Friday, 7 November 2014

ಮಹಿಳಾ ಸಾಹಿತ್ಯದ ಇತಿಮಿತಿಗಳು

ಇತ್ತೀಚಿಗೆ ನಾನು ಕನ್ನಡದ ಪ್ರಮುಖ ಲೇಖಕ-ಲೇಖಕಿಯರ ಆತ್ಮ ಕಥೆಗಳನ್ನು ಪಟ್ಟು ಹಿಡಿದು ಜಿದ್ದಿಗೆ ಜಿದ್ದಂತೆ ಓದಿದೆ. ಇದು ಸಂಶೋಧನಾ ಲೇಖನವೇನಲ್ಲವೆಂದೂ, ಕೇವಲ ಆಸಕ್ತಿಯಿಂದ ಗಮನಿಸಿದ ಅಂಶಗಳೆಂದೂ ಮೊದಲೇ ಸ್ಪಷ್ಟಪಡಿಸಿಕೊಳ್ಳುತ್ತ ಕೆಲವೊಂದು ವಿಚಾರಗಳನ್ನು ಬರೆಯಲಿಚ್ಛಿಸುತ್ತೇನೆ. ಲೇಖಕರಿಗೆ ಹೋಲಿಸಿದರೆ ಲೇಖಕಿಯರ ಆತ್ಮಕತೆಗಳು ವಿರಳ ಈಗಾಗಲೇ ಸಾಹಿತ್ಯ ಪ್ರಪಂಚದಲ್ಲಿ ಸ್ಥಾನಗಳಿಸಿಕೊಂಡಿರುವ ಪ್ರತಿಭಾ ನಂದಕುಮಾರರ, ‘ಅನುದಿನದ ಅಂತರಗಂಗೆ,’ ಸಾರಾ ಅಬೂಬಕರ್ ಅವರ ‘ ಹೊತ್ತು ಕಂತುವ ಮುನ್ನ ‘, ಪ್ರೇಮ ಕಾರಂತರ್ ಸೋಲಿಸಬೇಡ ಗೆಲಿಸಯ್ಯ, ಉಷಾ ರೈರವರ ‘ ಯಾವ ನಾಳೆಯೂ ನಮ್ಮದಲ್ಲ′, ಹಾಗೂ ಇಂದಿರಾ ಲಂಕೇಶ್ ರವರ ‘ ಹುಳಿ ಮಾವಿನ ಮರ ಮತ್ತು ನಾನು’ ಪುರುಷ ಲೇಖರಲ್ಲಿ ಓದಿದವುಗಳು ಗಿರೀಶ್ ಕಾರ್ನಾಟರ ಆಡಾಡತ ಆಯುಷ್ಯ’ ಸಿ‌ಎನ್ನಾರ್ ರವರ ‘ನೆರಳುಗಳ ಬೆನ್ನು ಹತ್ತಿ’, ಬಿ.ವಿ.ಕಾರಂತರ ‘ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’, ದೇವನೂರು ಮಹದೇವರ ‘ ಎದೆಗೆ ಬಿದ್ದ ಅಕ್ಷರ (ಬೇಸಿಕಲಿ ಬಿಡಿ ಬರಗಳ ಸಂಗ್ರಹ), ಸಿದ್ದಲಿಂಗಯ್ಯನವರ ‘ ಊರುಕೇರಿ’, ಲಂಕೇಶ್ ರವರ ‘ ಹುಳಿಮಾವಿನ ಮರ’, ಅನಂತ ಮೂರ್ತಿಯವರ ‘ ಸುರಗಿ’, ಕುಪ್ಪೆ ನಾಗರಾಜರವರ ‘ ಅಲೆಮಾರಿಯ ಅಂತರಂಗ ಹಾಗೂ ಎಸ್.ಎಲ್. ಬೈರಪ್ಪರವರ ‘ ಭಿತ್ತಿ’
ಪುರುಷ ಲೇಖಕರ ಆತ್ಮಕತೆಗಳಲ್ಲಿ ಮುಖ್ಯವಾಗಿ ಕಂಡುಬರುವುದು ಅವರ ಬಾಲ್ಯದ, ಯೌವನದ ಚಿತ್ರಣ, ಅವರ ಬಡತನ, ವಿದ್ಯಾಭ್ಯಾಸಕ್ಕಾಗಿ ಸ್ಕೂಲು, ಹಾಸ್ಟೆಲುಗಳಲ್ಲಿ ಅವರು ಪಟ್ಟ ಬವಣೆಗಳು, ಅಪಮಾನ ತಿರಸ್ಕಾರಗಳು, ಹಾಗೆಯೇ ಅವರ ಪ್ರತಿಭೆಯಿಂದ ಅವುಗಳನ್ನು ಅವರು ಮೀರಿ ನಿಂತ ಬಗೆ, ದಲಿತ ಸಂವೇದನೆ, ಬ್ರಾಹ್ಮಣತ್ವದ ಛಾಯೆ ಹೀಗೆ ಭಿನ್ನ ಭಿನ್ನ ತಾತ್ವಿಕ ದೃಷ್ಟಿಕೋನಗಳಿರುವ ಈ ಬರಹಗಳು ಒಂದಿಡೀ ತಲೆಮಾರಿನ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು, ಸಂಕ್ರಮಣ ಸ್ಥಿತಿಯನ್ನು, ಮನುಷ್ಯ ಚೇತನದ ಅದಮ್ಯ ಶಕ್ತಿಯನ್ನು ನಿಸ್ಸಂಶಯವಾಗಿ ದಾಖಲಿಸುತ್ತವೆ.
ಅದೇ ಮಹಿಳಾ ಲೇಖಕಿಯರ ಆತ್ಮ ಕತೆಗಳಲ್ಲಿ ಕಾಣಿಸುವುದು ಅವರ ಬಾಲ್ಯಕ್ಕಿಂತಲೂ ವೈವಾಹಿಕ ಜೀವನದ ಸಾಂದ್ರ ಅನುಭವಗಳು, ಬಾಲ್ಯದ ಅನುಭವಗಳು ರಮ್ಯ ಕಥಾನಕಗಳಂತೆ ಭಾಸವಾದರೆ ವೈವಾಹಿಕ ಜೀವನದ ನೋವು ನಲಿವುಗಳೇ ಅವರನ್ನು ಲೇಖಕಿಯರಾಗಿ ಬೆಳೆಸಿದವೇನೋ ಅನಿಸುತ್ತದೆ.
ಈ ನಿಟ್ಟಿನಲ್ಲಿ ಎಗ್ಗಿಲ್ಲದೆ ನಿರ್ಭಿಡೆಯಿಂದ ಬರೆದವರೆಂದರೆ ಪ್ರತಿಭಾ ನಂದಕುಮಾರ್, ಪ್ರೀತಿಗೋಸ್ಕರ ತನಗಿರುವ ಅದಮ್ಯ ಹಂಬಲವನ್ನು, ಭೋರ್ಗರೆವ ತಮ್ಮ ಭಾವ ಪ್ರವಾಹಕ್ಕೆ outlet  ಆಗಿ ಸಾಹಿತ್ಯವನ್ನು ಬಳಸಿಕೊಂಡ ಬಗೆಯನ್ನು ಅತ್ಯಂತ ಪ್ರಾಮಾಣಿಕವಾಗಿ (ಕೆಲವೊಮ್ಮೆ ಹೀಗೂ ಉಂಟೆ ! ಎನಿಸುವಂತೆ ) ಆಕೆ ಬರೆಯುತ್ತಾರೆ. ಉಳಿದಂತೆ ಸಾರಾ ಅಬೂಬಕರ್, ಉಷಾ ರೈ, ಪ್ರೇಮಾಕಾರಂತ ಇವರೆಲ್ಲರ ಬರಹಗಳು ಸಾಂಪ್ರದಾಯಿಕ ಜಾಡಿನಲ್ಲಿಯೇ ವ್ಯವಸ್ಥೆಯ ವಿರುದ್ಧದ ತಮ್ಮ ತಣ್ಣನೆಯ ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ.
ಇಲ್ಲಿ ಕಾಡುವ ಪ್ರಶ್ನೆಯೆಂದರೆ ಆತ್ಮಕತೆಯನ್ನು ಒಳಗೊಂಡಂತೆ ಅಭಿವ್ಯಕ್ತಿ ಮಾಧ್ಯಮಗಳಲ್ಲಿ ಹೆಣ್ಣಿಗಿರುವ ಸ್ವಾತಂತ್ರ್ಯ’ ಇದಕ್ಕೆ ಕಾರಣ ಮಹಿಳೆಯರ ಅನುಭವಕ್ಕಿರುವ ಮಿತಿ, ಬೈರಪ್ಪನವರಂತೆ ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ರಿಸರ್ಚ್ ಮಾಡಲು, ಉಳಿದ ಸಾಹಿತಿಗಳಂತೆ ಹೋರಾಟಗಳಲ್ಲಿ ಪಾಲ್ಗೊಳ್ಳಲು, ಬಂಡಾಯವೇಳಲು ಮಹಿಳಾ ಸಾಹಿತಿಗಳಿಗೆ ಅನುಕೂಲಗಳೆಲ್ಲಿವೆ? ಅವರದೇನಿದ್ದರೂ ವ್ಯವಸ್ಥೆಯೊಳಗೆ ಚೂರುಪಾರು ಬದಲಾವಣೆ ಕಂಡುಕೊಳ್ಳುವ, ಅಟ್‌ಲೀಸ್ಟ್ ಜಾಗೃತ ಪ್ರಜ್ಞೆಯಿಂದ ಸಲ್ಫ್ ಐಡೆಂಟಿಟಿಯನ್ನು ಕಂಡುಕೊಳ್ಳುವ ಪ್ರಯತ್ನ, ಹೀಗಾಗಿಯೇ ಮಹಿಳಾ ಸಾಹಿತ್ಯದಲ್ಲಿ ಮನೆ, ಸಂಸಾರ, ಅಡಿಗೆ ಮನೆಗಳ ದಟ್ಟ ವಿವರಗಳೂ, ಬಿಕ್ಕುದನಿಯ ಹಾಡುಗಳೂ ಕೇಳಿಬರುತ್ತವೆ. ಇತ್ತೀಚೆಗೆ ಕ್ಲೀಷೆಯಾಗುತ್ತಿರುವ ಅಡಿಗೆಮನೆ ರೂಪಕಗಳು (ಕುದಿಯುತ್ತಿರುವ ಅನ್ನ ಇತ್ಯಾದಿ) ಇದಕ್ಕೆ ಸಾಕ್ಷಿ ಒಟ್ಟಿನ ಮೇಲೆ ಮಹಿಳೆಯರ ಸಾಹಿತ್ಯವೆಂದರೆ ಮಿತಿಯುಳ್ಳದ್ದಾಗಲು ಕಾರಣ ಅವರಿಗಿರುವ, ಚಲನಶೀಲನೆಯ (ಮಾನಸಿಕ, ಆರ್ಥಿಕ ಸಾಮಾಜಿಕ) ತೊಡಕುಗಳೇ ಆಗಿವೆ.
women literature
ಈ ನಿಟ್ಟಿನಲ್ಲಿ ಆಂಗ್ಲ ಮಹಿಳಾ ಸಾಹಿತಿಗಳು ಬೋಲ್ಡ್ ಎನ್ನಬಹುದು. ಅಸಲಿಗೆ ಅದೇ ಅಂಗ್ಲ ಸಾಹಿತ್ಯದ ಪಾಪ್ಯುಲಾರಿಟಿಗೆ ಕಾರಣ ಕೂಡ. ಅವರಿಗಿರುವ ಅಂತರಾಷ್ಟ್ರೀಯ ಮನ್ನಣೆಯೂ ಇನ್ನೊಂದು ಕಾರಣ. ನಿಜವಾಗಿ ಅರುಂಧತಿರಾಯ್, ಕಿರಣ್ ದೇಸಾಯಿ ಹೀಗೆ ಬುಕರ್ ಅವಾರ್ಡ್ ಪುಲಿಟರ್ ಪ್ರಶಸ್ತಿ ವಿಜೇತರಿಗಿಂತಲೂ ಅತ್ಯುತ್ತಮ ಲೇಖಕಿಯರು ಭಾರತೀಯ ಭಾಷೆಗಳಲ್ಲಿ ಖಂಡಿತವಾಗಿಯೂ ಇದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮಹಿಳಾ ಸಾಹಿತ್ಯ ಇನ್ನೂ ತನ್ನತನದ ಹುಡುಕಾಟದಲ್ಲಿದೆ ಎಂದೆನಿಸುತ್ತದೆ. ಸಾಮಾಜಿಕ, ರಾಜಕೀಯ ವಿಷಯಗಳು ಹಿನ್ನೆಲೆಯಲ್ಲಿದ್ದರೂ ಲಿಂಗಾಧಾರಿತ ಪ್ರಶ್ನೆಗಳೇ ಮುಖ್ಯಭೂಮಿಕೆಯಾಗಿರುತ್ತದೆ. ಬಹುಶ: ಇದು ಮಹಿಳಾ ಸಾಹಿತ್ಯದ ಶಕ್ತಿ ಹಾಗೂ ಮಿತಿ.


