ಪ್ರಶ್ನಿಸುವ ನೂರು ಕಣ್ಣುಗಳಿರುತ್ತವೆ. ಭಾರತೀಯ ಸಮಾಜ ಮದುವೆಗೆ, ಸಂಸಾರಕ್ಕೆ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡುವುದರಿಂದಲೇ ನಾವೂ ಕೂಡ ನಮಗೇ ಅರಿವಿಲ್ಲದೆ ಒಂಟಿಹೆಣ್ಣಿನ ಜೀವನ ಪ್ರೀತಿಯನ್ನು , ಸ್ವಾಭಿಮಾನವನ್ನು ತಗ್ಗಿಸುತ್ತೇವೇನೋ.
ಒಂಟಿಯಾಗಿರುವವರು, ಸಲಿಂಗಕಾಮಿಗಳು, ಹಿಜಡಾಗಳು…ಹೀಗೆ ಅಂಚಿಗೆ ತಳ್ಳಲ್ಪಟ್ಟವರೂ ಮನುಷ್ಯರೇ ಎಂದೂ ತಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳುವ ಹಕ್ಕು ಅವರಿಗಿದೆ ಎಂದೂ ನಾವೆಲ್ಲ ಮನಗಾಣಬೇಕಾಗಿದೆ.

-ಜಯಶ್ರೀ. ಬಿ. ಕದ್ರಿ

ಸೋತು ಗೆದ್ದವರು

“ಆಕೆ ಲವಲವಿಕೆಯ ತರುಣಿ. ಮಾತೋ ಚಟಪಟಗುಟ್ಟುವ ಅರಳಿನಂತೆ. ಅವಳಿದ್ದಲ್ಲಿ ಮಾತು, ಕತೆ, ಜೋಕುಗಳು. ನಿನ್ನೆ ನೋಡಿದ ಸಿನೆಮಾ, ಯಾವುದೋ ಫ್ರೆಂಡ್ ಕಳುಹಿಸಿದ ಮೆಸೇಜ್, ಕಾಲೇಜಿಗೆ ಬರುತ್ತಿರುವಾಗ ನೋಡಿದ ತಮಾಷೆಯ ದೃಶ್ಯ ಹೀಗೆಲ್ಲ. ದಿಢೀರನೆ ಆಕೆ ಮೌನವಾದಳು. ಮಾತಿಲ್ಲ, ಕತೆಯಿಲ್ಲ. ಯಾರಾದರೂ ಮಾತನಾಡಿಸಿದರೆ ಸಿಡಾರನೆ ರೇಗಿ ಬಿಡುವಳು. ಸಾಲದ್ದಕ್ಕೆ ಉಳಿದವರೆಲ್ಲ ತನ್ನ ಬಗ್ಗೆಯೇ ಏನೋ ಮಾತನಾಡುತ್ತಾರೆ , ಅಪಹಾಸ್ಯ ಮಾಡಿ ನಗುತ್ತಾರೆ ಎನ್ನುವ ಭಾವನೆ, ಸಂಶಯ. ಮಂದಿ ನಾಲ್ಕು ದಿನ ನೋಡಿದರು. ಸಮಾಧಾನಿಸಲು ಪ್ರಯತ್ನಿಸಿದರು. ಈಕೆ ಮತ್ತಷ್ಟು ವ್ಯಗ್ರಳಾದಂತೆಲ್ಲ ಅವರೆಲ್ಲ ದೂರ ಸರಿದರು. ಈಗ ಆಕೆ ಒಂಟಿ. ಗಾಸಿಪ್ ಗೆ ಬಳಲಿದವಳಲ್ಲಿ ಒಬ್ಬಳು.
gossip‘ಗಾಸಿಪ್’ ಎನ್ನುವುದು ಹೀಗೆ. ಮಾತಾನಾಡುತ್ತಲೇ ಯಾರದೋ ವೈಯುಕ್ತಿಕ ವಿಷಯಗಳನ್ನು ಆಡಿಕೊಳ್ಳುವುದು, ಇನ್ನೊಬ್ಬರ ದೌರ್ಬಲ್ಯಗಳನ್ನು ಎನ್ ಕ್ಯಾಷ್ ಮಾಡಿಕೊಳ್ಳುವುದು. ಇವು ಸಾಮಾಜಿಕ ಬದುಕಿನ ಅಂಗಗಳೇ ಆಗಿಬಿಟ್ಟಿವೆ. ಹಾಗೆಂದು ಯಾರೋ ಆಡಿಕೊಳ್ಳುತ್ತಾರೆಂದು ನಮ್ಮ ಬದುಕು ಮುಂದುವರಿಯಬೇಕಲ್ಲ. ಯಾರೋ ಅಯೋಗ್ಯರ ಮಾತಿನ ಬಾಣಕ್ಕೆ ನೊಂದು ಬಸವಳಿಯುವ ಅಗತ್ಯ ನಮಗಿಲ್ಲ ಹೌದಾದರೂ ಆ ಕ್ಷಣಕ್ಕೆ ಅವು ಯಾತನೆಯನ್ನು, ಪರಿಭ್ರಮವನ್ನು ಉಂಟುಮಾಡುವುದು ಸತ್ಯ. ಇವು ‘ಸೋಶಿಯಲ್’ ಎಂದೆನಿಸಿಕೊಳ್ಳುವ ಹುಡುಗಿಯರ ವಿಷಯದಲ್ಲಿ ಇನ್ನು ಸರಿ. ತಮ್ಮ ಮಾತಿನ ನಡುವೆ ಕಳ್ಳೆಕಾಯಿಯಂತೆ ಇವರ ವಿಷಯಗಳನ್ನು ಇನ್ಯಾರೋ ಆಡಿಕೊಳ್ಳುತ್ತಾರೆ.