ಪ್ರತಿರೋಧದ ನೆಲೆಗಳು

ದಶಕದ ಹಿಂದೆ ಮಾನಸ ಗಂಗೋತ್ರಿಯಲ್ಲಿ ಪಿಜಿ ಮಾಡುವಾಗ ನಮ್ಮ ಇಂಗ್ಲಿಷ್ ಪ್ರೊಫೆಸರ್ ಮೈ ರಸ್ತೇ ಮೇ ಜಾ ರಹಾ ಥಾ ವೋ ಭೇಲ್ ಪುರಿ ಖಾ ರಹೀ ಥೀ ಹಾಡನ್ನು ಬೈದುಕೊಳ್ಳುತ್ತಿದ್ದರು. ‘ಇದರಲ್ಲೇನಾದರೂ ಸೌಂದರ್ಯ ಪ್ರಜ್ಞೆ ಇದೆಯಾ’. ಸಾಹಿತ್ಯಕ ಮೌಲ್ಯ ಇದೆಯಾ ಹೀಗೆಲ್ಲ. ಹಾಗೆ ನೋಡುವುದಿದ್ದರೆ ನಾವೆಲ್ಲ ಒಳಗೊಳಗೆ ಆ ಹಾಡನ್ನು ಮೆಚ್ಚಿಕೊಳ್ಳುತ್ತಿದ್ದೆವು. ಹೌದು ಮಾಸ್ ಕಲ್ಚರ್, ಮಾಸ್ ಅಪೀಲ್ ಎಂದರೆ ಇದೇ., ಸಾಮಾನ್ಯ ಜನರಿಂದ ಪ್ರಚಲಿತಗೊಳ್ಳುವ ಕಲ್ಚರ್. ಇನ್ನು ಸಿನೆಮಾ, ರೇಡಿಯೋ, ಜಾಹೀರಾತುಗಳು, ಜನಪ್ರಿಯ ಕಾದಂಬರಿಗಳು, ಸೆನ್ಸೇಶನಲ್ ಟ್ಯಾಬ್ಲಾಯ್ಡ್‌ಗಳು – ಹೀಗೆ ‘ ಮಾಸ್ ಕಲ್ಚರ್’ ಎನ್ನುವುದು ನಮ್ಮನ್ನು ಅರಿತೋ ಅರಿಯದೆಯೋ ಪ್ರಭಾವಿಸುತ್ತಲೇ ಇರುತ್ತದೆ. ಉದಾಹರಣೆಗೆ ಬಿಗ್‌ಬಜಾರ್‌ಗೆ, ಮಲ್ಟಿಪ್ಲೆಕ್ಸ್‌ಗೆ ಹೋಗುವಾಗ ಸ್ಟೈಲಿಶ್ ಡ್ರೆಸ್ ಹಾಕಬೇಕೆಂಬ ಲಿಖಿತ ನಿಯಮದಂತೆ ಜಾಗತೀಕರಣದಿಂದಾಗಿ ಸಮಾಜದಲ್ಲಿ ಎಂತಹ ಕಂದಕ ಸೃಷ್ಟಿಯಾಗಿದೆಯೆಂದರೆ ವಿಜ್ಞಾನ, ತಂತ್ರಜ್ಞಾನದ ಅರಿವಿಲ್ಲದವರು, ಇಂಗ್ಲೀಷನ್ನು ಸ್ಪುಟವಾಗಿ ಮಾತನಾಡಲು ಬಾರದವರು ಮೂಲೆಗುಂಪಾಗುವ ಪರಿಸ್ಥಿತಿ ಹಾಗಿದ್ದರೂ ಸ್ಥಳೀಯ ನೆಲೆಯಲ್ಲಿ ನಮ್ಮದೇ ವಿಧಾನದಲ್ಲಿ ಜಾಗತೀಕರಣಕ್ಕೆ ನಾವು ಪ್ರತಿರೋಧಗಳನ್ನೊಡ್ಡುತ್ತಿದ್ದೇವೆ. ಈ ಕುರಿತು ಒಂದು ಪುಟ ಪ್ರಯತ್ನ.
jarilanga girl
ಒಂದು ರೀತಿಯ ‘ ಹೈಬ್ರಿಡ್ ‘ ಸಂಸ್ಕೃತಿ ನಮ್ಮ ಉಡುಗೆ ತೊಡುಗೆಯಿಂದ ಹಿಡಿದು ಕಲೆ, ನಾಟಕ ಎಲ್ಲದರಲ್ಲಿಯೂ ಛಾಪು ಒತ್ತಿರುವುದನ್ನು ನೋಡಬಹುದು. ‘ಫ್ಯೂಷನ್’ ಎನ್ನುವುದು ಸಂಗೀತ, ನಾಟಕಗಳಿಂದ ಹಿಡಿದು ಜೀನ್ಸ್ ಮೇಲೆ ಸಲ್ವಾರ್ ಟಾಪ್ ಹಾಕುವಂತಹ ಚಿಕ್ಕ ವಿಷಯಗಳಲ್ಲಿಯೂ ಕಂಡು ಬರುತ್ತವೆ. ಆಶ್ಚರ್ಯಕರವಾಗಿ ಧಾರ್ಮಿಕ ವಲಯದಲ್ಲಿಯೂ ಇವು ಮಿಳಿತವಾಗಿವೆ. ನಮ್ಮ ಜಾಹೀರಾತುಗಳು, ಸಿನೆಮಾ ಧಾರವಾಹಿಗಳೂ, ಇವುಗಳನ್ನು ಎನ್‌ಕ್ಯಾಷ್ ಮಾಡುತ್ತವೆ. ಹೊಸ ಮಾದರಿ ಕೆಮರಾದಲ್ಲಿ ಕಂಡು ಬರುವ ದೀಪಾವಳಿ, ಕ್ಯಾಡ್‌ಬರಿ ಜಾಹೀರಾತಿನ ರಾಖಿ ಹಬ್ಬ ಹೀಗೆ .ಇನ್ನು ಆಂಗ್ಲ ಭಾಷೆಯ ಪ್ರಭಾವ ಭಾರತೀಯ ಭಾಷೆಗಳ ಮೇಲೆ ಹೆಚ್ಚೆನಿಸುವಷ್ಟು ಇರುವುದು ಹೌದಾದರೂ ಸರಿಯಾಗಿ ಬಳಸಿದಲ್ಲಿ ಇಂಗ್ಲೀಷ್ ಪುಳಿಯೋಗರೆಯಲ್ಲಿನ ಕಡಲೆಕಾಯಿಯಷ್ಟು ಸಹಜವಾಗಿ ಬೆರೆತುಕೊಳ್ಳುತ್ತದೆ. ಇಂಗ್ಲೀಷನ್ನೇ ರೂಪಾಂತರ ಮಾಡಿದ ಖ್ಯಾತಿ ಭಾರತೀಯರದ್ದು. ಇನ್ನು ನಮ್ಮ ಫಿಲ್ಮ್ ಗಳಲ್ಲಿ, ಹಾಡುಗಳಲ್ಲಿ ಕೇಳಿ ಬರುವ ಇಂಗ್ಲೀಷ್ ಶಬ್ದಗಳು ಕೂಡಾ ಈ ಪೋಸ್ಟ್ ಮಾಡರ್ನ ಯುಗದ ಅಸಂಗತತೆಯ ಕನ್ನಡಿಯಂತೆಯೇ ಕಂಡುಬರುತ್ತದೆ.
ಇಷ್ಟೇ ಕುತೂಹಲಕಾರಿಯಾಗಿ ಪರ್ಯಾಯ ಸಂಸ್ಕೃತಿಯ, ಪ್ರತಿರೋಧದ ಬೆಳವಣಿಗೆಯನ್ನು ನಾವು ವಿವಿಧ ಸ್ತರಗಳಲ್ಲಿ ನೋಡುತ್ತಲೇ ಇರುತ್ತೇವೆ. ಸಮುದಾಯ ಭವನಗಳು, ಜಾತಿ ಸಂಘಗಳು, ಹಬ್ಬಗಳನ್ನು ಗ್ರಾಂಡ್ ಆಗಿ ಆಚರಿಸುವುದು ಇವು ಕೂಡ ಒಂದು ರೀತಿಯಲ್ಲಿ ಬೇರುಗಳನ್ನು ಕಂಡುಕೊಳ್ಳುವ ಪ್ರಯತ್ನವೇ ಇರಬೇಕು. ಇವು ವ್ಯಾಪಾರೀಕರಣಗೊಳುತ್ತಿರುವುದೂ ಸತ್ಯ. ಅಕ್ಷಯ ತೃತೀಯಾ ದಂತಹ ಹಬ್ಬಗಳನ್ನು ನಾವು ಕೇಳಿಯೇ ಇರಲಿಲ್ಲ. ಟಿವಿಯಂತಹ ಮಾಸ್ ಮೀಡಿಯಾದಿಂದಾಗಿ ಉತ್ತರಭಾರತದ ರೀತಿ ರಿವಾಜುಗಳನ್ನೂ ನಾವು ಆಚರಿಸಲಾರಂಭಿಸಿದ್ದೇವೆ.
.
ಆಧುನಿಕತೆ- ಸಂಪ್ರದಾಯಗಳ ತಾಕಲಾಟವನ್ನು ಮೀರುವ ಅನೇಕ ಪ್ರಯತ್ನಗಳನ್ನು ನಾವು ಮಾಡುತ್ತಲೇ ಇರುತ್ತೇವೆ. ಒಂದು ರೀತಿಯಲ್ಲಿ ಇವು ಪಾಶ್ಚಾತ್ಯ ಪ್ರಭಾವದ ವಿರುದ್ಧದ ಪ್ರತಿರೋಧ ಕೂಡ ಜೀನ್ಸ್ ಹಾಕುವ ಮಗಳಿಗೆ ಜರಿ ಲಂಗ ತೊಡಿಸಿ ಸಂಕ್ರಾಂತಿಗೆ ಎಳ್ಳು ಬೀರಲು ಕಳುಹಿಸುತ್ತೇನೆ. ಭರತನಾಟ್ಯ ಕ್ಲಾಸಿಗೆ ಹಾಕುತ್ತೇವೆ. ಇಂಗ್ಲೀಷ್ ಮೀಡಿಯಂನ ಹುಡುಗರಿಗೆ ತಬಲಾ, ಕೊಳಲು ಕಲಿಯಲು, ಕಾಲೇಜು ಹುಡುಗರಿಗೆ ಕನ್ನಡ ಸಂಘಕ್ಕೆ ಸೇರಿಕೊಳ್ಳಲು ಪ್ರೋತ್ಸಾಹಿಸುತ್ತೇವೆ.
ಇನ್ನು ಆಧುನಿಕ ಜೀವನದ ಪರಿವರ್ತನೆಗಳಲ್ಲಿ ಕೆಲವು ಅನಿವಾರ್ಯವಾದರೂ ಧನಾತ್ಮಕ ಕೂಡ. ಉದಾಹರಣೆಗೆ ಫ್ಲಾಟ್ ಸಂಸ್ಕೃತಿ ಹಿಂದಿನ ಕಾಲದ ಕಠೋರ ಜಾತಿ ಪದ್ಧತಿಯಲ್ಲಿ ವಿಭಿನ್ನ ಜಾತಿಗಳವರು ಒಂದೇ ಸೂರಿನಡಿಯಲ್ಲಿ ಬದುಕುವುದನ್ನು ಕಲ್ಪಿಸಿಕೊಳ್ಳಲೂ ಆಗುತ್ತಿರಲಿಲ್ಲ. ಈಗ ನೋಡಿದರೆ ಫ್ಲಾಟ್ ಗಳಲ್ಲಿ, ಮಾಲ್‌ಗಳಲ್ಲಿ, ವಸತಿ ಸಮುಚ್ಛಯಗಳಲ್ಲಿ ಜಾತಿಗೆ ಅಂತಹ ಪ್ರಾಧಾನ್ಯತೆ ಏನಿಲ್ಲ. ಈಗೇನಿದ್ದರೂ ಎರಡೇ ಜಾತಿ; ದುಡ್ಡು ಇರುವವರು ಹಾಗೂ ಇಲ್ಲದವರು ಎಂದು.
‘ಸಂಸ್ಕೃತಿ’ ಎನ್ನುವುದು ವ್ಯಾಪಾರೀಕರಣ ಗೊಂಡಿರುವುದನ್ನು, ಮಾರಾಟದ ಸರಕು ಆಗಿರುವುದನ್ನು ನಾವಿಲ್ಲಿ ಗಮನಿಸಬೇಕು. ಪರಿಸರ ಪ್ರಜ್ಞೆಯೇ ಇಲ್ಲದೆ ಯುಗಾದಿ ಇನ್ನಿತರ ಹಬ್ಬಗಳ ಸಂದರ್ಭದಲ್ಲಿ ಮಾವಿನ ಮರ, ಬೇವಿನ ಮರ, ಗರಿಕೆ, ಎಕ್ಕ ಎಂದೆಲ್ಲ ಸಸ್ಯಗಳನ್ನು ತರಿಯುತ್ತೇವೆ. ಕೊಲ್ಲಾಪುರದಂತಹ ಮಹಾಲಕ್ಷ್ಮಿ ದೇಗುಲಗಳಲ್ಲಿ ಸಹಸ್ರಾರು ತಾವರೆಗಳು ಎಲ್ಲಿಂದಲೋ ಸರಬರಾಜಾಗುತ್ತವೆ. ಧನಾತ್ಮಕ ವಿಷಯವೆಂದರೆ ಮರೆತೇ ಹೋಗಬಹುದಾಗಿದ್ದ ಹಳೆಯ ಪುರಾಣಗಳೆಲ್ಲ ಟಿವಿಯಲ್ಲಿ ರಂಜನೀಯವಾಗಿ ಮೂಡಿ ಬರುತ್ತವೆ. ಡ್ರಾಯಿಂಗ್ ರೂಮಿನಲ್ಲಿ ಕುಳಿತುಕೊಂಡೇ ದೇಶದ ಯಾತ್ರಾ ಸ್ಥಳಗಳನ್ನು ನೋಡಬಹುದು. ಹುಲಿವೇಷದಿಂದ ಹಿಡಿದು ದಸರಾ ಟ್ಯಾಬ್ಲೋಗಳನ್ನು ಲೈವ್ ಆಗಿ ನೋಡಿ ಆನಂದಿಸಬಹುದು.
.
ಜಾಗತೀಕರಣಕ್ಕೆ ಪ್ರಬಲ ಪ್ರತಿರೋಧವೆಂದರೆ ‘ ಸಂಸ್ಕೃತಿಯ ಪುನರುತ್ಥಾನ ಎನ್ನುವ ಕಾನ್ಸೆಪ್ಟ್ ಸಂಸ್ಕೃತಿಯ ಪುನರುತ್ಥಾನದ ಭರದಲ್ಲಿ ಹಳೆಯ ಮೌಲ್ಯಗಳನ್ನು ಪುನರುಜ್ಜೀವಗೊಳಿಸುತ್ತಿದ್ದೇವೇನೋ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಉದಾಹರಣೆಗೆ ಇಂದಿರಾ ಗಾಂಧಿಯವರ ಕಾಲದಲ್ಲಿ ಬಾಬ್‌ಕಟ್ ದಿಟ್ಟತನ, ಸ್ವಾಭಿಮಾನದ ಪ್ರತೀಕವಾಗಿತ್ತು. ಈಗ ನೋಡಿದರೆ ಸೀರಿಯಲ್‌ಗಳಿಂದ ಹಿಡಿದು ಫ್ಯಾಷನ್ ಷೋಗಳಲ್ಲಿ ಕೂಡ ನೇರವಾಗಿ ಉದ್ದವಾಗಿರುವ ಕೂದಲಿನಲ್ಲಿ ಲಲನೆಯರು ಲಕಲಕಿಸುತ್ತಿರುತ್ತಾರೆ. ಇನ್ನು ಸೀರೆಯಷ್ಟು ನವಿರು ಭಾವನೆಗಳನ್ನು, ಪುಳಕಗಳನ್ನು ಹುಟ್ಟಿಸುವ, ಅಂತೆಯೇ ಹೆಣ್ಣಿನ ಚಲನವಲನಗಳನ್ನು ನಿಯಂತ್ರಿಸುವ ಬಟ್ಟೆ ಇನ್ನೊಂದಿಲ್ಲ. ಈ ಸೀರೆ ಕೂಡ ಫ್ಯಾಷನ್ ಸ್ಟೇಟ್ ಮೆಂಟ್ ಆಗಿರುವುದು ಅದರ ನವನವೋನನ್ಮೇಷ ಕ್ವಾಲಿಟಿಗೆ ಸಾಕ್ಷಿ.
ಮಾಡರ್ನಿಟಿಯ ಇನ್ನೊಂದು ಅಂಶವೆಂದರೆ ಸೋಶಿಯಲ್ ನೆಟ್ ವರ್ಕಿಂಗಿನಿಂದಾಗಿರುವ ಸಂಚಲನ, ಅದೊಂದು ಗೀಳಾಗಿ ಪರಿಣಮಿಸಬಹುದಾದರೂ ಸತ್ಯನಾರಾಯಣ ಪೂಜೆಯಿಂದ ಹಿಡಿದು ಪಿಕ್ ನಿಕ್‌ನ ವರೆಗೆ ಫೆಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಾರೆ. ಅನೇಕರ ಫೋಟೋಗ್ರಾಫಿ ಕೌಶಲಕ್ಕೆ, ಕತೆ ಕವನ ಕಟ್ಟುವ ಹವ್ಯಾಸಕ್ಕೆ ಅವು ಇಂಬು ಕೊಟ್ಟಿರುವುದೂ ಸುಳ್ಳಲ್ಲ. ತಮ್ಮದೇ ಬ್ಲಾಗ್, ವೆಬ್ ಸೈಟ್ ಹೊಂದಿ ಬರೆಯುವವರೂ ಸಾಕಷ್ಟು ಜನರಿದ್ದಾರೆ.
dressing kids
ಗ್ಲೋಬಲ್ ಕ್ಯಾಪಿಟಲಿಸಂ ತಂದೊಡ್ಡಿದ ನಿಸ್ಸಹಾಯಕ ಸ್ಥಿತಿಯನ್ನು ನಾವಿಲ್ಲಿ ಮರೆಯುವಂತಿಲ್ಲ. ಚಾಕಲೇಟು ಜಾಹೀರಾತೊಂದರಲ್ಲಿ ತಮ್ಮ ಕೋಕೋ ಬೀಜ ಸೆಲೆಕ್ಟ್ ಆಗುವುದೇ ಪುಣ್ಯ ಎಂಬಂತಿರುವ ಆಫ್ರಿಕದ ಜನರಂತೆಯೇ ಹೆಚ್ಚು ಕಡಿಮೆ ನಮ್ಮ ಸ್ಥಿತಿ ಕೂಡ ನಮ್ಮ ಉದ್ಯೋಗಾವಕಾಶಗಳು ಅದರನ್ನವಲಂಬಿಸಿದ ಜೀವನ ಶೈಲಿ, ಸರಕಾರದ ಕಾನೂನುಗಳನ್ನೂ ಅವು ಜಾಗತಿಕ ವಿದ್ಯಮಾನಗಳನ್ನೂ ಅವಲಂಬಿಸಿರುವ ಕಾರಣ ನಾವು ನಮ್ಮ ಎಳೆ ಕಂದಮ್ಮಗಳನ್ನು ಕೂಡಿ ಹಾಕಿ ಇಷ್ಟ ಇಲ್ಲದ ಸಬ್ಜೆಕ್ಟ್ ಗಳನ್ನು ಕಲಿಯಲು ಪ್ರೇರೇಪಿಸುತ್ತೇವೆ. ಇನ್ನೂ ಸ್ಪಷ್ಟವಾಗಿ ಹೇಳುವುದಿದ್ದರೆ ಒಂದೇ ರೀತಿಯ ಆಸಕ್ತಿಯುಳ್ಳ, ಚಿಂತನ ಶೈಲಿಯುಳ್ಳ, ಹಣ ಸಂಪಾದನೆಯನ್ನೇ ಗುರಿಯಾಗಿಸಿಕೊಂಡ ತಲೆಮಾರನ್ನು ನಾವು ರೂಪಿಸುತ್ತಿರುವುದು ಸತ್ಯ. ಯಕ್ಷಗಾನ ಜಾನಪದ ಕಲೆಗಳಿಗಿಂತ ನಮ್ಮ ಮಕ್ಕಳಿಗೆ ಹಾಲಿವುಡ್ ಮೂವಿಗಳು, ವೆಸ್ಟರ್ನ್ ಮ್ಯೂಸಿಕ್ ಇಷ್ಟ. ಅವರು ಓದುವುದೂ ಹೆಚ್ಚಾಗಿ ಇಂಗ್ಲೀಷ್ ಕಾದಂಬರಿಗಳನ್ನು. ಆಂಗ್ಲ ಮಾಧ್ಯಮದಲ್ಲಿ ಓದುವ ಕಾರಣ ಅವರ ಕನ್ನಡವೂ ಅಷ್ಟಕಷ್ಟೆ.

ಒಟ್ಟಿನ ಮೇಲೆ ‘ ಹಳೆ ಬೇರು ಹೊಸ ಜಿಗುರು’ ಎನ್ನುವಂತೆ ನಮ್ಮ ಸಂಸ್ಕೃತಿಯೊಂದಿಗೆ ಹೊಸ ಪ್ರಭಾವಗಳನ್ನು ಅಂತರ್ಗತಗೊಳಿಸಿಗೊಂಡು ಬೆಳೆಯಬೇಕಾಗಿರುವುದು ಭಾರತೀಯ ಜನತೆಯೆದುರಿನ ಸದ್ಯದ ಸವಾಲು.


ಜಯಶ್ರೀ ಬಿ.ಕದ್ರಿ.

Thursday, 6 November 2014

ಬರವಣಿಗೆಯೆಂಬ ಕಲೆ

‘ಬೆಳಕಿರದ ಹಾದಿಯಲ್ಲಿ ನಡೆಯಬಹುದು ಆದರೆ ಕನಸುಗಳಿರದ ಹಾದಿಯಲ್ಲಿ ನಡೆಯಲಾರೆವು’ ಎನ್ನುವಂತೆ ಬರಹಗಾರರಾಗಬೇಕೆಂಬ ಬಯಕೆ ಸಾಹಿತ್ಯ, ಕಲೆಗಳಲ್ಲಿ ಆಸಕ್ತರಾಗಿರುವ ಹೆಚ್ಚಿನವರಿಗೂ ಇರುತ್ತದೆ. ಹಾಗೆಂದು ಬರೆಯುತ್ತ ಬದುಕುವುದು ಸುಲಭವೇನಲ್ಲ. ಕಂಪೆನಿಗಳಿಗೆ, ಸಂಸ್ಥೆಗಳಿಗೆ ಅಫಿಶಿಯಲ್ ರೈಟರ್‍ಸ್‌ಗಳಾಗಿರುವುದು (ಉದಾ: ಟೆಕ್ನಿಕಲ್ ರೈಟರ್‍ಸ್) ಬೇರೆ ಮೌಲಿಕವಾದ ಸಾಹಿತ್ಯ ಕೃತಿಗಳನ್ನು ರಚಿಸುವುದು ಬೇರೆ ಎಂದು ನಮಗೆಲ್ಲ ಗೊತ್ತೇ ಇದೆ. ಸಾಹಿತ್ಯದಲ್ಲೂ ಜನಪ್ರಿಯ ಸಾಹಿತ್ಯ ಹಾಗೂ ಕ್ಲಾಸಿಕಲ್ ಲಿಟರೇಚರ್‌ನ ನಡುವಣ ರೇಖೆ ಮಸುಕಾಗುತ್ತಿರುವ ಈ ಕಾಲಘಟ್ಟದಲ್ಲಿ ಬರಹ ಒಂದು ಅಭಿವ್ಯಕ್ತಿ ಮಾಧ್ಯಮದಂತೆಯೇ ಕಲೆಗಾರಿಕೆಯೂ ಹೌದು.
ಸಾಹಿತ್ಯವೆನ್ನುವ ಮೇರು ಶಿಖರದ ಎದುರು ಮಂಡಿಯೂರಿ ಕುಳಿತು ವಿನಯ, ಶ್ರದ್ಧೆಯೊಂದಿಗೆ ಕೆಲವು ವಿಷಯಗಳನ್ನು ಹಂಚಿಕೊಳ್ಳಲಿಚ್ಚಿಸುತ್ತೇನೆ. ಬರವಣಿಗೆ ಎನ್ನುವುದೊಂದು ಕಲೆ. ಸ್ಪೂರ್ತಿ ಪ್ರತಿಭೆ, ಭಾಷಾ ಸಂಪತ್ತು, ವಾಕ್ಯಗಳನ್ನು ಲಾಲಿತ್ಯದಿಂದ ಪೋಣಿಸುವ ಇಲ್ಲವೇ ಜಡಿ ಮಳೆಯ ಭೋರ್ಗರೆತದಂತೆ ಸ್ಫುಟವಾಗಿ, ನಿಚ್ಚಳವಾಗಿ ಬರೆಯುವ ಕ್ರಿಯಾತ್ಮಕ, ನಾವೀನ್ಯ ಸೃಷ್ಟಿ. ನಟನೊಬ್ಬನಿಗೆ ವೀಕ್ಷಕರು ಹೇಗೆ ಮುಖ್ಯವೋ ಹಾಗೆಯೇ ಬರಹಗಾರರಿಗೆ ಓದುಗರು, ಓದುಗರ ಮನತಟ್ಟುವಂತೆ, ಅವರ ನಾಡಿಮಿಡಿತ ಅರಿತು ಅದಕ್ಕೆ ಸ್ಪಂದಿಸುವವರೇ ಉತ್ತಮ ಬರಹಗಾರ/ಬರಹಗಾರ್ತಿಯರಾಗುವರೆನ್ನುವರೆಂದು ಶತ:ಸಿದ್ಧ.
ಈ ನಿಟ್ಟಿನಲ್ಲಿ ವ್ಯಾಪಕವಾದ ಓದು, ಜೀವನವನ್ನು ಕುತೂಹಲದ ಕಣ್ಣಿನೊಂದಿಗೆ, ಅಷ್ಟೇ ಸಹೃದಯ ಸಾಮಾಜಿಕ ಪ್ರಜ್ಞೆಯೊಂದಿಗೆ ನೋಡಬೇಕಾದ, ಪರಿಭಾವಿಸಬೇಕಾದ ಅಗತ್ಯವಿದೆ. ಬರಹಗಾರರೂ ಸಮಾಜದಲ್ಲಿಯೇ ಬದುಕಬೇಕಾಗಿರುವುದರಿಂದ ಸಮಾಜ, ಅದರ ಆಗುಹೋಗುಗಳೇ ಅವರ ಮೂಲದ್ರವ್ಯ. (ಹಾಗೆಂದು ತೀರಾ ಸನಿಹದವರ ವ್ಯಕ್ತಿಗತ ವಿಷಯಗಳನ್ನು ಬರೆದು ಅವರಿಗೆ ಮುಜುಗರ ತಂದಿಡದೇ ಇರುವ ವೈಯಕ್ತಿಕ ಎಚ್ಚರವೂ, ಮಾನವೀಯ ಪ್ರಜ್ಞೆಯೂ ಮುಖ್ಯ).
ಬರೆಯಬೇಕೆಂಬ ಹಂಬಲ ನಮ್ಮಲ್ಲಿರುವುದು ಹೌದಾದರೂ ಟಾಪಿಕ್ಕುಗಳು ಏಕತಾನವಾಗದಂತೆ, ಒಂದೇ ರೀತಿಯ ಬರಹಗಳಿಗೆ ಬ್ರಾಂಡ್ ಆಗದಂತಿರುವುದು ನಿಜಕ್ಕೂ ಸವಾಲು. ಹೀಗಾಗದಂತಿರಲು ಒಂದೇ ಒಂದು ದಾರಿ ವ್ಯವಸ್ಥಿತವಾದ ಓದು, ಸಾಧ್ಯವಾದರೆ ಪ್ರವಾಸ, ಕೇವಲ ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ, ಉಳಿದ ಜ್ಞಾನ ಶಾಖೆಗಳಿಂದಲೂ ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಮುಕ್ತ ದೃಷ್ಟಿಕೋನ. ದಿನಪತ್ರಿಕೆಗಳು, ಅವುಗಳ ಸಾಹಿತ್ಯ ಪುರವಣಿಗಳು ನಮ್ಮ ಮನಸ್ಸಿಗೆ ಬೆಳಕಿಂಡಿಗಳೇ ಸರಿ. ಈ ನಿಟ್ಟಿನಲ್ಲಿ ವಾಚನಾಲಯಗಳು, ಲೈಬ್ರರಿಗಳ ಸದುಪಯೋಗ ಮಾಡಿಕೊಳ್ಳಬಹುದು. ಸಮಾನಾಸಕ್ತಿಯುಳ್ಳವರ ರೀಡರ್‍ಸ್ ಕ್ಲಬ್ ಮಾಡಿಕೊಂಡು ಪುಸ್ತಕಗಳನ್ನು ಹಂಚಿಕೊಳ್ಳಬಹುದು. ಒಟ್ಟಿನ ಮೇಲೆ ಸದಾ ಅಪ್‌ಡೇಟೆಡ್ ಆಗಿ ನಮ್ಮನ್ನು ನಾವು ಅಲರ್ಟ್ ಆಗಿರಿಸಿಕೊಳ್ಳುವುದು ಅಪ್ಪಟ ಜೀವನ್ಮುಖಿ ಧೋರಣೆ (ಹಾಗೂ ಪತ್ರಿಕೋದ್ಯಮದ ಸೊಬಗು).
ಸಾಧಾರಣವಾಗಿ ನಮ್ಮ ಓದು, ವಿದ್ಯಾಭ್ಯಾಸ, ವೃತ್ತಿಗಳಿಗೆ ಸಂಬಂಧಿಸಿದ ವಿಷಯಗಳೇ ನಮಗೆ ನಿಕಟವಾಗಿರುತ್ತವೆ ಹಾಗೂ ಅವುಗಳಿಂದಲೇ ಬರೆಯಲು ಪ್ರಾರಂಭಿಸಬಹುದು. ನಮ್ಮ ಬರಹಗಳನ್ನು ಅಭಿಮಾನದಿಂದಲೋ, ಪ್ರೀತಿಯಿಂದಲೋ ವಿಮರ್ಶಿಸಬಹುದಾದ ಒಬ್ಬಿಬ್ಬರಾದರೂ ಆಪ್ತ ಬಳಗದವರಿದ್ದಲ್ಲಿ ಅವರಿಗೆ ತೋರಿಸಿ ಆಮೇಲೆ ಪ್ರಕಟಣೆಗೆ ಕಳುಹಿಸಬಹುದು (ಬರೆದದ್ದೆಲ್ಲ ಪ್ರಕಟವಾಗಬೇಕೆಂಬ ಭ್ರಮೆಯನ್ನು ಬಿಟ್ಟು).
ಬರಹಕ್ಕೆ ಮನಸ್ಸನ್ನು ಶಾಂತಗೊಳಿಸುವ, ಒತ್ತಡಗಳ ಶಮನಗೊಳಿಸುವ ಶಕ್ತಿಯಿದೆಯಂತೆ. ಏನಿಲ್ಲವೆಂದರೂ ನಮ್ಮ ಆಲೋಚನೆಗಳಿಗೆ ಸ್ಪಷ್ಟತೆಯನ್ನು, ಅಸ್ತಿತ್ವಕ್ಕೊಂದು ಐಡೆಂಟಿಟಿ ಕೊಡುವ್ಯದಂತೂ ಸತ್ಯ. ತಮ್ಮ ವೈಯಕ್ತಿಕ ಭಾವ ವಲಯವನ್ನು ದಾಟಿ ಸಾಮಾಜಿಕ, ಜಾಗತಿಕ ಸಂಗತಿಗಳ ಬಗ್ಗೆ ಬರೆಯಬೇಕಾದಲ್ಲಿಮಾತ್ರ ಸರಿಯಾದ ರಿಸರ್ಚ್, ವಸ್ತು ನಿಷ್ಠ ಪರಿಶೀಲನೆ ಅಗತ್ಯ. (ಸಂದರ್ಶನ, ಖಚಿತ, ನಂಬಲರ್ಹವಾದ ಮಾಹಿತಿಗಳ ಸಂಗ್ರಹ ಹೀಗೆ). ಇನ್ನು ಕತೆ, ಕವಿತೆ, ಕಾದಂಬರಿಗಳ ಜಗತ್ತು ಬೇರೆ. ಬಹುಶ: ಅದಕ್ಕೆ ಪ್ರತಿಭೆ, ಸೃಜನಶೀಲತೆಯಲ್ಲದೆ ಸಮತೂಕದ ಜೀವನದರ್ಶನ ಕೂಡಾ ಅಗತ್ಯ. ಇಲ್ಲವಾದಲ್ಲಿ ಒಂದಿಡೀ ತಲೆಮಾರಿನ ಯುವಕ ಯುವತಿಯರನ್ನು ದಾರಿ ತಪ್ಪಿಸಿದ ಡಿ‌ಎಚ್ ಲಾರೆನ್ಸ್‌ನ ಕಾದಂಬರಿಗಳಂತೆ ನೆಗೆಟಿವ್ ಪ್ರಭಾವ ಬೀರಬಹುದಾದ ಸಾಧ್ಯತೆ.
power of writing‘ಎದೆಗೆ ಬಿದ್ದ ಅಕ್ಷರ’ಕ್ಕೆ ಬದುಕು ಬದಲಿಸುವ ಶಕ್ತಿ ಇದೆ. ಬಂಕಿಮಚಂದ್ರರ ‘ಆನಂದ ಮಠ’ದ ವಂದೇ ಮಾತರಂ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿತು. ಭಾಷಣವಿರಲಿ, ಗ್ರೂಪ್ ಡಿಸ್ಕಶನ್ ಇರಲಿ, ಕಂಪ್ಯೂಟರ್ ಟೆಕ್ಸ್ಟ್‌ಗಳಿರಲಿ ಅಕ್ಷರ ಬ್ರಹ್ಮಕ್ಕೆ ನಾವು ನಮಿಸಲೇಬೇಕು. ಯಾಕೆಂದರೆ ಅರಿವಿನ ಬೆಳಕು. ಅಕ್ಷರಕ್ಕೆ ಎಷ್ಟು ಶಕ್ತಿ ಇದೆ ಎಂದರೆ ಅದು ರಾಜ್ಯ ಸಾಮ್ರಾಜ್ಯಗಳನ್ನುರುಳಿಸಿ ಡೆಮಾಕ್ರಸಿಗೆ ಕಾರಣವಾಯಿತು. ಕ್ರಾಂತಿ ಕಹಳೆಗಳನ್ನು ಮೊಳಗಿಸಿ ಭೂಗತ ಚಟುವಟಿಕೆಗಳಿಗೂ ಕಾರಣವಾಯಿತು. ಪ್ರಿಂಟಿಂಗ್ ಪ್ರೆಸ್‌ನ ಉದಯದೊಂದಿಗೆ ಬೆಳೆದ ಮುದ್ರಣ ತಂತ್ರಜ್ಞಾನ ಎಷ್ಟು ಬೃಹದಾಕಾರವಾಗಿ ಬೆಳೆದಿದೆಯೆಂದರೆ ಅಕ್ಷರಗಳಿಲ್ಲದ, ಪುಸ್ತಕಗಳಿಲ್ಲದ ಜಗತ್ತನ್ನು ಕಲ್ಪಿಸುವುದು ಕೂಡ ನಮಗೆ ಕಷ್ಟವಾಗಬಹುದು.

ನಹಿ ಜ್ಞಾನೇನ ಸದೃಶಂ!


-ಜಯಶ್ರೀ ಬಿ.ಕದ್ರಿ

ಷಾಪಿಂಗ್‌ನ ಮೋಡಿ

‘ಹಳ್ಳಿ ಮೇಲೋ ಪೇಟೆ ಮೇಲೋ’ ಎನ್ನುವುದು ಅನಾದಿ ಕಾಲದಿಂದಲೂ ಚರ್ಚೆಯ ವಿಷಯ. ಭಾರತದ ಬೆನ್ನೆಲುಬು ಹಳ್ಳಿಗಳು ಎಂದೇನೇ ಹೇಳಲಿ ಹೆಚ್ಚುತ್ತಿರುವ ನಗರೀಕರಣ ದೇಶದ ಆರ್ಥಿಕ, ಸಾಂಸ್ಕೃತಿಕ, ಭಾವ ಜಗತ್ತನ್ನೇ ಬದಲಾಯಿಸಿದೆ. ಇದು ನಿಚ್ಚಳವಾಗಿ ಕಾಣಿಸುತ್ತಿರುವುದು ನಮ್ಮ ಉದ್ಯೋಗ ಆಯ್ಕೆಗಳಲ್ಲಿ ಹಾಗೂ ಖರ್ಚು ಮಾಡುವ ವಿಧಾನದಲ್ಲಿ ಮಿತವ್ಯಯ, ಸರಳ ಜೀವನವೆಂಬ ಮೌಲ್ಯಗಳು ಬದಲಾಗಿ ಆ ಜಾಗದಲ್ಲಿ ಕೊಳ್ಳುಬಾಕತನ, ಸರಕು ಸಂಸ್ಕೃತಿ ಬಂದಿದೆ. ಆಧುನಿಕತೆಯ ಭರಾಟೆಯಲ್ಲಿನ ಖಾಲಿತನವನ್ನು ತುಂಬಿಕೊಳ್ಳಲು ಮತ್ತೆ ಮತ್ತೆ ವಸ್ತುಗಳನ್ನು ತಂದು ಮನೆಯಲ್ಲಿ ಕೂಡಿಟ್ಟುಕೊಳ್ಳುತ್ತೇವೆ. Consumerism ಎನ್ನುವುದು ಈಗ ಚಾಲ್ತಿಯಲ್ಲಿರುವ ಶಬ್ಧ. ಗ್ರಾಹಕರನ್ನು ಸೆಳೆಯುವ ಜಾಹೀರಾತುಗಳು, ಡಿಸ್ಕೌಂಟ್ ಸೇಲ್ ಗಳು ಹೆಚ್ಚೇಕೆ ಮನೆಯಲ್ಲಿ ಬೋರಾಗುತ್ತದೆ ಎಂಬ ಏಕೈಕ ಕಾರಣಕ್ಕೋಸ್ಕರ ಶಾಪಿಂಗ್‌ಗೆ ಹೊರಡುತ್ತೇವೆ.
shopping

ತಿಂಗಳಿನ ಅಗತ್ಯಕ್ಕೆ ಬೇಕಾದಷ್ಟೇ ಸಾಮಾನುಗಳನ್ನು ತಂದು ಮೊದಲು ಜೋಡಿಸಿಟ್ಟುಕೊಳ್ಳುತ್ತಿದ್ದರೆ ಈಗ ಲೇಟೆಸ್ಟ್ ಆಗಿ ಏನು ಬಂದರೂ (ಹಣವಿದ್ದರೆ) ತೆಗೆದುಕೊಳ್ಳುತ್ತೇವೆ. ಗ್ರಾಹಕರನ್ನು ಆಕರ್ಷಿಸಲು ಕಂಪೆನಿಗಳು, ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಲೇ ಇರುತ್ತವೆ. ಉದಾ: ಫ್ರೀ ಗಿಫ್ಟ್‌ಗಳು, ಕೂಪನ್‌ಗಳು ಹೀಗೆ. ಪಾಸಿಟಿವ್ ಆಗಿ ಯೋಚಿಸುವುದಿದ್ದರೆ ಈಗಿನ ಷಾಪಿಂಗ್ ನಮಗೆ ಹೆಚ್ಚಿನ ಆಯ್ಕೆಯನ್ನೂ, ವೆರೈಟಿಯನ್ನೂ ಕೊಡುತ್ತದೆ.