ಇವುಗಳಿಂದ ಪಾರಾಗಲೂ ಒಂದೇ ಒಂದು ಮಾರ್ಗ. ಆದಷ್ಟು ಮೌನವಾಗಿ ಇರುವುದು, ಅಗತ್ಯವಿದ್ದರೆ ದಿಟ್ಟತನದಿಂದ ಮಾರುತ್ತರೆ ಕೊಡುವುದು. ‘ಮೈಲ್ಡ್’ ಆಗಿರುವುದು ಎಲ್ಲಾ ಕಾಲಕ್ಕೂ ಸರಿಯೆಂದೇನಲ್ಲ. ಇನ್ನೂ ಒಳ್ಳೆಯ ವಿಧಾನ ಎಂದರೆ ಯಾರ ಬಗ್ಗೆಯೂ ನಾವೂ ಹೆಚ್ಚು ಮಾತನಾಡದೆ ಏನಿದ್ದರೂ ನೇರವಾಗಿ ಹೇಳಿಕೊಳ್ಳುವುದು.
ಮೇಲೆ ಹೇಳಿದ ಹುಡುಗಿ ಗಟ್ಟಿ ಮನಸ್ಸು ಮಾಡಿ ಬದುಕನ್ನು ಕೈಗೆತ್ತಿಕೊಂಡಳು. ಲೈಬ್ರೆರಿಯ ಪುಸ್ತಕಗಳು ಆಕೆಯನ್ನು ಕೈಬೀಸಿ ಕರೆದುವು. ಉತ್ತಮ ಪರ್ಸೆಂಟೇಜಿನಿಂದ ಮಾರ್ಕ್ಸ್ ತೆಗೆದು ಒಳ್ಳೆಯ ಉದ್ಯೋಗ, ಪತಿ , ಮಕ್ಕಳು ಹೀಗೆಲ್ಲ..ಈಗ ಆಕೆ ಸುಖಿ.
woman in distressಹೇಗಿರಬಹುದು ಆ ಕ್ಷಣ? ಆಕೆ ತಾನು ಪ್ರೀತಿಸಿದವನಿಗೋಸ್ಕರ ತನ್ನ ತಂದೆತಾಯಿಯನ್ನೂ ಕೂಡ ವಿರೋಧಿಸಿ ಮದುವೆಯಾದಳು. ಮದುವೆಯಾಗಿ ಆರು ತಿಂಗಳಲ್ಲಿ ಈತನ ಬಣ್ಣ ಬಯಲು. ದೈಹಿಕ ದೌರ್ಜನ್ಯ ನಡೆಸುವುದೇನು? ಇವಳ ಚಾರಿತ್ರ್ಯವನ್ನು ಸಂಶಯಿಸುವುದೇನು?ಕೆನ್ನೆಯ ಮೆಲಿನ ಹೊಡೆತದ ಊತವನ್ನು ಮೇಕಪ್ಪಿನಲ್ಲಿ ಮುಚ್ಚಿಕೊಂಡು ನಗುವಿನ ಮುಖವಾಡವನ್ನು ಹೊತ್ತುಕೊಂಡು ನೋಡುವವರಿಗೆ ‘ ಜಾಲಿ’ ಎಂದೆನಿಸುವಂತೆ ಬದುಕುತ್ತಿದ್ದಳು ಆಕೆ. ಕೊನೆಗೆ ಈತನ ತಾರಕಸ್ವರ ಅಪಾರ್ಟ್ ಮೆಂಟ್ ನ ಉಳಿದವರ ಕುತೂಹಲ ಕೆರಳಿಸುತ್ತಿದ್ದಂತೆ ಈತ ಆಕೆಯ ಕೆಲಸದ ಜಾಗಕ್ಕೂ ಬಂದು ಉಪಟಳ ಕೊಡುತ್ತಿದ್ದಂತೆ ಆಕೆ ಸಿಡಿದೆದ್ದಳು. ತನ್ನ ಎಳೆಯ ಮಗುವನ್ನು ಕಟ್ಟಿಕೊಂಡು ಮರಳಿ ಬದುಕು ಕಟ್ಟಿಕೊಳ್ಳಲು ಆಕೆ ಪಟ್ಟ ಬವಣೆ ಅಷ್ಟಿಷ್ತಲ್ಲ.
ನಮ್ಮ ಸಮಾಜದಲ್ಲಿ ವಿಧವೆಯರು, ವಿಚ್ಛೇದಿತೆಯರು, ಶೋಷಿತರು, ಪರಿತ್ಯಕ್ತರು ..ಇವರಿಗೆ ಸರಿಯಾದ ಸ್ಥಾನವೆಂಬುದಿಲ್ಲ. ‘ಡೈವೋರ್ಸ್’ ಎನ್ನುವ ಹಸರು ಕೇಳಿದರೆ ಸಾಕು, ಹೌಹಾರಿ ಬಿಡುತ್ತಾರೆ. ಅದೂ ಅಲ್ಲದೆ ಹೆಣ್ಣನ್ನೇ ತಾಳ್ಮೆಯಿಲ್ಲದವಳೆಂದೋ ಹೊಂದಾಣಿಕೆ ಇಲ್ಲದವಳೆಂದೋ ದೂಷಿಸುತ್ತಾರೆ.
ಈಕೆ ನರಳಿದಳು, ಬಿಕ್ಕಿದಳು, ರೌದ್ರಾವತಾರ ತಾಳಿದಳು, ಮರಳಿ ಪ್ರಶಾಂತವಾಗಿ ಚಿಂತಿಸಿ ಮಗುವಿನ ಭವಿತವ್ಯಕ್ಕೋಸ್ಕರ ಗಟ್ಟಿಯಾಗಿ ನಿಂತು ಹೋರಾಡಿದಳು. ಈಗ ಸಮಾಜ ಆಕೆಯ ಪರಿಶ್ರಮವನ್ನು, ತ್ಯಾಗವನ್ನು ಗುರುತಿಸಿದೆ. ಅವಳ ಕೆಚ್ಚನ್ನು, ಹೋರಾಟದ ಛಲವನ್ನು ಗೌರವಿಸುತ್ತಿದೆ. ಆಕೆ ಕೂಡ ಸೋಶಿಯಲ್ ಸರ್ವಿಸ್ ಮುಖಾಂತರ ನೊಂದವರ ಕಣ್ಣಿರು ಒರಸುತ್ತಿದ್ದಾಳೆ.
ಆಕೆ ಚೂಟಿಯಾದ ಹುಡುಗಿ. ಓದಬೇಕು, ಇನ್ನಷ್ಟು ಓದಬೇಕು, ದೊಡ್ಡ ಕೆಲಸ ಪಡೆಯಬೇಕು ಹೀಗೆಲ್ಲಾ ಆಸೆ. ಜಾತಕ ಪ್ರಕಾರ ಆಕೆಗೆ ಹದಿನೆಂಟನೆಯ ವಯಸ್ಸಿಗೆ ಮದುವೆಯಾಗದಿದ್ದರೆ ಆಮೇಲೆ ಮದುವೆ ಯೋಗವಿಲ್ಲವಂತೆ. ಸರಿ. ಕಾಲೇಜು ಬಿಡಿಸಿ ಆಕೆಯನ್ನು ಮದುವೆ ಮಾಡಿಕೊಟ್ಟರು. ತನಗಿಂತ ದಡ್ಡಿಯರು ಡಿಗ್ರಿ ಪಾಸು ಮಾಡಿಕೊಂಡು ಉದ್ಯೋಗ, ಭಡ್ತಿ, ಹೀಗೆಲ್ಲಾ ಆರಾಮವಾಗಿದ್ದರೆ ಆಕೆ ದೊಡ್ಡಾ ಸಂಸಾರದ ನೂರೆಂಟು ತಾಪತ್ರಯಗಳ ನಡುವೆ ಕೈಯಲ್ಲಿ ತನ್ನದೇ ಕಾಸು ಕೂಡ ಇಲ್ಲದೆ ನರಳುತ್ತಿದ್ದಾಳೆ.
‘ಮದುವೆ’ ಎನ್ನುವ ಸ್ವಂತ ವಿಷಯ ಕೂಡ ಅನೇಕ ಆಯಾಮಗಳಿಂದ ಕೂಡಿದ ದೇಶ ನಮ್ಮದು. ಅದೆಷ್ಟೋ ಅದುಮಿಟ್ಟ ಕಣ್ಣೀರು, ಕನಸುಗಳು ಈ ಕೌಟುಂಬಿಕ ವ್ಯವಸ್ಥೆಯಲ್ಲಿ . ಕಟ್ಟುಪಾಡುಗಳು, ಒತ್ತಡಗಳೋ ನೂರೆಂಟು. ಈ ಹುಡುಗಿ ಮಾತಿಲ್ಲದೆ ಮೌನವಾಗಿ ಬಾಳಬಂಡಿ ಸವೆಸಿದಳು. ಮಕ್ಕಳು ಬೆಳೆದು ದೊಡ್ಡವರಾದಂತೆ ಆಕೆಯ ಕನಸುಗಳು ಗರಿಗೆದರಿದುವು. ತನ್ನ ಭಾವನೆಗಳನ್ನು ಅನುಭವಗಳನ್ನು ಅಕ್ಷರ ರೂಪಕ್ಕಿಳಿಸುತ್ತ ಕವಯಿತ್ರಿಯಾಗಿ, ಕಥೆಗಾರ್ತಿಯಾಗಿ ಬೆಳೆದಳು.
enough is enoughಖ್ಯಾತ ವಿಮರ್ಶಕ ಡಾ.ರಾಜೇಂದ್ರ ಚೆನ್ನಿಯರು ತಮ್ಮ ಬರಹವೊಂದರಲ್ಲಿ ‘ಕುಟುಂಬ’, ‘ಸಂಪ್ರದಾಯ’, ‘ಧರ್ಮ’ ಹಾಗೂ ‘ನೈತಿಕತೆ’ ಗಳ ಹೆಸರಿನಲ್ಲಿ ಅಸಮಾನತೆ ಹಾಗು ಅಸ್ವಾತಂತ್ರ್ಯಗಳನ್ನು ಮಹಿಳೆಯರ ಮೇಲೆ ಹೇರಲಾಗುತ್ತಿದೆ ಎಂದು ವಿಶ್ಲೇಷಿಸುತ್ತಾರೆ. ಈ ನಾಲ್ಕೂ ಸಂಸ್ಥೆಗಳಲ್ಲಿ ‘ಹಿಂಸೆ’ ಅಂತರ್ಗತವಾಗಿದೆ. ಹಾಗೆಂದು ಅವು ಇಲ್ಲದೆ ಸಾಮಾಜಿಕ ವ್ಯವಸ್ಥೆ ಎನ್ನುವುದೊಂದು ಇರುವುದಿಲ್ಲ.