ಬಳೆಗಾರ ಚೆನ್ನಯ್ಯನ ಬಳಿ ಲಿಮಿಟೆಡ್ ಸ್ಟಾಕ್ ಇದ್ದಿರಬಹುದು. ಈಗ ಫ್ಯಾನ್ಸಿ ಸ್ಟೋರ್‌ಗೆ ಹೋದರೆ ಬಳೆಯಿಂದ ಹಿಡಿದು ಚಪ್ಪಲಿ ತನಕ ಅಡಿಯಿಂದ ಮುಡಿವರೆಗೆ ನಿಮ್ಮನ್ನು ಸುಂದರವಾಗಿಸಲು ರೆಡಿ ಇರುತ್ತಾರೆ!
ಷಾಪಿಂಗ್ ಎನ್ನುವ ಪರಿಕಲ್ಪನೆಯೇ ಈಗ ಬದಲಾಗಿದೆ. ಹಳ್ಳಿ ಊರಿನ ನಸುಗತ್ತಲಿನ ಕಿರಾಣಿ ಅಂಗಡಿಗಳಿಗಿಂತ ಝಗಮಗ ಹೊಳೆಯುವ, ಸ್ವಚ್ಛವಾಗಿ ನವಿರು ಪರಿಮಳ ಬೀರುವ ಮಾಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು ಜನಮನ ಸೆಳೆಯುತ್ತವೆ. ಅದು ಮನುಷ್ಯ ಸ್ವಭಾವ ಕೂಡ. ದೇಶದಲ್ಲಿ ವಿದೇಶಿ ಕಂಪೆನಿಗಳ ಆಕ್ರಮಣ, ಏಕರೂಪಿ ಸಂಸ್ಕೃತಿ ಇವೆಲ್ಲ ಆ ಕ್ಷಣದಲ್ಲಿ ನಮಗೆ ಮುಖ್ಯವಾಗುವುದಿಲ್ಲ.
ಮಾನ್ಯ ವೀರೇಂದ್ರ ಹೆಗ್ಗಡೆಯವರು ತಮ್ಮ ಭಾಷಣವೊಂದರಲ್ಲಿ ಹೇಳುತ್ತಿದ್ದರು. ಒಂದು ರೀತಿಯಲ್ಲಿ ಕಲಿಯುಗವೇ ಜನಸಾಮಾನ್ಯರಿಗೆ ಜಾಸ್ತಿ ಕಂಫರ್ಟಬೆಲ್ ಎಂದು. ಹಿಂದೆ ರಾಜ ಮಹಾರಾಜರಿಗೆ ಕೂಡಾ ಸೆಖೆಯಾದಲ್ಲಿ ಚಾಮರ ಬೀಸಬೇಕಿತ್ತು; ವಿಷಯಗಳನ್ನು ತಿಳಿದುಕೊಳ್ಳಲು, ತಲುಪಿಸಲು ದೂತರನ್ನು ಅವಲಂಬಿಸಬೇಕಿತ್ತು. ಹೌದು. ಅತ್ಯಂತ ಶ್ರೀಮಂತರಿಗೂ ಹಿಂದೆ ಕಷ್ಟವಾಗಿದ್ದ ಎಷ್ಟೋ ಸೌಕರ್ಯಗಳು ನಮಗಿವೆ. ಸ್ವಿಚ್ಛ್ ಅದುಮಿದರೆ ತಣ್ಣನೆಯ ಗಾಳಿ, ಫ್ರಿಜ್ಜಿನಲ್ಲಿಯ ತಂಪು ಪಾನೀಯಗಳು, ಓಡಾಡಲು ಬಸ್ಸು, ಸ್ಕೂಟರು, ರಿಕ್ಷಾ ಹೀಗೆ ಕೆಳಮಧ್ಯಮ ವರ್ಗದವರಿಗೂ ಅನೇಕಾನೇಕ ಸೌಲಭ್ಯಗಳಿವೆ. ಮೊಬೈಲ್, ಟಿವಿ, ಕಂಪ್ಯೂಟರ್, ಐಪಾಡ್ ಹೀಗೆ ಇನ್‌ಫಾರ್ಮೇಷನ್ ಕ್ರಾಂತಿಯೇ ನಮ್ಮ ಮುಂದಿದೆ. ಇದರ ಇನ್ನೊಂದು ಉತ್ತಮ ಫಲಿತಾಂಶವೆಂದರೆ ಸಮಾಜದಲ್ಲಿನ ಶ್ರೇಣೀಕೃತ ವರ್ಗ ಅಸಮಾನತೆ ಮಸುಕಾಗುತ್ತಿರುವುದು. ಪಿಜ್ಜಾ ಹಟ್‌ಗಳಲ್ಲಿ, ಮಾಲ್‌ಗಳಲ್ಲಿ ಯಾವುದೇ ಜಾತಿ ಆಧಾರಿತ ಸಂಘರ್ಷಗಳಿಲ್ಲ. ಈಗ ಏನಿದ್ದರೂ ಎರಡೇ ಜಾತಿ. ಹಣ ಇರುವವರು ಹಾಗೂ ಇಲ್ಲದವರು ಎಂದು. ಮಹಿಳೆಯರೂ ಉದ್ಯೋಗಕ್ಕೆ ಹೋಗುವುದರಿಂದ ಕೌಟುಂಬಿಕ ಅಸಮಾನತೆಗಳೂ ಕಡಿಮೆಯಾಗುತ್ತಿವೆ. ಮುಖ್ಯವಾಗಿ ಅವರಿಗೂ ಖರೀದಿಯ ವಿಷಯಗಳಲ್ಲಿ ದನಿಯೆತ್ತಲು ಸಾಧ್ಯವಾಗುತ್ತದೆ.
ಒಮ್ಮೆ ಶುರುವಾದ ಕೊಳ್ಳುಬಾಕ ಪ್ರವೃತ್ತಿ ಸುಲಭಕ್ಕೆ ನಮ್ಮನ್ನು ಬಿಡುವುದಿಲ್ಲ. ನಮ್ಮ ಜೀವನವನ್ನು ಗಡಿಬಿಡಿಯ ಜೀವನ ಶೈಲಿಯನ್ನು ಅವು ಸರಳಗೊಳಿಸುತ್ತವೆಯೇನೋ ಎನ್ನುವ ಭ್ರಮೆಯಲ್ಲಿ ಮತ್ತಷ್ಟು ಸಲಕರಣೆಗಳನ್ನು ಅನಾವಶ್ಯಕವಾಗಿ ತಂದು ಗುಡ್ಡೆ ಹಾಕುತ್ತೇವೆ.
mallಮಾಲ್‌ಗಳ ಧನಾತ್ಮಕ ಅಂಶವೆಂದರೆ Uniformity. ಮೈಸೂರಿನಲ್ಲೋ, ಬೊಂಬಾಯಿಯಲ್ಲೋ ಮಾತ್ರ ಸಿಗುತ್ತಿದ್ದ ಐಟಂಗಳು ಈಗ ನಮ್ಮೂರಿನಲ್ಲಿಯೂ ಒಂದೇ ಸೂರಿನಡಿಯಲ್ಲಿ ಸಿಗುತ್ತವೆ. (ಇದು ವ್ಯಾಪಾರದ ತಂತ್ರ ಕೂಡ). ಕ್ವಾಲಿಟಿಯನ್ನು ಅವರು ಕಾಯ್ದುಕೊಳ್ಳುವ ಕಾರಣ ಮುಗ್ಗಿದ ತೊಗರಿಬೇಳೆ, ಬಣ್ಣ ಕಳೆದುಕೊಂಡ ಮೆಣಸಿನ ಪುಡಿ, ಅಲ್ಲಿ ತಪ್ಪಿಯೂ ಸಿಗುವುದಿಲ್ಲ. ಉದಾ: ಫುಡ್‌ವರ್ಲ್ಡ್. ಕ್ಲೀನಾದ ವಾತಾವರಣ, ನಗುಮುಖದ ಸೇವೆ ನಮ್ಮಿಂದ ಹಣವನ್ನು ಸಂತೋಷದಿಂದಲೇ ಖರ್ಚು ಮಾಡಿಸುತ್ತಿರುತ್ತದೆ. (ನಮ್ಮ ಕಿರಾಣಿ ಅಂಗಡಿಯವರು ಬಹುಶ: ಈ ವಿಷಯಗಳಲ್ಲಿ ಎಡವುತ್ತಿರುತ್ತಾರೆ.)
ಮಾರ್ಕೆಟಿಂಗ್ ಎನ್ನುವುದು ಎಷ್ಟು ವಿಸ್ತಾರವಾಗಿ ಕ್ರಿಯೇಟಿವ್ ಆಗಿ ಯೋಚಿಸುತ್ತಿದೆಯೆಂದರೆ ಸಮಾಜದ ಎಲ್ಲ ಸ್ತರದವರಿಗೂ ಬೇಕಿರಲಿ ಬೇಡದಿರಲಿ ‘ಕೊಳ್ಳುವುದರ’ ರುಚಿ ಕಲಿಸುತ್ತಿದೆ. ಅಂಗಡಿಗಳಲ್ಲಿ ಕೂಡಾ ಫೇರ್‌ನೆಸ್ ಕ್ರೀಮ್‌ಗಳು, ಡಿಶ್‌ವಾಷಿಂಗ್ ಲಿಕ್ವಿಡ್‌ಗಳು, ಕುರ್ ಕುರೆಯಂತಹ ಜಂಕ್‌ಫುಡ್ ಕಾಣಸಿಗುತ್ತವೆ. ಬಡವರ್ಗದವರನ್ನು ಆಕರ್ಷಿಸಲು ಸಣ್ಣ ಪ್ಯಾಕೆಟ್‌ಗಳಲ್ಲಿ ಶ್ಯಾಂಪೋ, ಸೋಪು, ಟೂತ್ ಪೇಸ್ಟ್‌ಗಳು, ಸ್ವದೇಶಿ ಕಂಪೆನಿಗಳಿಂದ ವಿದೇಶಿ ಕಂಪೆನಿಗಳೇ ಈ ವಿಷಯದಲ್ಲಿ ಜಾಸ್ತಿ ರಿಸರ್ಚ್ ಮಾಡಿ, ಒಟ್ಟಿನ ಮೇಲೆ ಷಾಪಿಂಗ್ ಎನ್ನುವುದು ಗೀಳಾಗಿ ಪರಿಣಮಿಸದಂತೆ, ನಮ್ಮ ಆರ್ಥಿಕ ಬ್ಯಾಲೆನ್ಸ್‌ನ್ನು ಕುಸಿಯದಂತೆ ನೋಡಿಕೊಳ್ಳುವುದು ನಮ್ಮದೇ ಜವಾಬ್ದಾರಿ.