ಒಟ್ಟಿನ ಮೇಲೆ ವಿವಾಹ ಸಂಸ್ಥೆ, ಕೌಟುಂಬಿಕ ವ್ಯವಸ್ಥೆ, ಧಾರ್ಮಿಕತೆ, ನೈತಿಕ ರೀತಿ ರಿವಾಜುಗಳು ಇಲ್ಲದಿದ್ದರೆ ಎಷ್ಟು ಕಷ್ಟವೋ, ಅವು ಈಗಿರುವಂತೆ ಉಂಟು ಮಾಡುವ ತಲ್ಲಣಗಳೂ ಅಷ್ಟೇ ‘ರಿಯಲ್’ ಆಗಿವೆ.


– ಜಯಶ್ರೀ ಬಿ. ಕದ್ರಿ

Paying Homage to UR Ananta Murthy


UR Ananthamurthy

Recently I had been teaching Sons and Lovers, the most admirable   novel by D.H. Lawrence and I cannot but draw parallel between some of the insights of Lawrence and UR Anantamurthy. One of the greatest cultural thinkers and creative writers of our times, , Karnataka  has lost  its   most influential    intellectual giant. Though I am not a  student of  Kannada literature, my limited reading of his texts, viz, Samskaara,,Avasthe ,Suragi, Preeti mrutyu bhaya  and Maatu sota bhaarata have only  increased my awe, adoration and sheer admiration for his intellectual strength and keen insight into the heart of things.    Manasa Gangotri, where I studied still breathes   the fragrant memories of    U R A and I believe he still lives in the hearts and minds of numerous academicians, students and media personalities.   In fact, the whole   intellectual arena of Indian languages, most importantly Kannada and English   academia are deeply indebted to U R Ananta Murthy.
SamskaraThough some of his views regarding religion, sex even are controversial, one cannot deny the sheer truth behind those statements. I believe most of his view points and ideologies have been politicized, a great injustice to a man of such intellectual caliber.
One cannot but feel ashamed and annoyed at the blatant show of intolerance, stupidity and ignorance of the very concept of religion by the so called protectors of Hinduism. Anantamurthy still lives among us as he has directly influenced a whole generation of writers, thinkers as well as a brand of hardcore literature professors(both English and Kannada), who in turn have been influencing  their students(of course by analyzing  and reflecting on his opinions).

May his soul rest in Peace. ..


– Jayashree B, Kadri

ಮಳೆ, ಇಳೆ, ಪ್ರಕೃತಿ

‘ಧೋ’ ಎಂದು ಜಡಿಮಳೆ ಸುರಿದು ಭೂಮಿ ತಾಂಪಾಗಿರುವ ಈ ಕಾಲದಲ್ಲಿ, ವರ್ಷ ಧಾರೆಯಲ್ಲಿ ಮಿಂದು ಮೈ ಮನಸ್ಸು ಮಿದುವಾಗಿರುವ ಈ ಸುಂದರ ಪರಿಸರದಲ್ಲಿ, ಮಳೆ, ಇಳೆ, ಪ್ರಕೃತಿ .. ಹೀಗೊಂದು ಪುಟ್ಟ ಲಹರಿ.
ಮಳೆಗೂ ಮನಸ್ಸಿಗೂ ಅವಿನಾ ಭಾವ ಸಂಬಂಧ. ನೋಟ್ ಬುಕ್ಕಿನ ಕೊನೆಯ ಪೇಜಿನಲ್ಲಿ ಹದಿಹರಯದಲ್ಲಿ ಬರೆಯುವ ಕವಿತೆಗಳಿಂದ ತೊಡಗಿ ಮಿಂಚು ಹುಳ ರಾತ್ರಿಯಲ್ಲಿ ಜೀರುಂಡೆಗಳ ಸದ್ದು ಕೇಳುತ್ತ, ಗುಡುಗು ಸಿಡಿಲಿಗೆ , ಆಗಾಗ ಅಪ್ಪಳಿಸುವ ಕೋಲ್ಮಿಂಚಿಗೆ ನಡುಗುತ್ತ, ಕಗ್ಗತ್ತಲಿನ ನೀರವ ಮೌನವನ್ನು ಆಸ್ವಾದಿಸುತ್ತ, ಬಾಳಿನ ಬಗ್ಗೆ, ಭೌಮದ ಬಗ್ಗೆ ಏನೇನನ್ನೋ ಕಲ್ಪಿಸುತ್ತ, ನಿಸರ್ಗದಲ್ಲಿ ತಾದಾತ್ಮ್ಯ ಹೊಂದುವ ಬಗೆ.
girl-and-rain-dark-1
‘ಮಲೆಗಳಲ್ಲಿ ಮದು ಮಗಳು’ ಇತ್ಯಾದಿ ಕಾದಂಬರಿಗಳನ್ನು ನಾವು ಓದಿದ್ದೇ ಅಟ್ಟದ ನಸುಗತ್ತಲೆಯಲ್ಲಿ ಬೆಚ್ಚಗೆ ಕುಳಿತು ಜಡಿ ಮಳೆಯ ಆಲಾಪದಲ್ಲಿ, ಸೋನೆ ಮಳೆಯ ನಲ್ಮೆಯ ಆಪ್ತತೆಯಲ್ಲಿ. ಇನ್ನು ಈಗಿನ ವಿದ್ಯಾರ್ಥಿಗಳಿಗೂ ಪರಿಸರ ಪ್ರೀತಿ ಇಲ್ಲವೆಂದೇನಿಲ್ಲ. “ನಿಮ್ಮ ನೆಚ್ಚಿನ ಸಾಹಿತಿ ಯಾರು?” ಎಂದು ಕೇಳಿದ ಕೂಡಲೇ ವಿದ್ಯಾರ್ಥಿ ಸಮುದಾಯದಿಂದ ಥಟ್ಟನೆ ಬರುವ ಉತ್ತರ ಪೂರ್ಣ ಚಂದ್ರ ತೇಜಸ್ವಿ, ಚೇತನ್ ಭಗತ್, ಅಮಿಶ್ ತ್ರಿಪಾಠಿ. ಕನ್ನಡ ಪುಸ್ತಕಗಳನ್ನು ಓದುವುದೇ ಕಡಿಮೆ ಆಗುತ್ತಿರುವ ಈ ಕಾಲದಲ್ಲಿ ತೇಜಸ್ವಿಯವರ ‘ಕರ್ವಾಲೋ’, ‘ಪರಿಸರದ ಕತೆ’ಗಳನ್ನು ಈಗಲೂ ಮಕ್ಕಳು ಇಷ್ಟಪಟ್ಟು ಓದುತ್ತಾರೆ ಎನ್ನುವುದೇ ನಿಸರ್ಗದ ಅಸೀಮ ಕೌತುಕಕ್ಕೆ, ನಿಗೂಢ ವಿಸ್ಮಯಕ್ಕೆ, ಜೀವಜಾಲಗಳ ನಿತ್ಯ ವಿನೂತನ ವಿದ್ಯಮಾನಗಳ ಅರಿವು ಮಾನವನಲ್ಲಿ ಹುಟ್ಟಿಸುವ ಬೆರಗಿಗೆ ಸಾಕ್ಷಿ.
ಮಳೆಗಾಲವೆಂದರೆ ಆಪ್ತ ಗೆಳೆಯ. ಬೇಸಗೆಯ ಬೇಗೆ ನೀಗಿದ ಚೇತೋಹಾರಿ ಅನುಭವ. ಬೀಸುಗಾಳಿಯ ಮೊರೆತಕ್ಕೂ , ಕಡಲಲೆಗಳ ಅಬ್ಬರಕ್ಕೂ ಸಾಕ್ಷಿಯಾಗುವ ಮನ. ಇನ್ನು ಮಳೆಗಾಲಕ್ಕೇ ಮೀಸಲಾಗಿರುವ ವಿಶಿಷ್ಟ ತಿಂಡಿ ತಿನಿಸುಗಳು, ಸೊಪ್ಪು ತರಕಾರಿಗಳು ಹೀಗೆ ಅದೊಂದು ವರ್ಷ ವೈಭವ.
‘ಮಳೆಗಾಲ ಬಂದಾಗ ಒಳಗ್ಯಾಕ ಕುಂತೇವ’ ಎನ್ನುವ ಆಪ್ಯಾಯ ಮಾನ ಹಾಡಿನಿಂದ ಹಿಡಿದು ‘ಮುಂಗಾರು ಮಳೆ’ಯ ಶುದ್ಧ ದೇಸಿ ರೊಮಾನ್ಸ್ ವರೆಗೆ , ‘ದ್ವೀಪ’ದಂತಹ ಪರಿಸರ ಕಾಳಜಿಯ ಚಲನಚಿತ್ರದ ವರೆಗೆ ಮಳೆಹಾಡಿನ ಸರಿಗಮ ನಮ್ಮ ಭಾವ ಕೋಶಗಳನ್ನು ಮೀಟಿ, ಎದೆಯ ತಂತಿಯನ್ನು ಮಿಡಿದು ಬೆಚ್ಚನೆಯ ಪುಳಕಗಳನ್ನು, ಮೌನದ ನಿಟ್ಟುಸಿರುಗಳನ್ನು, ಅಸಂಖ್ಯ ಕಾಮನೆ, ಕನವರಿಕೆ, ಕನಸು ಕಣ್ಣೋಟಗಳನ್ನು ಹುಟ್ಟು ಹಾಕುವ ಶಕ್ತಿ ಇರುವಂತಹದ್ದು. ಭುವಿಯ ನಿಶ್ಶಬ್ದ ಆರ್ತತೆಯನ್ನು , ಕಾದ ತಪ್ತತೆಯ ಕಂಪನವನ್ನು ಮನಗಂಡು ಇನ್ನಿಲ್ಲದ ಆರ್ದ್ರತೆಯಿಂದ ಬಾನು ಸುರಿಯುವ ಒಲುಮೆಯೇ ಸೋನೆ ಮಳೆ!
ಈ ಭಾವುಕ ಕನವರಿಕೆಗಳನ್ನು ಒತ್ತಟ್ಟಿಗಿಟ್ಟುಕೊಂಡರೆ ಕಣ್ಣಿಗೆ ರಾಚುವುದು ನಮ್ಮ ಪರಿಸರದ ವ್ಯಾಪಕ ವಿನಾಶ. ನಾವು ಪುಟ್ಟ ಮಕ್ಕಳಾಗಿದ್ದಾಗ ಅಸಂಖ್ಯಾತ ಚಿಟ್ಟೆಗಳು, ಬಣ್ಣ ಬಣ್ಣದ ಹಕ್ಕಿಗಳನ್ನು ನೋಡಲು ಬಟರ್ ಫ಼್ಲೈ ಪಾರ್ಕಿಗೋ , ಫ಼ಿಲ್ಮ್ ಸಿಟಿಗೋ ಹೋಗಬೇಕಿರಲಿಲ್ಲ. ಈಗ ನೋಡಿದರೆ ಒಂದು ಬೊಗಸೆ ಮಣ್ಣಿರದ ನಗರದ ಫ಼್ಲಾಟುಗಳಲ್ಲಿ ಬದುಕುತ್ತ, ಪ್ರಕೃತಿಗೆ ಪೂರಾ ವಿಮುಖವಾಗಿರುವ ಬದುಕು.