ಜಯಶ್ರೀ ಬಿ.ಕದ್ರಿ

ಅಂಗೈಯಲ್ಲಿ ಆಕಾಶ

‘ಮಾಣಿಕ್ಯ ವೀಣಾಮುಪಲಾಲಯಂತೀ ಮದಾಲಸಾಂ ಮಂಜುಳ ವಾಗ್ವಿಲಾಸಂ ಹೀಗೆ ವೀಣಾಪಾಣಿ ಸರಸ್ವತಿಯನ್ನು ವಾಗ್ದೇವತೆಯೆಂದು ಸ್ತುತಿಸುವ ದೇಶ ನಮ್ಮದು. ಹಾಗಿದ್ದರೂ ಉನ್ನತ ವಲಯದ ಶಿಕ್ಷಣ, ಉದ್ಯೋಗ, ಸ್ಥಾನಮಾನಗಳಿರುವ ಹುದ್ದೆಗಳಲ್ಲಿ ಮಹಿಳೆಯರು ಅಷ್ಟಾಗಿ ಕಂಡು ಬರುವುದಿಲ್ಲ. ಇದಕ್ಕೆ ಕಾರಣ ಅವರಿಗಿರುವ ಕೌಟುಂಬಿಕ ಬಾಧ್ಯತೆಗಳು ಒಂದು ಲೆಕ್ಕಾಚಾರದ ಪ್ರಕಾರ ಕಾಲು ಶತಮಾನವನ್ನು (ಹೆಚ್ಚು ಕಡಿಮೆ ಇಪ್ಪತ್ತರಿಂದ ನಲ್ವತ್ತನೆಯ ವಯಸ್ಸಿನವರೆಗೆ) ಮಹಿಳೆ ಕುಟುಂಬಕ್ಕೋಸ್ಕರ ತೇಯುತ್ತಾಳೆ ಹಾಗೂ ಕೌಟುಂಬಿಕ ಸಾಮರಸ್ಯವನ್ನು ಕಾಯ್ದುಕೊಳ್ಳುವುದು ಹೆಣ್ಣಿನದೇ ಬಾದ್ಯತೆ ಎನ್ನುವ ಮನೋಭಾವ ಹೆಣ್ಣು ಒಳಗೂ ಹೊರಗೂ ದುಡಿಯುವ ಈ ಜಮಾನಾದಲ್ಲೂ ಇದೆ. ಮಹಿಳೆಯರ ಹೆಪ್ಪುಗಟ್ಟಿದ ಮೌನ, ಆಕ್ರೋಶ, ಆಕ್ರಂದನಗಳನ್ನು, ಅವರ ಕೊತಕೊತ ಕುದಿಯುವ ಕಿಚ್ಚು, ಕೆಚ್ಚು, ಹುಮ್ಮಸ್ಸು, ಹುರುಪನ್ನು ಸಮರ್ಥವಾಗಿ ವ್ಯಕ್ತಪಡಿಸಲು ಸಾಹಿತ್ಯಕ್ಕೆ ಮಾತ್ರ ಸಾಧ್ಯ. (ದೃಶ್ಯ ಮಾಧ್ಯಮಗಳೂ ಸಾಹಿತ್ಯವನ್ನು, ಅಟ್‌ಲೀಸ್ಟ್ ಸ್ಕ್ರಿಪ್ಟ್‌ನ್ನು ಆಧರಿಸಿವೆ ಎನ್ನುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು) ಮೌನ ಮಾತಾಗುತ್ತ, ಮಾತು ಆಲಾಪವಾಗುತ್ತ ಅನೇಕ ಹರವು, ಆಳ, ಬದ್ಧತೆಗಳೊಂದಿಗೆ ಮಹಿಳಾ ಸಾಹಿತ್ಯ ಬೆಳೆದಿದೆ; ಬೆಳೆಯಬೇಕು.
ಮಹಿಳಾ ಸಾಹಿತ್ಯದ ಪ್ರಮುಖ ಅಂಶ ನಿರ್ದಿಷ್ಟ ಸಂಗತಿಗಳ ಬಗ್ಗೆ ಅಲ್ಲಿನ ಮೌನ ( ಕಾಮ, ಪ್ರಣಯ ಇತ್ಯಾದಿ) ಯಾಕೆಂದರೆ ನಮ್ಮ ಸಮಾಜ ಸ್ತ್ರೀಯರ ಬರಹಗಳನ್ನು ಮುಕ್ತತೆಯಿಂದ ಸ್ವೀಕರಿಸುವುದಿಲ್ಲ. ಅವರ ಬರಹ ಹೆಚ್ಚಾಗಿ ಪ್ರಕಟಗೊಳ್ಳವುದೂ ಮಹಿಳೆಯರಿಗೇ ಸೀಮಿತವಾದ ಮ್ಯಾಗಜಿನ್‌ಗಳು, ಪಾಕ್ಷಿಕಗಳಲ್ಲಿ, ಜನಪ್ರಿಯ ಸಾಹಿತ್ಯವಂತೂ ಗಂಡ, ಮನೆ, ಸಂಸಾರದ ಸುತ್ತಲೇ ಗಿರಾಕಿ ಹೊಡೆಯುತ್ತಿರುತ್ತದೆ. ಹಿತಮಿತವಾಗಿ, ನವಿರಾಗಿ, ಸಾಧ್ಯವಾದರೆ ಯಾರಿಗೂ ಅರ್ಥವಾಗದ ಪ್ರತಿಮೆಗಳನ್ನು ಬಳಸಿ ಬರೆಯಲೇಬೇಕಾದ ಅನಿವಾರ್ಯತೆ ಕವಯಿತ್ರಿಯರದ್ದು. ಯಾಕೆಂದರೆ ಈ ಪುರುಷ ಪ್ರಧಾನ ಸಮಾಜದಲ್ಲಿ ಕಮಲಾದಾಸ್ ಅಂತೆಯೋ ಚ.ಸರ್ವಮಂಗಳಾರಂತೆಯೋ ಬರೆಯಲಿಕ್ಕೆ ತುಂಬ ಛಾತಿ, ಧೈರ್ಯ ಮತ್ತು ಟೀಕೆಗಳನ್ನು ಎದುರಿಸುವ ಸಹನೆ ಬೇಕು.
woman writerಮಹಿಳೆಯರ ಜೀವನಾನುಭವ, ಅವಕಾಶ ವಲಯಗಳು ಸೀಮಿತವಾಗಿರುವ ಕಾರಣವೇ ಅದು ಅಡಿಗೆ ಮನೆ ಸಾಹಿತ್ಯ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದೆ. ಇನ್ನು ಸಾಹಿತ್ಯದ ಹೆಸರಿನಲ್ಲಿ ತಮ್ಮ ಅನುಭವ ರಾಹಿತ್ಯ, ಜೀವನದರ್ಶನದ ಕೊರತೆ, ಅಜ್ಞಾನವನ್ನು ಅಭಿವ್ಯಕ್ತಿಗೊಳಿಸುವ ಅಪಾಯವೂ ಇಲ್ಲದಿಲ್ಲ. ಇನ್ನು ಕೆಲವು ಕಥೆಗಾರ್ತಿಯರು ತೀರಾ ವೈಯಕ್ತಿಕ ಅನುಭವಗಳನ್ನು, ಇನ್ನೂ ಸರಳವಾಗಿ ಹೇಳವುದಿದ್ದರೆ ತಮ್ಮದೇ ಕತೆಯನ್ನೋ, ಅಕ್ಕ ಪಕ್ಕದವರ ವಿಚಾರಗಳನ್ನೋ ಅಕ್ಷರ ರೂಪಕ್ಕಿಳಿಸುತ್ತಾರೆ. ಬರಹವೆಂಬುದು ಅಭಿವ್ಯಕ್ತಿ ಮಾಧ್ಯಮ ಹೌದಾದರೂ, ತಮ್ಮ ಅನುಭವಗಳು ಪಕ್ವವಾಗಲು, ಅಕ್ಷರಗಳಲ್ಲಿ ಕಸುವು, ಸಾಂದ್ರತೆ ತುಂಬಿಕೊಳ್ಳಲು, ಸಮತೋಲನದ, ಸತ್ಯಾನ್ವೇಷಣೆಯೇ, ಅರಿವಿನ ದೃಷ್ಟಿಕೋನ ನಮ್ಮದಾಗಲು, ತಾಳ್ಮೆ, ಸಹನೆ ಹಾಗೂ ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವ ಪ್ರಜ್ಞೆ ಬೇಕು. (ಯಾವುದೇ ವಾದಕ್ಕೆ ಕಟ್ಟುಬೀಳದೆ ಮೌನವಾಗಿ, ಆಪ್ಯಾಯಮಾನವಾಗಿ ಬರೆಯುವ ವೈದೇಹಿಯಂತಹವರನ್ನು ಇಲ್ಲಿ ನೆನಪಿಸಿಕೊಳ್ಳಬೇಕು).
ಆಂಗ್ಲ ಮಾಧ್ಯಮದಲ್ಲಿಯೇ ಹೆಚ್ಚು ಹೆಚ್ಚು ಮಕ್ಕಳು ಕಲಿಯುತ್ತಿರುವ ಈ ಕಾಲಘಟ್ಟದಲ್ಲಿ ಕನ್ನಡದ ಹಿರಿಯ ಲೇಖಕಿಯರನ್ನು ಹೊರತುಪಡಿಸಿದರೆ ಈಗಿನ ತಲೆಮಾರಿನ ಲೇಖಕಿಯರಲ್ಲಿ ಬರೆಯುತ್ತಿರುವವರು ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ, ಇಪ್ಪತ್ತೈದರಿಂದ ನಲ್ವತ್ತರ ಆಸುಪಾಸಿನಲ್ಲಿರುವವರು ಕೆಲವು ಬರಹಗಾರ್ತಿಯರಿಗೆ ಬರಹ ಅವರ ದೈನಂದಿನ ಯಾಂತ್ರಿಕತೆಯಿಂದ ( ಮನೆಕೆಲಸ, ಮಕ್ಕಳ ಜವಾಬ್ದಾರಿ, ಅತ್ತೆ ಮಾವಂದಿರ ಸೇವೆ ಇತ್ಯಾದಿ) ಬಿಡುಗಡೆಯ ಹಾದಿಯಾಗಿದ್ದರೆ ಇನ್ನು ಕೆಲವರಿಗೆ ತಮ್ಮ ವೈಚಾರಿಕತೆಯೆ, ಕನಸುಗಾರಿಕೆಯ ಅಭಿವ್ಯಕ್ತಿ.