ಭಾರತದ ಮೊದಲ ಬಾಹ್ಯಾಕಾಶ ಯಾನಿ ರಾಕೇಶ್ ಶರ್ಮಾ ಅವರು ಅಂತರಿಕ್ಷದಿಂದ ಭಾರತ ಹೇಗೆ ಕಾಣಿಸುತ್ತದೆ ಎಂದಾಗ ‘ಸಾರೇ ಜಹಾಂಸೆ ಅಚ್ಛಾ‘ ಎಂದು ಹೇಳಿದರಂತೆ. ಈಗಿನ ಸೆಟಲೈಟ್ ಪಿಕ್ಚರ್ ಗಳು ಬೇರೆಯೇ ಕಥೆಯನ್ನು ಹೇಳಬಹುದು.ಮಾನವ ಸಂಪನ್ಮೂಲ ದಿನೇ ದಿನೇ ಹೆಚ್ಚಾಗುತ್ತ, ಪ್ರಾಕೃತಿಕ ಸಂಪನ್ಮೂಲಗಳು ಅದೇ ವೇಗದಲ್ಲಿ ಕ್ಶೀಣಿಸುತ್ತಿರುವ ಈ ಕಾಲ ಘಟ್ಟದಲ್ಲಿ ನಿಸರ್ಗವನ್ನು ಕಾಪಿಟ್ಟುಕೊಳ್ಳುವುದು ನಮ್ಮ ಕರ್ತವ್ಯವೂ, ಕಾಲದ ಎಚ್ಚರವೂ ಆಗಿದೆ.ಬಾಬಾ ಆಮ್ಟೆ, ಅಣ್ಣಾ ಹಜಾರೆ, ಮೇಧಾ ಪಾಟ್ಕರ್, ಅರುಂಧತಿ ರಾಯ್ , ಮಾಧವ ಗಾಡ್ಗೀಳ್ ಹೀಗೆ ಪರಿಸರ ಕಾಳಜಿಯ ಬರಹಗಾರರು, ರಾಜಕಾರಣಿಗಳು, ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರು ಇದಕ್ಕೆ ಸ್ಪಂದಿಸಿದ್ದಾರೆ ಕೂಡ.
ಸ್ವತಂತ್ರ ಭಾರತದ ‘ಅಭಿವೃದ್ಧಿ’ಯ ಪರಿಕಲ್ಪನೆ ಎಲ್ಲೋ ತಾಳ ತಪ್ಪಿದ್ದಕ್ಕೆ ಸಾಕ್ಷಿಯಾಗಿ ಪರಿಸರದ ವ್ಯಾಪಕ ವಿನಾಶ, ನಗರೀಕರಣ, ದೈನ್ಂದಿನ ಜೀವನದ ಅಂತರ್ಗತ ತಲ್ಲಣಗಳು ಹೆಚ್ಚುತ್ತಲೇ ಇವೆ. ಉದಾಹರಣೆಗೆ, ಒಂದು ಕೊಡ ನೀರಿಗೆ ನದೆಯುವ ಬೀದಿ ಜಗಳಗಳು, ಭೂಮಿಗೋಸ್ಕರ ಕಾದಾಟ, ಮಧ್ಯಮ ವರ್ಗಕ್ಕೆ ಕನಸಾಗಿ ಹೋದ ಸ್ವಂತ ಮನೆ (ಸಿಟಿಯ ಹೊರವಲಯದ ಹೊರತಾಗಿ) ಲ್ಯಾಂಡ್ ಮಾಫ಼ಿಯಾ.. ಹೀಗೆ.
ಮಾನ್ಯ ಜವಾಹರ್ ಲಾಲ್ ನೆಹರೂ ಅವರು ‘ಅಣೆಕಟ್ಟುಗಳು ಆಧುನಿಕ ಭಾರತದ ದೇವಾಲಯಗಳಿದ್ದಂತೆ’ ಎಂದು ಹೇಳಿದ್ದರಂತೆ.ಸ್ವಾತಂತ್ರ್ಯೋತ್ತರ ಭಾರತದ ಆಗಿನ ಚಾರಿತ್ರಿಕ ಸಂದರ್ಭದಲ್ಲಿ ಅದು ಸರಿಯಾಗಿದ್ದಿರಬಹುದಾದರೂ ಈಗಿನ ಎಗ್ಗಿಲ್ಲದ ಅರಣ್ಯ ಒತ್ತುವರಿ, ಹೂಳು ತುಂಬಿದ ಕೆರೆಗಳು, ಅನಾಯಾಸವಾಗಿ ಆಕ್ರಮಿಸಲ್ಪಡುವ ರೈತರ ಭೂಮಿ, ಕಿತ್ತುಕೊಳ್ಳಲ್ಪಡುವ ಆದಿವಾಸಿಗಳ ಹಕ್ಕುಗಳು… ಹೀಗೆ ಪರಿಸರದಿಂದ ಲಭಿಸುವ ಉತ್ಪನ್ನಗಳ ಲಾಭ ಪಡೆಯುತ್ತಿರುವುದು ಕೆನೆಪದರದ ವರ್ಗ. ಕುಡಿಯುವ ನೀರು ಕೂಡ ಲಾಭದಾಯಕ ಉದ್ಯಮವಾಗಿರುವ, ತಿನ್ನುವ ತರಕಾರಿ ಕೂಡ ವಿಷಮಯವಾಗಿರುವ ಈ ಸಂದರ್ಭದಲ್ಲಿ ಅಭಿವೃದ್ಧಿಯೊಂದಿಗೆ ತಳಕು ಹಾಕಿಕೊಂಡಿರುವ ಪರಿಸರ ವಿನಾಶವನ್ನು ಈಗಲಾದರೂ ಎಚ್ಚೆತ್ತುಕೊಂಡು ಪರಿಗಣಿಸಲೇ ಬೇಕು.