ಮಹಿಳಾ ಬರಹಗಾರ್ತಿಯರ ಮುಖ್ಯ ಸಮಸ್ಯೆ ಅವರ ಅನುಭವಗಳಿಗಿರುವ ಮಿತಿ, ಪುರುಷ ಲೇಖಕರ ಆಳ, ವಿಸ್ತಾರ, ಹರಹುಗಳಿಂದ ಅವರು ವಂಚಿತರು, ಇಡೀ ಭಾರತವನ್ನು ಒಬ್ಬಂಟಿಯಾಗಿ ಸುತ್ತಲು, ಯಾವುದೋ ಕೊಳೆಗೇರಿಯನ್ನು ಸಂದರ್ಶಿಸಿ ಅಲ್ಲಿ ವಾಸಿಸಲು, ಬರೆಯಲೆಂದು ಆರು ತಿಂಗಳು ಯಾವುದೋ ಹಿಲ್‌ಸ್ಟೇಶನ್‌ಗೆ ಹೋಗಿ ತಂಗಲು ಎಷ್ಟು ಜನ ಲೇಖಕಿಯರಿಗೆ ಧೈರ್ಯವಾಗಲಿ, ಅನುಕೂಲವಾಗಲಿ ಇದೆ ? ಹೀಗಾಗಿಯೇ ಮಹಿಳೆಯರ ಬರಹಕ್ಕೆ ತುಂಬ ಸೀಮಿತವಾದ ಆಯಾಮ ಇದೆ ಎಂದೇ ಹೇಳಬೇಕಾಗಿದೆ.
ಬರಹದಿಂದಲೇ ಬದುಕು ಸಾಗಿಸುವ ಅನುಕೂಲ ಪ್ರಸ್ತುತ ಇಲ್ಲದಿರುವ ಕಾರಣ (ಕಲೆಯನ್ನೂ ಕೂಡ) ಬರಹವೆನ್ನುವುದನ್ನು ಹವ್ಯಾಸವಾಗಿ ಮಾತ್ರ ಬೆಳೆಸಿಕೊಳ್ಳಲು ಸಾಧ್ಯ, ಲೇಖಕಿಯರೂ ಸಮಾಜದ, ಕುಟುಂಬದ ಭಾಗವೇ ಆಗಿರುವುದರಿಂದ ಸಾಹಿತ್ಯ ಸಮ್ಮೇಳನಗಳಿಂದ ಹಿಡಿದು ಸಭೆ, ಸಮಾರಂಭ, ಕವಿಗೋಷ್ಠಿ ಇತ್ಯಾದಿಗಳಲ್ಲಿ ಭಾಗವಹಿಸಲು ಬೇಕಾದ ಸಮಯ, ಅನುಕೂಲ, ಹಣ ಇರಬೇಕಾಗಿರುವುದು ಅಗತ್ಯ, ಒಬ್ಬಳೇ ಒಂದು ಸಿನಿಮಾ ಮಂದಿರಕ್ಕೆ ಹೋಗಿ ಫಿಲ್ಮ್ ನೋಡುವ ಧೈರ್ಯ ನಮಗಿಲ್ಲದಿರುವಾಗ ಜಗತ್ತಿನ ಆಗು ಹೋಗುಗಳಿಗೆ ತೆರೆದುಕೊಳ್ಳುವ ಮಾತು ದೂರವೇ ಉಳಿಯಿತು.
ಹೀಗಿದ್ದರೂ ಪ್ರತಿಭಾ ನವನವೋನ್ಮೇಷಶಾಲಿನಿ ಎಂಬಂತೆ ಕಂಪ್ಯೂಟರ್ ನಲ್ಲಿ ಟೈಪ್ ಮಾಡಲು ಕಷ್ಟಪಟ್ಟು ಕಲಿತು, ಪ್ರೋಗ್ರಾಂಗಳ ಸಿಡಿ ನೋಡುತ್ತ, ವೆಬ್ ಸೈಟ್ ಗಳಿಂದ ಜ್ಞಾನ ಸಂಪಾದಿಸುತ್ತ, ಮೊಬೈಲ್ ನಲ್ಲಿ ಸಂವಹನ ಮಾಡುತ್ತ ತಾವಿರುವ ಜಾಗದಿಂದಲೇ ತಮ್ಮ ನೆಲೆಯನ್ನು ಕಂಡುಕೊಳ್ಳಲು ಪಣ ತೊಟ್ಟಿರುವ, ಬೇರುಗಳನ್ನು ನೆಲದಲ್ಲಿ ಭದ್ರವಾಗಿರಿಸಿಕೊಂಡೇ ಆಗಸದೆತ್ತರೆಕ್ಕೆ ಕನಸು ಕಾಣುವ ಲೇಖಕಿಯರು, ಎಳೆಯ ವಿದ್ಯಾರ್ಥಿನಿಯರು ನಮ್ಮಲ್ಲಿದ್ದಾರೆ ಎನ್ನುವುದೇ ಸಂತಸದ ವಿಷಯ.
ಒಂದೂವರೆ ದಶಕದ ಹಿಂದೆ ಪತ್ರಿಕೋದ್ಯಮ ಅಷ್ಟಾಗಿ ಒಂದು ಅಧ್ಯಯನ ಶಿಸ್ತಾಗಿ ಪ್ರಚಲಿತವಿಲ್ಲದಿದ್ದ ಸಂದರ್ಭದಲ್ಲಿ ನಾವು ಪತ್ರಿಕಾ ಸಾಹಿತ್ಯವನ್ನು ಅಷ್ಟಾಗಿ ಪರಿಗಣಿಸುತ್ತಿರಲಿಲ್ಲ. ಈಗ ನೋಡಿದರೆ ಪತ್ರಿಕೆಗಳೇ ಸಾಹಿತ್ಯವನ್ನು ಉಳಿಸಿ ಬೆಳೆಸುತ್ತವೆ ಎನ್ನಬಹುದು. ಕನ್ನಡ ಭಾಷೆಯನ್ನು ಮಾತನಾಡುವವರೇ ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಅಭಿವ್ಯಕ್ತಿ ಮಾಧ್ಯಮವಾಗಿ ಭಾಷೆ ಬಳಕೆಯಾಗಬೇಕಾಗಿರುವುದು ಇನ್ನಿಲ್ಲದ ಅನಿವಾರ್ಯತೆ ಆಗಿದೆ. ಈ ನಿಟ್ಟಿನಲ್ಲಿ ಹೊಸ ಟ್ರೆಂಡ್ ಎಂದರೆ ಬ್ಲಾಗ್ ಸಾಹಿತ್ಯ. ಹೊಸರುಚಿಯನ್ನು ಅಪ್‌ಲೋಡ್ ಮಾಡುವುದರಿಂದ ಹಿಡಿದು ಇತ್ತೀಚೆಗೆ ಹೋಗಿ ಬಂದ ಪಿಕ್ ನಿಕ್ ಸ್ಪಾಟ್ ವರೆಗೆ ಮಾಹಿತಿಗಳನ್ನು ಫೋಟೋ ಸಮೇತ ಬರೆಯುತ್ತಿರುತ್ತಾರೆ.  ತಂತ್ರಜ್ಞಾನವನ್ನು ನೇಟಿವಿಟಿಗೆ ತಕ್ಕಂತೆ ಬಳಸಿಕೊಳ್ಳುವುದೇನೆಂದರೆ ಇದೇ ಇರಬೇಕು.
ಇಷ್ಟಾಗಿ ಮಹಿಳೆಯರ ಬರಹ ಯಾಕೆ ಬೇಕೆನ್ನುವುದು ಪ್ರಶ್ನೆ, ಹೆಣ್ಣಿನ ಅನುಭವ ಜಗತ್ತು, ಅವರ ಮೂಕ ತಲ್ಲಣಗಳನ್ನು, ನವಿರು ಪುಳಕಗಳನ್ನು ಹೆಣ್ಣಿನಷ್ಟೆ, ಸಮರ್ಥವಾಗಿ ವ್ಯವಕ್ತಪಡಿಸಲು ಪುರುಷ ಲೇಖಕರಿಗೆ ಕಷ್ಟಸಾಧ್ಯ. ರವೀಂದ್ರನಾಥ ಠಾಗೋರ್, ಶರತ್ ಚಂದ್ರ ರಂತಹ ಶ್ರೇಷ್ಠ ಕಾದಂಬರಿಕಾರರು, ಕಾರಂತ, ಕುವೆಂಪು, ಭೈರಪ್ಪ ನವರಂತಹವರನ್ನು ಹೊರತುಪಡಿಸಿದರೆ ಹೆಣ್ಣಿನ ಅನುಭವಗಳನ್ನು ಗಂಡಿನ ದೃಷ್ಟಿಕೋನ ದಿಂದಲೇ ವ್ಯಕ್ತಪಡಿಸುತ್ತಿರುತ್ತಾರೆ. ಕೊನೆಕೊನೆಗೆ ಅವು ಪುರುಷ ಪ್ರಧಾನ ಮೌಲ್ಯಗಳನ್ನೇ, ಸ್ತ್ರೀ ಪಾತ್ರಗಳ ಮುಖಾಂತರ ಹೇಳುವ ಅಪಾಯವೂ ಇದೆ. ಇದಕ್ಕಾಗಿ ಸ್ತ್ರೀಯರ ಬರಹ ಬೇಕು.
ಕೊನೆಯದಾಗಿ, ಮಹಿಳೆಯರ ಬರಹ ಎಂದರೆ ಇಡೀ ಪುರುಷ ಸಂಕುಲವನ್ನೇ ದ್ವೇಷಿಸುವ, ಬೆಂಕಿ ಉಗುಳುವ, ದೈನ್ಯ, ವ್ಯಥೆಗಳ ಚಿತ್ರಣಗಳೇ ಆಗಿರಬೇಕೆಂದಿಲ್ಲ. ಇಷ್ಟಕ್ಕೂ ಸ್ತ್ರೀಯರೇನು ಮಂಗಳ ಗ್ರಹದಿಂದ ಬಂದವರಲ್ಲ, ಅದರಲ್ಲೂ ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಸ್ತ್ರೀ ಶೋಷಣೆಯಷ್ಟೇ ಧೃತಿಗೆಡಿಸುವ ಸಮಸ್ಯೆಗಳು ಹತ್ತು ಹಲವು. ತಾಂಡವಾಡುತ್ತಿರುವ ನಿರುದ್ಯೋಗ, ಭ್ರಷ್ಟಾಚಾರ, ಬೆಲೆ‌ಏರಿಕೆಯ ದುಮ್ಮಾನ, ಭಯೋತ್ಪಾದನೆಯ ಭೀತಿ, ನವವಸಾಹತುಶಾಹಿಯನ್ನು ಹುಟ್ಟು ಹಾಕುತ್ತಿರುವ ಆರ್ಥಿಕ ನೀತಿಗಳು, ಅಭಿವೃದ್ಧಿ ಯೋಜನೆಗಳಿಂದಾಗುತ್ತಿರುವ ಅಸಮತೋಲನ, ವಿನಾಶವಾಗುತ್ತಿರುವ ಪರಿಸರ- ಹೀಗೆ -ಕೇವಲ ಸಾಂಸಾರಿಕ ವಿಷಯಗಳಿಗೆ ಸೀಮಿತವಾಗಿರದೆ ಜಗದಗಲ ವ್ಯೋಮಯಾನ ಮಾಡುವ ಕನಸುಗಾರಿಕೆ, ವ್ಯಾಪ್ತಿ ಮಹಿಳಾ ಸಾಹಿತ್ಯಕ್ಕೆ ದಕ್ಕಬೇಕೆನ್ನುವುದು ಎಲ್ಲರ ಹಾರೈಕೆ.

– ಜಯಶ್ರೀ.ಬಿ.ಕದ್ರಿ

ಚುನಾವಣೆಯ ಅಂಗಳದಲ್ಲಿ..

ಮತ್ತೊಂದು ಮಹಾಚುನಾವಣೆಯ ಹೊಸ್ತಿಲಿನಲ್ಲಿದೆ ಭಾರತ. ಜಾಗತೀಕರಣ, ಉದಾರೀಕರಣ ಇತ್ಯಾದಿ ಗ್ಲೋಬಲ್ ಪ್ರಭಾವಗಳನ್ನು ಅರಗಿಸಿಕೊಳ್ಳುತ್ತ, ಸಾಧ್ಯವಾದರೆ ಅವುಗಳಿಂದ ಲಾಭ ಪಡೆಯುತ್ತ, ಬೆಲೆ ಏರಿಕೆ ಬಗ್ಗೆ ಕಳವಳ ವ್ಯಕ್ತ ಪಡಿಸುತ್ತ, ಹೀಗೆ ಸಾಗಿದೆ ಜನ ಸಾಮಾನ್ಯರ ಬದುಕು. ಬೇಳೆಕಾಳಿನ ದರದಿಂದ ಹಿಡಿದು , ಆಟೋ, ವಿಮಾನ ಯಾನದ ವರೆಗೆ ದಿನೇ ದಿನೇ ದುಬಾರಿಯಾಗುತ್ತಿರುವ, ಅದೇ ಹೊತ್ತಿಗೆ ಮಾಹಿತಿ ತಂತ್ರಜ್ಞಾನ ಸ್ಫೋಟದಿಂದಾಗಿ, ಮಾಧ್ಯಮಗಳು ಹುಟ್ಟುಹಾಕುವ ಅರಿವಿನಿಂದಾಗಿ, ವಿಶಿಷ್ಟವೂ ವಿನೂತನವೂ ಆದ ಚಾರಿತ್ರಿಕ ಸಂದರ್ಭದಲ್ಲಿ ನಾವಿದ್ದೇವೆ.
 vote
ನಮ್ಮ ದೇಶದ ಸಾಂಸ್ಕೃತಿಕ ಸಾಮಾಜಿಕ ಕಟ್ಟಳೆಗಳನ್ನನುಸರಿಸಿ ರಾಜಕೀಯದಲ್ಲಿ ಮಹಿಳಾ ಪ್ರತಿನಿಧೀಕರಣ ಬಹಳ ಕಡಿಮೆ.ಇತ್ತೀಚಿನ ವರದಿಯೊಂದರಂತೆ ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯದ ವಿಷಯದಲ್ಲಿ, ಭಾರತಕ್ಕೆ ಜಗತ್ತಿನ 185 ದೇಶಗಳಲ್ಲಿ 111 ನೆಯ ಸ್ಥಾನವಂತೆ!ಇನ್ನು ಗೃಹಕೃತ್ಯದಲ್ಲಿ ಸಹಾಯ ಮಾಡದೇ ಇರುವವರಲ್ಲಿ ಭಾರತದ ಪುರುಷರು ನಂಬರ್ 1 ಸ್ಥಾನದಲ್ಲಿದ್ದಾರಂತೆ!.
ಪ್ರಾಮಾಣಿಕವಾಗಿ ಹೇಳುವುದಿದ್ದರೆ ಮಹಿಳೆಯರಿಗೆ ರಾಜಕೀಯ ಪ್ರಜ್ಞೆ ಇದೆಯೇ ಎನ್ನುವುದೇ ಅನುಮಾನ (ನ್ಯೂಸ್ ಪೇಪರ್ ಓದುವುದೇ ಎಲ್ಲಾ ಕೆಲಸಕಾರ್ಯಗಳೆಲ್ಲ ಮುಗಿದು, ವಿರಾಮ ಸಿಕ್ಕು, ಸೀರಿಯಲ್ ಗಳನ್ನು ನೋಡಿ ಆದ ಮೇಲೆ). ಹಾಗಿದ್ದರೂ ತೊಟ್ಟಿಲು ತೂಗುವ ಕೈ ದೇಶವನ್ನಾಳಬಲ್ಲುದು ಎಂದು ಸಾಧಿಸಿ ತೋರಿಸಿದ ಮಹಿಳೆಯರು ಅನೇಕರು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಸುಚೇತಾ ಕೃಪಲಾನಿ, ವಿಜಯಲಕ್ಷ್ಮಿ ಪಂಡಿತ್, ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ವಸುಂಧರಾ ರಾಜೇ ಸಿಂಧ್ಯಾ, ಸುಷ್ಮಾ ಸ್ವರಾಜ್, ಬೃಂದಾ ಕಾರಟ್ ಹೀಗೆ ಎಲ್ಲರೂ , ಪ್ರತಿಷ್ಠಿತ, ಪ್ರಭಾವಿ ಸಿರಿವಂತ ವರ್ಗಕ್ಕೆ ಸೇರಿದವರೆನ್ನುವುದು. ಈ  ನಿಟ್ಟಿನಲ್ಲಿ ಗ್ರಾಮ ಪಂಚಾಯತುಗಳು ತಳಮಟ್ಟದ ಸಬಲೀಕರಣದತ್ತ ಉತ್ತಮ ಹೆಜ್ಜೆ.
ಸ್ವತಂತ್ರ ಭಾರತದ ಜ್ವಲಂತ ಸಮಸ್ಯೆಗಳು ನೂರಾರು, ಸಾವಿರಾರು. ಜಾತಿ ಪದ್ಧತಿ, ದಲಿತರ ಶೋಷಣೆ, ಮಹಿಳೆಯರ ಮೇಲಿನ ದೌರ್ಜನ್ಯ, ಹಣದುಬ್ಬರ, ಭ್ರಷ್ಟಾಚಾರ, ಬಡತನ, ಹಸಿವು, ನಿರಕ್ಷರತೆ   ಹೀಗೆ ಕಳೆದ ಅರುವತ್ತೈದು ವರ್ಷಗಳಿಂದ ಕೇಳುತ್ತಲೇ ಬಂದಿರುವ ಸಮಸ್ಯೆಗಳೊಂದಿಗೆ ಸೇರಿಕೊಂಡ ಸೈಬರ್ ಕ್ರೈಮ್, ಪರಿಸರ ವಿರೋಧಿ ಧೋರಣೆಗಳು, ನವವಸಾಹತುಶಾಹಿ ಉದ್ಯಮಗಳು ಇತ್ಯಾದಿ. ರಾಷ್ಟ್ರಮಟ್ಟದಲ್ಲಿ ಇಂತಹ ಘಟನೆಗಳಾದರೆ, ಸ್ಥಳೀಯ ಮಟ್ಟದಲ್ಲಿ ಪೋಲೀಸ್ ದೌರ್ಜನ್ಯ, ರಾಜಕೀಯ ಬಣಗಳೊಳಗಣ ವೈಷಮ್ಯ, ಮತೀಯ ಗಲಭೆಗಳು… ಹೀಗೆ.
ಬೆಲೆ ಏರಿಕೆ ಎಷ್ಟು ಇದೆ ಎಂದರೆ, ತಮ್ಮ ಪಾಡಿಗೆ ತಾವು ನೆಮ್ಮದಿಯಾಗಿದ್ದ ಗೃಹಿಣಿಯರು ಕೂಡ ಸಂಸಾರ ತೂಗಿಸಲು ಕಷ್ಟಪಡುತ್ತಿದ್ದಾರೆ. ಇನ್ನು ಕೋಮುವಾದ, ಭ್ರಷ್ಟಾಚಾರಗಳಿಗಿಂತಲೂ ಗಂಭೀರ ಸಮಸ್ಯೆ ಮಹಿಳೆಯನ್ನೊಂದು ಸಾಂಸ್ಕೃತಿಕ ಪ್ರತೀಕದಂತೆ, ಪರಂಪರೆಯನ್ನು ಉಳಿಸಿಕೊಂದು ಹೋಗುವ ಮಾಧ್ಯಮದಂತೆ ಕಾಣುವುದು. ದೇಶ ವಿಭಜನೆಯ ಸಂದರ್ಭದಿಂದ ಹಿಡಿದು ಈಗಿನವರೆಗೂ ಮಹಿಳೆಯನ್ನೊಂದು ಭೋಗವಸ್ತುವಿನಂತೆ, ಯಜಮಾನಿಕೆ ಸ್ಥಾಪಿಸುವ ಸೊತ್ತಿನಂತೆ ಪರಿಗಣಿಸಲ್ಪಡುತ್ತಿದ್ದಾಳೆ. ಮಹಿಳೆಯರ ಸುರಕ್ಷೆ, ಉನ್ನತಿ, ಆರ್ಥಿಕ ಸುಭದ್ರತೆಯ ಬಗ್ಗೆ ಬೇರೆ ಬೇರೆ ಚುನಾವಣಾ ಪ್ರಣಾಳಿಕೆಗಳು ಹೇಳುವ ವಿಚಾರಗಳು ಜಾರಿಗೆ ಬಂದಲ್ಲಿ ನಾಗರಿಕರ ಜೀವನ ಹಗುರವಾಗಬಹುದು.

vote countsಜವಾಬ್ದಾರಿಯರಿತು ಮತ ಚಲಾಯಿಸುವುದು ನಮ್ಮ ಕರ್ತವ್ಯ. 