rain3
ನಮ್ಮ ದೇಶದ ವ್ಯಂಗ್ಯವೆಂದರೆ ಪರಿಸರವನ್ನು ಕಾಪಾಡುತ್ತಿರುವ ಹಳ್ಳಿಗರಿಗೆ ಅದರ ಪ್ರಯೋಜನ ಲಭಿಸುವುದಿಲ್ಲ. ಉದಾಹರಣೆಗೆ ಡ್ಯಾಮ್ ಗಳ ಪಕ್ಕದ ಹಳ್ಳಿಗಳಲ್ಲಿ ನೀರಿಗೆ ತತ್ವಾರ. ಅದೇ ನದಿ ನೀರಿನ ಹೆಚ್ಚಿನಂಶ ಸಿಟಿಗಳಿಗೆ ನೀರು ಪೂರೈಸಲು, ವಿದ್ಯುತ್ ಉತ್ಪಾದಿಸಲು ವಿನಿಯೋಗ. ಸಿಟಿಗಳಲ್ಲಿ ಝಗಮಗಿಸುವ ಜಾಹೀರಾತು ಫಲಕಗಳು, ಹಳ್ಳಿಗಳಲ್ಲಿ ವೋಲ್ಟೇಜ್ ಇಲ್ಲದ ಮಿಣುಕು ಬಲ್ಬ್ ಗಳು. ಅನ್ನ ಬೆಳೆಯುವ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ; ರಾಸಾಯನಿಕ ಗೊಬ್ಬರ, ಸುಧಾರಿತ ತಳಿ ಬೀಜ ಮಾರುವ ಕಂಪೆನಿಗಳು ಲಾಭ ಮಾಡಿಕೊಳ್ಳುತ್ತವೆ.
ಈ ಎಲ್ಲ ಸಮಸ್ಯೆಗಳಿಗೆ ಮೇಲ್ನೋಟಕ್ಕೇ ಕಾಣುವ ಕಾರಣ ಜನಸಂಖ್ಯಾ ಸ್ಫೋಟ ಹಾಗೂ ಭ್ರಷ್ಟಾಚಾರ. 1947 ರಲ್ಲಿ ಮುವತ್ತು ಕೋಟಿ ಇದ್ದ ಜನಸಂಖ್ಯೆ ಈಗ 1.27 ಬಿಲಿಯನ್ ಗೆ ಏರಿದೆ. ಹೀಗಾಗಿಯೇ ಯಾವುದೇ ಅಭಿವೃದ್ಧಿ ಯೋಜನೆಯ , ಪರಿಹಾರ ಯೋಜನೆಗಳ ಫಲ ಅರ್ಹರಿಗೆ ಲಭಿಸುವುದು ಕಡಿಮೆ. ತಮ್ಮ ಕೃತಿ ‘ಬರ ಎಂದರೆ ಎಲ್ಲರಿಗೂ ಇಷ್ಟ’ ದಲ್ಲಿ ಪಿ. ಸಾಯಿನಾಥ್ ಇದನ್ನು ಮನಮಿಡಿಯುವಂತೆ ವಿವರಿಸುತ್ತಾರೆ. ನೆಲ, ಜಲ, ಕಾಡು, ಖನಿಜ ಸಂಪತ್ತು, ಉತ್ತಮ ವಿದ್ಯಾಭ್ಯಾಸ, ಉದ್ಯೋಗಾವಕಾಶಗಳ ಮೇಲಣ ಸ್ವಾಯತ್ತತೆ ಸಮಾಜದ ಒಂದು ವರ್ಗಕ್ಕೇ ಸೀಮಿತವಾಗಿರುವಂತಿದೆ. ಹೀಗೆ ದಮನಿಸಲ್ಪಟ್ಟಿರುವ ಜನರ ಆಕ್ರೋಶವೇ ನಕ್ಸಲೈಟ್ ಸಮಸ್ಯೆ, ಇನ್ನಿತರ ಹಿಂಸಾತ್ಮಕ ಚಳವಳಿಗಳಲ್ಲಿಕಂಡುಬರುತ್ತದೆ.