– ಜಯಶ್ರೀ .ಬಿ. ಕದ್ರಿ.

ಕಾಸಿದ್ದರೆ ಕೈಲಾಸ

ಹಣಕ್ಕೂ ನಮ್ಮ ಜೀವನಕ್ಕೂ ಅವಿನಾ ಭಾವ ಸಂಬಂಧವಿದೆ. ‘ಸರ್ವೇ ಗುಣ: ಕಾಂಚನಮಾಶ್ರಯಂತಿ’ ಎನ್ನುವಂತೆ ದುಡ್ಡಿದ್ದವವರು ದೊಡ್ಡಪ್ಪ  ಆಗುವುದು ಸರ್ವೇ ಸಾಮಾನ್ಯ. ಹಣವಿಲ್ಲದಿರುವಿಕೆ  ನಮ್ಮ ಖಿನ್ನತೆಗೂ ನಿರುತ್ಸಾಹಕ್ಕೂ ಭವಿಷ್ಯದ ಬಗ್ಗೆ ಕಳವಳಕ್ಕೂ ಕಾರಣವಾಗುತ್ತದೆ . ಹಣದ ಅಭಾವ ನಮ್ಮ ಸುಪ್ತ ಪ್ರಜ್ಞೆ ಯನ್ನು ಕೂಡ ಎಷ್ಟರ ಮಟ್ಟಿಗೆ ಪ್ರಭಾವಿಸುತ್ತದೆ ಎಂದರೆ ನಮ್ಮೆಲ್ಲರ ಕೊಳ್ಳುವಿಕೆ, ನಿರ್ಧಾರ ಕೈಗೊಳ್ಳುವಿಕೆ ಎಲ್ಲವೂ ಅದರ ಮೇಲೆ ಅವಲಂಬಿಸಿದೆ. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರು, ವಿಷಮ ದಾಂಪತ್ಯದಲ್ಲಿದ್ದರೂ ದುಡ್ಡಿಲ್ಲದ ಕಾರಣ ದಿನಾ ಕುಡುಕ ಗಂಡನಿಂದ ಒದೆಸಿಕೊಳ್ಳುವವರು, ಶಾಲೆಗೆ ಹೋಗಲು ಸಾಧ್ಯವಾಗದೆ ಕಾರ್ಖಾನೆಗಳಲ್ಲಿ ದುಡಿಯುವ ಪುಟ್ಟ ಮಕ್ಕಳು ..ಹೀಗೆ ಹಣವಿದ್ದರೆ ಅವರ ಜೀವನ ಖಂಡಿತವಾಗಿಯೂ ಸುಗಮವಾಗಲು ಸಾಧ್ಯವಿದೆ.


Rupeesಮಿತವ್ಯಯ, ಸರಳಜೀವನ ಎಂದೇನೇ ಹೇಳಲಿ, ಅಧುನಿಕ ಜಗತ್ತಿನಲ್ಲಿ ಹಣವನ್ನು ಖರ್ಚುಮಾಡಲು ಆಕರ್ಷಣೆಗಳು ಅನೇಕ. ಈ ಬೆಲೆಯೇರಿಕೆಯ ದಿನಗಳಲ್ಲಿ ಎಷ್ಟು ದುಡಿದರೂ ಸಾಕಾಗದಿದ್ದರೂ ಕ್ಷಣಿಕ ಸುಖಕ್ಕೋಸ್ಕರ  ಕೈಯಾರೆ ಖರ್ಚು ಮಾಡಿಬಿಡುತ್ತೇವೆ. ಉದಾ: ಡಿಸ್ಕೌಂಟ್ ಸೇಲ್ ಗಳಲ್ಲಿ ಕೊಳ್ಳುವ ರಾಶಿ ಸೀರೆಗಳು, ಪುಸ್ತಕ ಪ್ರದರ್ಶನಗಳಲ್ಲಿ ಖರೀದಿಸುವ ಪುಸ್ತಕಗಳು, ಟೂರ್ ಹೋದಾಗ ಕೊಳ್ಳುವ ಅನವಶ್ಯಕ ಆಲಂಕಾರಿಕ ವಸ್ತುಗಳು..ಹೀಗೆ. ಹಣ ಖರ್ಚು ಮಾಡಲು ಇನ್ನೊಂದು ಕಾರಣ ‘ ಎಂಜಾಯ್’  ಮಾಡಬೇಕೆಂಬ ಪರಿಕಲ್ಪನೆ. ಸತ್ಯ ಹೇಳಬೇಕೆಂದರೆ ನಮ್ಮ ಪಿಕ್ ನಿಕ್ ಗಳು, ಜಾಲಿ ರೈಡ್ ಗಳು, ಗೆಟ್ ಟುಗೆದರ್ ಗಳು ಸುಮ್ಮನೇ ತಿಂದು, ಕುಡಿದು, ಬುರುಗು ನೊರೆಯಂತೆ ಯಥಾ ಪ್ರಕಾರ ಖಾಲಿತನವನ್ನೂ, ಸ್ವಲ್ಪ ಮಟ್ಟಿಗೆ ನೆನಪುಗಳನ್ನೂ ಉಳಿಸುತ್ತವೆ.
ಭಾರತದಂತಹ ವಿರೋಧಾಭಾಸಗಳೇ ತುಂಬಿದ ದೇಶದಲ್ಲಿ ಹಣವನ್ನು ಯಾತಕ್ಕೆ ಖರ್ಚು ಮಾಡುತ್ತೇವೆ ಎನ್ನುವುದೇ ಕುತೂಹಲದ ವಿಷಯ. ಸ್ಲಮ್ಮಿನಲ್ಲಿರುವ ಕಡುಬಡವರ ಒಂದು ರೂಮಿನ ಮನೆಗಳಲ್ಲಿ  ಕೂಡ    ಕೇಬಲ್ ಟಿವಿ ಇರುತ್ತದೆ. ತನ್ನ ಹಣವನ್ನೆಲ್ಲ ಸಾರಾಯಿಯ ಮೇಲೆ ಸುರಿಯುವ ಕುಡುಕ ಮಕ್ಕಳ ಸ್ಕೂಲ್ ವೆಚ್ಚವನ್ನೋ, ಹೆಂಡತಿಯ ಮಾಸಲು ಸೀರೆ, ಕೃಶ ಶರೀರವನ್ನೋ ನೆನಪಿಸಿಕೂಳ್ಳುವುದಿಲ್ಲ. ಅಕ್ಕಪಕ್ಕದವರಿಂದ ಸಾಲ ಪಡೆದಾದರೂ ಯುಗಾದಿ, ದೀಪಾವಳಿಗಳನ್ನು ಗ್ರಾಂಡ್ ಆಗಿ ಆಚರಿಸುವ, ಉರಿದು ಬೂದಿಯಾಗುವ ಪಟಾಕಿಗೆ ರಾಶಿ ದುಡ್ಡು ಸುರಿಯುವವರನ್ನು ನೋಡಿದ್ದೇನೆ.. ಬಹುಶ: ಇವೆಲ್ಲ ಅವರ ಭಾವನಾತ್ಮಕ ಅಗತ್ಯಗಳನ್ನು ಪೂರೈಸ್ಸುತ್ತದೆ.
ನಮ್ಮ ಮಾರ್ಕೆಟಿಂಗ್ ತಂತ್ರಗಳು ಎಷ್ಟು ಜಾಣತನದಿಂದ ಕೂಡಿವೆ ಎಂದರೆ, ಇಲ್ಲದ ಅಗತ್ಯಗಳನ್ನು ಸೃಷ್ಟಿಸಿ ಹಣವನ್ನು ಖರ್ಚುಮಾಡಿಸುತ್ತವೆ. ಉದಾ: ಕಡಿಮೆ ಆದಾಯದವರಿಗೆ ಕೊಳ್ಳಬಹುದಾದ ಚಿಕ್ಕ-ಪುಟ್ಟ ಶ್ಯಾಂಪೂ ಸ್ಯಾಶೆ ಗಳು, ಪೌಡರ್, ಸೋಪ್ ಹೀಗೆ. ವ್ಯಂಗ್ಯವೆಂದರೆ, 1 ಕಿಲೊ  ಬಾಸ್ಮತಿ ಅಕ್ಕಿಯ ಮೇಲೆ ಅಥವಾ  5 ಲಿ. ಸೂಫ಼್ಟ್ ಡ್ರಿಂಕ್ಸ್ ನ ಮೇಲೆ ಇರುವ ಡಿಸ್ಕೌಂಟ್ ಗಳು ದಿನಬಳಕೆಯ ವಸ್ತುಗಳ ಮೇಲೆ ಇರುವುದಿಲ್ಲ. ನಮ್ಮ ಮಾಲ್ ಗಳು ಈ ಮನಸ್ಥಿತಿಯನ್ನು ಬಹಳ ಚೆನ್ನಾಗಿ ಬಳಸಿಕೊಳ್ಳುತ್ತವೆ.
moneyಈ ಜೀವನ ಮಾಯೆ, ದುಡ್ಡಿಗಿಂತ ನಿರ್ಮಲವಾದ ಮನಸ್ಸು ಮುಖ್ಯ ಹೀಗೆಲ್ಲ ತತ್ವಗಳನ್ನು ಕೇಳಿ ಕೇಳಿ ಜನಸಾಮಾನ್ಯರ ರಕ್ತ ಕುದಿಯಲಾರಂಭಿಸಿದೆ. ಮುಂಬಯಿಯಲ್ಲಿನ ಸ್ಲಮ್ಮಿನಲ್ಲಿಯೋ. ನಮ್ಮದೇ ನಗರಗಳ ಕೆಳಮಧ್ಯಮ ವರ್ಗದವರಲ್ಲಿಯೋ  ಕೇಳಿದರೆ ಆತ್ಮಸಾಕ್ಷಾತ್ಕಾರಕ್ಕಿಂತ ನೆಟ್ಟಗಿನ ಕರೆಂಟ್ ಸಪ್ಲೈ, ಗುಂಡಿಗಳಿಲ್ಲದ ರಸ್ತೆಗಳು, ಅಕ್ಕಿ ಬೇಳೆಗಳಿಗೆ ಕಡಿಮೆ ದರ, ಇಕ್ಕಟ್ಟಿಲ್ಲದೆ ಕಾಲು ಚಾಚುವ ಯೋಗ್ಯವಾದ ಮನೆಗಳಿದ್ದರೆ ಅವೇ ಸ್ವರ್ಗ ಎಂದು ಉತ್ತರಿಸಿಯಾರು. ಉರಿಬಿಸಿಲಿನಲ್ಲಿ ಕಟ್ಟಡ ಕೆಲಸ ಮಾಡುವವರು, ಇನ್ನೊಬ್ಬರ  ಮನೆಕೆಲಸ ಮಾದಿ ಹೊಟ್ಟೆಹೊರೆಯುವವರೂ ಮನುಷ್ಯರೇ ಎಂದು ನಾವಿಲ್ಲಿ ಗಮನಿಸಬೇಕಾಗಿದೆ. ಹಣ ಇಲ್ಲದೇ ಇರುವುದು ನಮ್ಮ ಆತ್ಮವಿಶ್ವಾಸವನ್ನು ಉಡುಗಿಸಿ ಯಾರು ಯಾರಿಗೋ ಡೊಗ್ಗು ಸಲಾಮು ಹಾಕಲು, ಹಲ್ಲುಗಿಂಜಲು ಪ್ರೇರೇಪಿಸುತ್ತದೆ. ಹೆಚ್ಚೇಕೆ ಮದುವೆಯಂತಹ ಸಮಾರಂಭಗಳು ಕೂಡ ಒಡವೆ , ವಸ್ತ್ರ, ಅಂತಸ್ತನ್ನು ಪ್ರದರ್ಶಿಸುತ್ತ , ಕೃತಕನಗೆ ಬೀರುತ್ತ ಒಳಗಿಂದೊಳಗೆ ಇನ್ನೊಬ್ಬರನ್ನು ಜಡ್ಜ್ ಮಾಡುವ ತಾಣಗಳಾಗಿ ಪರಿಣಮಿಸಿವೆ.

George Orwell ನ   ‘Animal Farm’ ನಲ್ಲಿ ಹೇಳಿದಂತೆ ಪ್ರಜಾಪ್ರಭುತ್ವದಲ್ಲಿ  ‘ All are equal, but some are more equal’ ಎಂದು ನಾವಿಲ್ಲಿ ಗಮನಿಸಬೇಕಿದೆ. ಬಡವರಿಗೂ ಆತ್ಮಗೌರವವಿದೆಯೆಂದೂ, ಅವರೂ ಮನುಷ್ಯರೇ ಎಂದೂ ಪರಿಗಣಿಸಬೆಕು. ಹೆಚ್ಚಿನ ಕೊಲೆ, ಸುಲಿಗೆ , ದರೋಡೆಗಳು , ನಕ್ಸಲಿಸಮ್ ಈ ರೀತಿಯ ದಮನಿತ ಮನೋಭಾವದ ಸೆಟೆದೆದ್ದ ಆಕ್ರೋಶವೇ ಇನ್ನುವುದನ್ನು ಗಮನಿಸಬೆಕಾಗಿದೆ.  ಬೂಕರ್ ಅವಾರ್ಡ್  ಪಡೆದ ಅರವಿಂದ ಅಡಿಗರ  ‘The White Tiger’  ಈ ರೀತಿಯ ಸಾಮಾನ್ಯ ವರ್ಗದ ಜನರ ಆಕ್ರೋಶಕ್ಕೆ ಸಾಕ್ಷಿಯಾದ ಕಾದಂಬರಿ.



– ಜಯಶ್ರೀ. ಬಿ. ಕದ್ರಿ .