ಪರಿಸರ, ಭೂಮಿ, ಭೂಮಿಯನ್ನು ಹೊಂದಿರುವುದು ಅಥವಾ ಭೂಮಿ ಇಲ್ಲದೆ ಇರುವುದು ಇವೆಲ್ಲ ನಮ್ಮ ಸಾಹಿತ್ಯ, ಕಲೆ, ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಉದಾಹರಣೆಗೆ ಜಮೀನ್ದಾರಿ ಪದ್ಧತಿಯಲ್ಲಿ ಭೂಮಿಯಿಲ್ಲದ ಚೋಮನಂತಹವರ ಬವಣೆ. ಕೆರೆಗೆ ಹಾರವಾದ ಭಾಗೀರಥಿ. ಭೂಮಿಗೋಸ್ಕರ, ಆಸ್ತಿಗೋಸ್ಕರ ಕಾದಾಡಿಕೊಳ್ಳುವ ಸಹೋದರರು. ರಾಜ್ಯ, ರಾಷ್ಟ್ರಗಳ ನಡುವೆ ಗಡಿ ವಿವಾದ, ನೀರಿಗೋಸ್ಕರ ವ್ಯಾಜ್ಯಗಳು. ಫಲವತ್ತಾದ ಹೊಲಗದ್ದೆಗಳು ಯಾವುದೋ ಪ್ರೊಜೆಕ್ಟ್ ಗೋಸ್ಕರ , ಶ್ರೀಮಂತರ ಬಡಾವಣೆಗೋಸ್ಕರ ಸೈಟುಗಳಾಗಿ ಪರಿವರ್ತನೆಗೊಳ್ಳುವುದು. ತಮ್ಮದೇ ನೆಲದಲ್ಲಿ ಕಟ್ಟಿದ ವಿಮಾನ ನಿಲ್ದಾಣ, ಇನ್ನಿತರ ಐಶಾರಾಮಿ ಕಟ್ಟಡಗಳ ಒಳಗೆ ಹೋಗಲು ಸಾಧ್ಯವಾಗದ ‘ಪರಿಸರ ನಿರಾಶ್ರಿತರು.(ಖ್ಯಾತ ಪರಿಸರವಾದಿ ಮಾಧವ ಗಾಡ್ಗೀಳ್ ಬಳಸಿದ ಪದ) ಲ್ಯಾಂಡ್ ಮಾಫಿಯಾದ ಬೆಚ್ಚಿ ಬೀಳುವ ದೃಷ್ಟಾಂತಗಳು.
ಪರಿಸರ ಆಂದೋಲನದಲ್ಲಿ ಮುಂಚೂಣಿಯಲ್ಲಿ ಗುರುತಿಸಲ್ಪಟ್ಟವರು ಮೇಧಾ ಪಾಟ್ಕರ್(ನರ್ಮದಾ ಬಚಾವೋ ಆಂದೋಲನ) , ಸುಂದರಲಾಲ್ ಬಹುಗುಣ (ಚಿಪ್ಕೋ ಚಳವಳಿ, ಅರುಂಧತಿ ರಾಯ್, ಕುಸುಮಾ ಸೊರಬ, ಸಾಲು ಮರದ ತಿಮ್ಮಕ್ಕ, ನಾರಾಯಣ ರೆಡ್ಡಿ.. ಇನ್ನೂ ಹಲವರು. ಇವರಲ್ಲದೆ ನಾಗೇಶ್ ಹೆಗಡೆ ಮೊದಲುಗೊಂಡು ನಾಡಿನ ಖ್ಯಾತ ಪತ್ರಿಕೆಗಳಲ್ಲಿ ಬರೆಯುತ್ತಿರುವ ಅಂಕಣಕಾರರು, ಪರಿಸರ ಸ್ನೇಹಿಗಳು ಹೀಗೆಲ್ಲ.woman-tree
ಪರಿಸರ ಸಂರಕ್ಷಣೆಯಲ್ಲಿ ಸಂಘ ಸಂಸ್ಥೆಗಳು, ವಿದ್ಯಾರ್ಥಿ ಸಮುದಾಯದ ಪಾತ್ರ ಹಿರಿದು. ಹಾಗೆಯೇ ದೇಶದ ಜನಸಂಖ್ಯೆಯ ಹೆಚ್ಚು ಕಡಿಮೆ ಅರ್ಧದಷ್ಟಿರುವ ಮಹಿಳೆಯರದ್ದು ಕೂಡ. ಈ ನಿಟ್ಟಿನಲ್ಲಿ ‘ಇಕೋ ಫ಼ೆಮಿನಿಸಂ’ ಇದೀಗ ಸ್ತೀ ವಾದದಲ್ಲಿ ಪ್ರಚಲಿತವಾಗುತ್ತಿರುವ ಶಬ್ದ. ಯಾವ ದೇಶದಲ್ಲಿ ಪ್ರಕೃತಿಯನ್ನು ಗೌರವಿಸುವುದಲ್ಲವೋ ಅಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತದೆ ಎಂದು ಈ ಥಿಯರಿ ಪ್ರತಿಪಾದಿಸುತ್ತದೆ ಹಾಗೂ ಭಾರತದ ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಇದು ಅಕ್ಶರಶ ಸತ್ಯವೇ ಆಗಿದೆ.
ಈ ಸಹನಾಮಯಿ ಧರಿತ್ರಿ, ತಾಯಿ ಭೂಮಿ ಸಹನೆಯ ಕಟ್ಟೆಯೊಡೆದು ಹೃಷಿಕೇಶ, ಕೇದಾರದಂತೆ ಮಗದೊಮ್ಮೆ ಪಾಠ ಕಲಿಸುವ ಮುನ್ನ, ನಿಸರ್ಗದ ಕ್ರೋಧದಲೆಗಳು ಸುನಾಮಿಯಂತೆ ಅಪ್ಪಳಿಸುವ ಮುನ್ನ ನಾವೆಲ್ಲ ಎಚ್ಚರಗೊಂಡು ನಿಸರ್ಗವನ್ನು ಸಂರಕ್ಷಿಸಲು ಪಣ ತೊಡಬೇಕಾಗಿದೆ.

– ಜಯಶ್ರೀ. ಬಿ. ಕದ್ರಿ